ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮನ್ನು ಮನೆಗೆ ಅಲ್ಲ, ಜೈಲಿಗೆ ಕಳುಹಿಸಬೇಕು!

Last Updated 6 ಜುಲೈ 2017, 5:59 IST
ಅಕ್ಷರ ಗಾತ್ರ

ಯಾದಗಿರಿ: ‘ಇಲ್ಲಿ ಮನುಷ್ಯರು ಬದುಕಲಿಕ್ಕೆ ಆಗುತ್ತಾ? ಇದು ವಾಸಯೋಗ್ಯ ಸ್ಥಳಾನಾ? ಅಬ್ಬಾ, ಇಡೀ ವಾರ್ಡ್‌ ಗಬ್ಬು ನಾರುತ್ತಿದೆ. ಛೆ! ಇಂಥಾ ಅವ್ಯವಸ್ಥೆಯನ್ನ ಎಲ್ಲೂ ನೋಡಿಲ್ಲ. ಕೊಳೆಗೇರಿಗಳಿಂತಲೂ ಅಧ್ವಾನ ಐತಲ್ರಿ... ನೀವೆಲ್ಲಾ ಏನ್‌ ಮಾಡ್ತಾ ಇದೀರಿ. ನಿಮ್ಮನ್ನು ಮನೆಗೆ ಅಲ್ಲ, ಜೈಲಿಗೆ ಕಳುಹಿಸಬೇಕು...’

ಇಲ್ಲಿನ ಮದಿನ ನಗರ, ಕೋಲಿವಾಡ ಪ್ರದೇಶಕ್ಕೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಬುಧವಾರ ಭೇಟಿ ನೀಡಿದಾಗ ಕನಿಷ್ಠ ಸ್ವಚ್ಛತೆಯೂ ಇಲ್ಲದ ಅವ್ಯವಸ್ಥೆ ಕಂಡು ಅಧಿಕಾರಿಗಳ ಮೇಲೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಇಡೀ ನಗರದ ತುಂಬಾ ಅವರು ಮೂಗು ಮುಚ್ಚಿಕೊಂಡೇ ಓಡಾಡಿ ಸ್ವಚ್ಛತೆ ಪರಿಶೀಲನೆ ನಡೆಸಿದರು.

ನಗರಸಭೆ ಪರಿಸರ ಎಂಜಿನಿಯರ್ ಜೈಪಾಲರಡ್ಡಿ, ನಗರ ಯೋಜನಾ ಕೋಶಾಧಿಕಾರಿ ಎಸ್.ಪಿ.ನಂದಿಗಿರಿ, ಆರೋಗ್ಯ ನಿರೀಕ್ಷಕರಾದ ಸಯ್ಯದ್ ಅಹ್ಮದ್ ಹಾಗೂ ಸಂತೋಷ್ ಅವರನ್ನು ಸಾರ್ವಜನಿಕರ ಎದುರಿನಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಗಾಗಿ ಎಷ್ಟು ಹಣ ಖರ್ಚು ಮಾಡಲಾಗಿದೆ? ಪೌರ ಕಾರ್ಮಿಕರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದ ಮೇಲೆ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.

ಆಯೋಗದ ಅಧ್ಯಕ್ಷರ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ನಿರುತ್ತರವೇ ಇತ್ತು. ಇದೇ ವೇಳೆ ನೆರೆದಿದ್ದ ಸಾರ್ವಜನಿಕರು ಕೂಡ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರಿನ ಸರಮಾಲೆ ನೀಡಿದರು. ನಂತರ ನಗರದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಿದರೂ ಕೂಡ ಅದನ್ನು ಆರಂಭಿಸದಿರುವುದು ಕುರಿತು ಪರಿಶೀಲನೆ ನಡೆಸಿದರು. ಇದಾದ ಮೇಲೆ ಅಲ್ಲಿಯೇ ಪಕ್ಕದಲ್ಲಿ ಇದ್ದ ಬಯಲು ಮಹಿಳಾ ಶೌಚಾಲಯ ಅವ್ಯವಸ್ಥೆ ನೋಡಿ ದಂಗಾದರು!

ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ನಾವೇ ಹಣ ಕೊಡುತ್ತೇವೆ ಎಂದರೂ ನಗರಸಭೆಯವರು ನಮ್ಮ ಮಾತು ಕೇಳುತ್ತಿಲ್ಲ. ಇಲ್ಲಿ ಜೀವನ ನಡೆಸುವುದೇ ದುಸ್ಸಾಧ್ಯ ಎನಿಸುತ್ತಿದೆ ಎಂದು ಮಹಿಳೆಯರು ಆಯೋಗದ ಅಧ್ಯಕ್ಷರ ಬಳಿ ಶೌಚಾಲಯ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.

ಇದೇ ವೇಳೆ 15ನೇ ವಾರ್ಡಿನ ನಿವಾಸಿಗಳು ನಮ್ಮ ವಾರ್ಡಿನಲ್ಲಿ ಶೌಚಾಲಯ ನಿರ್ಮಿಸಿದ್ದಾರೆ. ಆದರೆ, ಉದ್ಘಾಟನೆ ಭಾಗ್ಯ ಕಂಡಿಲ್ಲ. ಹೀಗಾಗಿ, ಹಲವು ಸಮಸ್ಯೆ ಆಗುತ್ತಿವೆ ಎಂದಾಗ ಮತ್ತೊಮ್ಮೆ ನಗರಸಭೆ ಅಧಿಕಾರಿಗಳಿಗೆ ಚಾಟಿ ಬೀಸಿದರು.

ಪೌರಕಾರ್ಮಿಕರಿಗಿಲ್ಲ ಸೌಲಭ್ಯ: ಸುರಕ್ಷಾ ಪರಿಕರ ನೀಡುತ್ತಿಲ್ಲ, ಬೆಳಗಿನ ಉಪಾಹಾರ ಕೊಡುತ್ತಿಲ್ಲ. ವೇತನ ಮನಸ್ಸಿಗೆ ಬಂದಂತೆ ನೀಡುತ್ತಿದ್ದಾರೆ ಎಂದು ಪೌರ ಕಾರ್ಮಿಕರು ಅಧ್ಯಕ್ಷರ ಮುಂದೆ ಗೋಳು ತೋಡಿಕೊಂಡರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ.ಆರ್.ವೆಂಕಟೇಶ್ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿದಾಗ ಪೌರಕಾರ್ಮಿಕರು ಸಮಸ್ಯೆಗಳ ಸುರಿಮಳೆಗರೆದರು. ಸ್ಥಳೀಯ ಸಂಸ್ಥೆಗಳ ಆಡಳಿತ ವೈಫಲ್ಯ ಹಾಗೂ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

ಕೆಂಭಾವಿ, ಕಕ್ಕೇರಾ ಹಾಗೂ ಗುರುಮಠಕಲ್ ಹಾಗೂ ಯಾದಗಿರಿ, ಸುರಪುರ ಹಾಗೂ ಶಹಾಪುರ ಪೌರ ಕಾರ್ಮಿಕರು ತಮ್ಮ ಸ್ಥಿತಿ ಹೀನಾಯವಾಗಿದೆ. ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಆಯೋಗ ಅಧ್ಯಕ್ಷರು, ‘ಎಲ್ಲ ಸಮಸ್ಯೆಗಳನ್ನು ನಾನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ನಿವಾರಣೆ ಮಾಡುತ್ತೇನೆ. ಯಾವುದೇ ತೊಂದರೆ ಇರದಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಇಷ್ಟಕ್ಕೇ ಸುಮ್ಮನಾಗದ ಮಹಿಳಾ ಪೌರಕಾರ್ಮಿಕರಾದ ರೇಣುಕಮ್ಮ, ‘ನಾಲ್ಕು ವರ್ಷವಾಯಿತು ನನಗೆ ವೇತನ ಕೊಟ್ಟಿಲ್ಲ. ಹೇಗೆ ಜೀವನ ನಡೆಸುವುದು. ಮಕ್ಕಳು ಭಿಕ್ಷೆ ಬೇಡಬೇಕಾಗಿದೆ’ ಎಂದು ಸಭೆಯಲ್ಲಿಯೇ ಕಣ್ಣೀರು ಸುರಿಸಿದರು.

ಇದೇ ರೀತಿಯಲ್ಲಿ ಮಹಿಳಾ ಪೌರಕಾರ್ಮಿಕರಾದ ಶಿವಲಿಂಗಮ್ಮ, ಸುಭದ್ರಮ್ಮ ಹಾಗೂ ಶೋಭಾ, ಬಸಲಿಂಗಮ್ಮ, ದೇವಕೆಮ್ಮ ಅಳಲು ತೋಡಿಕೊಂಡರು.
ಆಯೋಗದ ಅಧ್ಯಕ್ಷರು, ‘ಹೊರ ಗುತ್ತಿಗೆ ಪೌರ ಕಾರ್ಮಿಕರನ್ನು ಸರ್ಕಾರ ಕೂಡಲೇ ಕಾಯಂಗೊಳಿಸಲು ಚಿಂತನೆ ನಡೆಸಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಪೌರ ಕಾರ್ಮಿಕರ ಹಿತ ಕಾಯಲಿದೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ಇದಲ್ಲದೇ ನಿಮಗೆ ವಿದೇಶಕ್ಕೂ ಕೂಡ ಕಳುಹಿಸಲಾಗುತ್ತಿದೆ’ ಎಂದರು. ‘ಪೌರ ಕಾರ್ಮಿಕರಿಗೆ ಗೃಹ ಭಾಗ್ಯ, ಆರೋಗ್ಯ ತಪಾಸಣೆ, ಬೆಳಗಿನ ಜಾವ ಉಪಾಹಾರ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ಯಾರಾದರೂ ಸೌಲಭ್ಯ ಕಲ್ಪಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ಆಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಉಪಾಧ್ಯಕ್ಷ ಶ್ಯಾಂಸನ್ ಮಾಳಿಕೇರಿ, ಯೋಜನಾ ನಿರ್ದೇಶಕ ಎಸ್.ಪಿ.ನಂದಗಿರಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಜೀಂ ಅಹ್ಮದ್, ನಗರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಾಜರಿದ್ದರು.

ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ನಿರ್ಧಾರ
ಯಾದಗಿರಿ: ‘ನಗರಗಳಲ್ಲಿ ಸ್ವಚ್ಛತೆ ಕಾಪಾಡದ ಹಾಗೂ ಪೌರಕಾರ್ಮಿಕರಿಗೆ ಕನಿಷ್ಠ ಸೌಲಭ್ಯ ಒದಗಿಸುವಲ್ಲಿ ವಿಫಲಗೊಂಡಿರುವ ಜಿಲ್ಲೆಯ ಮೂರು ಪುರಸಭೆಗಳ ಮುಖ್ಯಾಧಿಕಾರಿಗಳ ಹಾಗೂ ಮೂರು ನಗರಸಭೆಗಳ ಪೌರಾಯುಕ್ತರ ವಿರುದ್ಧ ಆಯೋಗ ಪ್ರಕರಣ ದಾಖಲಿಸಲು ನಿರ್ಧರಿಸಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದುವರೆಗೂ ರಾಜ್ಯದ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಇರುವಷ್ಟು ಕೊಳಚೆ ಎಲ್ಲೂ ಕಂಡಿಲ್ಲ. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಯನ್ನು ಕನಿಷ್ಠವೂ ಕಾಪಾಡಿಲ್ಲ. ನಗರದ ಕೋಲಿವಾಡ, 16, 7ನೇ ವಾರ್ಡ್‌ಗಳಿಗೆ ಭೇಟಿ ನೀಡಿದಾಗ ಪರಿಸ್ಥಿರಿ ತುಂಬಾ ಗಂಭೀರ ಅನಿಸಿತು. ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ’ ಎಂದರು.

‘ಕಕ್ಕೇರಾ, ಕೆಂಭಾವಿ, ಗುರುಮಠಕಲ್ ಪುರಸಭೆಗಳ ಮುಖ್ಯಾಧಿಕಾರಿಗಳ ಹಾಗೂ ಸುರಪುರ, ಶಹಾಪುರ, ಯಾದಗಿರಿ ನಗರಸಭೆಗಳ ಪೌರಾಯುಕ್ತರ ವಿರುದ್ಧ ಆಯೋಗ ಪ್ರಕರಣ ದಾಖಲಿಸಲಿದೆ. ಯಾದಗಿರಿ ನಗರದಲ್ಲಿ ನೂತನ ಬಸ್‌ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ರಸ್ತೆಗೆ ಬಿಟ್ಟಿರುವ ಎನ್‌ಇಕೆಆರ್‌ಟಿಸಿ ಡಿಪೋ ವ್ಯವಸ್ಥಾಪಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗುವುದು’ ಎಂದು ವಿವರಿಸಿದರು.

‘ಪುರಸಭೆ ಹಾಗೂ ನಗರಸಭೆಗಳಲ್ಲಿನ ಪೌರಕಾರ್ಮಿಕರಿಗೆ ಯಾವ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಕನಿಷ್ಠ ಅವರಿಗೆ ಬೆಳಗಿನ ಉಪಾಹಾರ ಕೂಡ ನೀಡುತ್ತಿಲ್ಲ. 24 ವರ್ಷಗಳಿಂದ ದುಡಿಯುತ್ತಿರುವವರನ್ನು ಕಾಯಂ ಮಾಡಿಲ್ಲ. ನಗರ, ಪಟ್ಟಣಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದರೂ, ಆರಂಭಿಸಿಲ್ಲ. ಆರಂಭವಾಗದ ಶೌಚಾಲಯಗಳ ದುರಸ್ತಿಗಾಗಿ ಲಕ್ಷಾಂತರ ಅನುದಾನ ದುರ್ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಹಾಗೂ ಪೌರಾಯುಕ್ತರ ವಿರುದ್ಧ ಪ್ರಕರಣ ದಾಖಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

ಆಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಖುಷ್ಬು ಗೋಯೆಲ್‌ ಚೌಧರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

* * 

ಸ್ವಚ್ಛತೆಗಾಗಿ ಸರ್ಕಾರ ಅನೇಕ ಯೋಜನೆ, ಕೋಟ್ಯಂತರ ಅನುದಾನ ನೀಡುತ್ತಿದ್ದರೂ ಜಿಲ್ಲೆಯಲ್ಲಿ ಸ್ವಚ್ಛತೆ ವಿಚಾರದಲ್ಲಿ ಅಣುವಿನಷ್ಟು ಅಭಿವೃದ್ಧಿ ಕಂಡಿಲ್ಲ.
ಗೋಕುಲ ನಾರಾಯಣಸ್ವಾಮಿ, ಸದಸ್ಯ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT