ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶದ ಹಿಂದು ಲಷ್ಕರ್ ಉಗ್ರ ಸೆರೆ

Last Updated 10 ಜುಲೈ 2017, 10:39 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಗೆ ನೆರವು ನೀಡುತ್ತಿದ್ದ ಆರೋಪದಲ್ಲಿ ಉತ್ತರಪ್ರದೇಶದ ಮುಜಫ್ಫರ್ ನಗರದ ಸಂದೀಪ್ ಕುಮಾರ್ ಶರ್ಮಾ ಎಂಬಾತನನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಸೇನಾ ನೆಲೆಗಳ ಮೇಲೆ, ಪೊಲೀಸರ ಮೇಲೆ ದಾಳಿ ನಡೆಸಲು ಉಗ್ರರಿಗೆ ಸಂದೀಪ್ ನೆರವು ನೀಡುತ್ತಿದ್ದ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಕಳವು ಮಾಡಿದ್ದಲ್ಲದೆ, ಆಯುಧಗಳನ್ನೂ ಕದ್ದೊಯ್ಯುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ನಡೆದಿದ್ದ ಉಗ್ರ ದಾಳಿ, ಅಚ್‌ಬಲ್‌ನಲ್ಲಿ ಆರು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಉಗ್ರ ದಾಳಿಗಳಿಗೂ ಸಂದೀಪ್ ನೆರವು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರ, ಕಾಶ್ಮೀರ ಕಣಿವೆಯಲ್ಲೇ ಎಲ್‌ಇಟಿ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಆದರೆ, ಈ ಪ್ರದೇಶಗಳನ್ನು ಹೊರತುಪಡಿಸಿ ಎಲ್‌ಇಟಿಗೆ ಸೇರಿದ ಉಗ್ರನೊಬ್ಬನನ್ನು ಬಂಧಿಸಿರುವುದು ಇದೇ ಮೊದಲಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಂದೀಪ್‌ 2012ರಲ್ಲಿ ಕೆಲಸ ಹುಡುಕಿಕೊಂಡು ಕಾಶ್ಮೀರಕ್ಕೆ ತೆರಳಿದ್ದ. ಚಳಿಗಾಲದಲ್ಲಿ ಪರ್ಯಾಯ ಕೆಲಸಕ್ಕಾಗಿ ಪಂಜಾಬ್‌ಗೆ ತೆರಳುತ್ತಿದ್ದ. ಕಾಶ್ಮೀರದಲ್ಲಿದ್ದಾಗ ಉಗ್ರರೊಂದಿಗೆ ಸಂಪರ್ಕ ಹೊಂದಿದ ಆತ ಎಟಿಎಂಗಳನ್ನು ದೋಚುವುದು, ಸ್ಥಳೀಯ ರಹಸ್ಯ ಮಾಹಿತಿಗಳನ್ನು ಉಗ್ರರಿಗೆ ರವಾನಿಸುವುದು ಮಾಡುತ್ತಿದ್ದ. ಇತ್ತೀಚೆಗೆ ಹತ್ಯೆಯಾಗಿದ್ದ ಎಲ್‌ಇಟಿ ಉಗ್ರ ಬಷೀರ್ ಲಷ್ಕರಿಗೆ ಸಹಾಯಕನಾಗಿದ್ದುಕೊಂಡು ಉಗ್ರ ಕೃತ್ಯಗಳಿಗೆ ನೆರವಾಗುತ್ತಿದ್ದ. ಈ ವರ್ಷ ಕನಿಷ್ಠ ಐದು ಎಟಿಎಂಗಳಿಂದ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ ಆರೋಪ ಆತನ ಮೇಲಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ಮುನೀರ್ ಖಾನ್ ತಿಳಿಸಿದ್ದಾರೆ.

ಮತ್ತೊಂದು ಮೂಲದ ಪ್ರಕಾರ, ಎಲ್‌ಇಟಿ ಉಗ್ರ ಬಷೀರ್ ಲಷ್ಕರಿ ಇದ್ದ ನಿವಾಸದಿಂದಲೇ ಸಂದೀಪ್‌ನನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಬಷೀರ್‌ನನ್ನು ಜುಲೈ ಒಂದರಂದು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT