ಗುರುವಾರ , ಡಿಸೆಂಬರ್ 12, 2019
17 °C

ದಾದಾ ಈಸ್‌ ಬ್ಯಾಕ್‌

Published:
Updated:
ದಾದಾ ಈಸ್‌ ಬ್ಯಾಕ್‌

‘ಗೊಂಬೆಗಳ ಲವ್’ ಸಿನಿಮಾ ನಿರ್ದೇಶಿಸಿದ್ದ ಸಂತೋಷ್‌ ಈಗ ಕನ್ನಡದ ಪ್ರೇಕ್ಷಕರಿಗೆ ‘ದಾದಾ ಈಸ್‌ ಬ್ಯಾಕ್‌’ ಚಿತ್ರದ ಮೂಲಕ ದಾದಾಗಿರಿಯ ರಸದೌತಣ ಉಣಬಡಿಸಲು ಹೊರಟಿದ್ದಾರೆ. ತಮಿಳು ನಟ ಪಾರ್ಥಿಬನ್‌ ಅವರದು ಈ ಚಿತ್ರದಲ್ಲಿ ದಾದಾನ ಪಾತ್ರ.

ಈ ಪಾತ್ರಕ್ಕಾಗಿ ಅವರು ಅಮಿತಾಬ್‌ ಬಚ್ಚನ್‌, ಅನಿಲ್‌ ಕಪೂರ್‌, ಮೋಹನ್‌ಲಾಲ್‌ ಅವರನ್ನು ಕರೆತರಲು ನಿರ್ಧರಿಸಿದ್ದೂ ಉಂಟು. ‘ಹಿರಿಯ ನಟರ ಸಮಯ ಹೊಂದಾಣಿಕೆಯಾಗಲಿಲ್ಲ. ಕೊನೆಗೆ, ಪಾರ್ಥಿಬನ್‌ ಅವರನ್ನು ಆಯ್ಕೆ ಮಾಡಲಾಯಿತು’ ಎಂದರು ನಿರ್ದೇಶಕ ಸಂತೋಷ್‌.

‘ಪಾರ್ಥಿಬನ್‌ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಲೈಮ್ಯಾಕ್ಸ್‌ಗೆ ಭಾವನಾತ್ಮಕ ಸ್ಪರ್ಶವಿದೆ. ಕನ್ನಡ ಕಲಿತು ಅವರೇ ಡಬ್ಬಿಂಗ್‌ ಕೂಡ ಮಾಡಿದ್ದಾರೆ’ ಎಂದು ಸಂತೋಷ್‌ ಹೇಳಿದರು.

ನಟ ಅರುಣ್‌, ‘ವಿಷ್ಣುವರ್ಧನ್‌ ಅವರ ಹೆಸರಿನೊಂದಿಗೆ ದಾದಾ ಪಾತ್ರ ಬೆಸೆದು ಹೋಗಿದೆ. ಈ ಪಾತ್ರಕ್ಕೆ ಅವರಷ್ಟು ಜೀವ ತುಂಬಿದ ನಟರು ವಿರಳ. ಅವರ ಪಾತ್ರಕ್ಕೆ ಧಕ್ಕೆ ತಂದಿಲ್ಲ. ನಮ್ಮ ಚಿತ್ರದಲ್ಲಿ ಭಿನ್ನವಾಗಿ ದಾದಾ ಮೂಡಿ ಬಂದಿದ್ದಾನೆ’ ಎಂದರು.

ಚಿತ್ರದ ಕೊನೆಯಲ್ಲಿ ನೀವು ಕೂಡ ದಾದಾ ಆಗಿರುತ್ತೀರ? ಎನ್ನುವ ಪ್ರಶ್ನೆ ಅವರಿಗೆ ಧುತ್ತನೆ ಎದುರಾಯಿತು. ‘ನಾನು ದಾದಾನ ಜೊತೆಗಿರುತ್ತೇನೆ’ ಎಂದ ಅವರು, ಕಥೆಯ ಎಳೆಯನ್ನು ಬಿಟ್ಟುಕೊಡಲಿಲ್ಲ.

ನಿರ್ಮಾಪಕ ಜಾಕ್‌ ಮಂಜು, ಚಿತ್ರವು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತುವ ಹಂತದಲ್ಲಿದ್ದ ಬಗ್ಗೆಯೂ ಹೇಳಿದರು.

‘ನಾನೇ ಚಿತ್ರ ವಿತರಣೆ ಮಾಡುವುದಾಗಿ ಸ್ನೇಹಿತ ಶಂಕರ್‌ ಅವರೊಂದಿಗೆ ಮೌಖಿಕವಾಗಿ ಮಾತನಾಡಿದ್ದೆ. ಚಿತ್ರ ನೋಡಿದ್ದ ಬೇರೊಬ್ಬ ವಿತರಕರು ಸಿನಿಮಾ ಹಂಚಿಕೆ ಮಾಡುವುದಾಗಿ ಮುಂದೆ ಬಂದಿದ್ದರು. ಇದರಿಂದ ಗೊಂದಲ ತಲೆದೋರಿತ್ತು. ಸದ್ಯ ಎಲ್ಲ ಸಮಸ್ಯೆಯೂ ಬಗೆಹರಿದಿದೆ’ ಎಂದರು.

‘ತಮಿಳಿನಲ್ಲಿಯೂ ಚಿತ್ರ ಬಿಡುಗಡೆ ಮಾಡಲು ಇಚ್ಛಿಸಿದ್ದೇವೆ. ಡಬ್ಬಿಂಗ್‌ ಸಂಬಂಧ ಮಾತುಕತೆ ನಡೆದಿದೆ’ ಎಂದರು ಜಾಕ್‌ ಮಂಜು.

ನಿರ್ಮಾಪಕ ಕನಕಪುರ ಶ್ರೀನಿವಾಸ್‌, ‘ರಾಜ್ಯದ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ’ ಎಂದರು.

ಜುಲೈ 14ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದೆ. ಇದಕ್ಕಾಗಿ ಜಿಲ್ಲಾವಾರು ಪ್ರವಾಸ ಕೈಗೊಂಡು ಚಿತ್ರದ ಬಗ್ಗೆ ಪ್ರಚಾರ ನಡೆಸಲು ನಿರ್ಧರಿಸಿದೆ. ನಾಗೇಶ್‌ ಅವರ ಛಾಯಾಗ್ರಹಣವಿದೆ. ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)