ಸೋಮವಾರ, ಡಿಸೆಂಬರ್ 9, 2019
26 °C
ವಿ.ವಿ.ಗಳಿಗೆ ತುರ್ತಾಗಿ ಬೇಕಿರುವುದು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಿ ಮತ್ತು ಶೈಕ್ಷಣಿಕ ಆದ್ಯತೆ

ಸರ್ಕಾರದ ಹಸ್ತಕ್ಷೇಪ-... ಉನ್ನತ ಶಿಕ್ಷಣದ ಭವಿಷ್ಯ

Published:
Updated:
ಸರ್ಕಾರದ ಹಸ್ತಕ್ಷೇಪ-... ಉನ್ನತ ಶಿಕ್ಷಣದ ಭವಿಷ್ಯ

ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕಾರಗೊಂಡ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ–2017’ಕ್ಕೆ ಸಂಬಂಧಿಸಿ ಕೆಲವು ಪ್ರಶ್ನೆಗಳನ್ನು ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಕೇಳಲೇಬೇಕಾಗಿದೆ. ಈ ಮಸೂದೆಯು  ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ  ಶಿಕ್ಷಕರ ನೇಮಕಾತಿ, ಮೂಲ ಸೌಕರ್ಯ ನಿರ್ಮಾಣ ಇತ್ಯಾದಿಗಳನ್ನು ಕೇಂದ್ರೀಕರಿಸುವ ಉದ್ದೇಶ ಒಳಗೊಂಡಿದೆ.

ಆ ಮೂಲಕ ಗುಣಮಟ್ಟ ಹಾಗೂ ಪಾರದರ್ಶಕತೆಯನ್ನು  ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕುಲಪತಿಗಳ ನೇಮಕದಲ್ಲಿನ ವಿಳಂಬವನ್ನು ತಪ್ಪಿಸಲಿಕ್ಕಾಗಿ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವ ಇದೆ. ಅಲ್ಲದೇ ವಿಶ್ವವಿದ್ಯಾಲಯದ ಕುಲಸಚಿವರನ್ನು ಐ.ಎ.ಎಸ್‌ ಹಾಗೂ ಕೆ.ಎ.ಎಸ್‌.  ಅಧಿಕಾರಿ ವರ್ಗದಿಂದ ಭರ್ತಿ ಮಾಡುವ ಪ್ರಸ್ತಾವ ಕೂಡ ಇದೆ.

ಇಂದು ನಮ್ಮ ವಿಶ್ವವಿದ್ಯಾಲಯಗಳು  ಹಗರಣಗಳಿಂದಾಗಿ ಸುದ್ದಿಯಲ್ಲಿರುವುದು ಗುಟ್ಟಿನ ವಿಷಯವೇನೂ ಅಲ್ಲ.  ಆಡಳಿತಾಧಿಕಾರಿಗಳ ಹಾಗೂ ಶಿಕ್ಷಕರ ನೇಮಕಾತಿಗಳಲ್ಲಿ, ಕಾಮಗಾರಿಗಳಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು  ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. ಇದಕ್ಕಿಂತ ಗಂಭೀರವಾದ ವಿಷಯವೆಂದರೆ ಶಿಕ್ಷಣ ಹಾಗೂ ಸಂಶೋಧನೆಯ ಗುಣಮಟ್ಟದಲ್ಲಿ ಆಗುತ್ತಿರುವ ಕುಸಿತ. ಇಂದಿನ ಶೈಕ್ಷಣಿಕ ಮಾನದಂಡಗಳಲ್ಲಿ ಅಳೆದಾಗ ನಮ್ಮ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಯಾವ ಸ್ಥಾನ ಪಡೆಯುತ್ತವೆ ಎಂಬುದೂ ಜಗಜ್ಜಾಹೀರಾದ ಸತ್ಯವೇ ಆಗಿದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಸರ್ಕಾರ ಈ ಸಂಬಂಧ ಯಾವುದಾದರೂ ತುರ್ತು ಕ್ರಮವನ್ನು  ತೆಗೆದುಕೊಂಡು ವಿಶ್ವವಿದ್ಯಾಲಯಗಳ ಆಡಳಿತ ಸರಿಪಡಿಸುವ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟದ ಅಭಿವೃದ್ಧಿಗೆ ಮುಂದಾಗುವ ಜರೂರು ಇರುವುದಂತೂ ಸತ್ಯ. ಆದರೆ ಈಗ ವಿಶ್ವವಿದ್ಯಾಲಯಗಳಿಗೆ ಬಡಿದಿರುವ ರೋಗಕ್ಕೆ ಈ ಮಸೂದೆಯು ಮದ್ದಾಗಬಲ್ಲದೇ ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ.

ಉನ್ನತ ಶಿಕ್ಷಣ ಕ್ಷೇತ್ರದ ಕುರಿತು ಎರಡು ದಶಕಗಳ  ನಮ್ಮ ಅನುಭವವು ಈ ಪ್ರಶ್ನೆಗೆ ನಕಾರಾತ್ಮಕವಾದ ಉತ್ತರವನ್ನೇ ನೀಡುವಂತಿದೆ. ಅಂದರೆ, ವಿಶ್ವವಿದ್ಯಾಲಯಗಳ ವ್ಯವಹಾರದಲ್ಲಿ ಸರ್ಕಾರದ ಹಸ್ತಕ್ಷೇಪ ಹೆಚ್ಚಾದಂತೆಲ್ಲ ವಿಶ್ವವಿದ್ಯಾಲಯಗಳು ಅಧೋಗತಿಗೆ ಇಳಿಯುತ್ತಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ.

ಉನ್ನತ ಶಿಕ್ಷಣದ ಪೋಷಣೆ ಹಾಗೂ ಸುಧಾರಣೆ ಇವೆರಡೂ ಸರ್ಕಾರದ ಕಾರ್ಯಕ್ರಮಗಳು ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ವಿಶ್ವವಿದ್ಯಾಲಯವು ಒಂದು ಸ್ವಾಯತ್ತ ಶೈಕ್ಷಣಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದು ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ನಿರ್ಣಾಯಕ ಎಂಬುದನ್ನು ಗುರುತಿಸಿಯೇ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಕಾಯ್ದೆಗಳು   ರೂಪುಗೊಂಡಿವೆ.  ಉನ್ನತ ಶಿಕ್ಷಣಕ್ಕೆ ಆದರ್ಶ ವಾತಾವರಣವನ್ನು ರೂಪಿಸುವ ಹಾಗೂ ಶಿಕ್ಷಣೇತರ ಶಕ್ತಿಗಳ ಹಸ್ತಕ್ಷೇಪಗಳಿಂದ ಅವನ್ನು ರಕ್ಷಿಸುವ ಉದ್ದೇಶವನ್ನೂ  ಈ ಕಾಯ್ದೆಗಳು ಹೊಂದಿವೆ.

ವಿಶ್ವವಿದ್ಯಾಲಯದ ಶಿಕ್ಷಣದಲ್ಲಿ ಲಭ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಒಂದು ಮುಖವಾದರೆ, ಲಭ್ಯ ಜ್ಞಾನವನ್ನು ಸಂಶೋಧನೆಯ ಮೂಲಕ ಪರಿಷ್ಕರಿಸುವುದು ಮತ್ತೊಂದು ಮುಖ. ಈ ಎರಡೂ ಕೆಲಸಗಳು ಅಬಾಧಿತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕೆಂಬ ಸಲುವಾಗಿ ಒಂದು ಆಡಳಿತ ರಚನೆಯ ಚೌಕಟ್ಟನ್ನು ಅದಕ್ಕೆ ರೂಪಿಸಲಾಗಿದೆ. ಇಲ್ಲಿ ರಾಜ್ಯಪಾಲರು ಪಕ್ಷಾತೀತ ವ್ಯಕ್ತಿಯಾಗಿ ಅದರ ಮುಂಚೂಣಿಯಲ್ಲಿರುತ್ತಾರೆ. ಅವರ ನೇತೃತ್ವದಲ್ಲಿ ಈ ಸಾಂಸ್ಥಿಕ ರಚನೆ ಇರುತ್ತದೆ. ಈ ರಚನೆಯ ಪ್ರಮುಖ ಪಾಲುದಾರರೆಂದರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು.

ವಿಶ್ವವಿದ್ಯಾಲಯದ ಸುಧಾರಣೆಯ ಹೆಸರಿನಲ್ಲಿ ಸರ್ಕಾರ ಎರಡು ದಶಕಗಳಿಂದ  ಒಂದಿಲ್ಲೊಂದು ಕಾಯ್ದೆ ಮೂಲಕ ಅದನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದೆ. ಇಂಥ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಾಗ ವಿಶ್ವವಿದ್ಯಾಲಯ ರಚನೆಯ ಮೂಲ ಪ್ರೇರಣೆಯನ್ನೇ ಕಡೆಗಣಿಸಲಾಗುತ್ತಿದೆ. 

ಇಂಥ ಸಂದರ್ಭಗಳಲ್ಲಿ ಈ ವ್ಯವಸ್ಥೆಯ ನೇರ ಭಾಗೀದಾರರಲ್ಲದ ಬಾಹ್ಯ ಶಕ್ತಿಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸತೊಡಗಿದ್ದಾರೆ, ಅವರು ಸರ್ಕಾರಿ ಅಧಿಕಾರಿಗಳಿರಬಹುದು ಇಲ್ಲ  ಶಾಸಕರಿರಬಹುದು. ಅದರಲ್ಲೂ, ಇತ್ತೀಚೆಗೆ ರಾಜ್ಯದ ಉನ್ನತ ಶಿಕ್ಷಣ ಕಾರ್ಯಾಲಯವು ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿಕ್ಕಾಗಿ ಇಂಥ ಹೊಸ ಹೊಸ ನೀತಿಗಳನ್ನು ರೂಪಿಸಿ ಪ್ರಯೋಗಗಳನ್ನು ನಡೆಸತೊಡಗಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು, ವರ್ಷಂಪ್ರತಿ ಒಂದಿಲ್ಲೊಂದು ವಿವರಗಳನ್ನು ವಿಶ್ವವಿದ್ಯಾಲಯಕ್ಕೆ, ಸರ್ಕಾರಕ್ಕೆ ಹಾಗೂ ಇನ್ನೂ ಹತ್ತು ಹಲವು ಸಂಸ್ಥೆಗಳಿಗೆ ಸಲ್ಲಿಸುವುದು, ಸರ್ಕಾರಿ ಕಾರ್ಯಕ್ರಮಗಳು, ಆಚರಣೆಗಳು ಇತ್ಯಾದಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು... ಹೀಗೆ ಶಿಕ್ಷಕರ ಕೆಲಸದ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. 

ಶೈಕ್ಷಣಿಕವಾಗಿ ಇದರ ದುಷ್ಪರಿಣಾಮವೆಂದರೆ ಶಿಕ್ಷಕರಿಗೆ ಶಿಕ್ಷಣೇತರ ಕೆಲಸಗಳು ಹಾಗೂ ಜವಾಬ್ದಾರಿಗಳು ಹೊರೆಯಾಗುತ್ತಿವೆ. ಶಿಕ್ಷಕರು ಅಕ್ಷರಶಃ ಮಾಹಿತಿ ನೀಡುವ ಅಧಿಕಾರಿಗಳಾಗಿ, ಕಾರಕೂನರಾಗಿ ಬದಲಾಗಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಮೌಲ್ಯಮಾಪನಕ್ಕಾಗಿ ಬರುವ ತರಹೇವಾರಿ ಸಮಿತಿಗಳಿಗೆ ತಮ್ಮ ಪ್ರಗತಿಯ ವರದಿಯನ್ನು ಸಾದರಪಡಿಸುವ, ನಾನಾ ರೀತಿಯ ಪ್ರಗತಿ ವರದಿಗಳನ್ನು, ಮಾಹಿತಿಯನ್ನು ತಯಾರಿಸಿ ಬೇರೆ ಬೇರೆ ಖಾತೆಗಳಿಗೆ ನೀಡುವ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  ಶಿಕ್ಷಣ ಹಾಗೂ ಸಂಶೋಧನೆಯಲ್ಲಿಯೇ ಆಸಕ್ತಿಯುಳ್ಳವರು ಕೂಡ ಇಂಥವೇ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡುವ ಒತ್ತಡ ಸೃಷ್ಟಿಯಾಗಿದೆ. ಇವೆಲ್ಲದರ ಪರಿಣಾಮ ವಿಶ್ವವಿದ್ಯಾಲಯಗಳ ಶಿಕ್ಷಣವೆಂಬುದು ಒಂದು ಯಾಂತ್ರಿಕ ಕ್ರಿಯೆಯಾಗಿ ಬದಲಾವಣೆಗೊಂಡಿದೆ.

ಈ ಹಂತದಲ್ಲಿ ವಿಶ್ವವಿದ್ಯಾಲಯಗಳ ಮೇಲೆ ಮತ್ತಷ್ಟು ಹಿಡಿತ ಸಾಧಿಸಿ ಇದರ ನ್ಯೂನತೆಗಳನ್ನು ಸರಿಪಡಿಸುತ್ತೇವೆ ಎಂದು 2017ರ ಮಸೂದೆಯನ್ನು ರೂಪಿಸಿದವರು ಭಾವಿಸಿದ್ದರೆ ಅದೊಂದು ಮರೀಚಿಕೆ ಅಷ್ಟೇ. ಎರಡು ದಶಕಗಳಿಂದ ಹೊಸ ಹೊಸ ನೀತಿಗಳು ಆಚರಣೆಗೆ ಬಂದಾಗಿನಿಂದ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂಬುದು ಕಣ್ಣಿಗೆ ರಾಚುವಂತೆ ಕಾಣುವ ವಿಷಯ.

ಇಲ್ಲಿನ ನೇಮಕಾತಿಗಳಲ್ಲಿ ರಾಜಕೀಯ, ಜಾತಿಯಂಥ ಶಕ್ತಿಗಳ ಪ್ರಭಾವ, ಭ್ರಷ್ಟಾಚಾರದ ತಾಂಡವ ಇವೆಲ್ಲ ಮಾಧ್ಯಮಗಳ ಮೂಲಕ ಬಹಿರಂಗೊಂಡಿವೆ. ಶೈಕ್ಷಣಿಕ ಅರ್ಹತೆ ಎಂಬುದಕ್ಕೆ ಬೆಲೆ ಉಳಿದಿಲ್ಲ. ಇದಕ್ಕಾಗಿ ಯಾವುದೇ ವ್ಯಕ್ತಿಯನ್ನು ದೂರುವ ಬದಲಾಗಿ ಸಮಸ್ಯೆಯ ಮೂಲ ತಿಳಿದುಕೊಳ್ಳುವುದು ಉಪಯುಕ್ತ. ಸುಧಾರಣೆಯ ಹೆಸರಿನಲ್ಲಿ ಹೊರಗಿನ ಶಕ್ತಿಗಳು ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ವ್ಯವಸ್ಥೆಯೇ ಈ ಅವಕಾಶವನ್ನು ಸೃಷ್ಟಿಸಿದೆ ಎಂಬುದನ್ನು ಗುರುತಿಸುವುದು ಮುಖ್ಯ.

ಇಂದು ವಿಶ್ವವಿದ್ಯಾಲಯಗಳ ಯಾವ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಪ್ರಭುತ್ವವು ಹೆಣಗುತ್ತಿದೆಯೋ, ಯಾವ ಮಸೂದೆ ಮೂಲಕ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲಿಕ್ಕೆ ಹವಣಿಸಿದೆಯೋ ಅವು ಆ ಪ್ರಭುತ್ವದ ಹಸ್ತಕ್ಷೇಪದಿಂದಾಗಿಯೇ ಹುಟ್ಟಿಕೊಂಡ ಸಮಸ್ಯೆಗಳು ಎಂಬುದನ್ನು ಸ್ವಲ್ಪ ಗತವನ್ನು ಅವಲೋಕಿಸಿ ತಿಳಿದುಕೊಳ್ಳುವುದು ಒಳ್ಳೆಯದು. ಅದು ಅವನ್ನು ಸೃಷ್ಟಿ ಮಾಡಿದ್ದಷ್ಟೇ ಅಲ್ಲ,  ಇಂದಿಗೂ ಪೋಷಿಸುತ್ತಿದೆ.

ಇಲ್ಲದಿದ್ದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಎಷ್ಟೊಂದು ಹಗರಣಗಳು, ಎಷ್ಟೊಂದು ಸಾಕ್ಷ್ಯಾಧಾರಸಹಿತ  ದೂರುಗಳು ದಾಖಲಾಗಿಲ್ಲ? ಅವುಗಳನ್ನೆಲ್ಲ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದವರು ಯಾರು? ಅವುಗಳಿಗೆಲ್ಲ ಬೆಂಬಲ ನೀಡುತ್ತಿರುವುದು ಯಾವ ಶಕ್ತಿಗಳು? ಇಂದು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡದ ಸೋಂಬೇರಿಗಳು, ಅಕ್ರಮ ಎಸಗಿದವರು ಯಾವ ಶಿಕ್ಷೆಯೂ ಇಲ್ಲದೆ ನಿರಾಳವಾಗಿದ್ದಾರೆ. ಆದರೆ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುವವರಿಗೆ ಹೆಚ್ಚುವರಿ ಕೆಲಸದಿಂದಾಗಿ ಮಾನಸಿಕ ನೆಮ್ಮದಿಯೇ ದುರ್ಭರವಾಗಿದೆ.

ಇಂಥ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಸುಧಾರಣೆಯ ಅಗತ್ಯವಂತೂ ಎಂದಿಗಿಂತಲೂ ತುರ್ತಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಉತ್ತಮ ಶಿಕ್ಷಕರು, ಪ್ರಾಮಾಣಿಕ ಹಾಗೂ ದಕ್ಷ ಆಡಳಿತಗಾರರು, ಗುಣಮಟ್ಟದ ಮೂಲಸೌಕರ್ಯ ಇತ್ಯಾದಿ ಅಗತ್ಯಗಳನ್ನು ಕಲ್ಪಿಸುವ ಕೆಲಸ ಸ್ವಾಗತಾರ್ಹ. ಆದರೆ ಸರ್ಕಾರಿ ನಿಯೋಜಿತ ಸಂಸ್ಥೆಗಳನ್ನು ಬೆಂಗಳೂರಿನಲ್ಲಿ ರಚಿಸಿ ಅವುಗಳ ಸುಪರ್ದಿಗೆ ಈ ಹೊಣೆಯನ್ನು ಬಿಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಇಂಗಿತ ಈ ಮಸೂದೆಯಲ್ಲಿ  ಇದೆ. ಈಗಾಗಲೇ ಹಗರಣಗಳ ಕೂಪಗಳಾಗಿರುವ ಸರ್ಕಾರಿ ನಿಯೋಜಿತ ನೇಮಕಾತಿ ಹಾಗೂ ಕಾಮಗಾರಿ ಸಮಿತಿಗಳು, ಸಂಸ್ಥೆಗಳ ಕಾರ್ಯವೈಖರಿಯನ್ನು ತಲೆ ಚಿಟ್ಟುಹಿಡಿಯುವಷ್ಟು ನೋಡಿಯಾಗಿದೆ. 

ಈ ಮಸೂದೆ ಜಾರಿಯಾಗಿ ಹೊಸ ಕ್ರಮಗಳು ಬಂದರೆ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅನುಕೂಲವೇ ಹೊರತೂ ವಿಶ್ವವಿದ್ಯಾಲಯಗಳಿಗೆ ಏನೂ ಲಾಭವಿದ್ದಂತೆ ಕಾಣುವುದಿಲ್ಲ. ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟದ ಸುಧಾರಣೆಯನ್ನು ಬೆಂಗಳೂರಿನಲ್ಲಿ ಕುಳಿತು ಯೋಜಿಸಿದರೆ ಪರಿಣಾಮ ಏನಾಗುತ್ತದೆ ಎಂಬುದು 2007ರ ನಂತರ ಸರ್ಕಾರಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಿದ ನೀತಿಯಿಂದ ಗೊತ್ತಾಗಿದೆ.  ಇಂಥ ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಇಲ್ಲದ ಕಾರಣ ಮಾನ್ಯತೆ ನೀಡಲು  ವಿಶ್ವವಿದ್ಯಾಲಯ ಸಂಯೋಜನಾ ಸಮಿತಿಗಳು ನಿರಾಕರಿಸಿದರೂ ಏಕಮುಖಿಯಾಗಿ ವಿಶ್ವವಿದ್ಯಾಲಯಗಳ ಮೇಲೆ ಈ ವ್ಯವಸ್ಥೆಯನ್ನು ಹೇರಲಾಯಿತು.

ಇದು ಸೈದ್ಧಾಂತಿಕವಾಗಿ ಸುಂದರ ಕಲ್ಪನೆಯಾಗಿರಬಹುದು, ಆದರೆ ಪ್ರಾಯೋಗಿಕವಾಗಿ ಶಿಕ್ಷಣದ ಗುಣಮಟ್ಟಕ್ಕೆ ಅಷ್ಟೇ ವಿನಾಶಕಾರಿಯಾಗಿದೆ.  ಹತ್ತು ವರ್ಷಗಳಲ್ಲಿ ಈ ನೀತಿಯಿಂದಾಗಿ ಸ್ನಾತಕೋತ್ತರ ಶಿಕ್ಷಣದ ಗುಣಮಟ್ಟದ ಕುಸಿತ ಹಾಗೂ  ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದರ ದುಷ್ಪರಿಣಾಮಗಳು ದುರಂತದ ಒಂದು ಮುಖವಾದರೆ, ಅದರ ಕುರಿತು ತಿಳಿದುಕೊಳ್ಳುವ ಕುತೂಹಲವೂ ಈ ನೀತಿಗಳನ್ನು ಹೇರಿದವರಿಗೆ ಇಲ್ಲ ಎಂಬುದು ಅದಕ್ಕಿಂತ ಹೆಚ್ಚಿನ ದುರಂತ!

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ – 2000’ದಲ್ಲಿ ಇದ್ದ ಸರ್ಕಾರದ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಕೆಲವು ನೀತಿಗಳಿಗೆ ವಿಶ್ವವಿದ್ಯಾಲಯದ ಶಿಕ್ಷಕ ವರ್ಗದಿಂದ ಬಹಳಷ್ಟು ಆಕ್ಷೇಪಗಳು ಹಾಗೂ ವಿರೋಧಗಳು ಬಂದಿದ್ದವು. ಆದರೂ ಸರ್ಕಾರವು ಅದನ್ನು ಕಡೆಗಣಿಸಿ ಕಾಯ್ದೆ ಜಾರಿಗೊಳಿಸಿತು. ಆಗ ಯಾವ ಆತಂಕ ಪ್ರಜ್ಞಾವಂತ ಶಿಕ್ಷಕರನ್ನು ಕಾಡುತ್ತಿತ್ತೋ ಅದು ಇಂದು ವಾಸ್ತವವಾಗಿದೆ. ಹಾಗಾಗಿ ಇಂದಾದರೂ ಮೇಲೆ ಉಲ್ಲೇಖಿಸಿದ ನಮ್ಮ ಅನುಭವವನ್ನು ಒಪ್ಪಿಕೊಂಡು ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ರಕ್ಷಿಸಿ ಅದರ ನಿಜವಾದ ಭಾಗೀದಾರರಿಂದ ಅದರ ಸುಧಾರಣಾ ನೀತಿಗಳು ರೂಪಿತವಾಗಿ ಬರುವ ಮಾರ್ಗಗಳನ್ನು ಶೋಧಿಸುವುದು ವಿಶ್ವವಿದ್ಯಾಲಯಗಳ ಹಿತದೃಷ್ಟಿಯಿಂದ ಒಳ್ಳೆಯದು.

ಅದಕ್ಕೆ ಪೂರ್ವಭಾವಿಯಾಗಿ ವಿಶ್ವವಿದ್ಯಾಲಯಗಳಿಗೆ ಇಂದು ತುರ್ತಾಗಿ ಬೇಕಿರುವುದು  ರಾಜಕೀಯ ಹಸ್ತಕ್ಷೇಪದಿಂದ ಮುಕ್ತಿ ಮತ್ತು ಶೈಕ್ಷಣಿಕ ಆದ್ಯತೆ. ಓದು, ಸಂಶೋಧನೆ, ಬೋಧನೆ ಮಾಡುವ ಮುಕ್ತ ವಾತಾವರಣವನ್ನು ಶಿಕ್ಷಕರಿಗೆ ಒದಗಿಸುವುದು. ಶಾಸಕರು, ಮಂತ್ರಿಗಳು, ಸ್ಥಳೀಯ ಪುಢಾರಿಗಳು, ರಾಜಕೀಯ ಗುಂಪುಗಳು, ಜಾತಿ ಸಂಘಟನೆಗಳು ವಿಶ್ವವಿದ್ಯಾಲಯಗಳ ನೇಮಕಾತಿಗಳನ್ನು, ನಿರ್ಣಯಗಳನ್ನು, ಸಂಶೋಧನೆಗಳನ್ನು ಪ್ರಭಾವಿಸುವುದನ್ನು ತಡೆಯುವುದು. ಬಹುಶಃ ಇವನ್ನು ಸಾಧಿಸಿದರೆ ಮಾತ್ರ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ತನ್ನ ಸಹಜ ಮಾರ್ಗವನ್ನು ಕಂಡುಕೊಳ್ಳಬಹುದು.

ಲೇಖಕ: ಪ್ರಾಧ್ಯಾಪಕ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)