ಶನಿವಾರ, ಡಿಸೆಂಬರ್ 14, 2019
20 °C

ಕನ್ನಡಪರ ಸಂಘಟನೆಗಳಿಂದ ಬಿಜೆಪಿ ಸಂಸದರ ವಿರುದ್ಧ ಪ್ರತಿಭಟನೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡಪರ ಸಂಘಟನೆಗಳಿಂದ ಬಿಜೆಪಿ ಸಂಸದರ ವಿರುದ್ಧ ಪ್ರತಿಭಟನೆ ಬೆದರಿಕೆ

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಹಿಂದಿ ಬಳಕೆ ವಿಚಾರವಾಗಿ ಮೂವರು ಬಿಜೆಪಿ ಸಂಸದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಬೆದರಿಕೆಯೊಡ್ಡಿವೆ. ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ ಕುಮಾರ್ ಮತ್ತು ಸಂಸದ ಪಿ.ಸಿ. ಮೋಹನ್ ಅವರು ನಮ್ಮ ಮೆಟ್ರೊದಲ್ಲಿ ಮೂರು ಭಾಷೆ ನೀತಿ ಅಳವಡಿಲು ಬೆಂಬಲ ಸೂಚಿಸಿರುವ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳಿಂದ ಈ ಹೇಳಿಕೆ ಮೂಡಿಬಂದಿದೆ.

ಮೆಟ್ರೊ ನಿಲ್ದಾಣಗಳಲ್ಲಿರುವ ಹಿಂದಿ ಬೋರ್ಡುಗಳನ್ನು ಅಳಿಸಿಹಾಕಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ತಿಳಿಸಿದ್ದಾರೆ.

ಅನಂತ ಕುಮಾರ್, ಸದಾನಂದ ಗೌಡ ವಿರುದ್ಧ ಅಭಿಯಾನ ನಡೆಸುವುದಾಗಿ ವೇದಿಕೆಯ ಕಾರ್ಯದರ್ಶಿ ತಿಳಿಸಿದ್ದಾರೆ. ‘ಅವರೆಲ್ಲ (ಸಂಸದರು) ಹಿಂದಿ ಬಳಕೆಯನ್ನು ಬೆಂಬಲಿಸುತ್ತಿದ್ದಾರೆ. ಅವರ ವಿರುದ್ಧ ಅಭಿಯಾನ ನಡೆಸಿ ನಿಲುವು ಬದಲಿಸುವಂತೆ ಒತ್ತಡ ಹೇರಲಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ನಮ್ಮ ಮೆಟ್ರೊದಲ್ಲಿ ಹಿಂದಿ ಬೇಕೆಂದು ಸದಾನಂದ ಗೌಡ ಅವರು ಪಟ್ಟು ಹಿಡಿದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಗುರುವಾರ ನಡೆಸಿದ್ದ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿತ್ತು.

ಈ ಮಧ್ಯೆ, ನಮ್ಮ ಮೆಟ್ರೊದಲ್ಲಿ ಹಿಂದಿ ಬಳಕೆ ನಿಲ್ಲಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬಿಎಂಆರ್‌ಸಿಎಲ್‌ಗೆ (ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ) ಗುರುವಾರ ಪತ್ರ ಬರೆದಿತ್ತು. ‘ರಾಜ್ಯ ಸರ್ಕಾರದ ಎಲ್ಲ ಕಚೇರಿ ಮತ್ತು ಸಂಸ್ಥೆಗಳಲ್ಲಿ ದ್ವಿಭಾಷಾ ನೀತಿ ಅಳವಡಿಸಬೇಕೆಂಬ ಆದೇಶ 1963ರಿಂದಲೂ ಜಾರಿಯಲ್ಲಿದೆ. ಆದಾಗ್ಯೂ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2016ರ ಡಿಸೆಂಬರ್ 9ರಂದು ಮೂರು ಭಾಷಾ ನೀತಿ ಅಳವಡಿಸುವಂತೆ ನಿರ್ದೇಶನ ನೀಡಿತ್ತು. ನಮ್ಮ ಮೆಟ್ರೊದಲ್ಲಿ ಮೂರು ಭಾಷಾ ನೀತಿಯನ್ನು ರದ್ದುಪಡಿಸಬೇಕು’ ಎಂದು ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದರು.

ಇವುಗಳನ್ನೂ ಓದಿ...

* ನಮ್ಮ ಮೆಟ್ರೊದಲ್ಲಿ ಹಿಂದಿ ಬೇಕೆಂದು ಸದಾನಂದ ಗೌಡ ಪಟ್ಟು

ನಮ್ಮ ಮೆಟ್ರೊದಲ್ಲಿ ಹಿಂದಿ ಪ್ರವೇಶ ಪಡೆದ ಬಗೆ

ಪ್ರತಿಕ್ರಿಯಿಸಿ (+)