ಶುಕ್ರವಾರ, ಡಿಸೆಂಬರ್ 6, 2019
17 °C
ಅಂಬೇಡ್ಕರ್‌ ನಿವಾಸ್‌, ವಾಜಪೇಯಿ ವಸತಿ ಯೋಜನೆ ಜಾರಿಗೆ ಸಕಲ ಸಿದ್ಧತೆ

ಬಡವರಿಗೆ 644 ಮನೆ ನಿರ್ಮಾಣ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡವರಿಗೆ 644 ಮನೆ ನಿರ್ಮಾಣ ಗುರಿ

ಮಂಡ್ಯ: ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ಸ್ವಂತ ಸೂರು ಕಲ್ಪಿಸಲು ನಗರಸಭೆ ವಿವಿಧ ವಸತಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು ಬಡವರ ಸ್ವಂತ ಸೂರಿನ ಕನಸು ನನಸಾಗಲಿದೆ.

2017–18ನೇ ಸಾಲಿನಲ್ಲಿ ಅಂಬೇಡ್ಕರ್‌ ನಿವಾಸ್‌ ಯೋಜನೆ ಅಡಿ ಪರಿಶಿಷ್ಟ ಜಾತಿ– ಪಂಗಡಗಳ  ವಸತಿ ರಹಿತರಿಗೆ 500 ಮನೆ ನಿರ್ಮಾಣ ಮಾಡಲು ನಗರಸಭೆ ಗುರಿ ಇಟ್ಟುಕೊಂಡಿದೆ. ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯ, ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರಿಗೆ 144 ಮನೆ ನಿರ್ಮಾಣ ಮಾಡುವ ಗುರಿ ನಗರಸಭೆಗೆ ಇದೆ. 

ಅಂಬೇಡ್ಕರ್‌ ವಸತಿ ಯೋಜನೆಯಡಿ ರಾಜ್ಯ ಸರ್ಕಾರ ₹ 1.8 ಲಕ್ಷ, ಕೇಂದ್ರ ಸರ್ಕಾರ ₹ 1.5 ಲಕ್ಷ ಸೇರಿ ಒಟ್ಟು ₹ 3.3 ಲಕ್ಷ ಧನಸಹಾಯ ಸಿಗಲಿದೆ. ವಾಜಪೇಯಿ ವಸತಿ ಯೋಜನೆಯಡಿ ರಾಜ್ಯ ಸರ್ಕಾರ ₹1.2 ಲಕ್ಷ, ಕೇಂದ್ರ ಸರ್ಕಾರದ ₹ 1.5 ಲಕ್ಷ ಸೇರಿ ಒಟ್ಟು ₹ 2.7 ಲಕ್ಷ ಧನಸಹಾಯ ಸಿಗಲಿದೆ.

ನಾಲ್ಕು ಹಂತ: ಎರಡೂ ಯೋಜನೆಗಳ ಫಲಾನುಭವಿಗಳಿಗೆ ನಾಲ್ಕು ಹಂತದಲ್ಲಿ ಹಣ ಬಿಡುಗಡೆಯಾಗಲಿದೆ. ಅಂಬೇಡ್ಕರ್‌ ಯೋಜನೆಯಲ್ಲಿ ತಳಪಾಯ, ಗೋಡೆ, ಚಾವಣಿ, ಪೂರ್ಣಗೊಳ್ಳುವ ಹಂತಕ್ಕೆ ತಲಾ ₹45,000 ಹಣ ಬಿಡುಗಡೆಯಾಗಲಿದೆ. ವಾಜಪೇಯಿ ವಸತಿ ಯೋಜನೆಯಲ್ಲಿ ಈ ನಾಲ್ಕೂ ಹಂತಗಳಿಗೆ ತಲಾ ₹ 30,000 ಹಣ ಬಿಡುಗಡೆ ಆಗಲಿದೆ.

ಸರ್ಕಾರದ ಈ ಯೋಜನೆಯ ಲಾಭ ದೊರೆಯಲು ನಿವಾಸಿಗಳು ಸ್ವಂತ ನಿವೇಶನ ಹೊಂದಿರಬೇಕು. ಇದರ ಜೊತೆಗೆ ನಗರಸಭೆ ಕೆಲ ನಿಯಮಗಳನ್ನು ಸೂಚಿಸಿದ್ದು ಆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.  ಪ್ರತಿ ಫಲಾನುಭವಿ ಬಳಿ ಬಿಪಿಎಲ್‌ ಚೀಟಿ ಕಡ್ಡಾಯವಾಗಿ ಇರಬೇಕು. ಈ ಯೋಜನೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳು 15 ವರ್ಷಗಳ ಕಾಲ ಮನೆಯನ್ನು ಯಾರಿಗೂ ಮಾರಾಟ ಮಾಡಕೂಡದು ಹಾಗೂ ಮನೆಯನ್ನು ಆಧಾರ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ.

‘ವಾರ್ಷಿಕ ₹ 87,600ಕ್ಕಿಂತ ಕಡಿಮೆ ಆದಾಯವುಳ್ಳ ಬಡವರು ಈ ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಿಕೊಳ್ಳಬಹುದು. ಶಿಥಿಲ, ಮಣ್ಣಿನ ಮನೆ, ಶೀಟ್‌ ಮನೆಗಳಲ್ಲಿ ಹಾಗೂ ತಾತ್ಕಾಲಿಕ ಮನೆಯಗಳಲ್ಲಿ ವಾಸಿಸುವ ಬಡವರು ಈ ಯೋಜನೆಗಳ ಲಾಭ ಪಡೆಯಬೇಕು’ ಎಂದು ನಗರಸಭೆ ಆಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

ಈ ವಸತಿ ಯೋಜನೆಗಳಡಿ ಮನೆ ನಿರ್ಮಿಸುವವರು ಕನಿಷ್ಠ 300 ಚದರ ಅಡಿಯಿಂದ 600 ಚದರ ಅಡಿವರೆಗೆ ಮಾತ್ರ ಮನೆ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ವಾಗಿ ಹಣ ಬಿಡುಗಡೆ ಮಾಡಲಿದ್ದು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ.

‘ಐದು ವರ್ಷಗಳಿಂದ ಗಾಂಧಿನಗರ ದಲ್ಲಿರುವ ಪಾಳು ಕಟ್ಟಡದಲ್ಲಿ ವಾಸ ಮಾಡುತ್ತಿದ್ದೇನೆ. ಆಧಾರ್‌ ಕಾರ್ಡ್, ಓಟಿನ ಕಾರ್ಡ್‌ ಇದೆ. ಆದರೂ ನಮಗೆ ಮನೆ ಸಿಕ್ಕಿಲ್ಲ. ಈಗ ನಗರಸಭೆಗೆ ಅರ್ಜಿ ಹಾಕುತ್ತೇನೆ’ ಎಂದು ಗಾಂಧಿನಗರದ ಮುನಿಯಮ್ಮ ಹೇಳಿದರು.

‘ಇವು ನಗರಸಭೆಯ ಮಹಾತ್ವಕಾಂಕ್ಷಿ ಯೋಜನೆಗಳಾಗಿವೆ. ಗುಡಿಸಲು ಮುಕ್ತ ನಗರ ನಿರ್ಮಾಣ ಮಾಡಲು ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)