ಸೋಮವಾರ, ಡಿಸೆಂಬರ್ 16, 2019
26 °C

ಉತ್ತರ ಕೊರಿಯಾ: ಮತ್ತೊಂದು ಯಶಸ್ವಿ ಕ್ಷಿಪಣಿ ಪರೀಕ್ಷೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾ: ಮತ್ತೊಂದು ಯಶಸ್ವಿ ಕ್ಷಿಪಣಿ ಪರೀಕ್ಷೆ

ಸೋಲ್ (ಎಎಫ್‌ಪಿ): ತಾನು ನಡೆಸಿರುವ ಖಂಡಾಂತರ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ. ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಮಾಡುತ್ತಿರುವ ಉತ್ತರ ಕೊರಿಯಾದ ಪ್ರಯತ್ನಕ್ಕೆ ಇದೊಂದು ಸ್ಮರಣೀಯ ಕ್ಷಣ ಎನ್ನಲಾಗಿದೆ.

‘ಹ್ವಾಸಂಗ್ 14’ ಎಂಬ ಈ ಮಹ ತ್ವದ ಕ್ಷಿಪಣಿ ಪರೀಕ್ಷೆಯು ಅಧ್ಯಕ್ಷ ಕಿಮ್ ಜಾಂಗ್ ಉನ್ ಮೇಲ್ವಿಚಾರಣೆಯಲ್ಲಿ ನಡೆದಿದೆ.  ಕ್ಷಿಪಣಿಯು 933 ಕಿ.ಮೀ ದೂರ ಕ್ರಮಿಸಿದೆ’ ಎಂದು ಇಲ್ಲಿನ ಸರ್ಕಾರಿ ವಾಹಿನಿಯ ನಿರೂಪಕಿಯೊಬ್ಬರು ಹೇಳಿದ್ದಾರೆ.

‘ಉತ್ತರ ಕೊರಿಯಾವು ಪ್ರಬಲ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರ ಮತ್ತು ಖಂಡಾಂತರ ಕ್ಷಿಪಣಿಯು ಜಗತ್ತಿನ ಯಾವುದೇ ಭಾಗದ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ’ ಎಂದು ನಿರೂಪಕಿ ಹೇಳಿದ್ದಾರೆ.

ಉನ್ ಅಧಿಕಾರ ವಹಿಸಿಕೊಂಡ ನಂತರ ಈವರೆಗೆ ಮೂರು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ಮತ್ತು ಹಲವು ರಾಕೆಟ್‌ಗಳ ಉಡಾವಣೆ ನಡೆದಿದೆ.

‘ಕ್ಷಿಪಣಿಯು ಅಲಾಸ್ಕಾವರೆಗೂ ತಲುಪಬಹುದು. ಅಮೆರಿಕವು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಸುತ್ತಿರುವ ಸಮಯದಲ್ಲೇ ಈ ಪರೀಕ್ಷೆ ನಡೆದಿದೆ’ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.

ಅಮೆರಿಕದ ಮೇಲೆ ದಾಳಿ ನಡೆಸುವ ಸಾಮರ್ಥ್ಯದ ಪರಮಾಣು ಸಿಡಿತಲೆ ಸಂಶೋಧನೆಯಲ್ಲಿ ಉತ್ತರ ಕೊರಿಯಾ ದೀರ್ಘಕಾಲದಿಂದ ತೊಡಗಿದೆ.

ಟ್ರಂಪ್ ಗರಂ: ‘ಈ ವ್ಯಕ್ತಿಗೆ ತನ್ನ ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡುವ ಉದ್ದೇಶವಿದೆಯೇ’ ಎಂದು ಅಮೆರಿಕ ಅಧ್ಯಕಷ ಡೊನಾಲ್ಡ್ ಟ್ರಂಪ್ ಅವರು ಉನ್ ಅವರನ್ನುದ್ದೇಶಿಸಿ ಟ್ವಿಟರ್‌ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಅಸಂಬದ್ಧ ಪ್ರಯೋಗದ ಮೇಲೆ ಒತ್ತಡ ಹೇರಬೇಕು ಎಂದು ಟ್ರಂಪ್ ಅವರು ಉತ್ತರ ಕೊರಿಯಾದ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾವನ್ನು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.

ಹೆಚ್ಚಿದ ಆತಂಕ: ‘ಆತಂಕದ ವಾತಾವರಣ ಇನ್ನಷ್ಟು ಹೆಚ್ಚಿದೆ ಎಂಬುದನ್ನು ಈ ಕ್ಷಿಪಣಿ ಪರೀಕ್ಷೆಯು ತೋರಿಸಿಕೊಡುತ್ತಿದೆ’ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ವರದಿಗಾರರಿಗೆ ಹೇಳಿದರು.

ಸಂಯಮದಿಂದ ವರ್ತಿಸಿ–ಚೀನಾ: ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸುವ ಮೂಲಕ ಈ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ನಡೆಸುವಂತಹ ವಾತಾವರಣ ಸೃಷ್ಟಿಸಬೇಡಿ. ಸಂಯಮದಿಂದ ವರ್ತಿಸಿ’ ಎಂದು ಚೀನಾವು ಉತ್ತರ ಕೊರಿಯಾಕ್ಕೆ ಸಂದೇಶ ರವಾನಿಸಿದೆ. ಇದೇ ವೇಳೆ, ಪ್ರತೀಕಾರದ ಕ್ರಮ ಕೈಗೊಳ್ಳದಂತೆ ಅಮೆರಿಕಕ್ಕೂ ಅದು ಕರೆ ನೀಡಿದೆ.

ಪ್ರತಿಕ್ರಿಯಿಸಿ (+)