ಶುಕ್ರವಾರ, ಡಿಸೆಂಬರ್ 6, 2019
17 °C

ಆದಿತ್ಯನಾಥ ಯೋಗಿ ವಿರುದ್ಧ ಪ್ರತಿಭಟನೆ ನಡೆಸಿದ ದಲಿತರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಿತ್ಯನಾಥ ಯೋಗಿ ವಿರುದ್ಧ ಪ್ರತಿಭಟನೆ ನಡೆಸಿದ ದಲಿತರ ಬಂಧನ

ಲಖನೌ:  ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಅವರ ನಿವಾಸದತ್ತ ಪ್ರತಿಭಟನೆ ಹಮ್ಮಿಕೊಂಡಿದ್ದ ದಲಿತರನ್ನು ಪೊಲೀಸರು ಬಂಧಿಸಿದ್ದಾರೆ.

ಬುಂದೇಲ್‍ಖಂಡ ದಲಿತ ಸೇನೆಯ ಕಾರ್ಯಕರ್ತ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಸೇರಿದಂತೆ ಎಂಟು ಕಾರ್ಯಕರ್ತರು ನಿಯಮ ಉಲ್ಲಂಘಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಕ್ಕೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ದಾರಾಪುರಿ ಅವರು ಖೈಸರ್‍‍ಭಾಗ್ ಪ್ರೆಸ್ ಕ್ಲಬ್‍ನಲ್ಲಿ ಸೆಮಿನಾರ್ ನಡೆಸುವುದಕ್ಕಾಗಿ ಅನುಮತಿ ಪಡೆದಿದ್ದರು. ಆದರೆ ಅವರು ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಾಗ ಪೊಲೀಸರು ದಲಿತ ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 144ರ ನಿಯಮ ಉಲ್ಲಂಘಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದನ್ನು ಕೈ ಬಿಡಬೇಕು ಎಂದು ಪೊಲೀಸ್ ಅಧಿಕಾರಿ ವಿಕಾಸ್ ಚಂದ್ರ ಅವರು ವಿನಂತಿಸಿದರೂ ದಾರಾಪುರಿ ಒಪ್ಪಲಿಲ್ಲ. ಹಾಗಾಗಿ ದಾರಾಪುರಿ ಸೇರಿದಂತೆ  ಬುಂದೇಲ್‍ಖಂಡ ದಲಿತ ಸೇನೆಯ 23 ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ರ‍್ಯಾಲಿಯಲ್ಲಿ 45 ದಲಿತ ಕಾರ್ಯಕರ್ತರು 125 ಕೆಜಿ ತೂಕದ ಸೋಪಿನಲ್ಲಿ ಬುದ್ಧನ ಚಿತ್ರ ರಚಿಸಿ ಅದನ್ನು ಆದಿತ್ಯನಾಥ ಅವರಿಗೆ ಉಡುಗೊರೆ ನೀಡಲು ಹೊರಟಿದ್ದರು. ದಲಿತರ ಬಗ್ಗೆ ಇರುವ ಆದಿತ್ಯನಾಥರ ಮನಸ್ಥಿತಿಯನ್ನು ತೊಳೆಯಲು ಈ ಸೋಪ್ ಎಂದು ದಲಿತರು ಹೇಳಿದ್ದಾರೆ.

ಮೇ ತಿಂಗಳಲ್ಲಿ ಆದಿತ್ಯನಾಥ ಅವರು ಖುಷಿ ನಗರದಲ್ಲಿ ದಲಿತ ಕುಟುಂಬಗಳನ್ನು ಭೇಟಿಯಾಗುವ ಮುನ್ನ ಆ ಗ್ರಾಮದ ದಲಿತರಿಗೆ ಸೋಪು ಮತ್ತು ಶ್ಯಾಂಪು ಹಂಚಿದ್ದರು. ಇದಕ್ಕೆ ತಕ್ಕ ಉತ್ತರ ನೀಡುವುದಕ್ಕಾಗಿಯೇ 125 ಕೆಜಿ ತೂಕದ ಸೋಪ್‍ನ್ನು ಆದಿತ್ಯನಾಥರಿಗೆ ಉಡುಗೊರೆಯಾಗಿ ನೀಡಲು ದಲಿತ ಸಂಘಟನೆಗಳು ತೀರ್ಮಾನಿಸಿದ್ದವು.

ಪ್ರತಿಕ್ರಿಯಿಸಿ (+)