ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾದರೆ ಬದುಕುತ್ತೇವೆ,ಇಲ್ಲವೇ ದೇವರೇ ಗತಿ

Last Updated 2 ಜುಲೈ 2017, 5:16 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಋತುಮಾನ ಕಳೆದರೆ ಮತ್ತೆ ಬಿತ್ತನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೇವರ ಮೇಲೆ ಭಾರ ಹಾಕುವ ಮೂಲಕ ಅರ್ಧ ಹಸಿಯಾಗಿದ್ದ ಮಣ್ಣಲ್ಲೆ ಶೇಂಗಾ ಬಿತ್ತನೆ ಮಾಡಿದ್ದೇವೆ. ಮಳೆಯಾದರೆ ಬದುಕುತ್ತೇವೆ. ಇಲ್ಲವಾದರೆ ಆ ದೇವರೇ ಗತಿ’ ಇದು ತಾಲ್ಲೂಕಿನ ಬಂಕಾಪುರದ ರೈತ ಸತೀಶ ವಳಗೇರಿ ಅವರ ನುಡಿಗಳು.

ಜೂನ್‌ ಕಳೆದು ಜುಲೈ ಆರಂಭ ಗೊಂಡರೂ ಈ ಬಾರಿ ತಾಲ್ಲೂಕಿನಲ್ಲಿ ಮುಂಗಾರು ಮಾರುತಗಳು ಉತ್ತಮ ಮಳೆ ಸುರಿಸಿಲ್ಲ. ಆದರೂ ಕಳೆದ ವಾರದ ಕೆಲವು ದಿನಗಳಲ್ಲಿ ತುಂತುರು ಉದುರಿದೆ. ಈ ನಡುವೆಯೇ ತಾಲ್ಲೂಕಿನ ಬಹುತೇಕ ರೈತರು ಅರ್ಧ ಹಸಿಯಾದ ಮಣ್ಣಿನಲ್ಲೇ ಬಿತ್ತನೆ ಮಾಡಿದ್ದಾರೆ. ಆ ಪೈಕಿ ಬಹುತೇಕ ರೈತರ ಅಭಿಪ್ರಾಯವೂ ಇದೇ ಆಗಿದೆ.

‘ಬಿತ್ತನೆ ಮಾಡುವಷ್ಟು ಮಳೆಯೇನೂ ಬಿದ್ದಿಲ್ಲ. ಆದರೆ, ಬಿತ್ತನೆ ಅವಧಿಯೇ ಮುಗಿತ್ತ ಬಂದಿದೆ. ಹೀಗಾಗಿ ಬರುತ್ತಿರುವ ಅಲ್ಪ–ಸ್ವಲ್ಪ ಮಳೆಯಲ್ಲಿಯೇ ಬಿತ್ತನೆ ಮಾಡುತ್ತಿದ್ದೇವೆ’ ಎಂದು ರೈತರೊಬ್ಬರು ಹೇಳಿದರು.

‘ಪ್ರಸಕ್ತ ವರ್ಷದಲ್ಲಿ ಜೂನ್‌ ಕೊನೆ ವಾರದಲ್ಲಿ ವಾಡಿಕೆಗಿಂತ ಶೇ 30ರಷ್ಟು ಮಳೆ ಕೊರತೆಯಾಗಿದೆ. ಅದಾಗ್ಯೂ, ಸಹ ತಾಲ್ಲೂಕಿನಾದ್ಯಂತ ಶೇ 80ರಷ್ಟು ಭೂಮಿ ಬಿತ್ತನೆಯಾಗಿದೆ’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ಆರ್‌.ನಾಗನಗೌಡ ತಿಳಿಸಿದರು.

‘ಸೋಯಾಬಿನ್‌, ಶೇಂಗಾ, ಭತ್ತ, ಗೋವಿನ ಜೋಳ, ಮೆಕ್ಕೆಜೋಳ, ಹತ್ತಿ ಹಾಗೂ ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ. ಆದರೆ ಈ ಬಾರಿ ಮೆಕ್ಕೆಜೋಳ, ಸೋಯಾಬಿನ್‌ ಬಿತ್ತನೆಗೆ ರೈತರು ಆಸಕ್ತಿ ವಹಿಸಿದ್ದಾರೆ. ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಭತ್ತದತ್ತ ರೈತರು ಆಸಕ್ತಿ ತೋರುತ್ತಿಲ್ಲ’ ಎಂದು ಅವರು ಹೇಳಿದರು.

‘ಮಳೆ ಅಭಾವದಿಂದ ಭತ್ತ ಬಿತ್ತನೆ ಈ ಭಾಗದಲ್ಲಿ ಕಡಿಮೆಯಾಗಿದೆ. ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಒಣ–ಹಸಿಯಲ್ಲಿ ಸೋಯಾಬಿನ್‌ ಬಿತ್ತನೆ ಮಾಡಿದ್ದೇವೆ. ಕಳೆದ ನಾಲ್ಕು ದಿನಗಳಿಂದ ತುಂತುರು ಮಳೆ ಆರಂಭವಾಗಿದ್ದು, ಮತ್ತೆ ಆಸೆ ಚಿಗುರಿದೆ’ ಎಂದು ದುಂಢಸಿ ರೈತ ಬಸನಗೌಡ ಪಾಟೀಲ ಹೇಳಿದರು.

‘ಈಗಾಗಲೇ ಬಿತ್ತನೆ ಮಾಡಲಾಗಿದೆ. ಆದರೆ,  ಮುಂದೆ ಮಳೆ ಆಗದಿದ್ದರೆ, ಕಷ್ಟವಿದೆ. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಕೈಕೊಟ್ಟಿದ್ದು, ಅದರ ಭಯದಲ್ಲಿ ಈಬಾರಿ ಮುಂಗಾರು ಬಿತ್ತನೆ ಮಾಡಿದ್ದೇವೆ. ಈ ವರ್ಷವೂ ಮಳೆ ಹೋದರೆ, ರೈತಾಪಿ ಬಿಟ್ಟು ಕೂಲಿ ಕೆಲಸಕ್ಕೆ ಹೋಗುವ ಸ್ಥಿತಿ ಬರಬಹುದು’ ಎಂದು ಅಂದಲಗಿ ರೈತ ಶಂಭಣ್ಣ ಆತಂಕ ವ್ಯಕ್ತಪಡಿಸಿದರು.

ಮಳೆಯಾಶ್ರಿತ ಪ್ರದೇಶವೇ ಹೆಚ್ಚು
ಶಿಗ್ಗಾವಿ ತಾಲ್ಲೂಕು ಒಟ್ಟು 37, 515 ಹೆಕ್ಟೇರ್‌ ಭೂಪ್ರದೇಶ ಸಾಗುವಳಿ ಕ್ಷೇತ್ರ ಹೊಂದಿದೆ. ಈ ಪೈಕಿ 2.5 ಸಾವಿರ ಹೆಕ್ಟೇರ್ ಭೂಪ್ರದೇಶ ನೀರಾವರಿ. ಇನ್ನು ಳಿದ 35,015 ಹೆಕ್ಟೇರ್ ಭೂಪ್ರದೇಶ ಒಣ ಬೇಸಾಯ (ಮಳೆಯಾಶ್ರಿತ).

ಕಳೆದ ವರ್ಷದಲ್ಲಿ ಜೂನ್‌ ಕೊನೆಯ ವಾರದಲ್ಲಿ ಶೇ 90ರಷ್ಟು ಬಿತ್ತನೆಯಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಶೇ 80ರಷ್ಟು ಬಿತ್ತನೆಯಾಗಿದೆ. ಕಳೆದ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ಶೇ 35ರಷ್ಟು ಮಳೆ ಕೊರತೆ ಕಾಡುತ್ತಿದೆ’ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ಆರ್‌. ನಾಗನಗೌಡ ಹೇಳುತ್ತಾರೆ.

* *

ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದ್ದೇವೆ. ಆದರೆ ಸಮರ್ಪಕ ಮಳೆ ಆಗಿಲ್ಲ. ಈ ಸಲವೂ ಮುಂಗಾರು ಕೈಕೊಡುತ್ತದೆ ಅನಿಸುತ್ತಿದೆ
ಭೀಮಣ್ಣ
ರೈತ, ಶಿಗ್ಗಾವಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT