ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಜುರಾಹೊ’ ಕಲಾಯಾತ್ರೆ

Last Updated 4 ಜುಲೈ 2017, 19:30 IST
ಅಕ್ಷರ ಗಾತ್ರ

ಜೀವನದ ಅನುಭವಗಳನ್ನು ಅಭಿವ್ಯಕ್ತಿಸುವುದು ಕಲೆ. ಹಾಗೆ ಅನುಭವಗಳನ್ನು ಕೃತಿರೂಪಕ್ಕೆ ಇಳಿಸಿದಾಗ ಅದು ಸೀಮಿತ ದೃಷ್ಟಿಕೋನವನ್ನು ಬದಲಿಸುತ್ತದೆ. ಕಲೆಯ ಈ ಗುಣಕ್ಕೆ ಮರುಳಾಗಿ ಬದುಕಿನ ವೈರುಧ್ಯಗಳನ್ನು ಚಿತ್ರರೂಪಕ್ಕಿಳಿಸಿದ ಕಲಾವಿದೆ ಸುನೀತಾ ಪಾಟೀಲ್‌.

ಪ್ರೀತಿಯ ಹುಡುಕಾಟವನ್ನು ಪ್ರತಿಬಿಂಬಿಸುವ ಇವರ ಕಲೆಗಳು ಅರಮನೆ ರಸ್ತೆಯ ಆರ್ಟ್‌ ಹೌಸ್‌ನಲ್ಲಿ ಪ್ರದರ್ಶಿತವಾಗುತ್ತಿದೆ. ಖಜುರಾಹೊ ಕಲಾವಿದರ ಆರಾಧನೆಯ ಸ್ಥಳ. ಪ್ರೀತಿಯ ಹುಡುಕಾಟದಲ್ಲಿದ್ದ ಇವರಿಗೂ ಆ ಸ್ಥಳಕ್ಕೆ ಹೋಗುವ ಕನಸಿತ್ತು. ಅಲ್ಲಿಗೆ ಹೋದಾಗ ಇವರೊಳಗೆ ರೂಪು ತಳೆದ ಚಿತ್ರಗಳು ರೇಖೆಗಳಲ್ಲಿ ಮೂಡಿವೆ.

ಬಾಲ್ಯದಿಂದಲೇ ಚಿತ್ರ ಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡವರು ಸುನೀತಾ. ಬದುಕಿನ ಜಂಜಡಗಳನ್ನು ಚಿತ್ರರೂಪಕ್ಕೆ ಇಳಿಸುವುದೇ ಇವರಿಗೆ ತೃಪ್ತಿಯ ಸಂಗತಿ.

ಇವರ ಅಮ್ಮನಿಗೂ ಚಿತ್ರ ಬಿಡಿಸುವ ಹವ್ಯಾಸ ಇದುದ್ದರಿಂದ ಆ ಕಲೆ ಇವರಿಗೆ ರಕ್ತಗತವಾಗಿಯೇ ಬಂದಿದೆ. ‘ಆದರೆ ಚಿತ್ರರಚನೆಗೆ ಅಪ್ಪ ಪ್ರೇರಣೆ. ಅವರ ಕಠಿಣ ಶ್ರಮ, ಸಮಯಪಾಲನೆ ನನಗೆ ಬದುಕನ್ನು ಪ್ರೀತಿಸುವ ಪಾಠ ಕಲಿಸಿತು’ ಎನ್ನುತ್ತಾರೆ ಸುನೀತಾ.

ವಿಶ್ಯುವಲ್‌ ಆರ್ಟ್‌ನಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಪಿಚ್‌.ಡಿ ಪದವಿ ಪಡೆದಿರುವ ಸುನೀತಾ, ಮೈಸೂರು, ಮಹಾರಾಷ್ಟ್ರ, ಧಾರವಾಡ, ದೆಹಲಿ, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ‘ವರ್ಷಪೂರ್ತಿ ಪಟ್ಟ ಶ್ರಮಕ್ಕೆ ಕಲಾಪ್ರದರ್ಶನದಲ್ಲಿ ಉತ್ತರ ದೊರಕುತ್ತದೆ. ಹಿರಿಯ ಕಲಾವಿದರು ಅಲ್ಲಿ ಸೇರುವುದರಿಂದ ಮುಂದಿನ ದಾರಿಗೆ ಬೋಧನೆಯೂ ದೊರಕುತ್ತದೆ’ ಎಂದು ಕಲಾಪಯಣದ ಹಾದಿಯನ್ನು ವಿವರಿಸುತ್ತಾರೆ ಅವರು.

(ಸುನೀತಾ ಪಾಟೀಲ್‌)

ಸ್ಪೇನ್‌ನ ಕಲಾವಿದ ಪಿಕಾಸೊ ಇವರ ಮೆಚ್ಚಿನ ಕಲಾವಿದೆ. ಜೀವನದ ಅನುಭವಗಳನ್ನೇ ಚಿತ್ರರೂಪಕ್ಕೆ ಇಳಿಸುವುದು ಇವರ ಶೈಲಿ. ‘ಬಾದಾಮಿಯಲ್ಲಿದ್ದಾಗ ಜಾತ್ರೆಯ ಚಿತ್ರವನ್ನು ಬಿಡಿಸಿದ್ದೆ. ಜಾತ್ರೆಯ ಸಂಪ್ರದಾಯಗಳು, ಅವುಗಳಿಗಾಗಿ ಮಾಡಿಕೊಳ್ಳುವ ಸಿದ್ಧತೆ, ಅಲ್ಲಿನ ಪರಿಸರದಲ್ಲಿ ಕಾಣುವ ವೇಷ-ಭೂಷಣ ಸೆರೆಹಿಡಿಯಲು ಸಾಧ್ಯವಾಯಿತು. ಕಲೆ ವ್ಯಕ್ತಿತ್ವದ ಭಾಗವಾದಾಗ ನಮ್ಮ ಬದುಕಿನ ವೈವಿಧ್ಯ ಹೆಚ್ಚುತ್ತದೆ’ ಎಂದು ಅನುಭವನ್ನು ಹಂಚಿಕೊಳ್ಳುತ್ತಾರೆ. ಇವರ ಕಮಲದ ಹೂವಿನ ಸರಣಿಯ ಚಿತ್ರವೂ ಗಮನ ಸೆಳೆಯುತ್ತದೆ. ಜೀವನದ ಕಠಿಣ ಕ್ಷಣಗಳು ಕುಂಚದಲ್ಲಿ ಸೆರೆಯಾದಾಗ ಮೂಡಿದ ಚಿತ್ರವಿದು.

‘ನನಗೆ ಹದಿನಾರು ವರ್ಷವಿರುವಾಗಲೇ ಮದುವೆಯಾಯಿತು. ಪ್ರೀತಿಯ ಆಳವೇ ಅರ್ಥವಾಗದ ವಯಸ್ಸದು. ಮದುವೆಯ ನಂತರ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುವ ಅಗತ್ಯವಿಲ್ಲ ಎಂಬ ಮಾತು ಬರುತ್ತದೆ. ಆದರೆ ಬದುಕನ್ನು ವ್ಯರ್ಥವಾಗಿಸುವುದು ನನಗೆ ಇಷ್ಟವಿರಲಿಲ್ಲ. ವಿವಾದಗಳ ನಡುವೆಯೂ ಇಷ್ಟದಂತೆ ಬದುಕು ರೂಪಿಸಿಕೊಂಡೆ. ನನ್ನ ಬದುಕೇ ಕುಂಚದಲ್ಲಿ ಕಮಲ ಅರಳಲು ಕಾರಣವಾಯಿತು’ ಎನ್ನುತ್ತಾರೆ ಇವರು.

ಐಹೊಳೆ, ಪಟ್ಟದಕಲ್ಲು, ಬಾದಾಮಿ ಹೀಗೆ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು ಬಿಡಿಸಿರುವ ಸುನೀತಾ ಎಲ್ಲಾ  ಚಿತ್ರಗಳನ್ನು ಬಿಡಿಸಿದ್ದರೂ, ರೇಖೆಗಳಲ್ಲಿ ಚಿತ್ರ ಮೂಡಿಸುವುದು ಇವರಿಗೆ ಹೆಚ್ಚು ಆಪ್ತ.

ನಮ್ಮ ಬದುಕಿನ ಹಲವು ಅಂಶಗಳು ವಿಭಿನ್ನವಾಗಿರಲು ಕಾರಣವಾಗಿರುವ ಅಂಶಗಳನ್ನು ತಿಳಿದುಕೊಳ್ಳಲು ಹವಣಿಸುವುದು ಮನುಷ್ಯನ ಸ್ವಭಾವ. ರೂಪ ಮತ್ತು ವಸ್ತುವಿನ ವಿಷಯದಲ್ಲಿ ಬೇರೆ ಬೇರೆಯಾಗಿರುವ ಆ ಎಲ್ಲ ಅಂಶಗಳನ್ನು ಬೆಸೆಯುವ ಕೊಂಡಿಯೇ ಕಲೆ ಎನ್ನುವುದು ಇವರ ಅನುಭವ.

**

ಕಲಾವಿದರು: ಸುನೀತಾ ಪಾಟೀಲ್‌
ಪ್ರಕಾರ:
ರೇಖಾ ಚಿತ್ರ
ಥೀಮ್: ಕಲ್ಚರಲ್‌ ವೊಯಾಜ್‌
ಸ್ಥಳ: ಆರ್ಟ್‌ಹೌಸ್‌, ಅರಮನೆ ರಸ್ತೆ
ಸಮಯ: ಬೆಳಿಗ್ಗೆ 10.30 ರಿಂದ ಸಂಜೆ 6.30..
ದಿನಾಂಕ: ಜುಲೈ 8 ರವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT