ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಆಸಕ್ತಿ ಇಲ್ಲ ರಾಜವಂಶಸ್ಥ ಯದುವೀರ

Last Updated 7 ಜುಲೈ 2017, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಬೆಳೆದಿದ್ದು ಸಾಮಾನ್ಯ ಹುಡುಗನಂತೆ. 2015ರವರೆಗೂ ಮೈಸೂರು ರಾಜಮನೆತನದ ಯುವರಾಜ ಆಗುತ್ತೇನೆ ಎಂದೇ ತಿಳಿದಿರಲಿಲ್ಲ. ರಾಜಕೀಯ ಕ್ಷೇತ್ರ ಅನ್ಯಗ್ರಹದಂತೆ, ಆ ಬಗ್ಗೆ ಖಂಡಿತ ಆಸಕ್ತಿ ಇಲ್ಲ’ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಮೌಂಟ್‌ ಕಾರ್ಮೆಲ್‌ ಕಾಲೇಜಿನ ಸಂಸ್ಥಾಪನಾ ದಿನದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ಮೈಸೂರು ಮತ್ತು ಸಮಷ್ಟಿ ಸಂಸ್ಕೃತಿ’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರಿನ ಆಡಳಿತ ನಿಮ್ಮ ಕೈಗೆ ಸಿಕ್ಕಿದರೆ ಯಾವುದಕ್ಕೆ ಹೆಚ್ಚು ಒತ್ತು ನೀಡುತ್ತೀರಿ, ನಿಮ್ಮ ದೈನಂದಿನ ಜೀವನ ಹೇಗಿರುತ್ತದೆ...  ಹೀಗೆ ಯದುವೀರ ಅವರಿಗೆ ವಿದ್ಯಾರ್ಥಿನಿಯರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ಎಲ್ಲಾ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸಿದ್ದು, ವಿದ್ಯಾರ್ಥಿನಿಯರ ಮೊಗದಲ್ಲಿ ಖುಷಿ ತಂದಿತು.

‘ಮೈಸೂರಿನ ಆಳ್ವಿಕೆ ಈಗ ಸಾಧ್ಯವಿಲ್ಲ. ಒಂದು ವೇಳೆ ಅವಕಾಶ ಸಿಕ್ಕರೆ, ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಗಮನ ನೀಡುತ್ತೇನೆ. ಸೌರವ್ಯವಸ್ಥೆ, ಎಲೆಕ್ಟ್ರಿಕ್‌ ಕಾರುಗಳ ಬಳಕೆ ಹೀಗೆ ಪರಿಸರ ಸ್ನೇಹಿ ಸಮಾಜ ನಿರ್ಮಾಣದ ಗುರಿ ಇದೆ.’ ‘ನಾನೂ ಸಾಮಾನ್ಯ ಮನುಷ್ಯ. ಕೆಲವೊಂದು ಆಚರಣೆಗಳನ್ನು ಹೊರತುಪಡಿಸಿದರೆ, ನನ್ನ ದೈನಂದಿನ ಬದುಕು ನಿಮ್ಮ ರೀತಿಯೇ ಇರುತ್ತದೆ’  ಎಂದರು.

–ಈಗ ನೀವು ಯಾವುದಾದರೂ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದ್ದೀರಾ ?
‘ಕಲಿಸು ಪ್ರತಿಷ್ಠಾನದ ಜತೆ ಕೆಲಸ ಮಾಡುತ್ತಿದ್ದೇನೆ. ಅವರು ಏಳೆಂಟು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಅಲ್ಲಿನ ಮಕ್ಕಳಿಗೆ ಪಾಠ ಮಾಡಲು ಹೋಗುತ್ತಿರುತ್ತೇನೆ’ ಎಂದು ಹೇಳಿದರು.

–ಪಾಶ್ಚಾತ್ಯ ಸಂಸ್ಕೃತಿಯು ಮೈಸೂರಿನ ಅರಮನೆ ಆಚರಣೆಗಳ ಮೇಲೆ ಪ್ರಭಾವ ಬೀರಿದೆಯಾ?
‘ಒಂದೊಂದು ಸಂಸ್ಕೃತಿಯೂ ಮತ್ತೊಂದರ ಮೇಲೆ ಪ್ರಭಾವ ಬೀರುತ್ತದೆ. ಪರ್ಶಿಯನ್ನರು ಭಾರತದಲ್ಲಿ ಆಳ್ವಿಕೆ ನಡೆಸಿದ್ದರ ಪರಿಣಾಮ
ನಮ್ಮ ದರ್ಬಾರಿನಲ್ಲಿ ಪರ್ಶಿಯಾ ಭಾಷೆ ಹೆಚ್ಚು ಬಳಕೆಯಾಗುತ್ತದೆ’ ಎಂದು ತಿಳಿಸಿದರು.

‘ಮೈಸೂರಿನ ರಾಜವಂಶ ನಮ್ಮ ನಡುವೆ ಇರುವ ಜೀವಂತ ಪರಂಪರೆ. ಇದನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗುವುದು
ನಮ್ಮ ಜವಾಬ್ದಾರಿ. ನಮ್ಮ ಪೂರ್ವಜರು ಕಟ್ಟಿದ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT