ಭಾನುವಾರ, ಡಿಸೆಂಬರ್ 15, 2019
23 °C

ಪ್ರತಿನಿತ್ಯ ಬೆಳಿಗ್ಗೆ–ಸಂಜೆ ಅರ್ಧಗಂಟೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿನಿತ್ಯ ಬೆಳಿಗ್ಗೆ–ಸಂಜೆ ಅರ್ಧಗಂಟೆ ನೀರು

ಗದಗ: ಗದಗ–ಬೆಟಗೇರಿ ಅವಳಿ ನಗರದ 12 ವಲಯಗಳ ಪೈಕಿ, 4 ವಲಯಗಳಿಗೆ 24x7 ಕುಡಿಯುವ ನೀರು ಪೂರೈಕೆ ಪ್ರಾರಂಭವಾಗಿ ಇಂದಿಗೆ (ಜುಲೈ 4)  ಒಂದು ತಿಂಗಳು ಕಳೆದಿದೆ. ಜೂ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಆನಂದ ನಗರ, ಹುಡ್ಕೋ ಕಾಲನಿ, ಕೆ.ಸಿ ಪಾರ್ಕ ಮತ್ತು ಪಿ ಮತ್ತು ಟಿ ಕ್ವಾಟರ್ಸ್ ಪ್ರದೇಶಗಳ 11,648 ಮನೆಗಳಿಗೆ ಪ್ರಾಯೋಗಿಕವಾಗಿ ನೀರು ಪೂರೈಕೆ ಪ್ರಾರಂಭವಾಗಿತ್ತು.

ಆದರೆ, ದುರಸ್ತಿ, ಸೋರಿಕೆ ಮತ್ತಿತರ ತಾಂತ್ರಿಕ ಕಾರಣಗಳಿಂದ ಕಳೆದ ಒಂದು ತಿಂಗಳಲ್ಲಿ ಪ್ರತಿ ವಲಯಕ್ಕೆ ನೀರು ಪೂರೈಕೆಯಾಗಿರುವುದು ಸರಾಸರಿ 10ರಿಂದ 15 ದಿನಗಳು ಮಾತ್ರ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಅರ್ಧ ಗಂಟೆಯಂತೆ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಬಿಟ್ಟರೆ ಈ ಬಡಾವಣೆಗಳಲ್ಲಿ ನೀರಿನ ಬವಣೆ ಮೊದಲಿನಂತೆಯೇ ಇದೆ.

‘ಬೇಸಿಗೆಯಲ್ಲಿ 30ರಿಂದ 40 ದಿನಗಳಿಗೊಮ್ಮೆ ನೀರು ಪೂರೈಕೆಯಾಗಿತ್ತು. ಸದ್ಯ ನಗರಸಭೆ ಎರಡು ವಾರಗಳಿಗೊಮ್ಮೆ ತುಂಗಭದ್ರಾ ಕುಡಿಯುವ ನೀರು ಪೂರೈಸುತ್ತಿದೆ. ಅದೇ ಮಹಾಭಾಗ್ಯ. ಇನ್ನೂ ಪ್ರಾಯೋಗಿಕ ಹಂತದಲ್ಲೇ ಇರುವ 24x7 ಯೋಜನೆಯಿಂದ ದೊಡ್ಡ ಪ್ರಯೋಜನವೇನೂ ಆಗಿಲ್ಲ.

ಎರಡೋ, ಮೂರೋ ದಿನಗಳಿಗೊಮ್ಮೆ ಈ ನಳದಲ್ಲಿ ಅರ್ಧಗಂಟೆ ನೀರು ಬರುತ್ತದೆ. ಅದನ್ನು ಹಿಡಿದಿಟ್ಟುಕೊಂಡು ಪಾತ್ರೆ ತೊಳೆಯಲು, ಇನ್ನಿತರ ಗೃಹ ಬಳಕೆಗೆ ಬಳಸಿಕೊಳ್ಳುತ್ತೇವೆ. ಕುಡಿಯಲು ಯೋಗ್ಯವಲ್ಲ’ ಎಂದು ರಾಜೀವ್‌ಗಾಂಧಿ ನಗರದ ನಿವಾಸಿ ಶುಭಾ ಹೂಗಾರ ಪತ್ರಿಕೆಗೆ ತಿಳಿಸಿದರು.‘ಕೆಲವೊಮ್ಮೆ ಬೆಳಿಗ್ಗೆಯಿಂದ ಸಂಜೆವರೆಗೂ ಕಾದರೂ ಈ ನಳದಲ್ಲಿ ಒಂದು ಹನಿ ನೀರು ಬಂದಿಲ್ಲ’ ಎಂದು ಬಡಾವಣೆಯ ನಿವಾಸಿ ಮಾಬೂಬಿ ಬೇಸರ ವ್ಯಕ್ತಪಡಿಸಿದರು.

‘ತಿಂಗಳಲ್ಲಿ 10 ದಿನ 24x7 ನಳದಲ್ಲಿ ನೀರು ಬಂದಿರ್‌ಬೇಕ್ರೀ. ಇಡೀ ಬಡಾವಣೆಯ ತುಂಬ ಪೈಪ್‌ಲೈನ್‌ ಅಳವಡಿಕೆ ಮತ್ತು ಒಳಚರಂಡಿ ಯೋಜನೆಗಾಗಿ ರಸ್ತೆ ಅಗೆದು ಹಾಕಿದ್ದಾರೆ. ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ವಾಹನಗಳು ಮನೆ ಬಾಗಿಲಿಗೆ ಬರುತ್ತಿಲ್ಲ. ಶಾಲೆಗೆ ಹೋಗಲು ಮಕ್ಕಳಿಗೆ ತೊಂದರೆ ಆಗಿದೆ.

ಅಲ್ಲಲ್ಲಿ ಪೈಪ್‌ಲೈನ್‌ ಸೋರಿಕೆ ಇರುವುದರಿಂದ ದುರಸ್ಥಿ ಕಾರ್ಯ ಮುಂದುವರಿದಿದೆ. ಕೆಲವು ಮನೆಗಳಿಗೆ ಪೈಪ್‌ ಅಳವಡಿಸಿದ್ದಾರೆ. ಆದರೆ, ಮೀಟರ್‌ ಅಳವಡಿಸಿಲ್ಲ. ಕ್ಯಾಪ್‌ ಕೂಡ ಹಾಕಿಲ್ಲ. ಹೀಗಾಗಿ ಪರೀಕ್ಷೆಗಾಗಿ ನೀರು ಹರಿಸಿದಾಗ, ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರುತ್ತಿದೆ’ ಎಂದು ವಿವೇಕಾನಂದ ಬಡಾವಣೆಯ ನಿವಾಸಿ ಬುಡನೇಸಾಬ ಅತ್ತಿಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ನಳದಿಂದ ಸಂಪಿಗೆ ಸಂಪರ್ಕ: ಹುಡ್ಕೋ ಕಾಲೋನಿ, ಪಿಆ್ಯಂಡ್‌ ಟಿ ಕ್ವಾಟರ್ಸ್‌ ಪ್ರದೇಶಗಳ ನಿವಾಸಿಗಳು 24x7 ನಳ ಸಂಪರ್ಕಕ್ಕೆ ಹೆಚ್ಚುವರಿ ಪೈಪ್‌ ಜೋಡಿಸಿಕೊಂಡು, ಅದನ್ನು ನೇರವಾಗಿ ನೀರಿನ ಸಂಪಿಗೆ ಬಿಟ್ಟಿದ್ದಾರೆ. ಈ ನಳದಲ್ಲಿ ನೀರು ಬಂದಾಗ, ನೀರು ಸಂಪಿನಲ್ಲಿ ಸಂಗ್ರಹಗೊಳ್ಳುತ್ತದೆ.

‘ಪರೀಕ್ಷಾರ್ಥವಾಗಿ ಅರ್ಧ ಗಂಟೆ ಹರಿಸುವ ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರುವ ಬದಲು, ಗೃಹಬಳಕೆಗಾದರೂ ಉಪಯೋಗವಾಗಲಿ ಎಂದು ಈ ರೀತಿ ಮಾಡಿಕೊಂಡಿದ್ದೇವೆ. ಪ್ರಾಯೋಗಿಕವಾಗಿ 24x7 ನೀರು ಕೊಡುತ್ತಿರುವ ನಗರಸಭೆ ಎರಡು ತಿಂಗಳು ನಳದ ಶುಲ್ಕದಿಂದ ವಿನಾಯ್ತಿ ನೀಡಿದೆ’ ಎಂದು ಪಿಆ್ಯಂಡ್‌ ಟಿ ಕ್ವಾಟರ್ಸ್‌ ಗೃಹಿಣಿ ಅನಸೂಯಾ ಕುಲಕರ್ಣಿ ಹೇಳಿದರು.

‘ಪ್ರಾಯೋಗಿಕ ಪರೀಕ್ಷೆ ವೇಳೆ ಕೆಲವು ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆ ಕಂಡುಬಂದಿದೆ. ಇದನ್ನು ಪತ್ತೆ ಹಚ್ಚಿ ಸರಿಪಡಿಸುವ ಕಾರ್ಯವೂ ವೇಗವಾಗಿ ನಡೆಯುತ್ತಿದೆ. ದುರಸ್ಥಿಯಿಂದ ನೀರು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿಗಿನ ಸಮಸ್ಯೆಯಾಗಿದೆ. ನಾಲ್ಕೂ ವಲಯಗಳಲ್ಲಿ ನಡೆಯುತತಿರುವ ಪರೀಕ್ಷೆ ಅಂತಿಮ ಹಂತಕ್ಕೆ ಬಂದಿದದು ನಿರಂತರ ನೀರು ಪೂರೈಕೆ ಮಾಡಲಾಗುವು’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ದಿನ ಒಬ್ಬ ವ್ಯಕ್ತಿಗೆ 135 ಲೀಟರ್ ನೀರು?

ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ 1.72 ಲಕ್ಷ  ಜನಸಂಖ್ಯೆ ಇದೆ. ತುಂಗಭದ್ರಾ ನದಿ ನೀರಿನ ಪೂರೈಕೆ ಸಾಮರ್ಥ್ಯ ನಿತ್ಯ 19 ಎಂಎಲ್‌ಡಿ. ಜನಸಂಖ್ಯೆಗೆ ಹೋಲಿಸಿದರೆ ನೀರಿನ ತೀವ್ರ ಕೊರತೆ ಎದುರಾಗುತ್ತಿತ್ತು.

ಇದಕ್ಕೆ ಶಾಶ್ವತ ಪರಿಹಾರವಾಗಿ ತುಂಗಭದ್ರಾ ನದಿ  ಹಮ್ಮಿಗಿ ಬ್ಯಾರೇಜಿನಿಂದ 62.78 ಕಿ.ಮೀ ಪೈಪ್ ಲೈನ್ ಅಳವಡಿಸಿ, ಪ್ರತಿದಿನ 45.02 ಎಂಎಲ್‌ಡಿ ನೀರನ್ನು ನಗರಕ್ಕೆ ನಿರಂತರವಾಗಿ ಸರಬರಾಜು ಮಾಡುವ ಯೋಜನೆಯನ್ನು  ₹127.29 ಕೋಟಿ ವೆಚ್ಚದಲ್ಲಿ  ಕೈಗೆತ್ತಿಕೊಳ್ಳಲಾಗಿದೆ.

ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ 300.71 ಕಿ.ಮೀ ಉದ್ದದ ಆಂತರಿಕ ನೀರು ವಿತರಣಾ ಪೈಪ್ ಲೈನ್‌ ಅಳವಡಿಕೆ ಕಾರ್ಯ ಮುಂದುವರಿದಿದೆ. 5 ಜಲ ಸಂಗ್ರಹಗಾರಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 41,618 ಮನೆಗಳಿಗೆ ನಳ ಸಂಪರ್ಕ ಒದಗಿಸಿ,  ಒಬ್ಬ ವ್ಯಕ್ತಿಗೆ ಪ್ರತಿದಿನ  135 ಲೀಟರ್ ನೀರು ಪೂರೈಸುವ ಯೋಜನೆ ಇದಾಗಿದೆ.

ನಗರದ ಎಲ್ಲ ಮನೆಗಳಿಗೆ  ನಳ ಸಂಪರ್ಕ ಒದಗಿಸುವುದಕ್ಕೆ ₹ 2.21 ಕೋಟಿ  ಅಂದಾಜು ಮಾಡಲಾಗಿದ್ದು, ಇದರಲ್ಲಿ ₹35.65 ಕೋಟಿಯನ್ನು 5 ವರ್ಷಗಳ ನಿರ್ವಹಣೆಗೆ ಮೀಸಲಿಡಲಾಗಿದೆ.

* * 

ಮನೆಗಳಿಗೆ ಕಲ್ಪಿಸಿರುವ 24x7 ನಳ ಸಂಪರ್ಕವನ್ನು ನಗರಸಭೆ ಅಧಿಕಾರಿಗಳು ಪರಿಶೀಲಿಸಿ, ಶಾಶ್ವತವಾಗಿ ಅಳವಡಿಸುವ ವ್ಯವಸ್ಥೆ ಮಾಡಬೇಕು

ಲಲಿತಾ ಕಡಬೂರ

ರಾಜೀವ್ ಗಾಂಧಿ ನಗರ ನಿವಾಸಿ

ಪ್ರತಿಕ್ರಿಯಿಸಿ (+)