ಶುಕ್ರವಾರ, ಡಿಸೆಂಬರ್ 13, 2019
17 °C

ಗರಿಷ್ಠ ಸಮಸ್ಯೆ; ಕನಿಷ್ಠ ಮೂಲಸೌಕರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರಿಷ್ಠ ಸಮಸ್ಯೆ; ಕನಿಷ್ಠ ಮೂಲಸೌಕರ್ಯ

ಗಂಗಾವತಿ: ನಗರದ ಸಿದ್ಧಿಕೇರಿ ರಸ್ತೆಯಲ್ಲಿರುವ ವಿಸ್ತರಿತ (ಎಕ್ಸ್‌ಟೆನ್ಷನ್) ಪ್ರದೇಶ ಜಯನಗರ ಎಂಬ ಹೆಸರು ಕೇಳಿದರೆ ಸಾಕು, ಅದು ಶ್ರೀಮಂತರು ವಾಸಿಸುವ ಡಾಲರ್ಸ್ ಕಾಲೋನಿ. ಅಲ್ಲಿ  ಸಮಸ್ಯೆಗಳೇ ಇಲ್ಲ ಎಂಬ ಮಾತು ನಗರದಲ್ಲಿ ಹೆಚ್ಚು ಜನಜನಿತವಾಗಿದೆ.

ನೀರಿಗಿಳಿದಾಗಲೇ ಆಳ ಗೊತ್ತಾಗೋದು ಎಂಬ ಗಾದೆಯಂತೆ ಜಯನಗರದ ನಿವಾಸಿಗಳ ಪಾಲಿಗೆ ನಿಜ ಎನಿಸಿದೆ. ಸಮರ್ಪಕ ಮೂಲಸೌಕರ್ಯವಿರದ ಕಾರಣ ಜನರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. 

ಸಿದ್ಧಿಕೇರಿ ರಸ್ತೆಯಲ್ಲಿರುವ ಸಿದ್ದಾಪುರ ಬಡಾವಣೆ, ಕುವೆಂಪು ಬಡಾವಣೆ ಹೊರತು ಪಡಿಸಿದರೆ  ಜಯನಗರ 1 ಮತ್ತು 2, ಸತ್ಯನಾರಾಯಣ ಪೇಟೆ 1 ಮತ್ತು 2ನೇ ಹಂತ ಹಾಗೂ ಆಂಜನೇಯ ಬಡಾವಣೆಯ ಜನರು ಕನಿಷ್ಟ ಸೌಲಭ್ಯಗಳಿಲ್ಲದೇ ನಿತ್ಯವೂ ಪರದಾಡುವ ಸ್ಥಿತಿಯಿದೆ.

ಇವು ಸುಸಜ್ಜಿತ ಬಡಾವಣೆಗಳು ಎಂಬುವುದು ಕೇವಲ ದಾಖಲೆಗಳಲ್ಲಿ ಮಾತ್ರ. ಆದರೆ ಇಲ್ಲಿನ ಜನರಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ, ಆರೋಗ್ಯದಂತ ಕನಿಷ್ಟ ಸೌಲಭ್ಯಗಳಿಲ್ಲ. 

’ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕಳೆದ ಹತ್ತಾರು ವರ್ಷದಿಂದ ಚುನಾಯಿತ ಪ್ರತಿನಿಧಿ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ್ದರಿಂದ ಮನವಿ ಸಲ್ಲಿಸುವುದನ್ನು ಬಿಟ್ಟಿದ್ದೇವೆ’ ಎನ್ನುತ್ತಾರೆ ಜಯನಗರದ ನಿವಾಸಿ ಎನ್. ಚಂದ್ರಶೇಖರ.

ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಬಹುತೇಕ ಜನ ರಸ್ತೆಯನ್ನು ಅಗೆದು ಎದುರಿರುವ ಅಥವಾ ಪಕ್ಕದ ನಿವೇಶನಗಳಿಗೆ ಚರಂಡಿ ನೀರು ಬಿಡುವಂತಾಗಿದೆ. ನಗರಸಭೆಯ ಸಿಬ್ಬಂದಿ ಮನೆಮನೆಯ ಕಸ ಸಂಗ್ರಹಕ್ಕೂ ನಿರಾಸಕ್ತಿ ವಹಿಸಿದ್ದರಿಂದ ಕಸ ರಸ್ತೆ, ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗಿರುವುದು ಕಂಡು ಬರುತ್ತದೆ.

ಕೊಳವೆಬಾವಿಯಲ್ಲಿ ನೀರಿಲ್ಲ

ದೂರವಾಣಿ ಕರೆ ಬಂದರೆ ಸ್ಪಷ್ಟಧ್ವನಿ ಕೇಳದ ಕಾರಣ ಮನೆಯ ಮಾಳಿಗೆ ಹತ್ತಬೇಕು. ಬೆಟ್ಟದ ಸಮೀಪದ ಜನವಸತಿ ಪ್ರದೇಶದಲ್ಲಿನ ಬಹುತೇಕ ಕೊಳವೆಬಾವಿ ಬತ್ತಿವೆ. ನಗರಸಭೆಯಿಂದ ಕುಡಿ ಯುವ ನೀರಿನ ಸಂಪರ್ಕ ಇಲ್ಲ ಎಂದು ಜಯನಗರ ಬಡಾವಣೆ ನಿವಾಸಿ ಯಶೋಧಮ್ಮ ಸಿರಿಗೇರಿ

ದೂರವಾಣಿ ಸಮಸ್ಯೆ

ಬಿಎಸ್‌ಎನ್‌ಎಲ್‌ ಟವರ್‌ ಹಾಕಲು ಒಮ್ಮೆ ಪ್ರಯತ್ನಿಸಿದೆವು. ಆದರೆ ತರಂಗಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದೆಂದು ಸ್ಥಳೀಯರು ಆಕ್ಷೇಪಿಸಿದ್ದರಿಂದ ಆ ಯೋಜನೆಯನ್ನು ಕೈಬಿಡಲಾಯಿತು ಎಂದು ದೂರವಾಣಿ ಸಂಸ್ಥೆಯ ನೌಕರ ದತ್ತಾತ್ರೇಯ ತಿಳಿಸಿದರು.

ನೀರಿನ ಸಮಸ್ಯೆಗೆ ಪರಿಹಾರ

ಸಮಸ್ಯೆಗಳು ಗಮನಕ್ಕೆ ಬಂದರೆ ಕನಿಷ್ಟ ಇತ್ಯರ್ಥಕ್ಕೆ ಯತ್ನಿಸ ಲಾಗುವುದು. ನೀರಿನ ಸಮಸ್ಯೆ ಕೇವಲ ಜಯನಗರಕ್ಕೆ ಮಾತ್ರವಲ್ಲ ಎಲ್ಲಕಡೆ ಸರ್ವೇಸಾಮಾನ್ಯ. ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಸಭೆ ಪೌರಾಯುಕ್ತ ಖಾಜಾಮೋಹಿನುದ್ದೀನ್ ತಿಳಿಸಿದರು.

ಜಯನಗರ ಬಡಾವಣೆ ಸ್ಥಿತಿ

980 ಚ.ಮೀ. ಬಡಾವಣೆಯ ವಿಸ್ತೀರ್ಣ

ಬತ್ತಿದ ಕೊಳವೆಬಾವಿಗಳು ಜಯನಗರದಲ್ಲಿ ಶೇ 70ರಷ್ಟು ಕೊಳವೆಬಾವಿಗಳು ಬತ್ತಿದ್ದು, ನೀರಿನ ಸಮಸ್ಯೆ ಪರಿಹಾರಗೊಂಡಿಲ್ಲ

7,000 ಜಯನಗರ ಬಡಾವಣೆಯ ಒಟ್ಟು ಜನಸಂಖ್ಯೆ

 

ಪ್ರತಿಕ್ರಿಯಿಸಿ (+)