ಶನಿವಾರ, ಡಿಸೆಂಬರ್ 7, 2019
24 °C
ಮೂರು ವರ್ಷಗಳಲ್ಲಿ ಪರಿಹಾರಕ್ಕೆ ಕಡಿಮೆ ಅನುದಾನ

ರಾಜ್ಯದಿಂದ ಕೇವಲ ₹1,203 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದಿಂದ ಕೇವಲ ₹1,203 ಕೋಟಿ!

ನವದೆಹಲಿ: ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೆಳೆ ನಷ್ಟ  ಪರಿಹಾರದ ರೂಪದಲ್ಲಿ ₹ 4,898 ಕೋಟಿ ಪರಿಹಾರ ಒದಗಿಸಿದ್ದರೆ, ರಾಜ್ಯ ಸರ್ಕಾರ ಕೇವಲ ₹1,203 ಕೋಟಿ ವ್ಯಯಿಸಿದೆ.

ಕೇಂದ್ರ ಸರ್ಕಾರವು ರಾಜ್ಯದ ರೈತರು, ಜಾನುವಾರುಗಳ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌)ಗೆ ತನ್ನ ಪಾಲಿನ ಅನುದಾನ ಒದಗಿಸಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿಯೂ ಅನುದಾನ ನೀಡಿದೆ.

ಆದರೆ, ರಾಜ್ಯ ಸರ್ಕಾರ ಕೇವಲ ಎಸ್‌ಡಿಆರ್‌ಎಫ್‌ ಅಡಿ ತನ್ನ ಪಾಲಿನ ಅನುದಾನ ಮೀಸಲಿರಿಸಿದ್ದನ್ನು ಹೊರತುಪಡಿಸಿ ಬಜೆಟ್‌ ಮೂಲಕ ಯಾವುದೇ ರೀತಿಯ  ಅನುದಾನ ಕಾದಿರಿಸಿಲ್ಲ.

ಕಳೆದ ವರ್ಷ ರಾಜ್ಯದಲ್ಲಿ ಬರ ಇದ್ದುದರಿಂದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಂಭವಿಸಿದ್ದ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರದ ಹಣಕಾಸು ಮತ್ತು ಕೃಷಿ ಸಚಿವಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಎಸ್‌ಡಿಆರ್‌ಎಫ್‌ ಅಡಿ ₹ 1,203.45 ಕೋಟಿ ಅನುದಾನ ವ್ಯಯಿಸಲಾಗಿದೆ.

‘ವಾರ್ಷಿಕ ₹ 1.70 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸುವ ರಾಜ್ಯ ಸರ್ಕಾರ ಬರಗಾಲ, ಪ್ರವಾಹದಂತಹ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸುವ ರೈತರಿಗೆ ನೆರವು ನೀಡಲು ಪ್ರತ್ಯೇಕವಾಗಿ ಅನುದಾನ ಮೀಸಲಿರಿಸದಿರುವುದು ನಿಜಕ್ಕೂ ಕಳವಳಕಾರಿ ಸಂಗತಿ’ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ (2016– -17) ರಾಜ್ಯದ ಬಹುತೇಕ ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಿರುವ ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್‌ ಅಡಿ ಕೇವಲ ₹ 518 ಕೋಟಿ ಅನುದಾನ ಒದಗಿಸಿದೆ. ಆದರೆ, ಕೇಂದ್ರ ಸರ್ಕಾರ ಮುಂಗಾರು ಮತ್ತು ಹಿಂಗಾರು ವೈಫಲ್ಯದಿಂದ ಉಂಟಾದ ಬೆಳೆ ನಷ್ಟ ಪರಿಹಾರಕ್ಕೆ ₹2,627 ಕೋಟಿ ಅನುದಾನ ಮಂಜೂರು ಮಾಡಿದೆ. ಆದರೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ.

‘2004ರಿಂದ 2014ರವರೆಗಿನ 10 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರ ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಲೆದೋರಿದ ಸಂಕಷ್ಟಕ್ಕೆ ಕೇವಲ ₹ 3,500 ಕೋಟಿ ನೆರವು ನೀಡಿತ್ತು. 2007 ಮತ್ತು 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿ, ಜನತೆ ಮನೆ– ಮಠ ಕಳೆದು­ಕೊಂಡಿದ್ದರಲ್ಲದೆ, ಸಾರ್ವಜನಿಕರ ಸಾವಿರಾರು ಕೋಟಿ ಮೌಲ್ಯದ ಆಸ್ತಿಗೆ ಹಾನಿ ಸಂಭವಿಸಿತ್ತು. ಆದರೂ ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದ ನೆರವು ನೀಡಿತ್ತು’ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ವರ್ಷವೂ ಬರದ ಛಾಯೆ ಆವರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬರ ಸ್ಥಿತಿ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕೃಷಿಕರ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸುವುದು  ಸರಿಯಲ್ಲ ಎಂದು ಅವರು ದೂರಿದ್ದಾರೆ.

ಪ್ರಮುಖ ಕ್ಷೇತ್ರವಾಗಿರುವ ಕೃಷಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭ ಸಂಕಷ್ಟ ಎದುರಿಸುವ ಕೃಷಿಕರ ನೆರವಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸ­ಬೇಕಿದೆ. ಎನ್‌ಡಿಆರ್‌ಎಫ್‌ ನಿಯ­ಮಾವಳಿಗಳ ಪ್ರಕಾರ ಪ್ರತಿ ರೈತರು ವೈಯಕ್ತಿಕವಾಗಿ ಪಡೆಯುವ ಪರಿಹಾರ ಮೊತ್ತ ಗೌಣ. ರಾಜ್ಯ ಸರ್ಕಾರವೂ ಬಜೆಟ್‌ ಮೂಲಕ ಅನುದಾನ ಕಾದಿರಿಸಿ ರೈತರ ನೆರವಿಗೆ ಧಾವಿಸಿದಲ್ಲಿ ಅನು­ಕೂಲವಾಗಲಿದೆ ಎಂಬುದು ಅವರ ಬೇಡಿಕೆ.

ಮುಖ್ಯಾಂಶಗಳು

* ಬೆಳೆ ನಷ್ಟ ಪರಿಹಾರದ ರೂಪದಲ್ಲಿ ಕೇಂದ್ರದಿಂದ ₹4,898 ಕೋಟಿ

* ಬಜೆಟ್‌ ಮೂಲಕ ಯಾವುದೇ ಅನುದಾನ ಕಾದಿರಿಸದ ರಾಜ್ಯ

ಪ್ರತಿಕ್ರಿಯಿಸಿ (+)