ಶುಕ್ರವಾರ, ಡಿಸೆಂಬರ್ 13, 2019
20 °C

ಬಾಲಕಿ ಅತ್ತಾಗ ಸುರಿಯುತ್ತದೆ ರಕ್ತ ಕಣ್ಣೀರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಲಕಿ ಅತ್ತಾಗ ಸುರಿಯುತ್ತದೆ ರಕ್ತ ಕಣ್ಣೀರು

ಹೈದರಾಬಾದ್‌: ಇಲ್ಲಿನ ಮೂರು ವರ್ಷ ವಯಸ್ಸಿನ ಬಾಲಕಿಯೊಬ್ಬಳು ಕಣ್ಣು, ಕಿವಿ, ಮೂಗುಗಳಿಂದ ರಕ್ತ ಸುರಿಯುವ ವಿರಳ ಕಾಯಿಲೆಗೆ ತುತ್ತಾಗಿ ಯಾತನೆ ಅನುಭವಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.

16 ತಿಂಗಳ ಹಿಂದೆ  ಅಹಾನಾ ಅಫ್ಜಲ್ ಎಂಬ ಬಾಲಕಿಯ ಮೂಗಿನಿಂದ ರಕ್ತ ಸೋರಲಾರಂಭವಾಗಿತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ, ಅತಿಯಾದ ಜ್ವರದಿಂದಾಗಿ ಹೀಗಾಗಿರಬಹುದು ಎಂದು ವೈದ್ಯರು ಭಾವಿಸಿದ್ದರು. ಆದರೆ, ಕ್ರಮೇಣ ಆಕೆಯ ಬಾಯಿ, ಕಣ್ಣು, ಕಿವಿ, ಗುಪ್ತಾಂಗಗಳಿಂದಲೂ ರಕ್ತ ಸೋರಲಾರಂಭಿಸಿತ್ತು ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಅಹಾನಾ ಅಫ್ಜಲ್‌ ವಿರಳ ಕಾಯಿಲೆ ಹೆಮಾಟಿಡೋಸಿಸ್‌ಗೆ ತುತ್ತಾಗಿರುವ ಸಾಧ್ಯತೆ ಇದೆ (ಹೆಮಾಟಿಡೋಸಿಸ್ ಎಂದರೆ ರಕ್ತ ಮಿಶ್ರಿತ ಬೆವರುವ ಸ್ಥಿತಿ). ಸುದೀರ್ಘ ಚಿಕಿತ್ಸೆಯಿಂದಾಗಿ ಇದೀಗ ರಕ್ತಸ್ರಾವದ ಪ್ರಮಾಣ ಕಡಿಮೆಯಾಗಿದೆ. ಆಕೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಆಕೆ ಇನ್ನೂ ಪುಟ್ಟ ಮಗುವಾಗಿರುವುದರಿಂದ ಚಿಕಿತ್ಸೆಯಿಂದ ದೈಹಿಕ ಆರೋಗ್ಯದ ಮೇಲೆ ಗಂಭೀರ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ. ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞ ವೈದ್ಯೆ ಡಾ. ಸಿರಿಶಾ ಹೇಳಿರುವುದನ್ನು ಎಎನ್‌ಐ ಟ್ವೀಟ್ ಮಾಡಿದೆ.

ಸರ್ಕಾರದ ನೆರವು ಕೋರಿದ ತಂದೆ: ‘ಮೂಗಿನಲ್ಲಿ ರಕ್ತ ಸುರಿಯುವ ಮೂಲಕ ಮಗಳಿಗೆ ಸಮಸ್ಯೆ ಆರಂಭವಾಗಿತ್ತು. ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದೇ ಎಂದು ವೈದ್ಯರನ್ನು ಕೇಳಿದರೆ ಅವರು ಉತ್ತರ ನೀಡುತ್ತಿಲ್ಲ. ಸದ್ಯ ವೈದ್ಯರು ಬೇರೆ ಆಸ್ಪತ್ರೆಗಳ ವೈದ್ಯರ ಜತೆ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮಗಳ ಚಿಕಿತ್ಸೆಗಾಗಿ ನೆರವು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರನ್ನು ಮನವಿ ಮಾಡುತ್ತಿದ್ದೇನೆ’ ಎಂದು ಬಾಲಕಿಯ ತಂದೆ ಮೊಹಮ್ಮದ್ ಅಫ್ಜಲ್ ತಿಳಿಸಿದ್ದಾರೆ. ಇದನ್ನೂ ಸಹ ಎಎನ್‌ಐ ಟ್ವೀಟ್ ಮಾಡಿದೆ.

ಪ್ರತಿಕ್ರಿಯಿಸಿ (+)