ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿಗೆ ನೀರು ಬಿಡುವುದು ಅನಿವಾರ್ಯ: ಎಂ.ಬಿ. ಪಾಟೀಲ

Last Updated 6 ಜುಲೈ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗ ಮಾಡುವ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗುವ ಅಪಾಯ ಇರುವುದರಿಂದ ಅನಿವಾರ್ಯವಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪ್ರತಿಪಾದಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಬುಧವಾರ ಮಾತನಾಡಿದ ಅವರು, ‘ಕಾವೇರಿ ನ್ಯಾಯಮಂಡಳಿ  ಐತೀರ್ಪಿನಂತೆ ಕಾವೇರಿ ನದಿಪಾತ್ರದ ಜಲಾಶಯಗಳಿಗೆ ಜೂನ್‌ನಲ್ಲಿ  34 ಟಿಎಂಸಿ ಅಡಿ ನೀರು ಬಂದರೆ 11 ಟಿಎಂಸಿ ಅಡಿ ನೀರು ಬಿಡಬೇಕು. ಜೂನ್‌ನಲ್ಲಿ ಕೇವಲ 11.6 ಟಿಎಂಸಿ ಅಡಿ ನೀರು ಹರಿದು ಬಂದಿದ್ದು,  ಅಲ್ಪ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಾವೇರಿ ನದಿ ಪಾತ್ರದ ಜಲಾಶಯಗಳಿಗೆ ಸದ್ಯ 12,700 ಕ್ಯುಸೆಕ್‌ (ಈ ಪ್ರಮಾಣದ ನೀರು 24 ಗಂಟೆ ನಿರಂತರ ಹರಿದರೆ ಸುಮಾರು 1.2 ಟಿಎಂಸಿ ಅಡಿಯಷ್ಟು) ನೀರಿನ ಒಳಹರಿವು ಇದೆ. ಇದರಲ್ಲಿ 4,000 ಕ್ಯುಸೆಕ್‌ (ಇಷ್ಟು  ನೀರು 24 ಗಂಟೆ ನಿರಂತರ ಹರಿದರೆ ಸುಮಾರು 0.35ಟಿಎಂಸಿ ಅಡಿಯಷ್ಟು) ನೀರನ್ನು ಹೊರಬಿಡಲಾಗುತ್ತಿದೆ ಎಂದು ಅವರು ವಿವರಿಸಿದರು.



ಮಳೆಗಾಲ ಆರಂಭವಾದ ಮೊದಲ ನಾಲ್ಕು ತಿಂಗಳಿನಲ್ಲಿ ತಮಿಳುನಾಡಿಗೆ 134 ಟಿಎಂಸಿ ಅಡಿ ನೀರು ಬಿಡಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.  ಮಳೆ ಬಾರದೇ ಇದ್ದರೂ ಇಷ್ಟು ಪ್ರಮಾಣದ ನೀರು ಬಿಡಲೇಬೇಕಾಗಿದೆ. ಇದನ್ನು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮಂಡಳಿ ಮೊರೆ ಹೋಗಿದೆ. ಕೋರ್ಟ್‌ನಲ್ಲಿ ಈ ವಿಷಯ ವಿಚಾರಣೆಗೆ ಬಂದಾಗ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಒಳಹರಿವು ಆಧರಿಸಿ  ಅಲ್ಪ ಪ್ರಮಾಣದ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಬಿಡಲಾಗುತ್ತಿದೆ ಎಂದರು.

ಮೇಕೆದಾಟು ಅನುಷ್ಠಾನ ನಿಶ್ಚಿತ: ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿ ತಮಿಳುನಾಡಿಗೆ (ವಾರ್ಷಿಕ 192 ಟಿಎಂಸಿ ಅಡಿ ನೀರು ಬಿಡಲೇಬೇಕು) ಹೆಚ್ಚುವರಿಯಾಗಿ ಹರಿಯುವ ನೀರನ್ನು ಸಂಗ್ರಹಿಸಿಕೊಟ್ಟುಕೊಳ್ಳಲು ಯಾವುದೇ ಅಭ್ಯಂತರವಿಲ್ಲ.  ತಮಿಳುನಾಡು ವಿರೋಧ ಮಾಡಿದರೂ ಮೇಕೆದಾಟು ಯೋಜನೆಯನ್ನು ಸರ್ಕಾರ ಅನುಷ್ಠಾನ ಮಾಡಲಿದೆ ಎಂದು ಪಾಟೀಲ ಹೇಳಿದರು. ಯೋಜನೆಗೆ ಅನುಮತಿ ಕೋರಿ ಸದ್ಯವೇ ಕೇಂದ್ರ ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸೂಕ್ತ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಹಾಗೂ  ನ್ಯಾಯಮಂಡಳಿ ಗಮನಕ್ಕೂ ತರಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT