ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿಗೆ ಬಂದು ವಾರ ಪೂರ್ಣ

ಕೆಲ ಸರಕುಗಳ ಬೆಲೆ ಹೆಚ್ಚಳಕ್ಕೆ ಗ್ರಾಹಕರ ಟೀಕೆ: ಕುಟುಂಬದ ತಿಂಗಳ ಖರ್ಚು ಏರುಪೇರು
Last Updated 7 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಮಾರಾಟ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದು ಶನಿವಾರಕ್ಕೆ ಒಂದು ವಾರ ಪೂರ್ಣಗೊಳ್ಳುತ್ತಿದೆ.
ರೆಸ್ಟೊರಂಟ್ಸ್‌ಗಳಲ್ಲಿ ಚಹ, ಕಾಫಿ, ತಿಂಡಿಗಳ ಬೆಲೆ ಮತ್ತು ಸೇವಾ ತೆರಿಗೆ ಹೆಚ್ಚಳದ ಬಗ್ಗೆ ಗ್ರಾಹಕರಿಂದ ಅಪಸ್ವರ  ಕೇಳಿ ಬರುತ್ತಿದೆ.

ಕೆಲ ದಿನ ಬಳಕೆಯ ಸರಕುಗಳು ಮತ್ತು ಎಲ್‌ಪಿಜಿ ತುಟ್ಟಿಯಾಗಿರುವುದರಿಂದ ಕುಟುಂಬವೊಂದರ ತಿಂಗಳ ಬಜೆಟ್‌ನಲ್ಲಿಯೂ  ಏರುಪೇರು ಕಂಡು ಬರಲಿದೆ. ಬೈಕ್‌, ಕಾರುಗಳ ಬೆಲೆಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಇಂತಹ ಬೆಲೆ ಏರಿಳಿತದ ಮಧ್ಯೆಯೇ ದೇಶದಾದ್ಯಂತ ಹೊಸ ತೆರಿಗೆ ವ್ಯವಸ್ಥೆಯು ಸುಸೂತ್ರವಾಗಿ ಜಾರಿಗೆ ಬಂದಾಗಿದೆ.

ಗ್ರಾಹಕರಿಗೆ ವರ್ಗಾವಣೆ: ತ್ವರಿತವಾಗಿ ಬಿಕರಿಯಾಗುವ  ಗ್ರಾಹಕ ಉತ್ಪನ್ನ ತಯಾರಿಸುವ ಅನೇಕ  ಸಂಸ್ಥೆಗಳು (ಎಫ್‌ಎಂಸಿಜಿ)  ಬೆಲೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿವೆ. ಇನ್ನೊಂದೆಡೆ, ಬೆಲೆ ಕಡಿತ ಮಾಡದ ವರ್ತಕರ ವಿರುದ್ಧ ದಂಡ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ  ನೀಡಿದೆ.

ಇಮಾಮಿ: ಕೇಶ ತೈಲ ಬೆಲೆ ಕಡಿತ: ಕೋಲ್ಕತ್ತ ಮೂಲದ ‘ಎಫ್‌ಎಂಸಿಜಿ’ ಸಂಸ್ಥೆ ಇಮಾಮಿ, ತನ್ನ ಕೇಶ ತೈಲ ಉತ್ಪನ್ನದ ಬೆಲೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ಜಿಎಸ್‌ಟಿಯಡಿ, ದಿನಬಳಕೆಯ ಸರಕುಗಳಾದ ಸೋಪ್‌, ಟೂತ್‌ಪೇಸ್ಟ್‌, ಸ್ನಾನ ಮತ್ತು ಬಟ್ಟೆ ಸೋಪ್‌ಗಳು ಶೇ 18ರ ತೆರಿಗೆ ದರದ ವ್ಯಾಪ್ತಿಗೆ ಬಂದಿವೆ. ಜಿಎಸ್‌ಟಿ ಜಾರಿ ಮುಂಚೆ ಈ ಸರಕುಗಳ ಮೇಲಿನ ಒಟ್ಟಾರೆ ತೆರಿಗೆ ಹೊರೆ ಶೇ 22 ರಿಂದ 24ರಷ್ಟಿತ್ತು.

ತೆರಿಗೆ ದರ ಪರಿಷ್ಕರಣೆಗೆ ಒತ್ತಾಯ: ಶೇ 28ರ ತೆರಿಗೆ ದರದ ವ್ಯಾಪ್ತಿಗೆ ಒಳಪಟ್ಟಿರುವ ಸರಕು ಮತ್ತು ಸೇವೆಗಳನ್ನು  ಮರುಪರಿಶೀಲಿಸಬೇಕು  ಮತ್ತು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುವುದನ್ನು ಉತ್ತೇಜಿಸಲು ನಿಯಮಗಳನ್ನು ಸರಳಗೊಳಿಸಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟವು  (ಸಿಎಐಟಿ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಸಣ್ಣಪುಟ್ಟ ಪಟ್ಟಣಗಳಲ್ಲಿನ ವರ್ತಕರಲ್ಲಿನ ಗೊಂದಲ ನಿವಾರಣೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ಮತ್ತು ವರ್ತಕ ಸಮುದಾಯದ ಪ್ರತಿನಿಧಿಗಳು ಒಳಗೊಂಡ ಸಮನ್ವಯ ಸಮಿತಿ ರಚಿಸಬೇಕು ಎಂದು ಒಕ್ಕೂಟವು ಅಭಿಪ್ರಾಯಪಟ್ಟಿದೆ. ಶುಕ್ರವಾರ  ನಡೆದ ಸಭೆಯಲ್ಲಿ  23 ರಾಜ್ಯಗಳಲ್ಲಿನ ವರ್ತಕರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಣ್ಣ ನಗರಗಳಲ್ಲಿನ ವರ್ತಕರಿಗೆ ಜಿಎಸ್‌ಟಿಗೆ ವರ್ಗಾವಣೆಗೊಳ್ಳಲು ಸಬ್ಸಿಡಿ ಇಲ್ಲವೆ ಉತ್ತೇಜನ ನೀಡಬೇಕು ಎಂದೂ  ಒತ್ತಾಯಿಸಿದೆ.

ಜಮ್ಮು– ಕಾಶ್ಮೀರ ಸೇರ್ಪಡೆ: ಜಮ್ಮು  ಮತ್ತು ಕಾಶ್ಮೀರ ರಾಜ್ಯದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಿಎಸ್‌ಟಿ ಜಾರಿಗೆ ಬರಲಿದೆ. ರಾಜ್ಯ ವಿಧಾನಸಭೆಯು ಜಿಎಸ್‌ಟಿ ಮಸೂದೆಯನ್ನು ಅಂಗೀಕರಿಸಿದೆ. ರಾಜ್ಯದ ವಿಶೇಷ ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಒದಗುವುದಿಲ್ಲ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಆದೇಶದಲ್ಲಿ ಭರವಸೆ ನೀಡಲಾಗಿದೆ.

ಶಿಕ್ಷಣ ದುಬಾರಿಯಾಗಿಲ್ಲ
ಜಿಎಸ್‌ಟಿ ವ್ಯವಸ್ಥೆಯಡಿ ಶಿಕ್ಷಣವು ದುಬಾರಿಯಾಗಿಲ್ಲ. ಪ್ರೌಢಶಿಕ್ಷಣ ಹಂತದವರೆಗಿನ ಶಿಕ್ಷಣ ಸಂಸ್ಥೆಗಳನ್ನು  ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮಧ್ಯಾಹ್ನದ ಬಿಸಿಯೂಟ, ಶಿಕ್ಷಣ ಸಂಸ್ಥೆಗಳಲ್ಲಿನ ಸುರಕ್ಷತೆ, ಸ್ವಚ್ಛತಾ ಸೇವೆ, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ , ಸಿಬ್ಬಂದಿಗೆ ಒದಗಿಸುವ ಸೇವೆಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇವೆ.

ವಿದ್ಯಾರ್ಥಿಗಳಿಗೆ ಒದಗಿಸುವ ಸಾರಿಗೆ ಸೌಲಭ್ಯ, ಪ್ರವೇಶ, ಪರೀಕ್ಷಾ ಸೇವೆಗಳೂ ರಿಯಾಯ್ತಿಗೆ ಒಳಪಟ್ಟಿವೆ. ಸ್ಕೂಲ್ ಬ್ಯಾಗ್‌ಗಳ  ತೆರಿಗೆ ದರ ಇಳಿಕೆ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಖಾಸಗಿಯವರು ಒದಗಿಸುತ್ತಿದ್ದ ಸಾರಿಗೆ, ಕ್ಯಾಂಟೀನ್‌ ಜಿಎಸ್‌ಟಿ ಮೊದಲೂ ಸೇವಾ ತೆರಿಗೆಗೆ ಒಳಪಟ್ಟಿತ್ತು. ಜಿಎಸ್‌ಟಿ ನಂತರವೂ ತೆರಿಗೆ ಮುಂದುವರೆದಿದೆ ಎಂದು ಸರ್ಕಾರ ತಿಳಿಸಿದೆ. ಕೈದಿಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ 65 ವರ್ಷಕ್ಕಿಂತ ಹೆಚ್ಚಿನವರಿಗೂ ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ ಎಂದೂ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT