ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ ಪಟ್ಟಣದ ಬೆಳಕಿನ ವ್ಯವಸ್ಥೆಗೆ ₹77 ಲಕ್ಷ ವೆಚ್ಚ

Last Updated 4 ಜುಲೈ 2017, 9:01 IST
ಅಕ್ಷರ ಗಾತ್ರ

ಕುಷ್ಟಗಿ: ‘ಎಲ್ಲ ವಾರ್ಡ್‌ಗಳು ಮತ್ತು ಮುಖ್ಯರಸ್ತೆಗಳಲ್ಲಿ ವಿದ್ಯುತ್‌ ದೀಪ ಮತ್ತು ಹೈಮಾಸ್ಟ್‌ ದೀಪಕಂಬ ಅಳವಡಿಸುವ ಮೂಲಕ ಪಟ್ಟಣವನ್ನು ಕತ್ತಲು ಮುಕ್ತವಾಗಿಸುವುದಕ್ಕೆ ಸಂಕಲ್ಪಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಖಾಜಾ ಮೈನುದ್ದೀನ್‌ ಮುಲ್ಲಾ ಹೇಳಿದರು.

ಟಿಪ್ಪುಸುಲ್ತಾನ್‌ ವೃತ್ತದ ಬಸವೇಶ್ವರ ವೃತ್ತ ಮಾರ್ಗವಾಗಿ ಮಾರುತಿ ವೃತ್ತದ ವರೆಗಿನ ಮುಖ್ಯರಸ್ತೆ ಮಧ್ಯದಲ್ಲಿ ಡಿಜೈನ್‌ಪೋಲ್‌ಗಳನ್ನು ಅಳವಡಿಸಿ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸುವ 14ನೇ ಹಣಕಾಸು ಯೋಜನೆಯಲ್ಲಿನ ₹8.40 ಲಕ್ಷ ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ನಂತರ ಮಾಹಿತಿ ನೀಡಿದರು.

‘ವಿವಿಧ ಯೋಜನೆಗಳ ಟೆಂಡರ್‌ ಪ್ಯಾಕೇಜ್‌ನಲ್ಲಿ ಅಂದಾಜು ₹77 ಲಕ್ಷ ಮೊತ್ತದಲ್ಲಿ ವಿದ್ಯುತ್‌ ದೀಪಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪಟ್ಟಣದ ನಾಗರಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಲಾಗುತ್ತಿದೆ’ ಎಂದು ತಿಳಿಸಿದರು.

‘ವೀರಯೋಧ ಮಲ್ಲಯ್ಯ ವೃತ್ತದಿಂದ ಸ್ವಾತಂತ್ರ್ಯ ಸೇನಾನಿ ಮುರುಡಿ ಭೀಮಜ್ಜ ವೃತ್ತದವರೆಗೆ 2013–14ನೇ ವರ್ಷದ 13ನೇ ಹಣಕಾಸು ಯೋಜನೆಯಲ್ಲಿ ₹10.94 ಲಕ್ಷ ವೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗುತ್ತದೆ.

ಕನಕದಾಸ ವೃತ್ತದಿಂದ ಹನುಮಸಾಗರ ರಸ್ತೆ, ವಾಲ್ಮೀಕಿ ವೃತ್ತದಿಂದ ಹನುಮಸಾಗರ ರಸ್ತೆ ಮಾರ್ಗವಾಗಿ ಟೆಂಗುಂಟಿ ಕ್ರಾಸ್‌ ವರೆಗೆ ಸದ್ಯ ಇರುವ ಕಂಬಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವುದು. 2, 6, 7, 8, 13, 19ನೇ ವಾರ್ಡ್‌ಗಳಲ್ಲಿ ಒಟ್ಟು 8 ಸ್ಥಳಗಳಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಕಂಬ ಅಳವಡಿಸಲು ₹10.82 ಲಕ್ಷ ಅನುದಾನ ಬಳಕೆ ಮಾಡಲಾಗುತ್ತದೆ.

ಅದೇ ರೀತಿ 23 ವಾರ್ಡ್‌ಗಳಲ್ಲಿ ಇರುವ ವಿದ್ಯುತ್‌ ಕಂಬಗಳಿಗೆ ₹12.50 ಲಕ್ಷ ವೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗುತ್ತದೆ. ಟೆಂಡರ್‌ ಪಡೆದಿರುವ ಗುತ್ತಿಗೆದಾರರು ಒಂದು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲಿದ್ದಾರೆ. ಈ ಎಲ್ಲ ಕೆಲಸ ಪೂರ್ಣಗೊಂಡರೆ ಪಟ್ಟಣದ ಶೇ 75ರಷ್ಟು ಭಾಗ ಬೆಳಕಿನ ವ್ಯವಸ್ಥೆಗೆ ಒಳಪಡಲಿದೆ’ ಎಂದು ವಿವರಿಸಿದರು.
‘ಪುರಸಭೆ ಮುಂದಿನ ರಸ್ತೆ ವಿಭಜಕ ಕಾಮಗಾರಿಯನ್ನು ಪ್ರತ್ಯೇಕ ಅನುದಾನದಲ್ಲಿ ಕೈಗೊಳ್ಳಲಾಗುವುದು’ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್‌ ಜಿಲಾನಿ ಮುಲ್ಲಾ, ಪುರಸಭೆ ಸದಸ್ಯರಾದ ಸಂತೋಷ ಸರಗಣಾಚಾರ, ಅಮೀನುದ್ದೀನ್‌ ಮುಲ್ಲಾ, ರಾಚಪ್ಪ ಮಾಟಲದಿನ್ನಿ, ಮುದುಕಪ್ಪ ಆಚಾರಿ, ಹೊನ್ನಪ್ಪ ಯಲಬುರ್ತಿ, ಕರಿಸಿದ್ದಪ್ಪ ಹೊಸವಕ್ಕಲ, ಪವನಕುಮಾರ ಸೂಡಿ, ಮಹೇಶಗೌಡ ಕೋಳೂರು, ಮುಖ್ಯಾಧಿಕಾರಿ ಸತೀಶ ಚವಡಿ. ಬಾಷಾ ಗುಮಗೇರಿ, ಶರಗೌಡ ಪಾಟೀಲ, ರಜಾಕ್‌ ಸುಳ್ಳದ ಇದ್ದರು.

‘ದಿನವಿಡೀ ನೀರು ಪೂರೈಕೆ ಶೀಘ್ರ ’
ಕುಷ್ಟಗಿ: ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿದ್ದು ಪಟ್ಟಣದ ಆರು ವಾರ್ಡ್‌ಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಬರುವ ಆಗಸ್ಟ್‌ ತಿಂಗಳಿನಲ್ಲಿ ಚಾಲನೆ ದೊರೆಯಲಿದೆ ಎಂದು ಪುರಸಭೆ ಅಧ್ಯಕ್ಷ ಖಾಜಾ ಮೈನುದ್ದೀನ್‌ ಮುಲ್ಲಾ ಹೇಳಿದರು.

‘ಪಟ್ಟಣದ 7–15ನೇ ವಾರ್ಡ್‌ಗಳಿಗೂ 24 ಗಂಟೆ ನೀರು ಪೂರೈಸುವ ಕಾಮಗಾರಿಗೆ ಅಗತ್ಯವಾದ ₹6.35 ಕೋಟಿ ಹಣವನ್ನು ಕೆಯುಡಬ್ಲ್ಯುಎಸ್‌ಗೆ ಪಾವತಿಸಲಾಗಿದ್ದು ಟೆಂಡರ್‌ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ’ ಎಂದರು.

* * 

₹4 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಸಿಸಿ ರಸ್ತೆ, ಚರಂಡಿ, ಪೈಪ್‌ಲೈನ್‌ ಕೆಲಸ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ.
ಖಾಜಾ ಮೈನುದ್ದೀನ್‌ ಮುಲ್ಲಾ
ಅಧ್ಯಕ್ಷ, ಪುರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT