ಶುಕ್ರವಾರ, ಡಿಸೆಂಬರ್ 6, 2019
19 °C

ತೆರಿಗೆ ವಂಚಿಸಿದರೆ ಕಠಿಣ ಕ್ರಮ: ಪ್ರಧಾನಿ ಮೋದಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ವಂಚಿಸಿದರೆ ಕಠಿಣ ಕ್ರಮ: ಪ್ರಧಾನಿ ಮೋದಿ ಎಚ್ಚರಿಕೆ

ನವದೆಹಲಿ: ತೆರಿಗೆ ವಂಚನೆಯಲ್ಲಿ ತೊಡಗಿರುವ ಕಂಪೆನಿಗಳು ಮತ್ತು ಅದಕ್ಕೆ ನೆರವಾಗುವ ಲೆಕ್ಕಪರಿಶೋಧಕರಿಗೆ (ಸಿ.ಎ) ಕಠಿಣ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

‘ಅಕ್ರಮ ಹಣಕಾಸು ಚಟುವಟಿಕೆ ನಡೆಸುತ್ತ ತೆರಿಗೆ ವಂಚಿಸುತ್ತಿರುವ 37,000 ಕಂಪೆನಿಗಳನ್ನು ಗುರುತಿಸಲಾಗಿದೆ. ಒಂದು ಲಕ್ಷ ಕಂಪೆನಿಗಳ ನೋಂದಣಿಯನ್ನು ಒಂದೇ ಬಾರಿಗೆ ರದ್ದು ಗೊಳಿಸಲಾಗಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಈ ಕಂಪೆನಿಗಳಿಗೆ ಸಹಕರಿಸಿದ ಲೆಕ್ಕಪರಿಶೋಧಕರೂ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಪ್ರಧಾನಿ ಹೇಳಿದರು.

ಲೆಕ್ಕ ಪರಿಶೋಧಕರ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪರಿಶೀಲನೆ ನಡೆಸಿ, ಭಾರಿ ಪ್ರಮಾಣದಲ್ಲಿ ದತ್ತಾಂಶ ಕಲೆ ಹಾಕಿದ್ದೇವೆ. ಮೂರು ಲಕ್ಷ ಕಂಪೆನಿಗಳು ಅಕ್ರಮ ವ್ಯವಹಾರದಲ್ಲಿ  ತೊಡಗಿರುವ  ಅನುಮಾನ ಇದೆ’ ಎಂದು ತಿಳಿಸಿದರು.

‘ಇಂತಹ ಪ್ರಕರಣಗಳಲ್ಲಿ ಕಳೆದ 11 ವರ್ಷಗಳಲ್ಲಿ ಕೇವಲ 25 ಲೆಕ್ಕ ಪರಿಶೋಧಕರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, 1,400 ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ನಿಮ್ಮಲ್ಲೇ ಕೆಲವರು ತೆರಿಗೆ ವಂಚಕರನ್ನು ರಕ್ಷಿಸಿದ್ದೀರಿ’ ಎಂದು ಆರೋಪಿಸಿದರು.

‘ನೋಟು ರದ್ದತಿ ವೇಳೆ ಸಾವಿರಾರು ಲೆಕ್ಕಪರಿಶೋಧಕರು ರಜೆ ಹಾಕಿ, ವಿದೇಶ ಪ್ರವಾಸದಲ್ಲಿದ್ದರು. ನವೆಂಬರ್‌ 8ರ ನಂತರ ರಜೆ ರದ್ದು ಮಾಡಿ, ದೇಶಕ್ಕೆ ಹಿಂತಿರುಗಿ ಕೆಲಸ ಆರಂಭಿಸಿದರು. ಅವರೆಲ್ಲಾ ತಮ್ಮ ಇಡೀ ವೃತ್ತಿ ಜೀವನದಲ್ಲಿ ಮಾಡದಷ್ಟು ಕೆಲಸವನ್ನು ನೋಟು ರದ್ದತಿ ನಂತರ ಮಾಡಿದ್ದಾರೆ. ಈ ವಿಚಾರವೆಲ್ಲಾ ನಮಗೆ ತಿಳಿದಿದೆ’ ಎಂದರು.

‘ಕಳೆದ ವರ್ಷ ಸುಮಾರು 2.18 ಕೋಟಿ ಭಾರತೀಯರು ವಿದೇಶಿ ಪ್ರವಾಸ ಮಾಡಿದ್ದಾರೆ. ಕೋಟ್ಯಂತರ ಜನ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಆದರೆ, ₹ 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಭಾರತೀಯರ ಸಂಖ್ಯೆ ಕೇವಲ 32 ಲಕ್ಷ. ಇದನ್ನು ನಂಬಲು ಸಾಧ್ಯವೇ? ತೆರಿಗೆ ವಂಚನೆಯ ಹಾದಿ ಹುಡುಕಿಕೊಂಡು ಜನ ನಿಮ್ಮ ಬಳಿ ಬಂದೇ ಬರುತ್ತಾರೆ. ಆಗ ಅಂತಹವರಿಗೆ ನೆರವು ನೀಡುವುದರ ಬದಲು, ಅವರನ್ನು ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರಕ್ಕೆ ನೆರವಾಗಿ’ ಎಂದು ಅವರು ಕರೆ ನೀಡಿದರು.

‘ನಿಮ್ಮ ಸಹಿಯ ಮೇಲೆ ಅಪಾರ ನಂಬಿಕೆ ಇರುತ್ತದೆ. ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ಸ್ವಚ್ಛ ಭಾರತದ ಜತೆ, ದೇಶದ ಆರ್ಥಿಕತೆಯನ್ನೂ  ಶುದ್ಧೀಕರಿಸುವ ಕೆಲಸ ಮಾಡುತ್ತಿದ್ದೇವೆ. ದೇಶವನ್ನು ಲೂಟಿ ಮಾಡಿದವರ ವಿರುದ್ಧ ಕಠಿಣ ನಿಲುವು ತಳೆದಿದ್ದೇವೆ. ನಮಗೆ ನಿಮ್ಮ ಸಹಕಾರ ಬೇಕು’ ಎಂದು ಮನವಿ ಮಾಡಿದರು.

ಸ್ವಿಸ್‌ ಠೇವಣಿ ಇಳಿಯುತ್ತಿದೆ

‘ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿದ್ದ ಠೇವಣಿ 2016ನೇ ಸಾಲಿನಲ್ಲಿ ಶೇ 45ರಷ್ಟು ಕಡಿಮೆ ಆಗಿದೆ. 2013ರವರೆಗೆ ಠೇವಣಿ  ಮೊತ್ತ ಏರುತ್ತಲೇ ಇತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸತತ ಮೂರನೇ ವರ್ಷವೂ ಠೇವಣಿ ಇಳಿಯುತ್ತಿದೆ’ ಎಂದು ಮೋದಿ ಹೇಳಿದರು.

‘ಬಿಗ್‌ –ಫೋರ್, ಬಿಗ್‌ ಏಯ್ಟ್ ಆಗಲಿ’

ಪ್ರಧಾನಿ ಮೋದಿ, ‘ವಿಶ್ವದಲ್ಲಿ ನಾಲ್ಕು ಕಂಪೆನಿಗಳು ಮಾತ್ರ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಲೆಕ್ಕಪರಿಶೋಧನೆ ಸೇವೆ ನೀಡುತ್ತವೆ. ಆ ಕಂಪೆನಿಗಳನ್ನು ‘ಬಿಗ್ ಫೋರ್’ ಎಂದು ಕರೆಯಲಾಗುತ್ತದೆ. 2022ರ ವೇಳೆಗೆ ‘ಬಿಗ್‌ ಫೋರ್‌’ ಎಂಬುದು ‘ಬಿಗ್‌ ಏಯ್ಟ್‌’ (8) ಆಗಬೇಕು. ಆ ಎಂಟರಲ್ಲಿ ನಾಲ್ಕು ಭಾರತದ ಕಂಪೆನಿಗಳಾಗಿರಬೇಕು. ನಿಮ್ಮಲ್ಲಿ ಆ ಕಾರ್ಯಕ್ಷಮತೆ ಮತ್ತು ಯೋಗ್ಯತೆ ಇದೆ ಎಂದು ನನಗೆ ತಿಳಿದಿದೆ’ ಎಂದು ಲೆಕ್ಕ ಪರಿಶೋಧಕರನ್ನು ಹುರಿದುಂಬಿಸಿದರು.

ಪ್ರತಿಕ್ರಿಯಿಸಿ (+)