ಬುಧವಾರ, ಡಿಸೆಂಬರ್ 11, 2019
25 °C

ಜೊಕೊವಿಚ್‌ಗೆ ಮುನ್ನಡೆ; ವಾವ್ರಿಂಕಾಗೆ ಆಘಾತ

Published:
Updated:
ಜೊಕೊವಿಚ್‌ಗೆ ಮುನ್ನಡೆ; ವಾವ್ರಿಂಕಾಗೆ ಆಘಾತ

ಲಂಡನ್‌ (ರಾಯಿಟರ್ಸ್‌): ಮೂರು ಬಾರಿಯ ಚಾಂಪಿಯನ್‌, ಸರ್ಬಿಯಾದ ನೊವಾಕ್‌ ಜೊಕೊವಿಚ್‌ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿದರು. ಆದರೆ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಮೊದಲ ಸುತ್ತಿನಲ್ಲೇ ಆಘಾತ ಕಂಡು ಹೊರನಡೆದರು.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದ ಮೊದಲ ಸೆಟ್‌ನಲ್ಲಿ ಜೊಕೊವಿಚ್‌ 6–3ರ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಅವರ ಎದುರಾಳಿ, ಸ್ಲೊವಾಕಿಯಾದ ಮಾರ್ಟಿನ್ ಕ್ಲಿಜಾನ್‌ ಕಾಲು ನೋವಿನಿಂದ ಬಳಲಿ ನಿವೃತ್ತರಾದರು. 

ಎರಡನೇ ಶ್ರೇಯಾಂಕದ ಜೊಕೊವಿಚ್‌ 13ನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟು ಇಲ್ಲಿಗೆ ಬಂದಿದ್ದಾರೆ. ಎರಡನೇ ಸುತ್ತಿನಲ್ಲಿ ಅವರು ಚೆಕ್ ಗಣರಾಜ್ಯದ ಆ್ಯಡಮ್‌ ಪಾವ್ಲಸೆಕ್‌ ಅವರನ್ನು ಎದುರಿಸುವರು.

ವಾವ್ರಿಂಕಾಗೆ ಆಘಾತ

ಸೆಂಟರ್‌ ಕೋರ್ಟ್‌ನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ವಾವ್ರಿಂಕ ಅವರನ್ನು ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ 6–4, 3–6,  6–4, 6–1ರಲ್ಲಿ ಮಣಿಸಿದರು. ಎಡ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದ ವಾವ್ರಿಂಕ ಮೊದಲ ಸೆಟ್‌ ನಲ್ಲೇ ಸೋಲು ಕಂಡು ಆತಂಕ ಗೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಪ್ರಯಾಸಪಟ್ಟು ಮೇಲುಗೈ ಸಾಧಿಸಿದರು. ಪಂದ್ಯದ ನಡುನಡುವೆ ಕಾಲಿಗೆ ಐಸ್‌ ಗಟ್ಟಿಯನ್ನು ಇರಿಸಿ ನೋವು ನಿವಾರಿಸಿ ಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನ ವಾಗಲಿಲ್ಲ.

ಪ್ರತಿರೋಧ ಒಡ್ಡಲು ಸಾಧ್ಯವಾಗದೇ ಮೂರನೇ ಸೆಟ್‌ ಕೈಚೆಲ್ಲಿದರು. ನಿರ್ಣಾಯಕ ಸೆಟ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಅವರು ಎದುರಾಳಿಗೆ ಸುಲಭವಾಗಿ ಮಣಿದರು. ವಿಶ್ವದ ಮೂರನೇ ಕ್ರಮಾಂಕದ ಆಟಗಾರ ವಾವ್ರಿಂಕಗೆ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ನೀಡಲಾಗಿತ್ತು. 32 ವರ್ಷದ ಅವರು ಇತ್ತೀಚೆಗೆ ಮುಕ್ತಾಯಗೊಂಡಿದ್ದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು. 2014ರಲ್ಲಿ ಆಸ್ಟ್ರೇಲಿಯಾ ಓಪನ್‌, 2015ರಲ್ಲಿ ಫ್ರೆಂಚ್ ಓಪನ್ ಮತ್ತು 2016ರಲ್ಲಿ ಅಮೆರಿಕ ಓಪನ್‌ನ ಪ್ರಶಸ್ತಿ ಗೆದ್ದಿದ್ದರು.

ವಿಂಬಲ್ಡನ್‌ನಲ್ಲಿ ಮೊದಲ ಪ್ರಶಸ್ತಿಯ ಕನಸು ಕಂಡು ಇಲ್ಲಿಗೆ ಬಂದಿದ್ದರು. ಈ ಸೋಲಿನ ಮೂಲಕ ಅವರು ಆರನೇ ಬಾರಿ ವಿಂಬಲ್ಡನ್‌ನ ಮೊದಲ ಸುತ್ತಿನಲ್ಲೇ ಹೊರ ಬಿದ್ದಂತಾಯಿತು. ಡ್ಯಾನಿಲ್‌ಗೆ ಇದು ವಿಂಬಲ್ಡನ್‌ನ ಮೊದಲ ಜಯ. ‘ಮೊಣಕಾಲಿನ ನೋವಿನಿಂದಾಗಿ ಈ ಅಂಗಣದಲ್ಲಿ ಸಮರ್ಪಕವಾಗಿ ಆಡಲು ಆಗಲಿಲ್ಲ.

ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಸಂದರ್ಭದಲ್ಲೂ ಈ ಸಮಸ್ಯೆ ಕಾಡಿತ್ತು. ಇದರ ಮೂಲವನ್ನು ಹುಡುಕಿ ಪರಿಹಾರ ಕಂಡುಕೊಳ್ಳುವತ್ತ ಗಮನ ನೀಡುತ್ತೇನೆ, ನಂತರವಷ್ಟೇ ಮುಂದಿನ ಸ್ಪರ್ಧೆಗೆ ಇಳಿಯುತ್ತೇನೆ’ ಎಂದು ವಾವ್ರಿಂಕ ಹೇಳಿದರು. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಆಟಗಾರ ಕೆನಡಾದ ಮಿಲೋಸ್ ರಾನಿಕ್ 7–6 (5), 6–2, 7–6 (4)ರಿಂದ ಜರ್ಮನಿಯ ಜೇನ್‌ ಲೆನಾರ್ಡ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಮುಗುರುಜಾ ಜಯದ ಆರಂಭ

ಮಹಿಳೆಯರ ವಿಭಾಗದಲ್ಲಿ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ಏಕಪಕ್ಷೀಯ ಜಯದೊಂದಿಗೆ ವಿಂಬಲ್ಡನ್‌ ಅಭಿಯಾನವನ್ನು ಆರಂಭಿಸಿ ದರು.  ಮೊದಲ ಸುತ್ತಿನ ಪಂದ್ಯದಲ್ಲಿ ಅವರು ಎಕ್ತರಿನಾ ಅಲೆಕ್ಸಾಂಡ್ರಿನಾ ಅವರನ್ನು 6–2, 6–4ರಿಂದ ಮಣಿಸಿದರು.

ಅಗ್ರ ಶ್ರೇಯಾಂಕದ ಏಂಜಲಿಕ್ ಕರ್ಬರ್‌ 6–4, 6–4ರಿಂದ ಅಮೆರಿಕದ ಐರಿನಾ ಫಾಲ್ಕೊನಿ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು.

ಸ್ಪರ್ಧೆಗೆ ಇಳಿದ ಗರ್ಭಿಣಿ ಮಿನೇಲ

ಲಂಡನ್‌ : ನಾಲ್ಕೂವರೆ ತಿಂಗಳ ಗರ್ಭಿಣಿ, ಲಕ್ಸೆಂಬರ್ಗ್‌ನ ಮ್ಯಾಂಡಿ ಮಿನೇಲ ವಿಂಬಲ್ಡನ್‌ನಲ್ಲಿ ಸ್ಪರ್ಧಿಸಿ ಅಚ್ಚರಿ ಮೂಡಿಸಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ 31 ವರ್ಷ ವಯಸ್ಸಿನ ಮಿನೇಲ ಇಟೆಲಿಯ ಫ್ರಾನ್ಸಿಸ್ಕಾ ಶ್ಯವೋನಿ ವಿರುದ್ಧ 6–1, 6–1ರಿಂದ ಸೋಲು ಕಂಡರು.

‘ವಿಂಬಲ್ಡನ್‌ ಈ ಋತುವಿನಲ್ಲಿ ನನ್ನ ಕೊನೆಯ ಟೂರ್ನಿ’ ಎಂದು ಸೋಲಿನ ನಂತರ ಪತ್ರಕರ್ತರಿಗೆ ಹೇಳಿದ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಲಾಟ್ವಿಯಾದ ಅನಸ್ತೇಸಿಜಾ ಸೆವಸ್ತೋವ ಅವರ ಜೊತೆ ಆಡಲಿದ್ದಾರೆ. ಹಾಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿರುವ ಕಾರಣ ವಿಂಬಲ್ಡನ್‌ ಟೂರ್ನಿಯಿಂದ ಹೊರಗೆ ಉಳಿದಿದ್ದಾರೆ. ವಿಶ್ವದ ಮಾಜಿ ಅಗ್ರ ಕ್ರಮಾಂಕದ ಆಟಗಾರ್ತಿ ಅಜರೆಂಕಾ ಕಳೆದ ಡಿಸೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಪ್ರತಿಕ್ರಿಯಿಸಿ (+)