ಶುಕ್ರವಾರ, ಡಿಸೆಂಬರ್ 13, 2019
20 °C

ಖಳನಟಿಯಾಗಿ ಕಾಜೋಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಳನಟಿಯಾಗಿ ಕಾಜೋಲ್

ಬಾಲಿವುಡ್ ನಟಿ ಕಾಜೋಲ್ ಮತ್ತು ನಟ ಧನುಷ್ ಅಭಿನಯದ ವಿಐಪಿ ಅರ್ಥಾತ್ ‘ವೇಲೆ ಇಲ್ಲಾ ಪಟ್ಟದಾರಿ–2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರದ ದೃಶ್ಯಗಳ ಕೊಲಾಜ್ ಪ್ರೇಕ್ಷಕರಲ್ಲಿ ಆಸಕ್ತಿ ಹುಟ್ಟಿಸಿದೆ.

ಕಾಜೋಲ್ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ಖಳನಾಯಕಿ ಪಾತ್ರ ಮಾಡುತ್ತಿದ್ದು, ಧನುಷ್‌ಗೆ ಕಾಡುವ ಬಾಸ್ ಪಾತ್ರದಲ್ಲಿ ಮಿಂಚಿದ್ದಾರೆ. ಧನುಷ್ ಮತ್ತು ಕಾಜೋಲ್ ನಡುವೆ ಜರುಗುವ ಕೆಲ ಸಂಭಾಷಣೆಯ ದೃಶ್ಯಗಳನ್ನು ಟ್ರೇಲರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ರಜನೀಕಾಂತ್ ಸಿನಿಮಾ ಶೈಲಿಯನ್ನು ನೆನಪಿಸುವಂತಿದೆ.

ಪದೇಪದೇ ಕೆಲಸ ಕಳೆದುಕೊಳ್ಳುವ ಎಂಜಿನಿಯರ್ ಪಾತ್ರದಲ್ಲಿ ಧನುಷ್ ಅಭಿನಯಿಸಿದ್ದು, ಧನುಷ್‌ಗೆ ನಾಯಕಿಯಾಗಿ ಅಮಲಾ ಪೌಲ್ ಇದ್ದಾರೆ. ಕಚೇರಿಯಿಂದ ಮನೆಗೆ ತಡವಾಗಿ ಬರುವ ಧನುಷ್‌ನನ್ನು ಕುಡಿದು ಬಂದಿದ್ದಾರೆಯೇ ಇಲ್ಲವೇ ಎಂದು ಬಾಯಿ ತೆಗೆಸಿ ವಾಸನೆ ನೋಡುವ ಪತ್ನಿಯಾಗಿ ಅಮಲಾ ಕಾಣಿಸಿಕೊಂಡಿದ್ದಾರೆ.

ವಸುಂಧರಾ ಪರಮೇಶ್ವರ್ ಎನ್ನುವ ಉದ್ಯಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾಜೋಲ್, ತನ್ನ ಕೈಕೆಳಗೆ ಕೆಲಸ ಮಾಡುವ ಧನುಷ್‌ಗೆ ಕಾಟ ಕೊಡುವ ಖಳನಾಯಕಿಯಾಗಿದ್ದಾರೆ. ಬಾಸ್ ಕಾಜೋಲ್‌ಗೆ ಚಾಲೆಂಜ್ ಮಾಡುವ ಧನುಷ್ ಅದರಲ್ಲಿ ಯಶಸ್ವಿಯಾಗುತ್ತಾರೋ ಇಲ್ಲವೋ ಎಂಬುದು ಚಿತ್ರದ ತಿರುಳಿರಬಹುದು ಎಂಬುದನ್ನು ಟ್ರೇಲರ್ ಸೂಚ್ಯವಾಗಿ ಹೇಳುತ್ತದೆ.

1997ರಲ್ಲಿ ರಾಜೀವ್ ಮೆನನ್ ನಿರ್ದೇಶನದ ‘ಮಿನ್ಸಾರ ಕನವು’ ಚಿತ್ರದ ನಂತರ ಕಾಜೋಲ್ ಅಭಿನಯಿಸಿರುವ ತಮಿಳು ಚಿತ್ರ ಇದಾಗಿದೆ. ‘ಮಿನ್ಸಾರ ಕನವು’ ಚಿತ್ರದ ಸಮಯದಲ್ಲಿ ದಿನಕ್ಕೆ ಎರಡು ತಾಸು ವ್ಯಯಿಸಿ ತಮಿಳು ಕಲಿತದ್ದನ್ನು ನೆನಪಿಸಿಕೊಂಡಿರುವ ಕಾಜೋಲ್ ಮೊದಲಿಗೆ ವಿಐಪಿಯಲ್ಲಿ ಅಭಿನಯಿಸಲು ಹಿಂದೇಟು ಹಾಕಿದ್ದರಂತೆ.

‘ಅನ್ಯ ಭಾಷೆಯಲ್ಲಿ ನಟಿಸುವುದು ಕಷ್ಟ. ಹಾಗಾಗಿ, ವಿಐಪಿಯಲ್ಲಿ ಅಭಿನಯಿಸಲು ಆಸಕ್ತಿ ತೋರಿರಲಿಲ್ಲ. ಆದರೆ, ವಿಐಪಿ–2 ನಿರ್ದೇಶಕಿ ಸೌಂದರ್ಯ ರಜನೀಕಾಂತ್ ಮತ್ತು ಧನುಷ್ ಒತ್ತಾಯದ ಮೇರೆಗೆ ಈ ಸಿನಿಮಾದಲ್ಲಿ ನಟಿಸಿದೆ. ಈಗೀಗ ಸ್ವಲ್ಪ ತಮಿಳು ಭಾಷೆ ಕಲಿತಿದ್ದೇನೆ’ ಎಂದು ಕಾಜೋಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)