ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ನವಿಲು ಕುಣಿಯುತ್ತಿವೆ ನೋಡಾ...

‘ಮುಂಗಾರು ಮಳೆ’ ಹೆಚ್ಚಿಸಿದ ರಾಷ್ಟ್ರಪಕ್ಷಿಗಳ ಕಲರವ
Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಪರಿಸರದಲ್ಲಿ ಈಗ ನವಿಲುಗಳದ್ದೇ ದರ್ಬಾರ್‌. ಮುಂಗಾರು ಮಳೆ ಚುರುಕುಗೊಂಡ ನಂತರ ನವಿಲುಗಳ ಓಡಾಟ ಹೆಚ್ಚಾಗಿದೆ. ಹಂಪಿ ಸುತ್ತಲಿನ ಬೆಟ್ಟ– ಗುಡ್ಡ, ಸ್ಮಾರಕಗಳು ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೆಲ್ಲ ನವಿಲುಗಳ ಕಲರವ ಜೋರಾಗಿದೆ.

ಗೋವುಗಳ ಹಿಂಡಿನ ಮಧ್ಯೆ ಬಿಂಕದಿಂದ ಓಡಾಡುತ್ತಾ ಗಮನ ಸೆಳೆಯುತ್ತಿವೆ. ಕಡ್ಡಿರಾಂಪುರ ಹಾಗೂ ಕಮಲಾಪುರದಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮಧ್ಯೆ ಗುಂಪು, ಗುಂಪಾಗಿ ನವಿಲುಗಳು ಬೀಡು ಬಿಟ್ಟಿವೆ. ಅದರಲ್ಲೂ ಅಕ್ಕ –ತಂಗಿಯರ ಗುಡ್ಡ, ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗದ ಸುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ನವಿಲುಗಳು ಕಾಣಿಸಿಕೊಳ್ಳುತ್ತಿವೆ.

ಭಯ, ಅಳುಕಿಲ್ಲದೆ ಇಡೀ ಹಂಪಿ ಪರಿಸರದಲ್ಲಿ ಮುಕ್ತವಾಗಿ ಓಡಾಡುತ್ತಿವೆ. ಸ್ಮಾರಕಗಳನ್ನು ನೋಡಲು ಬರುವ ಪ್ರವಾಸಿಗರು ನವಿಲುಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೆಲವರು ಅವುಗಳ ಸನಿಹಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರೆ, ಇನ್ನೂ ಕೆಲವರು ಕ್ಯಾಮೆರಾಗಳಲ್ಲಿ ಸೆರೆ ಹಿಡಿದುಕೊಳ್ಳುತ್ತಿದ್ದಾರೆ. ಹವ್ಯಾಸಿ ಛಾಯಾಗ್ರಾಹಕರು, ಪಕ್ಷಿ ಪ್ರೇಮಿಗಳೂ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಹಂಪಿಗೆ ಬರುತ್ತಿದ್ದಾರೆ.

‘ಮಳೆ ಬಂದರೆ ನವಿಲುಗಳಿಗೆ ಸಂಭ್ರಮ, ಕಳೆದ ಕೆಲವು ದಿನಗಳಿಂದ ಹಂಪಿ ಸುತ್ತ–ಮುತ್ತ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ನವಿಲುಗಳು ಎಲ್ಲೆಡೆ ಮುಕ್ತವಾಗಿ ಓಡಾಡುತ್ತಿವೆ. ಜನರ ಓಡಾಟ ಕಡಿಮೆ ಇರುವ ಸ್ಥಳಗಳಲ್ಲಂತೂ ಗರಿ ಬಿಚ್ಚಿ ಕುಣಿಯುತ್ತಿವೆ’ ಎನ್ನುತ್ತಾರೆ ಹವ್ಯಾಸಿ ಛಾಯಾಗ್ರಾಹಕ ಮಾರುತಿ ಪೂಜಾರ್‌.

‘ಮಳೆಗಾಲ ಆರಂಭ ಆಗಿರುವುದರಿಂದ ಅವುಗಳಿಗೆ ಯಥೇಚ್ಛವಾಗಿ ಆಹಾರ ಸಿಗುತ್ತಿದೆ. ಹುಳು, ಚಿಟ್ಟೆ, ಕಪ್ಪೆಗಳು ಸಿಗುತ್ತಿವೆ. ಅವುಗಳ ಸಂತತಿಯಲ್ಲಿ ಗಣನೀಯ ವೃದ್ಧಿ ಆಗಿರುವುದು ಸಂತಸದ ವಿಚಾರ. ಈಗಲೂ ಹಂಪಿ ಪರಿಸರ ಚಿರತೆ, ಮೊಲ, ನವಿಲು, ಮುಳ್ಳು ಹಂದಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ’ ಎನ್ನುತ್ತಾರೆ ಪಕ್ಷಿ ತಜ್ಞ ಸಮದ್‌ ಕೊಟ್ಟೂರು.

**

ಈ ಹಿಂದೆ ನವಿಲುಗಳನ್ನು ಬೇಟೆ ಆಡಲಾಗುತ್ತಿತ್ತು. ಅದಕ್ಕೆ ಕಡಿವಾಣ ಬಿದ್ದ ನಂತರ ಹಂಪಿಯಲ್ಲಿ ಅವುಗಳ ಸಂತತಿ ಹೆಚ್ಚಿದೆ. ಇದು ಖುಷಿಯ ವಿಚಾರ.
-ಸಮದ್‌ ಕೊಟ್ಟೂರು, ಪಕ್ಷಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT