ಶುಕ್ರವಾರ, ಡಿಸೆಂಬರ್ 6, 2019
17 °C

ಮೋದಿ ಮೆಚ್ಚಿದ ಜ್ಯೋತಿ

Published:
Updated:
ಮೋದಿ ಮೆಚ್ಚಿದ  ಜ್ಯೋತಿ

ದೇಶದ 21ನೆಯ ಮುಖ್ಯ ಚುನಾವಣಾ ಆಯುಕ್ತರಾಗಿ ಅಚಲ್ ಕುಮಾರ್ ಜ್ಯೋತಿ ಅಧಿಕಾರ ವಹಿಸಿಕೊಂಡಿದ್ದಾರೆ. ಡಾ. ನಸೀಮ್ ಜೈದಿ ನಿವೃತ್ತಿಯಿಂದ ತೆರವಾದ ಸ್ಥಾನವನ್ನು ಅವರು ತುಂಬಿದ್ದಾರೆ. ಆರು ತಿಂಗಳ ಸೀಮಿತ ಅಧಿಕಾರಾವಧಿ ಅವರದು. 2018ರ ಜನವರಿ 17ಕ್ಕೆ ಈ ಹುದ್ದೆಯಿಂದ ನಿವೃತ್ತಿ ಹೊಂದಲಿದ್ದಾರೆ.

ಆಯೋಗದ ಕಾರ್ಯಭಾರ ಜ್ಯೋತಿಯವರಿಗೆ ಹೊಸದಲ್ಲ. ಎರಡು ವರ್ಷಗಳ ಹಿಂದೆಯೇ ಅವರನ್ನು ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಜೈದಿಯವರ ಜಾಗಕ್ಕೆ ಜ್ಯೋತಿ ಅವರನ್ನು ತರಬೇಕೆಂಬ ಇರಾದೆ ಕೇಂದ್ರ ಸರ್ಕಾರಕ್ಕೆ ಇತ್ತು. ಮೋದಿಯವರ ಆಯ್ಕೆಯಾಗಿ ಜ್ಯೋತಿ ಅವರನ್ನು ಈ ಹುದ್ದೆಗೆ ತರಲಾಗಿದೆ ಎನ್ನಲಾಗಿದೆ. ಐ.ಎ.ಎಸ್. ಅಧಿಕಾರಿಯಾಗಿದ್ದ ಜ್ಯೋತಿ ಗುಜರಾತ್ ಕಾಡರ್‌ಗೆ ಸೇರಿದವರು.

ತಮ್ಮ ವೃತ್ತಿ ಬದುಕಿನ ಎಲ್ಲ ವರ್ಷಗಳನ್ನೂ ಆ ರಾಜ್ಯದ ಸೇವೆಯಲ್ಲಿಯೇ ಕಳೆದವರು. ಕಾಂಡ್ಲ ಪೋರ್ಟ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲ ಕಾಲ ಕೇಂದ್ರದ ಸೇವೆಯಲ್ಲಿದ್ದದ್ದು ನಿಜ. ಕಾಂಡ್ಲ ಬಂದರು ಗುಜರಾತಿನಲ್ಲಿರುವ ಕಾರಣ ಆಗಲೂ ಅವರು ಆ ರಾಜ್ಯದಲ್ಲಿಯೇ ಇದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2001ರಿಂದ 2014ರ ತನಕ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು.

ಐ.ಎ.ಎಸ್. ಅಧಿಕಾರಿಯಾಗಿ ನಾನಾ ಹುದ್ದೆಗಳನ್ನು ನಿರ್ವಹಿಸಿ ಮುಖ್ಯಮಂತ್ರಿಯವರ ಮೆಚ್ಚುಗೆಗೆ ಪಾತ್ರರಾಗಿದ್ದ ಜ್ಯೋತಿ, 2010ರಿಂದ 2013ರ ನಡುವೆ ಮೂರು ವರ್ಷಗಳ ಕಾಲ ರಾಜ್ಯದ ಮುಖ್ಯಕಾರ್ಯದರ್ಶಿಯ ಹುದ್ದೆಯನ್ನು ನಿಭಾಯಿಸಿದರು. ಮೋದಿಯವರ ನೆಚ್ಚಿನ ‘ಗುಜರಾತ್ ಅಭಿವೃದ್ಧಿ ಮಾದರಿ’ಯನ್ನು ನೆಲಮಟ್ಟದಲ್ಲಿ ಕಾರ್ಯರೂಪಕ್ಕೆ ಇಳಿಸುವ ತಂಡದ ತಲೆಯಾಳಾಗಿ ಕೆಲಸ ಮಾಡಿದರು. ಪ್ರಚಾರದ ಮುಂಬೆಳಕಿನಿಂದ ದೂರ ಉಳಿದು, ಮೋದಿಯವರ ಮನದ ಇಂಗಿತ ಅರಿತು ನಿಷ್ಠೆಯಿಂದ ಕೆಲಸ ಮಾಡಿದ ಅಧಿಕಾರಿ ಅವರು. ಎ.ಕೆ.ಜ್ಯೋತಿ ಅವರನ್ನು ‘ಮೋದಿಯವರ ಎ.ಕೆ-47’ ಎಂದು ಪ್ರಾಸ ಕಟ್ಟಿ ಬಣ್ಣಿಸಿದ್ದ ದಿನಗಳಿದ್ದವು.

2013ರಲ್ಲಿ ನಿವೃತ್ತಗೊಂಡ ಅವರನ್ನು ಪ್ರಧಾನಿಯವರ ಇಚ್ಛೆಯ ಮೇರೆಗೆ 2015ರಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ತರಲಾಯಿತು. ಪಂಚಮಹಲ್ ಜಿಲ್ಲೆಯ ಗೋಧ್ರಾ ಬಹಳ ಹಿಂದಿನಿಂದಲೂ ಕೋಮು ಘರ್ಷಣೆಗಳ ತಾಣವಾಗಿತ್ತು. ಬಾರಿ ಬಾರಿಗೆ ಕರ್ಫ್ಯೂ ವಿಧಿಸಬೇಕಾಗುತ್ತಿತ್ತು. 1981ರಿಂದ 1985ರವರೆಗೆ ಪಂಚಮಹಲ್ ಜಿಲ್ಲಾಧಿಕಾರಿಯಾಗಿದ್ದ ಜ್ಯೋತಿ ಐದು ವರ್ಷಗಳಲ್ಲಿ ಒಮ್ಮೆಯೂ ಕರ್ಫ್ಯೂ ಜಾರಿ ಮಾಡಲಿಲ್ಲ.

ಕೋಮು ಸಾಮರಸ್ಯ ಸಾಧಿಸಿ ಶಾಂತಿ ಸ್ಥಾಪಿಸಿದ್ದ ಸಾಧನೆ ಅವರದಾಗಿತ್ತು. ಮುಖ್ಯಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿಗಳ ‘ಟೀಮ್ ಗುಜರಾತ್’ ತಂಡವನ್ನು ಮುನ್ನಡೆಸಿ ಮುಖ್ಯಮಂತ್ರಿಯ ಮನ ಗೆದ್ದಿದ್ದರು. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ ಜ್ಯೋತಿ ಕೆಲಸದ ವೈಖರಿಯನ್ನು ಅಂದಿನ ಮುಖ್ಯಮಂತ್ರಿ ಮೋದಿಯವರು ಬಹಿರಂಗವಾಗಿ ಹೊಗಳಿದ್ದುಂಟು.

ಮುಖ್ಯಮಂತ್ರಿಗೆ ಹತ್ತಿರವಿದ್ದರೆಂದು ಹೇಳಲಾಗಿದ್ದ ವಾಸ್ತುಶಿಲ್ಪಿ ಮಹಿಳೆಯೊಬ್ಬರ ಬೇಹುಗಾರಿಕೆ ಪ್ರಕರಣ ನಡೆದ ಆರೋಪ ಭುಗಿಲೆದ್ದದ್ದು ಅವರ ಕಾರ್ಯಕಾಲದಲ್ಲಿಯೇ. ವಿವಾದಗಳಿಂದ ಸ್ವತಃ ಅವರು ದೂರ ಉಳಿದವರು. ಆಯೋಗದ ಆಯುಕ್ತರಲ್ಲಿ ಒಬ್ಬರಾಗಿ ಕಳೆದ ಎರಡು ವರ್ಷಗಳಲ್ಲಿ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ, ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಹಾಗೂ ಗೋವಾ ವಿಧಾನಸಭೆಗಳ ಚುನಾವಣೆಗಳನ್ನು ನಡೆಸಿದ ಅನುಭವ ಅವರಿಗೆ ಉಂಟು.

ಎಲ್ಲರನ್ನೂ ಒಳಗೊಳ್ಳುವ, ನ್ಯಾಯಯುತ ಹಾಗೂ ಮುಕ್ತ ಚುನಾವಣೆಗಳನ್ನು ವಿದ್ಯುನ್ಮಾನ ಆಡಳಿತವಿಧಾನದ ನೆರವಿನಿಂದ ಯಶಸ್ವಿಯಾಗಿ ನಡೆಸುವುದು ತಮ್ಮ ಆದ್ಯತೆ ಎಂದು ಅವರು ಸಾರಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿ ಪ್ರತಿಷ್ಠೆಯನ್ನೇ ಪಣಕ್ಕೊಡ್ಡುವ ಮಹತ್ವದ ಚುನಾವಣೆಗಳ ಕಾಲದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಹೊಸ ಹುದ್ದೆಯನ್ನು ಜ್ಯೋತಿ ಅವರ ಹೆಗಲಿಗೆ ಏರಿಸಲಾಗಿದೆ.

ಆರೇ ತಿಂಗಳ ಅಧಿಕಾರಾವಧಿಯಲ್ಲಿ ಮಹತ್ತರ ಹೊಣೆಗಾರಿಕೆಯನ್ನು ಅವರು ನಿರ್ವಹಿಸಬೇಕಿದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಧಾನಿಯವರ ತವರು ರಾಜ್ಯ ಗುಜರಾತ್ ಮತ್ತು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬಯಸಿರುವ ಹಿಮಾಚಲ ವಿಧಾನಸಭಾ ಚುನಾವಣೆಗಳು ವರ್ಷಾಂತ್ಯದ ಹೊತ್ತಿಗೆ ನಡೆಯಲಿವೆ.

ಒಂದು ಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಚಾಣಕ್ಯ ರಾಜನೀತಿಗೆ ಸೆಡ್ಡು ಹೊಡೆದಿದ್ದ ಪಕ್ಷ ಆಮ್ ಆದ್ಮಿ ಪಾರ್ಟಿ ಇದೀಗ ಚುನಾವಣಾ ಆಯೋಗದ ಕಟಕಟೆಯಲ್ಲಿ ನಿಂತಿದೆ. ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಆಪಾದನೆಯನ್ನು ಹೊತ್ತಿರುವ 21 ಮಂದಿ ‘ಆಪ್’ ಶಾಸಕರ ತಲೆ ಮೇಲೆ ಅನರ್ಹತೆ ‘ಶಿಕ್ಷೆ’ಯ ಅಪಾಯದ ಕತ್ತಿ ತೂಗಿದೆ. ಮೋದಿ ಮತ್ತು ಕೇಜ್ರೀವಾಲ್ ನಡುವಣ ರಾಜಕೀಯ ವೈಮನಸ್ಯ ಮೇರೆ ಮೀರಿ ಹರಿದಿರುವ ಸನ್ನಿವೇಶದಲ್ಲಿ ಚುನಾವಣಾ ಆಯೋಗ ಈ ಸೂಕ್ಷ್ಮ ಪ್ರಕರಣವನ್ನು ತೀರ್ಮಾನಿಸಬೇಕಿದೆ.

ಜ್ಯೋತಿ ಮತ್ತು ಮತ್ತೊಬ್ಬ ಆಯುಕ್ತ ಒ.ಪಿ.ರಾವತ್ ಇಬ್ಬರೂ ಮೋದಿ ಸರ್ಕಾರದಿಂದ ನೇಮಕಗೊಂಡಿದ್ದು ಬಿಜೆಪಿ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದವರು. ಮೋದಿಯವರಿಗೆ ಹತ್ತಿರವಿದ್ದ ಜ್ಯೋತಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಮೀಪವರ್ತಿಯಾಗಿದ್ದ ರಾವತ್ ಅವರಿಂದ ತಮ್ಮ ಪಕ್ಷಕ್ಕೆ ನ್ಯಾಯ ದೊರೆಯುವ ಸಾಧ್ಯತೆ ಇಲ್ಲ ಎಂದು ಕೇಜ್ರೀವಾಲ್ ಇತ್ತೀಚೆಗೆ ಆಪಾದಿಸಿದ್ದರು.

ಈ ಆಪಾದನೆಯ ಹಿನ್ನೆಲೆಯಲ್ಲಿ ಆಪ್ ಶಾಸಕರ ಪ್ರಕರಣದ ವಿಚಾರಣೆಯಿಂದ ರಾವತ್ ಹಿಂದೆ ಸರಿದಿದ್ದಾರೆ. ಆದರೆ ಜ್ಯೋತಿ ಅವರು ರಾವತ್ ದಾರಿಯನ್ನು ತುಳಿಯಲಿಲ್ಲ. ‘ನನ್ನ ಕರ್ತವ್ಯವನ್ನು ಕಾಯಿದೆ ಕಾನೂನುಗಳ ಪ್ರಕಾರ ಮುಕ್ತ ಮತ್ತು ನ್ಯಾಯಯುತವಾಗಿ ನಿರ್ವಹಿಸುತ್ತಿದ್ದೇನೆ’ ಎಂಬುದು ಅವರ ಪ್ರತಿಕ್ರಿಯೆ.

ಮುಖ್ಯಚುನಾವಣಾ ಆಯುಕ್ತರ ನೇಮಕಕ್ಕೆ ನಿರ್ದಿಷ್ಟ ಕಾನೂನುಗಳನ್ನು ಯಾಕೆ ರಚಿಸಿಲ್ಲ ಎಂಬ ಪ್ರಶ್ನೆಯನ್ನು ಈ ನಡುವೆ ಸುಪ್ರೀಂ ಕೋರ್ಟ್ ಎತ್ತಿದೆ. ಜ್ಯೋತಿ ನೇಮಕದ ಸರ್ಕಾರಿ ಆದೇಶ ಹೊರಬಿದ್ದ ಮರುದಿನವೇ ನ್ಯಾಯಾಲಯ ಈ ಪ್ರಶ್ನೆ ಕೇಳಿದ್ದು ಕಾಕತಾಳೀಯವೇ ಇದ್ದೀತು.

ಸಂವಿಧಾನದ 324(2)ನೆಯ ಕಲಮಿನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಆಯುಕ್ತರ ನೇಮಕದ ಪ್ರಸ್ತಾಪವಿದೆ. ಸೂಕ್ತ ಕಾನೂನುಗಳ ಪ್ರಕಾರವೇ ಈ ನೇಮಕಗಳನ್ನು ಮಾಡಬೇಕೆಂದೂ ಸಂವಿಧಾನದಲ್ಲಿ ವಿಧಿಸಲಾಗಿದೆ. ಆದರೆ ಈವರೆಗೆ ಸಂಬಂಧಪಟ್ಟ ಕಾನೂನುಗಳನ್ನು ರಚಿಸಿಲ್ಲ ಯಾಕೆ ಎಂದು ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಕೇಳಿದೆ.

ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳನ್ನೂ ತಟಸ್ಥ ನಿಲುವಿನಿಂದ ನೋಡುವ ಮುಖ್ಯ ಆಯುಕ್ತ ಮತ್ತು ಆಯುಕ್ತರನ್ನು ಹೊಂದಿರತಕ್ಕದ್ದು. ಅವರನ್ನು ನೇಮಕ ಮಾಡುವ ಕಾನೂನನ್ನು ಸಂಸತ್ತು ಈವರೆಗೆ ರೂಪಿಸಿಲ್ಲ. ಕಾಲ ಕಾಲಕ್ಕೆ ಅರ್ಹರನ್ನು ನೇಮಕ ಮಾಡಿಕೊಂಡು ಬರಲಾಗಿದೆ ಎಂಬ ಕೇಂದ್ರ ಸರ್ಕಾರದ ವಿವರಣೆ ಸಾಲದು ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಜ್ಯೋತಿಯವರ ವ್ಯಕ್ತಿಗತ ಬದುಕಿನ ಕುರಿತು ಹೆಚ್ಚು ವಿವರಗಳು ಲಭ್ಯವಿಲ್ಲ. ಪಂಜಾಬಿನ ಜಲಂಧರ್‌ನ ಮಿಠ್ಠಾಪುರ ಇವರ ಮೂಲಸ್ಥಾನ. ತಂದೆ ಕಿಶೋರಚಂದ್ ಜ್ಯೋತಿ ದೆಹಲಿಯ ಸೇನಾ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ತಾಯಿ ಸುಹಾಗರಾಣೀ ಜ್ಯೋತಿ ಗೃಹಿಣಿ. ಅಚಲ್ ಕುಮಾರ್ ಜನ್ಮ ಮತ್ತು ಶಿಕ್ಷಣ ದಿಲ್ಲಿಯಲ್ಲೇ ಪೂರ್ಣಗೊಂಡಿತು. 

ಪ್ರತಿಕ್ರಿಯಿಸಿ (+)