ಶನಿವಾರ, ಡಿಸೆಂಬರ್ 7, 2019
16 °C

ಬೆಳ್ಳಕ್ಕಿಗಳ ಬಾಣಂತನ

Published:
Updated:
ಬೆಳ್ಳಕ್ಕಿಗಳ ಬಾಣಂತನ

ಪಕ್ಷಿಗಳಿಗೂ ಉಂಟೇ ತವರಿನ ನಂಟು? ‘ಇದೆ’ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸುಧಾಪುರ ಗ್ರಾಮದ ಜನ. ಮುಂಗಾರಿನ ಸಿಂಚನದೊಂದಿಗೆ ಮುಂಡಿಗೆ ಕೆರೆಯಲ್ಲಿ ಬಂದಿಳಿದ ಪಕ್ಷಿಗಳ ಹಿಂಡು ಬಾಣಂತನಕ್ಕಾಗಿ ತೊಟ್ಟಿಲು ಕಟ್ಟುತ್ತಿರುವುದನ್ನು ಅವರು ತಮ್ಮ ಉತ್ತರಕ್ಕೆ ಸಮರ್ಥನೆಯಾಗಿ ತೋರಿಸುತ್ತಾರೆ. ‘ಮುಂಡಿಗೆ ಕೆರೆ, ಈ ಪಕ್ಷಿಗಳ ಪಾಲಿಗೆ ತವರು’ ಎಂದು ಅವರು ಹೇಳುತ್ತಾರೆ.

ಹೆರಿಗೆಗಾಗಿ ಮನೆಯ ಮಗಳು ತವರಿಗೆ ಬಂದಂತೆ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿರುವ ಮುಂಡಿಗೆ ಕೆರೆಗೆ ಪ್ರತಿವರ್ಷ ತಪ್ಪದೇ ಈ ಬೆಳ್ಳಕ್ಕಿಗಳು ಬರುತ್ತವೆ. ವಂಶಾಭಿವೃದ್ಧಿಗಾಗಿ ಬರುವ ಈ ಪಕ್ಷಿಗಳು ರೈತರಿಗೆ ಮಳೆಯ ಆಗಮನದ ಮುನ್ಸೂಚನೆಯನ್ನೂ ನೀಡುತ್ತವೆ. ಈ ಪರಿಪಾಠ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಪ್ರಕೃತಿಯ ಸುಂದರ ಮಡಿಲಿನಲ್ಲಿ ಸುತ್ತಲೂ ಗುಡ್ಡಗಳಿಂದ ಆವೃತವಾದ ತೋಟಪಟ್ಟಿಗಳ ಮಧ್ಯದಲ್ಲಿದೆ ಮುಂಡಿಗೆಕೆರೆ. ಕೆರೆಯ ತುಂಬೆಲ್ಲ ಕೇದಿಗೆ ಜಾತಿಗೆ ಸೇರಿದ ಮುಂಡಿಗೆ ಸಸ್ಯ ಬೆಳೆದುನಿಂತಿದೆ. ಇದರ ಎಲೆಗಳು ಮುಳ್ಳಿನಿಂದ ಕೂಡಿದ್ದು, ಐದರಿಂದ 20 ಅಡಿಗಳಷ್ಟು ಎತ್ತರ ಇವೆ.

ಈ ಧಾಮದಲ್ಲಿ ಬೆಳ್ಳಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದು, ಗೂಡುಕಟ್ಟಿ, ಮೊಟ್ಟೆ ಇಟ್ಟು, ಕಾವು ಕೊಟ್ಟು, ಹೊರಬಂದ ಮರಿಗಳನ್ನು ಕರೆದುಕೊಂಡು ತವರಿಗೆ ವಿದಾಯ ಹೇಳಿ ಹೋಗುವುದು ರೂಢಿ. ಜವುಗು ಪ್ರದೇಶದಲ್ಲಿ ಬೆಳೆಯುವ ಮುಂಡಿಗೆ ಗಿಡ, ಪಕ್ಷಿಗಳಿಗೆ ಗೂಡುಕಟ್ಟಲು ಸುರಕ್ಷಿತ ತಾಣ. ಬಿರುಗಾಳಿ ಬೀಸಲಿ, ನೆರೆಹಾವಳಿ ಬರಲಿ; ಪ್ರಾಣಿಗಳಿಂದಾಗಲಿ, ಮಾನವರಿಂದಾಗಲಿ ಇವುಗಳ ಗೂಡಿಗೆ, ಮರಿಗೆ ಯಾವುದೇ ರೀತಿಯ ಅಪಾಯ ಇಲ್ಲಿಲ್ಲ.

ಬೆಳ್ಳಕ್ಕಿಗಳ ಜಾಣ್ಮೆಗೆ ನಾವೆಲ್ಲ ತಲೆದೂಗಲೇಬೇಕು. ಮುಂಗಾರಿನ ಪೂರ್ವದಲ್ಲಿಯೇ ಕೆರೆಯ ಮೇಲ್ಗಡೆ ಹಾರಾಟ ನಡೆಸಿ ಯಾವುದೇ ರೀತಿಯ ಅಪಾಯವಿಲ್ಲ, ಗೂಡು ಕಟ್ಟಲು ಸ್ಥಳ ಪ್ರಶಸ್ತ ಎಂಬುದನ್ನು ಮನಗಂಡ ಬಳಿಕವೇ ಕೆರೆಗೆ ಇಳಿಯುತ್ತವೆ. ಬೆಳ್ಳಕ್ಕಿಗಳು ಮುಂಡಿಗೆ ಗಿಡಗಳ ಮೇಲೆ ಕುಳಿತಿವೆ ಎಂದಾದರೆ, ಈ ಭಾಗದಲ್ಲಿ 4–5 ದಿನಗಳೊಳಗೆ ಮಳೆ ಬೀಳುವುದು ಗ್ಯಾರಂಟಿ ಎಂಬುದು ಇಲ್ಲಿಯ ರೈತರ ಅಭಿಪ್ರಾಯ. ಪಕ್ಷಿತಜ್ಞರಾಗಿದ್ದ ಪಿ.ಡಿ. ಸುದರ್ಶನ ಅವರ ಮಾರ್ಗದರ್ಶನದಲ್ಲಿ ಸೋಂದಾ ಜಾಗೃತ ವೇದಿಕೆಯು 1995ರಿಂದ ಪಕ್ಷಿಗಳ ಆಗಮನದ ವಿದ್ಯಮಾನವನ್ನು ವೀಕ್ಷಿಸುತ್ತ, ದಾಖಲಿಸುತ್ತ ಕಂಡುಕೊಂಡ ಸತ್ಯ ಕೂಡ ಇದಾಗಿದೆ.

ಪ್ರಸಕ್ತ ವರ್ಷ ಜೂನ್‌ 9ರಂದು ಸಂಜೆ ಸುಮಾರು 20 ಬೆಳ್ಳಕ್ಕಿಗಳು ಮುಂಡಿಗೆ ಕೆರೆಗೆ ಇಳಿದಿವೆ. ಆ ಮೂಲಕ ಮಳೆಯ ಪ್ರಾರಂಭಕ್ಕೆ ಮುನ್ನುಡಿಯನ್ನೂ ಬರೆದಿವೆ. ಹತ್ತು ದಿನ ಕಳೆಯುವಷ್ಟರಲ್ಲಿ ಅವುಗಳ ಸಂಖ್ಯೆ 200ಕ್ಕೆ ಏರಿದೆ. ಶಿರಸಿಯ ಪಕ್ಷಿಪ್ರೇಮಿ ಗೋಪಾಲ ಬಾರ್ಕೂರ ದಿನಗಟ್ಟಲೆ ಇಲ್ಲಿ ಕಾಲ ಕಳೆದು, ಅವುಗಳ ದಿನಚರಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಮೊದಲು ಬಂದ ಜೋಡಿಗಳು ತೊಟ್ಟಿಲು ಕಟ್ಟಲು ಕಡ್ಡಿಗಳನ್ನು ಕೊಕ್ಕಿನಲ್ಲಿ ಹಿಡಿದು ತಂದ ದೃಶ್ಯ ಮನಮೋಹಕವಾಗಿತ್ತು ಎನ್ನುತ್ತಾರೆ ಅವರು. ಬೆಳ್ಳಕ್ಕಿಗಳು ಗೂಡುಕಟ್ಟಿ ಮೊಟ್ಟೆ ಇಡುವ ವೇಳೆಗೆ ಮಳೆ ಹೆಚ್ಚಾಗುತ್ತದೆ. ಬಹುತೇಕ ಗೂಡುಗಳಲ್ಲಿ ಎರಡರಿಂದ ಮೂರು ಮೊಟ್ಟೆಗಳು ಇರುತ್ತವೆ. ಬೆಳ್ಳಕ್ಕಿಗಳು ಮೊಟ್ಟೆಗೆ ಕಾವುಕೊಟ್ಟು ಮರಿ ಮಾಡುವಾಗ ಜೋರಾಗಿ ಮಳೆ ಬೀಳುವುದು ವಾಡಿಕೆ.

ಈ ವೇಳೆಯಲ್ಲಿ ರೈತರು ಭರದಿಂದ ಹೊಲಗಳಲ್ಲಿ, ಗದ್ದೆಗಳಲ್ಲಿ ನಾಟಿ ಕೆಲಸ ಮುಗಿಸಿ ಪೈರಿನ ಯೋಗಕ್ಷೇಮದಲ್ಲಿ ತೊಡಗಿರುತ್ತಾರೆ. ಮರಿಗಳಾದ ನಂತರ ಕೀಟಗಳನ್ನು ಹಿಡಿದು ತಂದು ಮರಿಗಳಿಗೆ ಗುಟುಕು ನೀಡಿ ಅವುಗಳ ಲಾಲನೆ ಪೋಷಣೆ ಮಾಡುವ ಪರಿಯಂತೂ ನಯನ ಮನೋಹರ. ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜುಲೈ ಕೊನೆಯಿಂದ ನವೆಂಬರ್‌ವರೆಗೆ ಸಕಾಲ.

ಬೆಳೆದ ಪೈರಿಗೆ ತಗಲುವ ಕೀಟಗಳನ್ನು ತಿಂದು ಬದುಕುವ ಬೆಳ್ಳಕ್ಕಿಗಳನ್ನು ದೇವರಂತೆ ಕಂಡು ಅವುಗಳ ರಕ್ಷಣೆಗೆ ನಿಂತಿರುತ್ತಾರೆ ಇಲ್ಲಿಯ ನಾಗರಿಕರು. ಅರಣ್ಯ ಇಲಾಖೆ ಸಹ ಪಕ್ಷಿಗಳು ಇರುವಷ್ಟು ಕಾಲ ಕಾವಲುಗಾರರನ್ನು ನಿಯೋಜನೆ ಮಾಡಿ, ಅವುಗಳಿಗೆ ಯಾವುದೇ ಅಪಾಯ ಎದುರಾಗದಂತೆ ನೋಡಿಕೊಳ್ಳುತ್ತದೆ. ಪಕ್ಷಿಗಳಿಗೆ ಸದ್ಯ ತೊಟ್ಟಿಲು ಕಟ್ಟಲು ಕಡ್ಡಿ ತರುವ ಶ್ರಮ, 45 ದಿನಗಳ ನಂತರ ತಾಯಿ ಮರಿಗಳಿಗೆ ಗುಟುಕು ಹಾಕುವ ಸಂಭ್ರಮ, ಮಳೆಯಿಂದ ಮರಿಗಳಿಗೆ ರಕ್ಷಣೆ ನೀಡಲು ತನ್ನ ರೆಕ್ಕೆಗಳ ಕೆಳಗೆ ಪ್ರೀತಿಯಿಂದ ಅಪ್ಪಿಕೊಳ್ಳುವ ದೃಶ್ಯ ಎಷ್ಟೊಂದು ಅಪ್ಯಾಯಮಾನ.

ಸುದರ್ಶನ ಅವರು 1980ರಲ್ಲಿ ಈ ಪಕ್ಷಿಧಾಮವನ್ನು ಹೊರಜಗತ್ತಿಗೆ ಪರಿಚಯಿಸಿದರು. ಇವರ ಸತತ ಪ್ರಯತ್ನದ ಫಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ಹಾಗೂ ಏಷ್ಯಾ ಖಂಡಗಳ ಜಲಚರ ಪಕ್ಷಿಗಳ ಗಣತಿಯಲ್ಲಿ ಇಲ್ಲಿನ ಬೆಳ್ಳಕ್ಕಿಗಳು (1992 ಮತ್ತು 1993) ದಾಖಲಾಗಿರುವುದು ಉಲ್ಲೇಖನೀಯ. ‘ಸುದರ್ಶನ ಅವರು ಹೇಳುವವರೆಗೆ ನನ್ನ ಹೊಲದ ಪಕ್ಕದಲ್ಲೇ ಬೆಳ್ಳಕ್ಕಿಗಳ ತವರಿದೆ ಎಂದು ಗೊತ್ತಿರಲಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ರತ್ನಾಕರ ಹೆಗಡೆ.

ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಈ ಕೆರೆಯನ್ನು ಕಂಡು ‘ಓ ಪಕ್ಷಿ ಸಾಮ್ರಾಜ್ಯ’ ಎಂದು ಉದ್ಗಾರ ಎತ್ತಿದ್ದಾರೆ. ಸೋಂದಾ ಜಾಗೃತ ವೇದಿಕೆ ಪ್ರತಿವರ್ಷ ಇಲ್ಲಿ ಪಕ್ಷಿ ವೀಕ್ಷಣೆ ಹಾಗೂ ಸಂರಕ್ಷಣೆ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಪಕ್ಷಿಗಳ ತವರಿಗೆ ನೀವು ಈ ಮಳೆಗಾಲದಲ್ಲಿ ಬಂದಿದ್ದಾದರೆ ಅವುಗಳ ಸಂಭ್ರಮೋಲ್ಲಾಸವನ್ನು ಆನಂದಿಸಬಹುದು.

ಸಂಪರ್ಕಕ್ಕೆ: 08384-279443 

ಹೇಗೆ ತಲುಪಬೇಕು?

ಮುಂಡಿಗೆಕೆರೆ ಪಕ್ಷಿಧಾಮವನ್ನು ಶಿರಸಿಯಿಂದ ಕಡವೆ ಕ್ರಾಸ್‌ – ದೇವರಹೊಳೆ (16 ಕಿ.ಮೀ) ಅಥವಾ ಶಿರಸಿ–ಹುಲೇಕಲ್‌– ಕಮಟಗೇರಿ(23 ಕಿ.ಮೀ) ಇಲ್ಲವೆ ಶಿರಸಿ–ಯಲ್ಲಾಪುರ ರಸ್ತೆಯಿಂದ ಸೋಂದಾ ಕ್ರಾಸ್‌ ಮುಖಾಂತರ (25 ಕಿ.ಮೀ) ತಲುಪಬಹುದು.

ಪ್ರತಿಕ್ರಿಯಿಸಿ (+)