ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ವಂಚನೆ: ನಷ್ಟ ಭರಿಸಲು ಆರ್‌ಬಿಐ ಕ್ರಮ

Last Updated 7 ಜುಲೈ 2017, 19:35 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕ್ ಖಾತೆಗಳಲ್ಲಿ ಆನ್‌ಲೈನ್‌ ಮೂಲಕ ಎಸಗುವ ವಂಚನೆ ಪ್ರಕರಣಗಳಲ್ಲಿ ಗ್ರಾಹಕರಿಗೆ ಆಗುವ ಹಣಕಾಸು ನಷ್ಟ  ತಡೆಯಲು ಭಾರತೀಯ ರಿಸರ್ವ್‌ ಬ್ಯಾಂಕ್  ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಬ್ಯಾಂಕಿಂಗ್‌ ವಹಿವಾಟಿನಲ್ಲಿ ನಡೆಯುವ ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌ ಅಥವಾ ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಗ್ರಾಹಕರು ಕಳೆದುಕೊಳ್ಳುವ ಹಣವನ್ನು ಮರಳಿಸಲು   ಮತ್ತು ಆನ್‌ಲೈನ್‌ ವಹಿವಾಟಿನ ಸುರಕ್ಷತೆ ಹೆಚ್ಚಿಸುವುದು ಆರ್‌ಬಿಐನ ಉದ್ದೇಶವಾಗಿದೆ.

ತಮ್ಮ ಖಾತೆಯಲ್ಲಿ ನಡೆದ ವಂಚನೆ  ಪ್ರಕರಣಗಳನ್ನು ಗ್ರಾಹಕರು ಮೂರು ದಿನಗಳಲ್ಲಿ  ಬ್ಯಾಂಕ್‌ನ ಗಮನಕ್ಕೆ ತಂದರೆ ಗ್ರಾಹಕರು ಯಾವುದೇ ನಷ್ಟ ಭರಿಸಬೇಕಾಗಿಲ್ಲ.  ಏಳು ದಿನಗಳಲ್ಲಿ ವರದಿ ಮಾಡಿದರೆ ಗ್ರಾಹಕ ಭರಿಸಬಹುದಾದ ನಷ್ಟದ ಪ್ರಮಾಣವನ್ನು ₹ 25 ಸಾವಿರಕ್ಕೆ ಮಿತಿಗೊಳಿಸಲಾಗಿದೆ.

ಈ ನಿಯಮಗಳು ಮೂರನೇ ವ್ಯಕ್ತಿಯಿಂದ ನಡೆಯುವ ವಂಚನೆ ಪ್ರಕರಣಗಳಿಗೆ ಅನ್ವಯಿಸುತ್ತವೆ. ಬ್ಯಾಂಕ್‌ ಅಥವಾ ಗ್ರಾಹಕರಿಂದ ಯಾವುದೇ ಲೋಪವಾಗದೇ, ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಲೋಪದಿಂದ ಆಗಿದ್ದರೆ ಈ ನಿಯಮ ಅನ್ವಯವಾಗಲಿದೆ. 

ಇಂಟರ್‌ನೆಟ್‌ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಗ್ರಾಹಕನ ಖಾತೆಯಲ್ಲಿ ಅಪರಿಚಿತರು ಎಸಗುವ ವಂಚನೆ ಪ್ರಕರಣಗಳನ್ನು  ಮೂರು ದಿನಗಳಲ್ಲಿ  ಬ್ಯಾಂಕ್‌ನ ಗಮನಕ್ಕೆ ತಂದರೆ, ಆ ಮೊತ್ತವನ್ನು 10 ದಿನಗಳಲ್ಲಿ ಖಾತೆಗೆ ವರ್ಗಾಯಿಸಲಾಗುವುದು.  ಇದಕ್ಕಾಗಿ ವಿಮೆ ಇತ್ಯರ್ಥಕ್ಕಾಗಿ ಕಾಯಬೇಕಾಗಿಲ್ಲ ಎಂದೂ ಆರ್‌ಬಿಐ ಸ್ಪಷ್ಟಪಡಿಸಿದೆ.

ತಮ್ಮ ವಹಿವಾಟಿನ ವಿವರಗಳನ್ನು ಅಪರಿಚಿತರ ಜತೆ ಹಂಚಿಕೊಂಡ ಗ್ರಾಹಕರ ನಿರ್ಲಕ್ಷ್ಯದ ಪ್ರಕರಣಗಳಲ್ಲಿ  ಇಡೀ ನಷ್ಟವನ್ನು ಅವರೇ ಭರಿಸಬೇಕಾಗುತ್ತದೆ. ವಂಚಕರು ಎಸಗುವ ಬ್ಯಾಂಕಿಂಗ್‌ ವಹಿವಾಟಿನಲ್ಲಿ ಗ್ರಾಹಕರ ಖಾತೆ ಮತ್ತು ಕ್ರೆಡಿಟ್‌ ಕಾರ್ಡ್‌ನಿಂದ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಎಸ್‌ಎಂಎಸ್‌ ಕಡ್ಡಾಯ: ಆನ್‌ಲೈನ್  ಬ್ಯಾಂಕಿಂಗ್‌ ವಹಿವಾಟಿಗೆ ಸಂಬಂಧಿಸಿದಂತೆ ಗ್ರಾಹಕರು ಎಸ್ಎಂಎಸ್‌ ಎಚ್ಚರಿಕೆ ಸಂದೇಶ ಸ್ವೀಕರಿಸಲು ಕಡ್ಡಾಯವಾಗಿ ತಮ್ಮ ಮೊಬೈಲ್‌ ಸಂಖ್ಯೆಯನ್ನು  ಬ್ಯಾಂಕ್‌ನಲ್ಲಿ ನೋಂದಾಯಿಸಿರಬೇಕು. ಇ–ಮೇಲ್‌ ಮೂಲಕವೂ ಎಚ್ಚರಿಕೆ ಸಂದೇಶ ಪಡೆಯಲು ಮುಂದಾಗಬೇಕು ಎಂದೂ ಆರ್‌ಬಿಐ  ಸಲಹೆ ನೀಡಿದೆ.

ವಂಚನೆ ಪ್ರಕರಣಗಳಲ್ಲಿ ಗ್ರಾಹಕರ ನಷ್ಟದ ಬಾಧ್ಯತೆ ಸೀಮಿತಗೊಳಿಸಲು ಆರ್‌ಬಿಐ 2016ರ ಆಗಸ್ಟ್‌ನಲ್ಲಿ ಕರಡು ಸುತ್ತೋಲೆ ಹೊರಡಿಸಿತ್ತು. ಈಗ ಅಂತಿಮ ಮಾರ್ಗದರ್ಶಿ ಸೂತ್ರ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT