ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿ ವಿವಾದವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಯುದ್ಧ ಸಂಭವಿಸಲಿದೆ: ಎಚ್ಚರಿಕೆ

Last Updated 3 ಜುಲೈ 2017, 11:25 IST
ಅಕ್ಷರ ಗಾತ್ರ

ಬೀಜಿಂಗ್‌: ಭಾರತ ಹಾಗೂ ಚೀನಾ ನಡುವಣ ಗಡಿ ಸಮಸ್ಯೆಯಿಂದಾಗಿ ಉಂಟಾಗಿರುವ ವಿವಾದವನ್ನು ಸಮರ್ಥವಾಗಿ ನಿಭಾಯಿಸದಿದ್ದಲ್ಲಿ ಎರಡೂ ದೇಶಗಳ ನಡುವೆ ಯುದ್ಧ ಸಂಭವಿಸಲಿದೆ ಎಂದು ಗ್ಲೋಬಲ್‌ ಟೈಮ್ಸ್‌ ತನ್ನ ವರದಿಯಲ್ಲಿ ಎಚ್ಚರಿಸಿದೆ.

‘ಒಂದು ವೇಳೆ ಯುದ್ಧ ಸಂಭವಿಸಿದರೆ ಚೀನಾ ತನ್ನ ಗಡಿ ಹಾಗೂ ಭೂ ಪ್ರದೇಶದಲ್ಲಿ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲಿದೆ’ ಎಂದು ವರದಿಯಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿದ್ದು, 1962ರ ಯುದ್ಧದ ಬಗ್ಗೆ ಉಲ್ಲೇಖಿಸಲಾಗಿದೆ. ‘ಯುದ್ಧದಲ್ಲಿ ಚೀನಾ ಸೈನಿಕರು ಭಾರತದ 4,383 ಸೈನಿಕರನ್ನು ಹಾಗೂ ಭಾರತದ ಸೈನಿಕರು ಚೀನಾದ 722 ಸೈನಿಕರನ್ನು ಹತ್ಯೆ ಮಾಡಿದ್ದರು. ಈ ಬಳಿಕ ಚೀನಾ ತನ್ನ ಭೂ ಪ್ರದೇಶವನ್ನು ವಿಸ್ತರಿಸಿಕೊಂಡಿದೆ’ ಎಂದು ತಿಳಿಸಲಾಗಿದೆ.

ಭಾರತ ಮತ್ತು ಚೀನಾ, ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದ ವರೆಗೆ ಒಟ್ಟು 3,488 ಕಿ.ಮೀ ಗಳಷ್ಟು ಉದ್ದದ ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಸದ್ಯ ಗಡಿ ಸಮಸ್ಯೆಯಿಂದಾಗಿ ಸಿಕ್ಕಿಂಗೆ ಹೊಂದಿಕೊಂಡಿರುವ 220 ಕಿ.ಮೀ ಉದ್ದದ ಗಡಿ ಪ್ರದೇಶದಲ್ಲಿ ಉಭಯ ರಾಷ್ಟ್ರಗಳು ಸೇನಾ ಪಡೆಗಳನ್ನು ನಿಯೋಜಿಸಿವೆ.

ಕೆಲ ದಿನಗಳ ಹಿಂದೆ ಚೀನಾ ನೀಡಿದ್ದ ಹೇಳಿಕೆ ‘1962ರ ಯುದ್ಧದ ಇತಿಹಾಸದಿಂದ ಭಾರತ ಸೇನೆ ಪಾಠ ಕಲಿಯಲಿ’ ಎಂಬುದಕ್ಕೆ ಪ್ರತಿಯಾಗಿ ಸಚಿವ ಅರುಣ್‌ ಜೇಟ್ಲಿ ಅವರು, ‘1962ರ ಭಾರತಕ್ಕಿಂತ 2017ರ ಭಾರತ ಭಿನ್ನವಾಗಿದೆ’ ಎಂದು ತಿರುಗೇಟು ನೀಡಿದ್ದರು.

ಇದನ್ನು ಉದ್ದೇಶಿಸಿ ಶಾಂಘೈ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ವಾಂಗ್‌ ದೇಹುವಾ ಅವರು, ‘ಚೀನಾ ಕೂಡ 1962ರಿಂದ ಈಚೆಗೆ ಸಾಕಷ್ಟು ಬದಲಾಗಿದೆ’ ಎಂದು ಎಚ್ಚರಿಸಿದ್ದಾರೆ.

‘ಭಾರತ 1962ರ ನಂತರ ಚೀನಾವನ್ನು ತನ್ನ ಪ್ರತಿಸ್ಪರ್ಧಿ ಎಂಬಂತೆ ವರ್ತಿಸುತ್ತಿದೆ. ಎರಡೂ ದೇಶಗಳು ಹಲವು ವಿಚಾರಗಳಲ್ಲಿ ಸಾಮ್ಯತೆಯನ್ನು ಹೊಂದಿದ್ದು, ಅಧಿಕ ಜನಸಂಖ್ಯೆಯ ಜತೆಗೆ ಅಭಿವೃದ್ಧಿಯತ್ತ ಸಾಗುತ್ತಿವೆ. ಭಾರತ ಚೀನಾ ಬಗೆಗಿನ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಲಿ’ ಎಂದೂ ವಾಂಗ್‌ ಹೇಳಿದ್ದಾರೆ.

ಜತೆಗೆ ಅದೇ ಅಧ್ಯಯನ ಸಂಸ್ಥೆಯ ಏಷಿಯಾ–ಫೆಸಿಫಿಕ್‌ ಅಧ್ಯಯನ ಕೇಂದ್ರದ ನಿರ್ದೇಶಕ ಜಾಹೋ ಗಾಂಚೆಂಗ್‌ ಅವರು, ‘ಉಭಯ ದೇಶಗಳು ಯುದ್ಧ ಅಥವಾ ವಿವಾದ ಕುರಿತು ಗಮನ ಹರಿಸುವುದನ್ನು ಬಿಟ್ಟು, ದೇಶದ ಅಭಿವೃದ್ಧಿಯತ್ತ ಗಮನ ಹರಿಸಲಿ’ ಎಂದು ಸಲಹೆ ನೀಡಿದ್ದಾರೆ.

‘ಎರಡು ದೇಶಗಳ ನಡುವಿನ ವಿವಾದ ಮತ್ತೊಂದು ರಾಷ್ಟ್ರಕ್ಕೆ ಇಂತಹ ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ’ ಎಂದು ಅಮೆರಿಕವನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT