ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ, ಉಳ್ಳಾಲ ಪ್ರಕ್ಷುಬ್ಧ

ಶರತ್‌ ಶವಯಾತ್ರೆ ವೇಳೆ ಕಲ್ಲು ತೂರಾಟ
Last Updated 8 ಜುಲೈ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಶವಯಾತ್ರೆ ವೇಳೆ ಶನಿವಾರ ಬಂಟ್ವಾಳ ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ಕಲ್ಲು ತೂರಾಟ ನಡೆದಿದ್ದು, ಹತ್ತು ಜನರನ್ನು ಬಂಧಿಸಲಾಗಿದೆ.

ಈ ನಡುವೆ ರಾತ್ರಿ ವೇಳೆ ಉಳ್ಳಾಲ ಹೊರವಲಯದ ಕುತ್ತಾರು ರಾಣಿಪುರ ಸಮೀಪದ ಕೋಟ್ರಗುತ್ತು ನಿವಾಸಿ ರಂಜಿತ್‌ (24)  ಎಂಬಾತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ರಂಜಿತ್‌ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಪಲ್ಸರ್‌ ಬೈಕ್‌ನಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಂಜಿತ್‌ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅವರೇ ಬೈಕ್‌ ಚಾಲನೆ ಮಾಡಿಕೊಂಡು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ವೇಷಮಯ ವಾತಾವರಣವಿದೆ. ಬಿ.ಸಿ.ರೋಡ್‌ನಲ್ಲಿರುವ ಲಾಂಡ್ರಿಯ ಎದುರಿನಲ್ಲೇ ಶರತ್‌ ಅವರಿಗೆ ಮಂಗಳವಾರ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದರು.

ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲು ಮಾಡಿದ್ದು, ಶುಕ್ರವಾರ ಸಂಜೆ ಮೃತಪಟ್ಟಿದ್ದರು. ಪೊಲೀಸ್‌ ಸರ್ಪಗಾವಲಿನ ನಡುವೆ ಶನಿವಾರ ಬೆಳಿಗ್ಗೆ ಆಸ್ಪತ್ರೆಯಿಂದ ಶವವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶವವನ್ನು ಹೊತ್ತ ವಾಹನ ಬೆಳಿಗ್ಗೆ 10.15ಕ್ಕೆ ಆಸ್ಪತ್ರೆ ಯಿಂದ ಹೊರಟಿತು.

ಅಷ್ಟರಲ್ಲಾಗಲೇ ಆಸ್ಪತ್ರೆ ಆವರಣಕ್ಕೆ ಬಂದಿದ್ದ ಸಂಘ ಪರಿವಾರದ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಕಪ್ಪು ಬಾವುಟ ಅಳವಡಿಸಿದ ಕಾರು, ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿದರು.

ಶವಯಾತ್ರೆ ನಗರದ ನಂತೂರು ವೃತ್ತವಾಗಿ ಪಡೀಲ್‌, ಕಣ್ಣೂರು, ಅಡ್ಯಾರ್‌, ಫರಂಗಿಪೇಟೆ, ತುಂಬೆ  ಮಾರ್ಗವಾಗಿ ಬಿ.ಸಿ.ರೋಡ್‌ ತಲುಪಿತು. ಒಂದು ಕಿಲೋಮೀಟರ್‌ಗೂ ಹೆಚ್ಚು ಮೆರವಣಿಗೆ ಇತ್ತು. ಪಡೀಲ್‌ನಿಂದ ದಾರಿಯುದ್ದಕ್ಕೂ ಕಾದು ನಿಂತಿದ್ದ ಸಂಘ ಪರಿವಾರದ ಕಾರ್ಯಕರ್ತರು ಮೆರವಣಿಗೆಯನ್ನು ಸೇರಿಕೊಂಡರು. ಇದರಿಂದ ಉದ್ದನೆಯ ಸಾಲು ಬೆಳೆಯುತ್ತಾ ಹೋಯಿತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೆರವಣಿಗೆ ಬಿ.ಸಿ.ರೋಡ್‌ ಜಂಕ್ಷನ್‌ ತಲುಪಿತು.

ಕಲ್ಲು ತೂರಾಟ: ಶವ ಹೊತ್ತ ವಾಹನ ಬಿ.ಸಿ.ರೋಡ್‌ ಜಂಕ್ಷನ್‌ನಲ್ಲಿ ಇರುವಾಗ ಕೊನೆಯ ಸಾಲು ಬಿ.ಸಿ.ರೋಡ್‌ ಸಮೀಪದ ಕೈಕಂಬದಲ್ಲಿ ಇತ್ತು. ಕೈಕಂಬ ಮತ್ತು ಬಿ.ಸಿ.ರೋಡ್‌ ನಡುವಿನ ಪರ್ಲಯಾ ಎಂಬಲ್ಲಿ  ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇನೋಳಿ ನಿವಾಸಿ ಲೋಹಿತ್‌ ಎಂಬುವವರು ಕಲ್ಲೇಟಿನಿಂದ ಗಾಯಗೊಂಡರು.

ತಕ್ಷಣವೇ ಮೆರವಣಿಗೆಯಲ್ಲಿದ್ದವರು ಸುತ್ತಮುತ್ತಲಿನ ಮನೆಗಳು, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರ ಸೇರಿದಂತೆ ಹಲವು ವಾಣಿಜ್ಯ ಕಟ್ಟಡಗಳು, ಮನೆಗಳು ಮತ್ತು ಹತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.

ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹೆಚ್ಚುವರಿ ಪೊಲೀಸ್ ಪಡೆ ಸಿಬ್ಬಂದಿ, ಕಲ್ಲು ತೂರಾಟ ನಡೆಸಿದ ಸಂಶಯದ ಮೇಲೆ ಹಲವರನ್ನು ವಶಕ್ಕೆ ಪಡೆದರು. ನಂತರ ಶವಯಾತ್ರೆ ಸಜಿಪ ತಲುಪುವ ಮಾರ್ಗಮಧ್ಯೆ ಮತ್ತೆ ಮೂರು ಬಾರಿ ಕಲ್ಲು ತೂರಾಟ ನಡೆಯಿತು. ಇದರಿಂದ ಮತ್ತೆ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಹತ್ತು ಮಂದಿ ಬಂಧನ: ಕಲ್ಲು ತೂರಾಟ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌, ‘ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿದ್ದು, ಹತ್ತು ಜನರನ್ನು ಬಂಧಿಸಿದ್ದೇವೆ. ಶವಯಾತ್ರೆಯ ಸಂಪೂರ್ಣ ವಿವರವನ್ನು ವಿಡಿಯೊ ರೆಕಾರ್ಡಿಂಗ್‌ ಮಾಡಿಸಿದ್ದೇವೆ. ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸುತ್ತೇವೆ’ ಎಂದರು.

ಶವಯಾತ್ರೆ ವೇಳೆ ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸಲು 1,300 ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಶವಯಾತ್ರೆ ಸಂದರ್ಭದಲ್ಲಿ ಉಂಟಾದ ಅಹಿತಕರ ಘಟನೆಗಳ ನಂತರ ತಾಲ್ಲೂಕಿನಾದ್ಯಂತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 20 ಸ್ಥಳಗಳಲ್ಲಿ ನಾಕಾಬಂದಿ ವ್ಯವಸ್ಥೆ ಮಾಡಿದ್ದು, ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಮಾರಕಾಸ್ತ್ರ ಮತ್ತು ಕಲ್ಲು ಹೊಂದಿರುವ ವಾಹನಗಳನ್ನು ವಶಕ್ಕೆ ಪಡೆದು, ಅದರಲ್ಲಿದ್ದವರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರು.
*
ದರ್ಶನ ಪಡೆದ ಪ್ರಭಾಕರ ಭಟ್‌
ಶವಯಾತ್ರೆ ಬಿ.ಸಿ.ರೋಡ್‌ ತಲುಪಿದಾಗ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅಲ್ಲಿಗೆ ಬಂದು ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. ಆರ್‌ಎಸ್‌ಎಸ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಸಂಘ ಪರಿವಾರದ ಹಲವು ಮುಖಂಡರು ಶವಯಾತ್ರೆಯಲ್ಲಿ ಭಾಗಿಯಾಗಿದ್ದರು.
*
ತೋಟದಲ್ಲಿ ಅಂತ್ಯಕ್ರಿಯೆ
ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಂಘ ಪರಿವಾರದ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. 3.30ಕ್ಕೆ ಮನೆಯ ಎದುರಿನ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರ ಕುಟುಂಬಕ್ಕೆ ಆರ್‌ಎಸ್ಎಸ್‌ ₹ 10 ಲಕ್ಷ ನೆರವು  ಘೋಷಿಸಿದೆ.
*
ಮತ್ತೊಬ್ಬ ಯುವಕನಿಗೆ  ಇರಿತ?
ಮಂಗಳೂರು:
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇರ್ವತ್ತೂರು ಪದವು ನಿವಾಸಿ ರಿಯಾಝ್‌ (26) ಎಂಬ ಯುವಕನ ಕುತ್ತಿಗೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದು, ನಗರದ ಹೈಲ್ಯಾಂಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೊದಲು ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ತೆರಳಿದ್ದ ರಿಯಾಝ್‌, ಅಲ್ಲಿಂದ ಹೈಲ್ಯಾಂಡ್‌ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ. ಈ ಯುವಕ ಚೂರಿ ಇರಿತದಿಂದ ಗಾಯಗೊಂಡಿರುವ ಸಾಧ್ಯತೆ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ, ‘ಶರತ್‌ ಶವಯಾತ್ರೆ ಸಾಗುತ್ತಿದ್ದಾಗ ಕೈಕಂಬದಲ್ಲಿ ಕಲ್ಲು ತೂರಾಟ ನಡೆದಿದೆ. ಅಲ್ಲಿಯೇ ತನಗೆ ಚೂರಿಯಿಂದ ಇರಿಯಲಾಗಿದೆ ಎಂದು ರಿಯಾಝ್‌ ಎಂಬಾತ ಹೇಳಿದ್ದಾನೆ.

ಆದರೆ, ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅಲ್ಲಿ ಅಂತಹ ಘಟನೆ ನಡೆದಿಲ್ಲ. ಈ ಯುವಕ ಕಲ್ಲು ತೂರಾಟದ ವೇಳೆ ಒಡೆದ ಗಾಜಿನ ತುಣುಕು ಚುಚ್ಚಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಇದೆ’ ಎಂದರು. ರಿಯಾಝ್‌ ನೀಡಿರುವ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುವುದು. ಎಲ್ಲ ಆಯಾಮಗ ಳಿಂದಲೂ ತನಿಖೆ ನಡೆಯುತ್ತದೆ ಎಂದರು.
*
ಬಂಟ್ವಾಳ ತಾಲ್ಲೂಕಿನಲ್ಲಿ ನಡೆದ ಘಟನಾವಳಿಗಳು
ಮೇ 26: ಕಲ್ಲಡ್ಕದಲ್ಲಿ ಯುವಕರಿಗೆ ಚೂರಿ ಇರಿತ
ಜೂನ್‌ 13: ಕಲ್ಲಡ್ಕದಲ್ಲಿ ಘರ್ಷಣೆ, ಚೂರಿ ಇರಿತ
ಜೂನ್‌ 20: ತುಂಬೆ ಬಳಿ ಉನೈದ್‌ ಎಂಬ ಯುವಕನ ಮೇಲೆ ದಾಳಿ
ಜೂನ್‌ 21: ಬೆಂಜನಪದವು ಬಳಿ ಎಸ್‌ಡಿಪಿಐ ಕಾರ್ಯಕರ್ತ ಮೊಹಮ್ಮದ್ ಅಶ್ರಫ್‌ ಕೊಲೆ
ಜುಲೈ 4: ಬಿ.ಸಿ.ರೋಡ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಗೆ ಚೂರಿ ಇರಿತ
ಜುಲೈ 8: ಶರತ್‌ ಶವಯಾತ್ರೆ ವೇಳೆ ವಿವಿಧೆಡೆ ಕಲ್ಲು ತೂರಾಟ
*
ಯಾವುದೇ ಧರ್ಮದವರು ಕಾನೂನು ಕೈಗೆತ್ತಿಕೊಂಡು ಸಮಾಜದ ಶಾಂತಿಗೆ ಭಂಗ ಉಂಟುಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು
ಸಿದ್ದರಾಮಯ್ಯ,
ಮುಖ್ಯಮಂತ್ರಿ

*
‘ಶರತ್ ಹತ್ಯೆ ಪ್ರಕರಣ ಎನ್‌ಐಎಗೆ ವಹಿಸಿ’
ಬೆಂಗಳೂರು:
‘ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಕಾಂಗ್ರೆಸ್ಸಿನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಸಂಘ ಪರಿವಾರದ 20ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಅವರು ದೂರಿದರು.

‘ಬಂಟ್ವಾಳದಲ್ಲಿ ಶರತ್ ಮೇಲೆ ಹಲ್ಲೆ ನಡೆದು ಹಲವು ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿದ್ದು, ಅವರ ನೇತೃತ್ವದ ಸರ್ಕಾರ ಕೋಮುಗಲಭೆ ಹುಟ್ಟು ಹಾಕುತ್ತಿದೆ’ ಎಂದು ಆರೋಪಿಸಿದರು.

‘ಕರ್ನಾಟಕವನ್ನು ಕೇರಳದಂತೆ ಅರಾಜಕತೆಗೆ ತಳ್ಳುವ ಹುನ್ನಾರವನ್ನು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಮುಖ್ಯಮಂತ್ರಿ ಮಾಡುತ್ತಿದ್ದಾರೆ’ ಎಂದೂ ದೂರಿದರು.

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಫೇಸ್ ಬುಕ್‌ನಲ್ಲಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಪ್ರಭಾಕರ್ ಭಟ್ ಹಿಂದೂಗಳ ಪರವಾಗಿ ನಿಂತಿದ್ದಾರೆ. ಅವರ ಮೇಲಿನ ಬೆದರಿಕೆಗೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರ ಬೆಂಬಲವಿದೆ’ ಎಂದರು.

‘ಪ್ರಭಾಕರ್ ಭಟ್ ಮೇಲೆ ಕೊಲೆ ಪ್ರಕರಣ ದಾಖಲಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಒತ್ತಡ ಹೇರಿದ್ದಾರೆ. ಈ ವಿಷಯವನ್ನು ರಾಜ್ಯದ ಜನತೆ ಗಂಭೀರವಾಗಿ ಪರಿಗಣಿಸಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ’ ಎಂದರು.

ಪಿಎಫ್‌ಐ, ಕೆಎಫ್‌ಡಿ ಕೈವಾಡ: ‘ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆಗಳ ಕೈವಾಡವಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂರಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡಲು ಸಚಿವರಾದ ರಮಾನಾಥ ರೈ ಮತ್ತು ಯು.ಟಿ. ಖಾದರ್‌ ಕಾರಣ. ಅವರಿಬ್ಬರನ್ನೂ ಸಂಪುಟದಿಂದ ಕೈಬಿಡಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT