ಭಾನುವಾರ, ಡಿಸೆಂಬರ್ 8, 2019
25 °C

ಹೆಸರು ಹುಡುಕಲು ಪರದಾಟ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ಹೆಸರು ಹುಡುಕಲು ಪರದಾಟ

ಚಿತ್ರದುರ್ಗ: ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕೆಲವರು ನಿಂತು, ಬಗ್ಗಿ  ನೋಡುತ್ತಿದ್ದರು. ಮತ್ತೆ ಕೆಲವರು ಕೆಳಗಡೆ ಪ್ರಕಟವಾಗಿರಬಹುದು ಎಂದು ಭಾವಿಸಿ ಕುಳಿತುಕೊಂಡು ಹುಡುಕಾಟದಲ್ಲಿ ತೊಡಗಿದರು... ಒಟ್ಟಾರೆ ಎರಡು ದಿನಗಳಿಂದ ನಗರಸಭೆ ಕಚೇರಿಯ ಎದುರು ಜನವೋ ಜನ...!

ಸರ್ಕಾರದ ವಸತಿ ಯೋಜನೆಯಡಿ ಸಲ್ಲಿಸಿದ್ದ ಅರ್ಜಿದಾರರಲ್ಲಿ ಅರ್ಹರು, ಅನರ್ಹರ ಹೆಸರನ್ನು ನಗರಸಭೆ ಎದುರು ಪ್ರಕಟಿಸಿದ್ದು, ಅದನ್ನು ನೋಡಲು ಅರ್ಜಿದಾರರು ಮುಗಿಬಿದ್ದ ಪರಿ ಇದು. ಎರಡು ದಿನಗಳಿಂದ  ಬೆಳಿಗ್ಗೆ 9ರಿಂದ ಸಂಜೆ 6ರವರೆಗೂ ಹೊಸ ನಗರಸಭೆ ಕಚೇರಿ ಹಿಂಭಾಗದಲ್ಲಿ ಹೀಗೆ ಅರ್ಜಿದಾರರು ಜಮಾಯಿಸುತ್ತಿದ್ದಾರೆ.

ಹೆಸರು ಗುರುತಿಸಲು ಅನುಕೂಲ ಆಗುವಂತೆ ಸೂಚನಾ ಫಲಕದಲ್ಲಿ ವಾರ್ಡ್‌ವಾರು ಹೆಸರು ಪ್ರಕಟಿಸಲಾಗಿತ್ತು. ಅದರಲ್ಲಿ ‘ಅರ್ಹರು’, ‘ಅನರ್ಹರು’ ಹಾಗೂ ‘ಲಭ್ಯವಿಲ್ಲ’ ಎಂದು ಮೂರು ವಿಭಾಗಗಳಲ್ಲಿ ಪಟ್ಟಿ ಪ್ರಕಟಿಸಲಾಗಿತ್ತು. ಪ್ರತಿ  ಪಟ್ಟಿಯನ್ನು ಪರಿಶೀಲಿಸುತ್ತಿದ್ದ ಅರ್ಜಿದಾರರು ಹಾಗೂ ಸಂಬಂಧಿಕರು, ಒಂದೊಂದು ಪಟ್ಟಿಯಲ್ಲೂ ಹೆಸರು ಇಲ್ಲದಾಗ ಬೇಸರದಿಂದ ಇನ್ನೊಂದು ಪಟ್ಟಿಯತ್ತ ಕಣ್ಣು ಹಾಯಿಸುತ್ತಿದ್ದರು. ಈ ಸರದಿಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿತ್ತು.

‘ಅರ್ಹರ ಪಟ್ಟಿಯಲ್ಲಿ ಹೆಸರಿದ್ದವರು  ಸಂಭ್ರಮದಿಂದ ಕುಣಿದು, ಅಕ್ಕಪಕ್ಕದವರ ಕೈಕುಲುತ್ತಿದ್ದರು. ಅನರ್ಹರ ಪಟ್ಟಿಯಲ್ಲಿ ಹೆಸರಿದ್ದವರು ಪೆಚ್ಚು ಮೋರೆ ಹಾಕುತ್ತಿದ್ದರು. ‘ಎಲ್ಲೂ ಲಭ್ಯವಿಲ್ಲ’ ಎಂದು ಖಚಿತವಾದ ಮೇಲಂತೂ ಅವರು ಆತಂಕಗೊಂಡಿದ್ದರು.

‘ನಾವು ಬಡವರು. ನಮಗೆ ನಿವೇಶನವೂ ಇಲ್ಲ, ಮನೆಯೂ ಇಲ್ಲ. 30 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದೇವೆ. ಮನೆಗಾಗಿ ಎರಡು ಬಾರಿ ಅರ್ಜಿ ಹಾಕಿದ್ದೇವೆ. ಅರ್ಹತೆ ಇದ್ದೂ, ನಮ್ಮನ್ನು ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕುರಿತು ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು 7ನೇ ವಾರ್ಡ್‌ ನಿವಾಸಿಗಳಾದ ನಾಗಲಕ್ಷ್ಮಿ, ವಿಶಾಲಾಕ್ಷಿ, 10ನೇ ವಾರ್ಡ್‌ನ ವಿಠ್ಠಲರಾವ್, ಮಂಗಳಾಬಾಯಿ, 13ನೇ ವಾರ್ಡ್‌ ನಿವಾಸಿಗಳಾದ ರುಖಾಯ ಬಾನು, ಸೈಯದ್ ಅಬಿದಾ ಕೌಸರ್, ಸೈಯದ್ ಹುಸಾನಾ ಬಾನು ಅಳಲು ತೋಡಿಕೊಂಡರು.

‘ಲಭ್ಯವಿಲ್ಲದವರ ಪಟ್ಟಿಯಲ್ಲಿ ನಮ್ಮ ಹೆಸರುಗಳಿವೆ. ಸರಿಯಾದ ದಾಖಲಾತಿ ಒದಗಿಸಿದ್ದರೂ ಕೂಡ ಈ ರೀತಿಯಾಗಿದೆ. ನಾವು ಸೂರಿಲ್ಲದೆ, ಕಂಗಾಲಾಗಿರುವ ಬಡವರು. ಜೀವನ ನಿರ್ವಹಣೆ ಕಷ್ಟವಾಗಿರುವಾಗ 15 ವರ್ಷಗಳಿಂದ ಮನೆ ಬಾಡಿಗೆ ಕಟ್ಟಿ ಬದುಕು ಸಾಗಿಸುತ್ತಿದ್ದೇವೆ. ವಸತಿ ಸೌಲಭ್ಯಕ್ಕಾಗಿ ಅಲೆದಲೆದು ಸಾಕಾಗಿದೆ. ಇದಕ್ಕೆ ಕೊನೆ ಇಲ್ಲವೇ? ಸರ್ಕಾರದ ಯಾವುದಾದರೂ ಯೋಜನೆಯಡಿ ಮನೆ ಸಿಕ್ಕರೆ ಸಾಕು’ ಎನ್ನುತ್ತಾರೆ ಸೈಯದ್ ಅಜಿಯಾ ಬಾನು, ಶಹೀನಾ ಬಾನು, ನಜೀಯಾ ಬಾನು.

ಈ ಬಗ್ಗೆ ಪೌರಾಯುಕ್ತ ಚಂದ್ರಪ್ಪ ಅವರಿಗೆ ಮಾಹಿತಿ ಕೇಳಿದಾಗ, ‘ಮನೆ ಮಂದಿ ಹೆಸರಲ್ಲೆಲ್ಲ ವಸತಿ ಸೌಲಭ್ಯ ಪಡೆದಿರುವಂಥ 170 ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವರು ಸರ್ಕಾರದ ಯೋಜನೆಯಡಿ ಮನೆ ಪಡೆದು ಬಾಡಿಗೆ ನೀಡಿದ್ದಾರೆ. ಇಂಥ ಮನೆಗಳಲ್ಲಿರುವ ಬಾಡಿಗೆದಾರರು ಮನೆ ಪಡೆಯಲು ಅರ್ಹರಿದ್ದರೆ ಅವರಿಗೆ ಮನೆ ನೀಡುವ ತೀರ್ಮಾನವನ್ನು ಸಮಿತಿಯಲ್ಲಿ ಕೈಗೊಳ್ಳಲಾಗಿದೆ.

ಈ ಮಾಹಿತಿ ಪ್ರಕಟಿಸಿದ ಮೇಲೆ ಮನೆಯ ಮೂಲ ಮಾಲೀಕರು, ವಾಪಸ್ ಬಂದು ಬಾಡಿಗೆದಾರರನ್ನು ಖಾಲಿ ಮಾಡಿಸುತ್ತಿದ್ದಾರೆ. ಇಂಥ ಪ್ರಕರಣಗಳನ್ನು ಪರಿಶೀಲಿಸಿ, ಅರ್ಹರಿಗೇ ಸೌಲಭ್ಯ ಸಿಗುವಂತೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ಈಗ ಪ್ರಕಟಿಸಿರುವ ಪಟ್ಟಿ ಅಂತಿಮವಲ್ಲ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಅರ್ಹರು ಅನರ್ಹರಾಗಬಹುದು. ಅನರ್ಹರು ಅರ್ಹರಾಗಬಹುದು. ಲಭ್ಯವಿಲ್ಲದವರು ಅರ್ಹರ ಪಟ್ಟಿಗೂ ಸೇರಬಹುದು. ಸ್ವಲ್ಪ ಕಾಯಬೇಕು ಎಂದರು.

ಅಂಕಿ ಅಂಶ

13,200 ಒಟ್ಟು ಅರ್ಜಿ ಸಲ್ಲಿಸಿದವರು

4,500 ಅರ್ಹರ ಪಟ್ಟಿಯಲ್ಲಿರುವವರು

6,500 ಅನರ್ಹರ ಪಟ್ಟಿಯಲ್ಲಿರುವವರು

* * 

ಪಾರದರ್ಶಕವಾಗಿ ಆಯ್ಕೆ ಮಾಡುವ ಸಂಬಂಧ ಅರ್ಹ ಫಲಾನುಭವಿಗಳನ್ನೇ ಗುರುತಿಸುತ್ತೇವೆ. ಅಂತಿಮವಾಗಿ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಚಂದ್ರಪ್ಪ

ನಗರಸಭೆ ಪೌರಾಯುಕ್ತ

ಪ್ರತಿಕ್ರಿಯಿಸಿ (+)