ಭಾನುವಾರ, ಡಿಸೆಂಬರ್ 8, 2019
21 °C
ನೊಗಕ್ಕೆ ಹೆಗಲುಕೊಟ್ಟ ಪುತ್ರಿಯರು

ಅನ್ನದಾತನಿಗೆ ‘ಎತ್ತು’ಗಳಾದ ಹೆಣ್ಣು ಮಕ್ಕಳು!

ಪಿಟಿಐ Updated:

ಅಕ್ಷರ ಗಾತ್ರ : | |

ಅನ್ನದಾತನಿಗೆ ‘ಎತ್ತು’ಗಳಾದ ಹೆಣ್ಣು ಮಕ್ಕಳು!

ಸೆಹೋರ್‌ (ಮಧ್ಯಪ್ರದೇಶ): ವಿಪರೀತ ಬಡತನದಿಂದ  ಎತ್ತುಗಳನ್ನು ಖರೀದಿಸಲೂ ಈ ರೈತನ ಬಳಿ ಹಣವಿಲ್ಲ. ಆದರೆ ಜಮೀನು ಉಳಬೇಕು, ಬೆಳೆ ಬೆಳೆಯಬೇಕು ಎಂಬ ಬಯಕೆ. ಅಪ್ಪನ ಈ ಆಸೆಗೆ ಕೈಜೋಡಿಸಿದವರು ಆತನ ಇಬ್ಬರು ಹೆಣ್ಣು ಮಕ್ಕಳು.   ಜಮೀನಿನಲ್ಲಿ ನೇಗಿಲ ನೊಗಕ್ಕೆ ಅವರು ಹೆಗಲುಕೊಟ್ಟಿದ್ದಾರೆ.

ಇಂತಹ  ಪ್ರಕರಣಕ್ಕೆ ಸಾಕ್ಷಿಯಾಗಿರುವುದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ತವರು ಜಿಲ್ಲೆ. ಜತೆಗೆ ಇದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ  ಸ್ವರಾಜ್‌ ಅವರು ಪ್ರತಿನಿಧಿಸುವ ವಿದಿಶಾ  ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರವಿರುವ ಬಸ್ತಾನ್‌ಪುರ ಪಂಗಾಗಿ ಎಂಬ ಹಳ್ಳಿಯಲ್ಲಿ 42 ವರ್ಷದ ರೈತ ಸರ್ದಾರ್‌ ಬರೇಲಾ ಅವರು 13 ವರ್ಷದ ರಾಧಾ ಮತ್ತು 9 ವರ್ಷದ ಕುಂತಿಯನ್ನು ಬಳಸಿಕೊಂಡು ಹೊಲ ಉಳುವ ವಿಡಿಯೊ ದೃಶ್ಯಗಳು ವೈರಲ್‌ ಆಗಿವೆ. ವಿಡಿಯೊ ಬಯಲಾಗುತ್ತಿದ್ದಂತೆ ಮುಜುಗರಕ್ಕೊಳಗಾದ ಜಿಲ್ಲಾಡಳಿತ, ಕಂದಾಯ ಅಧಿಕಾರಿಯನ್ನು  ರೈತನ  ಬಳಿಗೆ  ಕಳುಹಿಸಿದೆ. ಮಕ್ಕಳನ್ನು ದುಡಿಮೆಗೆ ಬಳಸ‌ಬೇಡಿ ಎಂದು ಮನವಿ ಮಾಡಿದೆ.

ಬರೇಲಾ ಅವರು ಈಗಷ್ಟೇ  ಮಕ್ಕಳನ್ನು ಎತ್ತುಗಳ ಬದಲಿಗೆ ಬಳಸು ತ್ತಿಲ್ಲ. ಕಳೆದ ಎರಡು ವರ್ಷದಿಂದಲೂ ಅವರು ಈ ಕೆಲಸಕ್ಕೆ ತಮ್ಮ ಮಕ್ಕಳನ್ನು ಬಳಸುತ್ತಿದ್ದಾರೆ ಎಂಬ ಆತಂಕಕಾರಿ  ಮಾಹಿತಿ ಹೊರಬಿದ್ದಿದೆ.

ಹೊಲದಲ್ಲಿ ದುಡಿಯುವ ಈ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹ ಬಡತನ ಅಡ್ಡಿಯಾಗಿದೆ. ಸರ್ಕಾರ ರೈತರಿಗಾಗಿ ಜಾರಿಗೊಳಿಸಿದ ಯಾವುದೇ ಯೋಜನೆಯೂ ಈ ಕುಟುಂಬಕ್ಕೆ ತಲುಪಿಲ್ಲ.

ಮಧ್ಯಪ್ರದೇಶವು ಅತಿ ಹೆಚ್ಚು ರೈತರ ಆತ್ಮಹತ್ಯೆಗಳಿಗೆ ಹೆಸರಾಗಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಅಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಮಂದಸೌರ್‌ನಲ್ಲಿ ಕಳೆದ ತಿಂಗಳು ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡೇಟಿಗೆ ಐವರು ರೈತರು ಬಲಿಯಾಗಿದ್ದರು.

* ರೈತ ಬರೇಲಾ ಅವರ ಕಷ್ಟ ತಿಳಿದು ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿದ್ದೇವೆ. ಅವರಿಗೆ ಸರ್ಕಾರದ ಯೋಜನೆಯ ನೆರವು ದೊರಕಿಸಿಕೊಡಲಾಗುವುದು

–ಆಶಿಶ್‌ ಶರ್ಮಾ, ಜಿಲ್ಲಾ ಸಂಪರ್ಕ ಅಧಿಕಾರಿ, ಸೆಹೋರ್‌

ಪ್ರತಿಕ್ರಿಯಿಸಿ (+)