ಶನಿವಾರ, ಡಿಸೆಂಬರ್ 7, 2019
25 °C

ಬಿರಿದ ಹೂವು, ಹರಿದ ಬರ

Published:
Updated:
ಬಿರಿದ ಹೂವು, ಹರಿದ ಬರ

ಸುಗಂಧ ಬೀರುತ್ತ, ಹೂಮಾಲೆ ಅಲಂಕರಿಸುವ ಹೂವು ಸುಗಂಧರಾಜ. ಈ ಹೂವಿಗೆ ವ್ಯಾಪಕ ಬೇಡಿಕೆ ಇದೆ. ಸುಗಂಧರಾಜ ಹೂವನ್ನು ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಹೀಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆಯುವುದು ರೂಢಿ. ಆದರೆ, ವಿಜಯಪುರ ಜಿಲ್ಲೆಯಂತಹ ಬಿಸಿಲ ನಾಡಲ್ಲಿಯೂ ರೈತ ಮಹಿಳೆ ವಿಜಯಲಕ್ಷ್ಮಿ ಈ ಹೂವನ್ನು ಬೆಳೆದಿದ್ದಾರೆ.

ವಿಜಯಪುರ ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯವೇ ಮೂರು ವರ್ಷಗಳಿಂದ ಬರದ ಬೇಗುದಿಗೆ ಸಿಲುಕಿದೆ. ಒಂದೆಡೆ ಈರುಳ್ಳಿ, ತೊಗರಿ ಬೆಳೆದ ರೈತರು ದರ ಕುಸಿತದ ಬಿರುಗಾಳಿಗೆ ಸಿಕ್ಕಿ ನಷ್ಟ ಅನುಭವಿಸಿದ್ದಾರೆ. ಉಳಿದ ಕೃಷಿ ಬೆಳೆಗಳು ಮಳೆಯ ಕೊರತೆಯಿಂದ ಕೈಗೆ ಬಂದಿಲ್ಲ. ಇವೆಲ್ಲ ಸಂಕಷ್ಟಗಳ ನಡುವೆ ಸ್ವಲ್ಪ ಜಮೀನಿನಲ್ಲಿಯೇ ಸುಗಂಧರಾಜ ಹಾಗೂ ಸೇವಂತಿಗೆ ಪುಷ್ಪ ಕೃಷಿಯನ್ನು ಕೈಗೊಂಡು ನಿತ್ಯ ಆದಾಯ ಗಳಿಸುತ್ತ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಬಸವನಬಾಗೇವಾಡಿ ತಾಲ್ಲೂಕಿನ ದಿಂಡವಾರ ಗ್ರಾಮದ ವಿಜಯಲಕ್ಷ್ಮಿ ಹಾಗೂ ಈರಣ್ಣ ಹೂಗಾರ ದಂಪತಿ.

ಸುಗಂಧರಾಜ: ಕೇವಲ ಒಂದು ಎಕರೆಯಲ್ಲಿ ಸುಗಂಧರಾಜ ಬೆಳೆಯ ಗಡ್ಡೆಯನ್ನು ಬಿತ್ತಿದ ಈ ಕೃಷಿಕರು, ಎಂಟು ತಿಂಗಳು ಆರೈಕೆ ಮಾಡಿದರು. ಇದೀಗ ನಿತ್ಯ 5 ಕೆ.ಜಿಯಿಂದ 10 ಕೆ.ಜಿಯಷ್ಟು ಹೂವು ಪಡೆಯುತ್ತಿದ್ದು. ವಿಜಯಪುರ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ ಹೂವಿಗೆ ₹ 60ರಿಂದ 70ರಷ್ಟು ಬೆಲೆಯಿದೆ. ನಿತ್ಯ ₹400ರಿಂದ ₹600ರವರೆಗೆ ಆದಾಯ ಪಡೆಯುತ್ತಿದ್ದಾರೆ.

ಶ್ರಾವಣ ಮಾಸದಲ್ಲಿ, ಹಬ್ಬ ಹರಿದಿನಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಯ ಹಿಂದಿನ ದಿನಗಳಲ್ಲಿ ಪ್ರತಿ ಕೆ.ಜಿಗೆ ₹120ರವರೆಗೆ ದರ ಏರಿಕೆಯಾಗುತ್ತದೆ. ಖರ್ಚು ವೆಚ್ಚ ಹೊರತುಪಡಿಸಿ ಒಂದು ಎಕರೆಯಲ್ಲಿ, ವರ್ಷಕ್ಕೆ ಕನಿಷ್ಠ ₹4ಲಕ್ಷದಿಂದ ₹5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಸುಗಂಧರಾಜ ಹೂವಿನ ವಿಶೇಷತೆ ಏನೆಂದರೆ, ಹೂವನ್ನು ಬಿಡಿಸಿದ ನಂತರ ಕನಿಷ್ಠ ಮೂರು ದಿನಗಳವರೆಗೆ ಬಾಡದೆ ಸುಗಂಧ ಸೂಸುತ್ತ ನಳನಳಿಸುತ್ತದೆ.

ಭೂಮಿಯನ್ನು ಹದಗೊಳಿಸಿ ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ಐದು ಅಡಿ ಅಂತರದಲ್ಲಿ ಸುಗಂಧರಾಜ ಹೂವಿನ ಗಡ್ಡೆಯನ್ನು ನೆಟ್ಟರು. ಮಂಗಳ ಗೊಬ್ಬರವನ್ನು ನೀರಲ್ಲಿ ಹಾಕಿ ಸಿಂಪಡಿಸಿ, ತಿಪ್ಪೆಗೊಬ್ಬರ ಹಾಕಿ, ಎರಡು ದಿನಗಳಿಗೊಮ್ಮೆ ನೀರು ಬಿಟ್ಟರು. ಹೂವು ಬಾಡಿದಾಗ ಹಾಗೂ ಕಿಡಿಗಳು ಜಾಸ್ತಿಯಾದಾಗ ಆವಂಟ್, ಕೊರೆಜಿನ್, ಔಷಧವನ್ನು ಸಿಂಪಡಿಸಿದರು. ಪ್ರಾರಂಭದಲ್ಲಿ ನಿತ್ಯ ಐದು ಕೆ.ಜಿ ಫಸಲು ಬಂದರೆ ಕ್ರಮೇಣ 10 ಕೆ.ಜಿವರೆಗೆ ಸಿಗಲು ಆರಂಭಿಸಿತು.

‘ಪಿಯುಸಿ ವ್ಯಾಸಂಗ ಮುಗಿಸಿದ ಮೇಲೆ ತಂದೆ ಮದುವೆ ಮಾಡಿಕೊಟ್ಟರು. ಹೆಚ್ಚಿನ ಶಿಕ್ಷಣ ಪಡೆಯದೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳದೆ ನನ್ನ ಪತಿಗೆ ಸೇರಿದ ಮೂರು ಎಕರೆ ಭೂಮಿಯಲ್ಲಿ ಪುಷ್ಪಕೃಷಿಯಲ್ಲಿ ತೊಡಗಿದೆ. ಸುಗಂಧರಾಜ ಹೂವಿನ ಬೆಳೆಗೆ ಹೆಚ್ಚಿನ ಒತ್ತು ನೀಡಿದೆ. ಪತಿಯಿಂದ ಅಗತ್ಯ ಸಹಕಾರ ಸಿಕ್ಕಿತು. ಈಗ ನೆಮ್ಮದಿಯ ಬದುಕು ನಮ್ಮದಾಗಿದೆ’ ಎನ್ನುತ್ತಾರೆ ವಿಜಯಲಕ್ಷ್ಮಿ.

‘ಸುಗಂಧರಾಜ ಪುಷ್ಪ ಕೃಷಿಗೆ ಹೆಚ್ಚಿನ ಖರ್ಚು ಬೇಕಿಲ್ಲ. ಸುಗಂಧರಾಜ ಗಡ್ಡೆಯನ್ನು ಒಮ್ಮೆ ಹೊಲಕ್ಕೆ ಹಾಕಿ, ಉತ್ತಮ ನಿರ್ವಹಣೆ ಮಾಡಿದರೆ, ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ನಿರಂತರ ಹೂವಿನ ಬೆಳೆ ಪಡೆಯಬಹುದು’ ಎಂದು ಅಭಿಪ್ರಾಯಪಡುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಎಸ್.ಬಿ.ಪಾಟೀಲ.

ಗಲಾಟೆ ಪುಷ್ಪ: ವಿಜಯಲಕ್ಷ್ಮಿ ಅವರು ಒಂದು ಎಕರೆಯಲ್ಲಿ ಗಲಾಟೆ ಪುಷ್ಪ ಬೇಸಾಯ ಮಾಡಿದ್ದು, ನಾಟಿ ಪೂರ್ವವಾಗಿ ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಯೂರಿಯಾ ಹಾಗೂ ಡಿಎಪಿ ಭೂಮಿಗೆ ಸೇರಿಸಿದ್ದಾರೆ. ಹದಮಾಡಿದ ಭೂಮಿಯಲ್ಲಿ ಗಿಡದಿಂದ ಗಿಡ ಹಾಗೂ ಸಾಲಿನಿಂದ ಸಾಲಿಗೆ ಎರಡು ಅಡಿ ಅಂತರ ಬರುವಂತೆ ಕುಂಟೆಯ ಮೂಲಕ ಸಾಲು ಹೊಡೆದು ಸಸಿ ನಾಟಿ ಮಾಡಿದ್ದಾರೆ.

ಮೂರು ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ಚಳಿಗಾಲ ಹಾಗೂ ಮಳೆಗಾಲದ ದಿನಗಳಲ್ಲಿ ಅತೀ ತಂಪಿನಿಂದ ಸಸಿಗಳ ರಕ್ಷಣೆಗೆ ಯೂರಿಯಾ, ಬೇಸಿಗೆಯಲ್ಲಿ ಪೌಷ್ಟಿಕಾಂಶಕ್ಕೆ ಡಿಎಪಿ ಹಾಕುತ್ತಾರೆ. ಎಲೆ ಚುಕ್ಕೆ ರೋಗಕ್ಕೆ ಟ್ರೆಸೋಪಾಸ್, ಮಿಥೇನ್ ಔಷಧವನ್ನು ಸಿಂಪಡಿಸುತ್ತಾರೆ. ಸಸಿ ನಾಟಿ ಮಾಡಿದ ಮೂರು ತಿಂಗಳ ನಂತರ ಫಸಲು ಆರಂಭವಾಗಿದ್ದು, ಆರು ತಿಂಗಳವರೆಗೆ ಸಿಗುವುದು. ನಿತ್ಯ 20 ಕೆ.ಜಿ ಪುಷ್ಪ ಸಿಗುವುದು. ₹30ರಿಂದ ₹40ರವರೆಗೆ ಮಾರುಕಟ್ಟೆಯಲ್ಲಿ ಬೆಲೆಯಿದೆ. ಹಬ್ಬ ಹರಿದಿನಗಳಲ್ಲಿ ₹120ರವರೆಗೆ ದರ ಸಿಗುತ್ತದೆ. ನಿತ್ಯ ಖರ್ಚು ತೆಗೆದು ₹ 400ರಷ್ಟು ಆದಾಯ ಸಿಗುತ್ತದೆ.

ಹಳದಿ ಸೇವಂತಿಗೆ: 20 ಗುಂಟೆ ಭೂಮಿಯಲ್ಲಿ ಹಳದಿ ಸೇವಂತಿಗೆ ಬೇರುಗಳನ್ನು ಮಡಕೆ ಸಾಲಿನಲ್ಲಿ ಹಚ್ಚಿ ನಂತರ ತಿಪ್ಪೆಗೊಬ್ಬರ ಹಾಗೂ ಯೂರಿಯಾ ನೀಡಿದ್ದಾರೆ. ಕಳೆ ಬಂದಾಗಲೂ ತಿಪ್ಪೆಗೊಬ್ಬರ ಕೊಟ್ಟಿದ್ದಾರೆ. ಹೂವು ಬಿಡುವ ಸಂದರ್ಭದಲ್ಲಿ ಎಲೆಸುಡುವ ಕಾರಣ ಗೋಮೂತ್ರ, ಮಂಗಳ ಹಾಗೂ ಯೂರಿಯಾ ಹಾಕಿದ್ದಾರೆ. ನಿತ್ಯ 40 ಕೆ.ಜಿ ಫಸಲು ಬರುತ್ತದೆ.

ಒಂದು ವರ್ಷದವರೆಗೆ ಹೂವು ಸಿಗುತ್ತದೆ. ಇದರಿಂದ ಖರ್ಚು ತೆಗೆದು ನಿತ್ಯ ₹300ರವರೆಗೆ ಆದಾಯ ಸಿಗುತ್ತಿದೆ. ಹಳದಿ ಸೇವಂತಿಗೆ ಹಾಗೂ ಸುಗಂಧರಾಜ ಪುಷ್ಪಗಳಿಂದ ಒಳ್ಳೆಯ ಆದಾಯ ಬರುತ್ತಿದೆ.

ಮುಂದಿನ ದಿನಗಳಲ್ಲಿ ಕನಕಾಂಬರಿ ಹಾಗೂ ಗುಲಾಬಿ ಪುಷ್ಪ ಬೇಸಾಯ ಮಾಡುವ ಇಚ್ಛೆ ಹೊಂದಿರುವ ವಿಜಯಲಕ್ಷ್ಮಿ ಅವರು, ತೋಟದಲ್ಲಿ ಕಳೆ ಕೀಳುವುದು, ನೀರು ಹಾಯಿಸುವುದು ಹಾಗೂ ಹೂಮಾಲೆಗಳನ್ನು ತಯಾರಿಸಿ ಮಾರುಕಟ್ಟೆ ಕಳುಹಿಸುವ ಕೆಲಸ ಮಾಡುತ್ತಾರೆ.

ಸಂಪರ್ಕಕ್ಕೆ: 99727 84141

ಪ್ರತಿಕ್ರಿಯಿಸಿ (+)