ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಕಣದಲ್ಲಿ ದಿಗ್ಗಜರ ಹಣಾಹಣಿ

ಇಂದಿನಿಂದ ವಿಂಬಲ್ಡನ್ ಟೆನಿಸ್ ಟೂರ್ನಿ: ಆ್ಯಂಡಿ ಮರ್ರೆ, ಫೆಡರರ್, ಕೆರ್ಬರ್, ಒಸ್ತಪೆಂಕೊ ಆಕರ್ಷಣೆ
Last Updated 2 ಜುಲೈ 2017, 19:30 IST
ಅಕ್ಷರ ಗಾತ್ರ

ಲಂಡನ್ : ವಿಶ್ವದ ಟೆನಿಸ್ ಆಟಗಾರರ ಕನಸಿನಂಗಳ  ಆಲ್‌ ಇಂಗ್ಲೆಂಡ್ ಕ್ರೀಡಾಂಗಣ ಈಗ ವಿಂಬಲ್ಡನ್ ಹಬ್ಬಕ್ಕೆ ಸಿದ್ಧವಾಗಿದೆ.
ಸೋಮವಾರದಿಂದ  ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಮ್ ಟೂರ್ನಿಗೆ ಚಾಲನೆ ದೊರೆಯಲಿದೆ.

ಹಾಲಿ ಚಾಂಪಿಯನ್  ಆ್ಯಂಡಿ ಮರ್ರೆ ಪ್ರಶಸ್ತಿ ಉಳಿಸಿಕೊಳ್ಳುವ  ಛಲದೊಂದಿಗೆ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಹೋದ ವರ್ಷ ರನ್ನರ್ಸ್ ಅಪ್ ಆಗಿದ್ದ ಏಜೆಲಿಕಾ ಕೆರ್ಬರ್ ಈ ಬಾರಿ ಕಿರೀಟ ಧರಿಸುವ ಕನಸು ಕಾಣುತ್ತಿದ್ದಾರೆ.  ಹೋದ ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರು ಈ ಸಲ ಆಡುತ್ತಿಲ್ಲ. ಅವರು ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ಖ್ಯಾತನಾಮರ ಹಣಾಹಣಿ
ಪುರುಷರ ಸಿಂಗಲ್ಸ್‌ನಲ್ಲಿ ಆತಿಥೇಯ ಆಟಗಾರ ಆ್ಯಂಡಿ ಮರ್ರೆಗೆ ಹಾದಿ ಸುಗಮವಾಗಿಲ್ಲ. ಏಕೆಂದರೆ ಖ್ಯಾತನಾಮ ಆಟಗಾರರು ಅವರಿಗೆ ಸವಾಲೊಡ್ಡಲು ಸಿದ್ಧವಾಗಿದ್ದಾರೆ. ಅವರ ಕಟ್ಟಾ ಎದುರಾಳಿ ಸರ್ಬಿಯಾದ  ನೊವಾಕ್ ಜೊಕೊವಿಚ್, ರಫೆಲ್ ನಡಾಲ್, ಜಪಾನ್ ಆಟಗಾರ ಜಿ. ನಿಶಿಕೋರಿ,  ಸ್ವಿಸ್ ಆಟಗಾರ ರೋಜರ್ ಫೆಡರರ್ ಅವರ ಸವಾಲು ಇದೆ.

ಮುಂದಿನ ಆಗಸ್ಟ್‌ನಲ್ಲಿ 36ರ ಹರೆಯಕ್ಕೆ ಕಾಲಿಡಲಿರುವ ರೋಜರ್ ಫೆಡರರ್ ಈ ಬಾರಿ ಫೈನಲ್‌ ತಲುಪುವ ವಿಶ್ವಾಸ ಮೂಡಿಸಿದ್ದಾರೆ.
ಹೋದ ವರ್ಷ ಇಲ್ಲಿಯ  ಹುಲ್ಲಿನಂಕಣದಲ್ಲಿ  ನಡೆದಿದ್ದ ಸೆಮಿಫೈನಲ್‌ನಲ್ಲಿ ಫೆಡರರ್ ಅವರು ಯು ವ ಆಟಗಾರ ಮೈಲೊಸ್ ರಾವೊನಿಕ್ ವಿರುದ್ಧ ಸೋತಿದ್ದರು.  ಆರು ಸಲ ವಿಂಬಲ್ಡನ್‌ ಪ್ರಶಸ್ತಿಗಳು ಸೇರಿದಂತೆ 17 ಗ್ರ್ಯಾಂಡ್‌ಸ್ಲಾಮ್‌ ಗೆದ್ದಿರುವ ಫೆಡರರ್ ಅವರ ನಿವೃತ್ತಿ ಸಮೀಪಿಸಿದೆ ಎಂಬ  ಚರ್ಚೆ ಆಗ ಗರಿಗೆದರಿತ್ತು.

ಅದರ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾದ ಫೆಡರರ್ ಅವರು ಹೋದ ವರ್ಷ ಮತ್ತೆ ಕಣಕ್ಕಿಳಿದಿದ್ದರು. ಟೀಕಾಕಾರರಿಗೆ ದಿಟ್ಟ ಉತ್ತರ ಕೊಟ್ಟಿದ್ದರು. ಹೋದ ಜನವರಿಯಲ್ಲಿ ಅವರು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ತಮ್ಮ ಆಟ ಇನ್ನೂ ಬಾಕಿ ಇದೆ ಎಂದು ಸಾರಿದ್ದರು. ಸುಮಾರು ಎರಡು ದಶಕಗಳಿಂದ  ವೃತ್ತಿಪರ ಟೆನಿಸ್ ಆಡುತ್ತಿರುವ ಫೆಡರರ್ ತಮ್ಮ ಫಿಟ್‌ನೆಸ್‌ ಕಾಪಾಡಿಕೊಂಡು ಮುನ್ನುಗ್ಗುತ್ತಿದ್ದಾರೆ. ಅನುಭವ, ಆತ್ಮವಿಶ್ವಾಸ ಮತ್ತು ಶ್ರೇಷ್ಠ ತಾಂತ್ರಿಕ ಕೌಶಲ್ಯಗಳನ್ನು ಹೊಂದಿರುವ ರೋಜರ್‌ ತಮ್ಮ ಎದುರಾಳಿಗಳಿಗೆ ಕಠಿಣ ಸವಾಲು ಒಡ್ಡುವ ಛಲದಲ್ಲಿದ್ದಾರೆ. 2012ರಲ್ಲಿ ಅವರು ಇಲ್ಲಿ ಚಾಂಪಿಯನ್‌ಷಿಪ್ ಗೆದ್ದ ನಂತರ ಮತ್ತೆ ಯಶಸ್ಸು ಒಲಿದಿಲ್ಲ.

ಸ್ಪೇನ್ ದೇಶದ ಎಡಗೈ ಆಟಗಾರ ರಫೆಲ್ ನಡಾಲ್ ಅವರು ಸದ್ಯ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 2008 ಮತ್ತು 2010ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಜಯಿಸಿದ್ದರು. ಈಗ ಮತ್ತೊಮ್ಮೆ ಜಯದ ವಿಶ್ವಾಸದಲ್ಲಿದ್ದಾರೆ. ಇತ್ತೀಚೆಗಷ್ಟೇ ರೋಲಾಂಡ್ ಗ್ಯಾರೊಸ್‌ನ ಮಣ್ಣಿನಂಕಣದಲ್ಲಿ ಮಿಂಚು ಹರಿಸಿದ್ದ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.   ಆದರೆ ಹುಲ್ಲಿಂನಂಕಣದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಮಯ ಇದಾಗಿದೆ.  ಕಳೆದ ಕೆಲವು ವರ್ಷಗಳಿಂದ ಹುಲ್ಲಿನಂಕಣಗಳಲ್ಲಿ ಅವರ ಸಾಧನೆ ಉತ್ತಮವಾಗಿಲ್ಲ.

ಲಯಕ್ಕೆ ಮರಳುವರೇ ನೊವಾಕ್?
ಹೋದ ವರ್ಷದ ಟೂರ್ನಿಯಲ್ಲಿ ಅಗ್ರಶ್ರೇಯಾಂಕದ ಆಟಗಾರನಾಗಿ ಆಡಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್  ಮೂರನೇ ಸುತ್ತಿನಲ್ಲಿಯೇ ಸ್ಯಾಮ್ ಕ್ವಾರಿ ವಿರುದ್ಧ ಸೋತಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಬಹಳಷ್ಟು ಟೂರ್ನಿಗಳಲ್ಲಿ ನಿರಾಶೆಯನ್ನೇ ಅನುಭವಿಸಿದ್ದಾರೆ.
ಇತ್ತೀಚೆಗೆ ಫ್ರೆಂಚ್ ಓಪನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಯುವ ಪ್ರತಿಭೆ ಡಾಮ್ನಿಕ್ ಥೀಮ್ ವಿರುದ್ಧ ಆಘಾತ ಅನುಭವಿಸಿದ್ದರು. ಅದರ ನಂತರ ತಮ್ಮ ಕೋಚ್ ಆ್ಯಂಡ್ರಿ ಅಗಾಸ್ಸಿ ಅವರಿಂದ ದೂರ ಸರಿದಿದ್ದರು.  30 ವರ್ಷದ ಜೊಕೊವಿಚ್ ಸದ್ಯ ಮಾರಿಯೊ ಅ್ಯನ್ಸಿಕ್ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮಾರಿಯೊ ಅವರು 2002ರಲ್ಲಿ ವಿಂಬಲ್ಡನ್‌ ಟೂರ್ನಿಯಲ್ಲಿ  ಫೆಡರರ್‌ ಅವರನ್ನು ಮಣಿಸಿದ್ದರು. ಜೊಕೊವಿಚ್ 2011, 2014, 2015ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದರು.  ಈ ಬಾರಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಸ್ಲೊವಾಕಿಯಾದ ಮಾರ್ಟಿನ್ ಕ್ಲಿಜನ್ ಅವರನ್ನು ಎದುರಿಸುವರು.

ವನಿತೆಯರ ಹೊಸ ತಾರೆ ಯಾರು?
ವನಿತೆಯರ ಸಿಂಗಲ್ಸ್‌ನಲ್ಲಿ ಈ ಬಾರಿ ಉದಯಿಸುವ ಹೊಸ ತಾರೆ ಎಂಬ ಕುತೂಹಲ ಗರಿಗದರಿದೆ. ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್‌  ಮತ್ತು  ಗಾಯಗೊಂಡಿರುವ ರಷ್ಯಾದ ಆಟಗಾರ್ತಿ ಮರಿಯಾ ಶೆರಪೋವಾ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ್ತಿಯರಿಗೆ ಪ್ರಶಸ್ತಿ ಗೆಲ್ಲುವ ಅವಕಾಶಗಳು ಹೆಚ್ಚಿವೆ. 

ಫ್ರೆಂಚ್‌ ಓಪನ್ ಪ್ರಶಸ್ತಿ ಗೆದ್ದಿರುವ ಲಾಟ್ವಿಯಾದ ಜೆಲೆನಾ ಒಸ್ತಪೆಂಕೊ  ಮತ್ತು ವಿಂಬಲ್ಡನ್‌ನಲ್ಲಿ ಹೋದ ವರ್ಷ ರನ್ನರ್ಸ್ ಅಪ್ ಆಗಿದ್ದ ಏಂಜೆಲಿಕಾ ಕೆರ್ಬರ್ ಅವರ ಮೇಲೆ  ನಿರೀಕ್ಷೆ  ಹೆಚ್ಚಿದೆ. ಎರಡನೇ ಶ್ರೇಯಾಂಕದ ಹಲೆಪ್,  ಪೆಟ್ರಾ ಕ್ವಿಟೊವಾ,  ವಿಕ್ಟೋರಿಯಾ ಆಜರೆಂಕಾ ಅವರು ಕೂಡ ಕಣದಲ್ಲಿದ್ದಾರೆ. ಸೆರೆನಾ ಅವರ ಸಹೋದರಿ ವೀನಸ್ ವಿಲಿಯಮ್ಸ್‌ ಅವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದ್ದಾರೆ. 37 ವರ್ಷದ
ವೀನಸ್ ಅವರು ಹೋದ ಸಲ ಮಹಿಳೆಯರ ಡಬಲ್ಸ್‌ನಲ್ಲಿ ಸೆರೆನಾ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು. ಐದು ಬಾರಿ ವಿಂಬಲ್ಡನ್ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿರುವ ವೀನಸ್ ಉಳಿದ ಆಟಗಾರ್ತಿಯರಿಗೆ ಕಠಿಣ ಪೈಪೋಟಿಯೊಡ್ಡುವ ಸಮರ್ಥರಾಗಿದ್ದಾರೆ.

ಕಣದಲ್ಲಿ ಭಾರತದ ಆಟಗಾರರು
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ, ಲಿಯಾಂಡರ್‌ ಪೇಸ್, ಜೀವನ್ ನೆಡುಂಚೆಳಿಯನ್, ದಿವಿಜ್ ಶರಣ್ ಮತ್ತು ಪೂರವ್ ರಾಜಾ ಆಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಏಕೈಕ ಆಟಗಾರ್ತಿ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT