ಶನಿವಾರ, ಡಿಸೆಂಬರ್ 14, 2019
22 °C

ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರ

ಬೀದರ್: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟ ಕದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದರು. ಪಂಡಿತ್ ದೀನದಯಾಳ್ ಉಪಾ ಧ್ಯಾಯರ ಜನ್ಮಶತಾಬ್ದಿ ಪ್ರಯುಕ್ತ ವಿಸ್ತಾ ರಕ ಯೋಜನೆ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾನಗರ ಕಾಲೊನಿಯಲ್ಲಿ ಗುರುವಾರ ಮನೆ ಮನೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆ ಮಾಹಿತಿ ಒಳಗೊಂಡ ಕರಪತ್ರ ವಿತರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ರೈತರ ಸಾಲ ಮನ್ನಾ ಮಾರ್ಚ್‌ ಮುನ್ನವೇ ಮಾಡಬೇಕಿತ್ತು. ಹಲವು ರೈತರು ಪತ್ನಿಯ ತಾಳಿ, ಮನೆ ಅಡವಿಟ್ಟು ಸಾಲ ತೀರಿಸಿದ್ದಾರೆ. ಈಗ ಅವರ ಗತಿ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರಕ್ಕಾಗಿ ಸಾಲ ಮನ್ನಾ ಮಾಡಿದ್ದಾರೆ. ಇದರ ಲಾಭ ಎಲ್ಲ ರೈತರಿಗೂ ದೊರಕುವುದಿಲ್ಲ’ ಎಂದು ಟೀಕಿಸಿದರು. 

‘ಉತ್ತರ ಪ್ರದೇಶದಲ್ಲಿ ರೈತರ ₹ 36 ಸಾವಿರ ಕೋಟಿ ಹಾಗೂ ಮಹಾರಾಷ್ಟ್ರದಲ್ಲಿ ₹ 30 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಆದರೆ, ರಾಜ್ಯದ ಲ್ಲಿ ಕೇವಲ ₹ 8 ಸಾವಿರ ಕೋಟಿ ಸಾಲ ಮಾತ್ರ ಮನ್ನಾ ಮಾಡಲಾಗಿದೆ’ ಎಂದರು.

‘ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ದನಕರುಗಳಿಗೆ ಮೇವು, ಕುಡಿಯಲು ನೀರು ಇಲ್ಲ. ಜನ ಗುಳೆ ಹೊರಟಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿ ಆರಂಭಿಸಿ ರೈತರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರ ಪ್ರತಿ ಎಕರೆಗೆ ₹ 6,800 ಇನ್‌ಪುಟ್ ಸಬ್ಸಿಡಿ ಕೊಡುತ್ತಿದೆ. ಆದರೆ, ರಾಜ್ಯದ ಅಧಿಕಾರಿಗಳು ಈವರೆಗೂ ಅದನ್ನು ಅರ್ಹ ರೈತರಿಗೆ ತಲುಪಿಸಿಲ್ಲ’ ಆರೋಪಿಸಿದರು.

‘ರಾಜ್ಯದಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿ ತಪ್ಪು ಮಾಡಿದವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಕಾಂಗ್ರೆಸ್‌ ಆಡಳಿತದಲ್ಲಿ ಅನೇಕ ಪ್ರಕರಣಗಳಲ್ಲಿ ಸಿಲುಕಿರುವ ಹಾಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಲವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು  ಆರೋಪಿಸಿದರು.

ದಲಿತರ ಮನೆಯಲ್ಲಿ ಚಹಾ ಕುಡಿದ ಶೋಭಾ

ಬೀದರ್: ವಿಸ್ತಾರಕ ಯೋಜನೆ ಅಂಗವಾಗಿ ನಗರದ ವಿವಿಧೆಡೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ ಅವರು ದಲಿತರ ಮನೆಯಲ್ಲಿ ಚಹಾ ಸೇವಿಸಿದರು. ವಿದ್ಯಾನಗರ ಕಾಲೊನಿಯ ಕ್ರಾಸ್ ಸಂಖ್ಯೆ 11ರಲ್ಲಿನ ಪಕ್ಷದ ಕಾರ್ಯಕರ್ತ ಗುಣವಂತ ಭಾವಿಕಟ್ಟಿ ಅವರ ಮನೆಯಲ್ಲಿ ಶೋಭಾ ಕರಂದ್ಲಾಜೆಯವರು ಅಲ್ಲದೇ ಪಕ್ಷದ ಮುಖಂಡರು, ಕಾರ್ಯಕರ್ತರೂ ಸಹ ಚಹಾ ಸವಿದರು.

ಪಕ್ಷದ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಶಂಕರರಾವ್ ಚಿಮಕೋಡೆ ಅವರ ಮನೆಯಲ್ಲಿ ಮತಗಟ್ಟೆ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ ಕರಂದ್ಲಾಜೆ, ‘ಕಾರ್ಯಕರ್ತರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು’ ಎಂದರು.

‘ಕೇಂದ್ರದ ಬಿಜೆಪಿ ಸರ್ಕಾರದ ಜನಪರ ಯೋಜನೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಜನಜಾಗೃತಿ ಮೂಡಿಸಬೇಕು. ಪ್ರತಿ ತಿಂಗಳು ಮತಗಟ್ಟೆ ಮಟ್ಟದ ಸಭೆ ನಡೆಸಬೇಕು. 18 ವರ್ಷ ತುಂಬಿದವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಬೇಕು’ ಎಂದು ಹೇಳಿದರು.

ಮನೆಮನೆಗೆ ಭೇಟಿ ನೀಡಿದ ಅವರು ಮನೆ ಮಾಲೀಕರ ಒಪ್ಪಿಗೆ ಪಡೆದು ಮನೆ, ಅಂಗಡಿಗೆ ಕೇಂದ್ರ ಸರ್ಕಾರ ಕುರಿತಾದ ಸ್ಟಿಕ್ಕರ್ ಅಂಟಿಸಿದರು. ‘ನಿಮ್ಮ ಬಳಿ ಗ್ಯಾಸ್ ಇದೆಯೇ? ಶೌಚಾಲಯ ಕಟ್ಟಿಸಿಕೊಂಡಿದ್ದೀರಾ’ ಎಂದು ಮನೆ ಮಾಲೀಕರನ್ನು ಪ್ರಶ್ನಿಸಿದರು.  ‘ಗ್ಯಾಸ್ ಇಲ್ಲದವರು ಪ್ರಧಾನಮಂತ್ರಿ ಉಜ್ವಲಾ ಯೋಜನೆ ಲಾಭ ಪಡೆಯಬೇಕು.

ವೈಯಕ್ತಿಕ ಶೌಚಾಲಯ ಹೊಂದಿರದವರು ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ಕಟ್ಟಿಸಿಕೊಳ್ಳಬೇಕು’ ಎಂದರು. ಕಾಲೊನಿಯ ಬುದ್ಧ ವಿಹಾರದ ಎದುರು ಸಸಿಯನ್ನೂ ನೆಟ್ಟರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಸ್ಲಂ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಯಕುಮಾರ ಕಾಂಗೆ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಮಾಶೆಟ್ಟಿ, ಬಾಬುರಾವ್ ಕಾರಬಾರಿ, ಹಣಮಂತ ಬುಳ್ಳಾ, ರವಿ ಸ್ವಾಮಿ, ರಾಜಕುಮಾರ ಚಿದ್ರಿ ಇದ್ದರು.

* * 

ರಾಜ್ಯದ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ರಾಜ್ಯದಲ್ಲಿ ಕೋಮುಸೌಹಾರ್ದ ಹದಗೆಟ್ಟಿದೆ. ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ.

ಶೋಭಾ ಕರಂದ್ಲಾಜೆ

ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಘಟಕ

ಪ್ರತಿಕ್ರಿಯಿಸಿ (+)