ಶನಿವಾರ, ಡಿಸೆಂಬರ್ 14, 2019
20 °C

ನಾಳೆ ಬನ್ನಿಮಹಾಂಕಾಳಿ ಅಮ್ಮನವರ ಕರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ ಬನ್ನಿಮಹಾಂಕಾಳಿ ಅಮ್ಮನವರ ಕರಗ

ರಾಮನಗರ: ನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ಅಮ್ಮನವರ ಸಾಲಿನಲ್ಲಿ ಬರುವ ಬನ್ನಿಮಹಾಂಕಾಳಿ ಸಹಾ ನಗರದ ಒಂದು ಸ್ವರೂಪದ ಶಕ್ತಿ ದೇವತೆ. ಸುಮಾರು ನಾನೂರು  ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ. ಇಲ್ಲಿ ಇದೇ 4ರಂದು ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ, 5ರಂದು ಅಗ್ನಿಕೊಂಡ ಮಹೋತ್ಸವ ನಡೆಯಲಿದೆ.

ಹಿನ್ನೆಲೆ: ಮೈಸೂರು ರಾಜರ ಆಸ್ಥಾನ ದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದಾಗ ರಾತ್ರಿ ಅವರಿಗೆ ಕನಸೊಂದು ಬಿದ್ದಿತ್ತು. ಕನಸಿ ನಲ್ಲಿ ದೇವಿ ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು ಎಂಬ ನಂಬಿಕೆ ಪ್ರಚಲಿತವಿದೆ.

ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು.

ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಬಂಡಿಯ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ (ಮಂಡಿ ಪೇಟೆ) ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪಿ ಸುವಂತೆ ದೇವಿ ಅವರನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ಬಂಡಿ ಹಿಂದೆ ಬಂದ ಕಾರಣ ದೇವಿ ಯನ್ನು ಬಂಡಿ ಮಹಾಂಕಾಳಿ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ಬನ್ನಿ ಮಹಾಕಾಳಿ ಎಂತಲೂ ಎರಡು ಹೆಸರಿನಿಂದ ಕರೆ ಯುತ್ತಾರೆ. ಅಂದಿನಿಂದ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತ್ತಿದ್ದರು. ಈಗ ಆರ್‌.ಎ .ಎನ್.ಯೋಗಾನಂದ ಕರಗವನ್ನು ಧರಿಸುತ್ತಿದ್ದಾರೆ.

‘ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದೆ. ಈಗ ನಗರದಲ್ಲಿ ಎಂಟು ಕರಗಗಳ ಉತ್ಸವ ನಡೆಯುತ್ತದೆ. ಮೊದಲು ಕರಗ ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆಗೆಲ್ಲಾ ಅಗ್ನಿಕೊಂಡ ಪ್ರವೇಶ ಮಾ ಡುತ್ತಿತ್ತು’ ಎಂದು ದೇವಾಲಯದ ಅರ್ಚಕ ಎಂ.ಎಸ್. ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ರಾಮನಗರದ ನಗರ ವ್ಯಾಪ್ತಿ ಹೆಚ್ಚಾಗಿದೆ. ಆದ್ದರಿಂದ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆ ಯಾಗುತ್ತದೆ’ ಎಂದರು.

ರೋಗರುಜಿನ ಬರುವುದಿಲ್ಲ: ‘ಬನ್ನಿ ಮಹಾಂಕಾಳಿ ದೇವಿಯು ಪ್ರತಿಷ್ಠಾಪನೆ ಗೊಂಡಾಗಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ  ಯಾವುದೇ ಸಾಮೂಹಿಕ ಕಾಯಿಲೆ ಅಥವಾ ರೋಗ ರುಜಿನ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆ ಯಾಗಿದೆ’ ಎಂದು ಅರ್ಚಕ ಎಂ.ಎಸ್. ವಿನಯ್‌ಕುಮಾರ್‌ ತಿಳಿಸಿದರು.

ಸ್ಮಾರಕ: ‘ರಾಮನಗರಕ್ಕೆ ಕ್ಲೋಸ್ ಪೇಟೆ ಎಂದು ನಾಮಕರಣವಾದ ಬಗ್ಗೆ ತಿಳಿಸುವ ಶಾಸನ ಈಗಿನ  ಮಂಡಿಪೇಟೆ ಬನ್ನಿಮಹಾಂಕಾಳಿ ಅಮ್ಮನವರ ದೇಗುಲದ ಮುಂಭಾಗದಲ್ಲಿದೆ. ಅದನ್ನು ಮಣ್ಣು ಮತ್ತು ಗಾರೆಯಿಂದ ನಿರ್ಮಿ ಸಲಾ ಗಿದೆ. ಇಲ್ಲಿ ಕಂಬವೊಂದನ್ನು ಇರಿಸಲಾಗಿದೆ’ ಎಂದು ಸಾಹಿತಿ ಡಾ.ಎಲ್.ಸಿ. ರಾಜು ತಿಳಿಸಿದರು.

‘ಕ್ಲೋಸ್ ಪೇಟೆ ಶಾಸನದ ಶಿಲಾಸ್ಮಾರಕ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಥಳವಸ್ತು (ಮಾನ್ಯುಮೆಂಟ್) ಎಂದು ಘೋಷಿಸಿದೆ. ವಿದ್ಯಾರ್ಥಿಗಳು, ಸಂಶೋಧಕರು ಈ ಸ್ಮಾರಕದ ಅಧ್ಯಯನ ಕೈಗೊಂಡರೆ ರಾಮನಗರದ ಮತ್ತಷ್ಟು ಇತಿಹಾಸ ತಿಳಿಯಬಹುದು’ ಎಂದರು. 

ಕರಗದ ಮೂಲ ತಮಿಳುನಾಡು

‘ಕರಗ ಉತ್ಸವವು ದಕ್ಷಿಣ ಕರ್ನಾಟಕದ ಕೋಲಾರ, ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ ಹಾಗೂ ರಾಮನಗರದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇದು ಮೂಲತಃ ತಮಿಳುನಾಡಿನಿಂದ ವಲಸೆ ಬಂದಿದೆ. ದ್ರೌಪದಿಯ ಕುಲದವರಾದ ವೈಹ್ನಿಕುಲ ಕ್ಷತ್ರಿಯರು ಆಚರಣೆಗೆ ತಂದರು’ ಎನ್ನುತ್ತಾರೆ ಸಂಶೋಧಕ ಡಾ. ಚಿಕ್ಕಚನ್ನಯ್ಯ.

‘ವಹ್ನಿಜೆ ಎಂದರೆ ದ್ರೌಪದಿ ಎಂದು ಅರ್ಥ. ಸ್ವರ್ಗಾರೋಹಣ ಸಂದರ್ಭದಲ್ಲಿ ಒಮ್ಮೆ ದ್ರೌಪದಿ ಮೂರ್ಛಿತಳಾದಳು. ಎಚ್ಚರಗೊಂಡಾಗ ಆಕೆಯ ಪತಿ ಅಲ್ಲಿ ಇರಲಿಲ್ಲ. ತಿಮಿರಾಸುರನೆಂಬ ರಾಕ್ಷಸ ಆಕೆಯನ್ನು ಈ ಸಂದರ್ಭದಲ್ಲಿ ಪೀಡಿಸುತ್ತಿದ್ದ. ಆಗ ಅವಳು ರಾಕ್ಷಸನನ್ನು ನಿಗ್ರಹಿಸಲು ವಿರಾಟ ರೂಪ ತಾಳಿ ತಲೆಯ ಮೇಲೆ ಕುಂಭವನ್ನು ಧರಿಸಿದಳು. ಇದೇ ಇಂದಿನ ಕರಗವಾಗಿ ಆರಾಧನೆಗೊಳ್ಳುತ್ತಿದೆ. ಇದು ಆದಿಶಕ್ತಿಯ ಪ್ರತೀಕ. ಕರಗ ಎಂದರೆ ನೀರಿನ ಕಳಸ ಎಂದರ್ಥ’ ಎಂದು ತಿಳಿಸಿದರು

ಪ್ರತಿಕ್ರಿಯಿಸಿ (+)