ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ; ಬೆಳೆ ಬೆಳವಣಿಗೆ ಕುಂಠಿತ

Last Updated 8 ಜುಲೈ 2017, 5:59 IST
ಅಕ್ಷರ ಗಾತ್ರ

ಸೇಡಂ: ಎರಡು ವಾರಗಳಿಂದ ತಾಲ್ಲೂಕಿನಾದ್ಯಂತ ಮಳೆ ಬಾರದೆ ಇರುವುದರಿಂದ ಮುಂಗಾರು ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ನಿರಂತರವಾಗಿ ಬೀಸುತ್ತಿರುವ ಗಾಳಿಯಿಂದ  ತೇವಾಂಶ ಕಡಿಮೆಯಾಗಿ, ಭೂಮಿ ಬಿರುಕು ಬಿಡುತ್ತಿದೆ. ಬೆಳೆಗಳ ಮಧ್ಯೆ ಬೆಳೆದ ಕಳೆಯನ್ನು ಎತ್ತಿನ ಎಡೆ ಹೊಡೆಯುವುದರ ಮೂಲಕ ತೆಗೆಯುಲ್ಲಿ ರೈತರು ನಿರತರಾಗಿದ್ದಾರೆ.

ತಾಲ್ಲೂಕಿನ ಮಳಖೇಡ, ಆಡಕಿ, ಕೋಡ್ಲಾ, ಹಂದರಕಿ, ಮುಧೋಳ, ನೀಲಹಳ್ಳಿ, ಹೊಸಳ್ಳಿ, ಮೀನಹಾಬಾಳ, ತೆಲ್ಕೂರ, ಹಾಬಾಳ(ಟಿ), ಸಂಗಾವಿ, ಕೋಲ್ಕುಂದಾ, ರಿಬ್ಬನಪಲ್ಲಿ, ರಂಜೋಳ, ಜಾಕನಪಲ್ಲಿ, ಕಾನಗಡ್ಡಾ, ಮದನಾ, ದುಗನೂರ, ಶೇಕಲಾಸಪಲ್ಲಿ, ಖಂಡೆರಾಯನಪಲ್ಲಿ, ಭೂತ್ಪೂರ ಮತ್ತಿತರೆಡೆ  ರೈತರು ತಮ್ಮ ಹೊಲಗಳಲ್ಲಿ ಕಳೆ ತೆಗೆಯವುದರಲ್ಲಿ ತಲ್ಲೀನರಾಗಿದ್ದಾರೆ.

‘ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಲಾಗಿದ್ದು, 15–20 ದಿನಗಳ ವರೆಗೆ ಬೆಳೆ ಸಲೀಸಾಗಿ ಬೆಳೆದಿವೆ. ತೊಗರಿ ಬೆಳೆ 5–6 ಎಲೆ ಕಟ್ಟಿದರೆ, ಹೆಸರು–ಉದ್ದಿನ ಬೆಳೆಗಳ 4–5 ಎಲೆ ಕಟ್ಟಿ ನಿಂತಿವೆ. ಬಿತ್ತಿದ ನಂತರದಿಂದ ಇಲ್ಲಿಯವರೆಗೆ ಮಳೆ ಸುರಿದಿಲ್ಲ. ಈಗ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದ್ದು, ಕೆಲವೆಡೆ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ’ ಎಂದು ತಾಲ್ಲೂಕಿನ ನೀಲಹಳ್ಳಿ ಗ್ರಾಮದ ರೈತರಾದ ಶೇಖಪ್ಪ ಜಮಾದರ, ಮೋನಪ್ಪ ಕಂಬಾರ ಹೇಳಿದರು.

ಈ ವರ್ಷ ಮುಂಗಾರು ಮಳೆ ಆರಂಭದಲ್ಲಿ ಉತ್ತಮವಾಗಿ, ರೈತರಲ್ಲಿ ಸಂತಸ ಹೆಚ್ಚಿಸಿತ್ತು. ತೊಗರಿಯ ಬದಲಾಗಿ ರೈತರು ಹೆಸರು–ಉದ್ದು ಬಿತ್ತನೆ ಮಾಡಿದ್ದಾರೆ. ಈಗ ಮಳೆ ಕೈಕೊಟ್ಟಿರುವುದು ಅವರಲ್ಲಿ ನಿರಾಸೆ ಮೂಡಿಸಿದೆ. ಮೋಡ ಕವಿದ ವಾತಾವರಣ ಇದ್ದು, ಇನ್ನೆರಡು ದಿನಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿವಿಧೆಡೆ ತುಂತುರು ಮಳೆ
ಸೇಡಂ ತಾಲ್ಲೂಕಿನ ಆಡಕಿ, ಸಿಂಧನಮಡು, ಅಳ್ಳೊಳ್ಳಿ ಮತ್ತು ಮುಧೋಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಮಧ್ಯಾಹ್ನ ತುಂತುರು ಮಳೆಯಾಗಿದೆ. ‘ಮಳೆಯಿಂದ ಒಣಗುವ ಹಂತದಲ್ಲಿದ್ದ ಬೆಳೆಗೆ ಸ್ವಲ್ಪ ಪ್ರಮಾಣದಲ್ಲಿ ಪೂರಕವಾಗಿದೆ. ಇನ್ನೂ ಹೆಚ್ಚಿನ ಮಳೆಯಾದಲ್ಲಿ ಬೆಳೆಗೆ ಅನುಕೂಲವಾಗುತ್ತದೆ’ ಎಂದು ಮುಧೋಳ ಗ್ರಾಮದ ಅಶೋಕ ಫಿರಂಗಿ ಹೇಳಿದರು.

* *

ಈ ವರ್ಷ ಸಕಾಲಕ್ಕೆ ಬಿತ್ತನೆ ಮಾಡಿದ್ದು, ಬೆಳೆ ಉತ್ತಮವಾಗಿದೆ. ಈಗ ಮಳೆಯ ಅವಶ್ಯಕತೆ ಇದ್ದು, ಎರಡು ದಿನಗಳಲ್ಲಿ ಮಳೆಯಾದರೆ ಬೆಳೆ ಚೇತರಿಸಿಕೊಳ್ಳಲಿದೆ.
ಮೋನಪ್ಪ ಕಂಬಾರ
ನೀಲಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT