ಗುರುವಾರ , ಡಿಸೆಂಬರ್ 12, 2019
17 °C

ಆಭರಣ ಕಲೆಯಿಂದ ಸ್ವಾವಲಂಬನೆ

Published:
Updated:
ಆಭರಣ ಕಲೆಯಿಂದ ಸ್ವಾವಲಂಬನೆ

ಹೊರಗೆ ಹೋಗಿ ದುಡಿಯುವುದಕ್ಕಿಂತ ಮನೆಯಲ್ಲಿಯೇ ಸೃಜನಾತ್ಮಕವಾಗಿ ಸಮಯ ಕಳೆಯಬೇಕು ಎಂಬ ಉದ್ದೇಶದಿಂದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡವರು ಶ್ರುತಿ ಅಶೋಕ್‌.

ಕೇರಳದವರಾದ ಇವರು ನಗರಕ್ಕೆ ಬಂದು ಆರು ವರ್ಷವಾಗಿದೆ. ಕಾಲೇಜು ದಿನಗಳಲ್ಲಿಯೇ ಫ್ಯಾಷನೆಬಲ್‌ ಆಭರಣಗಳನ್ನು ಮಾಡುವ ಹವ್ಯಾಸ ರೂಢಿಸಿಕೊಂಡವರು ಇವರು. ಬಿ.ಕಾಂ. ಮುಗಿದ ನಂತರ ಮುಂದೇನು ಎಂದುಕೊಳ್ಳುವಾಗ ಈ ಹವ್ಯಾಸವನ್ನೇ ವೃತ್ತಿಯಾಗಿಸಿಕೊಳ್ಳುವ ತೀರ್ಮಾನ ಕೈಗೊಂಡರು.

ತಮ್ಮ ಹವ್ಯಾಸದ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಫೇಸ್‌ಬುಕ್‌ ಇವರಿಗೆ ವೇದಿಕೆಯಾಗಿದೆ. ದಿನದ ಬಹುಪಾಲು ಸಮಯವನ್ನು ಇವರು ಆಭರಣಗಳ ತಯಾರಿಕೆಗಾಗಿಯೇ ಮೀಸಲಿಟ್ಟಿದ್ದಾರೆ.

ರೇಷ್ಮೆ ದಾರ, ಟೆರಾಕೋಟ, ಲೊರಿಯಲ್‌, ಮುತ್ತು, ಜರ್ಮನ್‌ ಜ್ಯುವೆಲರಿಗಳನ್ನು ಇವರು ಮಾಡುತ್ತಾರೆ. ಕಿವಿಯೋಲೆ, ಬಳೆ, ನೆಕ್ಲೆಸ್‌ ಮುಂತಾದ ಆಭರಣಗಳನ್ನು ತಯಾರಿಸುತ್ತಾರೆ.

(ಶ್ರುತಿ)

ವಿವಿಧ ರೀತಿಯ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆಧುನಿಕ ಮತ್ತು ಸಾಂಪ್ರದಾಯಿಕ ಉಡುಪುಗಳಿಗೆ ಹೊಂದುವಂತೆ ಇವರು ಆಭರಣಗಳನ್ನು ತಯಾರಿಸುತ್ತಾರೆ.

‘ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಉಡುಗೊರೆಯ ರೂಪದಲ್ಲೂ ಈ ಆಭರಣಗಳನ್ನು ನೀಡುತ್ತಿದ್ದಾರೆ. ಡಿಸೈನ್‌ ಅಷ್ಟೊಂದು ಚೆನ್ನಾಗಿಲ್ಲ, ಇದರಲ್ಲಿ ಇನ್ನಷ್ಟು ಬದಲಾವಣೆ ಮಾಡು ಎಂದು ಸಲಹೆ ನೀಡುತ್ತಾರೆ. ಇದರಿಂದ ವಿನ್ಯಾಸದಲ್ಲಿ ಸುಧಾರಣೆ ತಂದುಕೊಳ್ಳಲು ಸಹಾಯವಾಗುತ್ತದೆ’ ಎನ್ನುತ್ತಾರೆ ಅವರು.

ಈ ಆಭರಣ ತಯಾರಿಕೆಯ ಕಲೆಯನ್ನು ಇವರು ಕಲಿತಿದ್ದು ಯೂಟ್ಯೂಬ್‌ಗಳ ಮೂಲಕ. ‘ನನಗೆ ಮೊದಲಿನಿಂದಲೂ ಆಭರಣಗಳ ಮೇಲೆ ಪ್ರೀತಿ. ಹೊಸ ವಿನ್ಯಾಸಗಳ ಆಭರಣಗಳನ್ನು ತೊಟ್ಟವರು ಬೇಗ ನನ್ನ ಗಮನ ಸೆಳೆಯುತ್ತಿದ್ದರು. ಹಾಗಾಗಿ ಫ್ಯಾಷನೆಬಲ್‌ ಆಭರಣಗಳನ್ನು ನಾನೇ ಮಾಡುವುದನ್ನು ನೋಡಿಯೇ ಕಲಿತೆ’ ಎನ್ನುತ್ತಾರೆ ಶ್ರುತಿ.

‘ನನ್ನ ಹವ್ಯಾಸಕ್ಕೆ ಮನೆಯವರ ಬೆಂಬಲ ಇರುವುದರಿಂದ ಹೊಸ ವಿನ್ಯಾಸಗಳನ್ನು ಮೂಡಿಸುವುದು ಸಾಧ್ಯವಾಗಿದೆ. ಚಿಕ್ಕ ಮಗುವಿದೆ. ಪತಿಯ ಸಹಕಾರ ಇರುವುದರಿಂದ ವಿಭಿನ್ನ ಆಭರಣ ತಯಾರಿಸುವುದು ಕಷ್ಟವಾಗುತ್ತಿಲ್ಲ’ ಎನ್ನುತ್ತಾರೆ.

ಕಲಿಯಲು ಆಸಕ್ತಿ ಇರುವವರಿಗೆ ಇವರು ತರಬೇತಿಯನ್ನು ನೀಡುತ್ತಾರೆ. ಆನ್‌ಲೈನ್‌ ಮೂಲಕ ಸಹ ಹೇಳಿಕೊಡುತ್ತಾರೆ.

‘ಸೂಕ್ಷ್ಮ ಕುಸೂರಿ ಇರುತ್ತದೆ. ಒಂದು ಕಿವಿಓಲೆ ಮಾಡಲು ತುಂಬಾ ಸಮಯವನ್ನು ವ್ಯಯಿಸಬೇಕಾಗುತ್ತದೆ. ನಾನು ತಯಾರಿಸಿದ ಆಭರಣಗಳು ಗ್ರಾಹಕರಿಗೆ ಇಷ್ಟವಾಗಿ ಅವರು ಹೊಗಳಿದಾಗ ಸಂತೋಷವಾಗುತ್ತದೆ’ ಎನ್ನುತ್ತಾರೆ ಅವರು. ಇವರ ಬಳಿ ₹ 70 ರಿಂದ ₹2000ಕ್ಕೂ ಮೌಲ್ಯದ ಆಭರಣಗಳು ಮಾರಾಟಕ್ಕೆ ಲಭ್ಯವಿವೆ.

ಸಂಪರ್ಕಕ್ಕೆ: 97390 97873.

ಪ್ರತಿಕ್ರಿಯಿಸಿ (+)