ಸೋಮವಾರ, ಡಿಸೆಂಬರ್ 16, 2019
26 °C
ಐಐಎಸ್‌ಸಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಮೂಲ ವಿಜ್ಞಾನದಲ್ಲಿ ಸಂಶೋಧನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ವಿಜ್ಞಾನದಲ್ಲಿ ಸಂಶೋಧನೆ ಅಗತ್ಯ

ಬೆಂಗಳೂರು:  ಮೂಲ ವಿಜ್ಞಾನದಲ್ಲಿ ಸಂಶೋಧನೆಗೆ ಆದ್ಯತೆ ನೀಡದಿದ್ದರೆ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದರು.

ಬುಧವಾರ ನಡೆದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘಟಿಕೋತ್ಸವದಲ್ಲಿ ಮಾತನಾಡಿ,  ಉದ್ಯಮಗಳೂ ಸಂಶೋಧನೆಯ ಮೇಲೆ ಹಣ ತೊಡಗಿಸಬೇಕಿತ್ತು.  ಆದರೆ, ಸಂಶೋಧನೆಗೆ ಪ್ರೋತ್ಸಾಹಿಸುವುದನ್ನು ಉದ್ಯಮಿಗಳು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ ಎಂದರು.

‘ವಿಜ್ಞಾನದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯದಿದ್ದರೆ ದೇಶ ಯಾವ ಪ್ರಮಾಣದಲ್ಲಿ ಬೆಳವಣಿಗೆ ಹೊಂದಬೇಕೆಂದು ನಾವು ಕನಸು ಕಾಣುತ್ತಿದ್ದೇವೆಯೋ ಆ ಮಟ್ಟ ತಲುಪಲು ಸಾಧ್ಯವಿಲ್ಲ’ ಎಂದರು.

‘ಸ್ವಾತಂತ್ರ್ಯ ಬಂದ ನಂತರ ವಿಜ್ಞಾನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ಭಾರತೀಯ ನೊಬೆಲ್‌ ಪ್ರಶಸ್ತಿ ಪಡೆದಿಲ್ಲ. ಸರ್‌ ಸಿ.ವಿ.ರಾಮನ್‌ ಬ್ರಿಟಿಷ್‌ ಆಳ್ವಿಕೆ ಸಂದರ್ಭದಲ್ಲಿ ನೊಬೆಲ್‌ ಪಡೆದರು. ವಿದೇಶಕ್ಕೆ ವಲಸೆ ಹೋದ ಕೆಲ ವಿಜ್ಞಾನಿಗಳು ನೊಬೆಲ್‌ ಪಡೆದರೂ ಆ ಕೀರ್ತಿ ಅವರಿದ್ದ ದೇಶಕ್ಕೆ ಸೇರಿತು. ಪ್ರತಿಭೆಗೆ  ಕೊರತೆ ಇಲ್ಲದ ನಮ್ಮ ದೇಶದಲ್ಲಿ ವಿಜ್ಞಾನ ಸಮೃದ್ಧಿಯಾಗಿ ಬೆಳೆಯಲು ಅವಕಾಶ ಮಾಡಿಕೊಡಲು ಏಕೆ ಸಾಧ್ಯವಿಲ್ಲ’ ಎಂದು ಪ್ರಣವ್‌ ಪ್ರಶ್ನಿಸಿದರು.

‘ಐಟಿ ಕ್ಷೇತ್ರ ಆರಂಭದಲ್ಲಿ ನಮ್ಮ ದೇಶದ ಯುವ ಜನತೆಗೆ  ಲಾಭದಾಯಕ ಎನಿಸಿತ್ತು. ಆದರೆ, ಈಗ ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ವಲಸೆ ನೀತಿಗಳು ಬದಲಾಗುತ್ತಿವೆ.  ಇದನ್ನು ಸವಾಲಾಗಿ ತೆಗೆದುಕೊಳ್ಳುವ ದಿನಗಳ ಬರುತ್ತಿವೆ. ಈ ಸಂದರ್ಭದಲ್ಲಿ ಸಂಶೋಧನೆ  ಮತ್ತು ಆವಿಷ್ಕಾರಗಳಿಗೆ ಮಹತ್ವ ನೀಡುವ ಅಗತ್ಯವಿದೆ’ ಎಂದರು.

ಪದವಿ ಪಡೆದ ಮೇಜರ್‌ಗಳು!

ಭಾರತೀಯ ವಿಜ್ಞಾನ ಸಂಸ್ಥೆಯ ಟಾಟಾ ಸಭಾಂಗಣದ ಆವರಣದಲ್ಲಿ ಬುಧವಾರ ಸಂತಸ, ಸಡಗರ ಮನೆ ಮಾಡಿತ್ತು. ದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಪದವಿ ಮತ್ತು ಪದಕಗಳನ್ನು ಪಡೆಯುವ ಕ್ಷಣ ಅದಾಗಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವಕ್ಕೆ ಎಲ್ಲರಿಗೂ ಒಳಗೆ ಪ್ರವೇಶಿಸಲು ಸಾಧ್ಯವಾಗದೇ ಇದ್ದರೂ ವಿಶೇಷ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳ ಪೋಷಕರು ಐಐಎಸ್‌ಸಿ  ಆವರಣದೊಳಗೆ ಪ್ರವೇಶ ಪಡೆಯಲು ಹರ ಸಾಹಸ ಪಡುತ್ತಿದ್ದದ್ದು ಕಂಡು ಬಂದಿತು.

ಭಾರತೀಯ ಸೇನೆಯ ಇಬ್ಬರು ಮೇಜರ್‌ಗಳು  ಮತ್ತು ಒಬ್ಬರು ಲೆಫ್ಟಿನೆಂಟ್‌ ಕರ್ನಲ್‌ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು. ಮೇಜರ್‌ ಸೌರಭ್‌ ಶರ್ಮ, ಮೇಜರ್‌ ಶಂತನು ಕೌಶಿಕ್‌ ಮತ್ತು ಲೆಫ್ಟಿನೆಂಟ್‌ ಕರ್ನಲ್‌ ಎನ್‌.ಎಸ್‌.ಧಾಬಿ ಅವರು ಸಿಗ್ನಲ್‌ ಪ್ರೋಸೆಸ್‌ ವಿಷಯದ ಬಗ್ಗೆ ಸ್ನಾತಕೋತ್ತರ (ಎಂ.ಇ)  ಸರ್ಟಿಫಿಕೇಟ್‌ ಪಡೆದರು.

ಗಮನ ಸೆಳೆದ ಸಿ.ಎಂ ಭಾಷಣ

ಶಿಕ್ಷಣ, ಶಿಕ್ಷಕ ಮತ್ತು ವಿದ್ಯಾರ್ಥಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತುಗಳು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಮೆಚ್ಚುಗೆಗೆ ಪಾತ್ರವಾಯಿತು. ಸಿದ್ದರಾಮಯ್ಯ  ಭಾಷಣ ಮುಗಿಸಿ ಬಂದು ಕುಳಿತಾಗ, ‘ಚೆನ್ನಾಗಿ ಮಾತನಾಡಿದಿರಿ’ ಎಂದು ಪ್ರಣವ್‌ ಹೇಳಿದರು. ‘ನಾವು ಇಂದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರ ಕೊರತೆಯನ್ನು ಕಾಣುತ್ತಿದ್ದೇವೆ. ವಿದ್ಯಾರ್ಥಿ ಜೀವನವನ್ನು ಬೌದ್ಧಿಕವಾಗಿ ಅಷ್ಟೇ ಅಲ್ಲದೆ, ಸರ್ವಾಂಗೀಣವಾಗಿ ರೂಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಶಿಕ್ಷಕರು ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಹಾಗಾದರೆ ಒಳ್ಳೆಯ ಶಿಕ್ಷಕ ಎಂದರೆ ಯಾರು.  ಕೇವಲ ಮಾಹಿತಿ ಮತ್ತು ಐಡಿಯಾಗಳನ್ನು ವಿದ್ಯಾರ್ಥಿಗಳಿಗೆ ಯಾಂತ್ರಿಕವಾಗಿ ಹಸ್ತಾಂತರಿಸುವುದಾದರೆ, ಕಂಪ್ಯೂಟರ್‌ಗೂ ಇವರಿಗೂ ವ್ಯತ್ಯಾಸವೇ ಇಲ್ಲ’ ಎಂದು ಅವರು ತಿಳಿಸಿದರು. ‘ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವುದು ಅತ್ಯಂತ ಮುಖ್ಯ ಎಂದು ಭಾವಿಸುತ್ತೇನೆ. ಉತ್ತಮ ಶಿಕ್ಷಕನಾಗುವುದು ಸುಲಭವೇನಲ್ಲ. ಆತನಲ್ಲಿ ಅಪಾರ ತಾಳ್ಮೆ, ಅನುಕಂಪ, ಧೈರ್ಯ ಮತ್ತು ಏಕತೆ ಭಾವನೆ ಇರಬೇಕು’ ಎಂದರು.

ಪ್ರತಿಕ್ರಿಯಿಸಿ (+)