ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾದ ಕಚೇರಿ, ದುಬಾರಿಯಾದ ಅಂಚೆ ಸೇವೆ

ಸ್ಥಳಾಂತರವಾದ ಪೋಸ್ಟ್‌ ಆಫೀಸ್‌ ಎಲ್ಲಿದೆ ಎನ್ನುವ ಮಾಹಿತಿಯೇ ಜನರಿಗಿಲ್ಲ
Last Updated 10 ಜುಲೈ 2017, 11:18 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂಚೆ ಇಲಾಖೆ ಶಾಖಾ ಕಚೇರಿ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆಪಡುವಂತಾಗಿದೆ.

ಅಂಚೆ ಇಲಾಖೆಯಿಂದ ಲಭಿಸುವ ಚಿಕ್ಕ ಸೇವೆಗೂ ನಾಗರಿಕರು ಈಗ ಅರ್ಧ ಕಿಲೋಮೀಟರ್‌ ದೂರದಲ್ಲಿರುವ ಭಡಕಲಗಲ್ಲಿಗೆ ಹೋಗಬೇಕಾಗಿದೆ. ಇದರಿಂದ ಸಾರ್ವಜನಿಕರಿಗೆ ಹಣ ಹಾಗೂ ಸಮಯ ವ್ಯರ್ಥವಾಗುತ್ತಿದೆ.

ಅಂಚೆ ಚೀಟಿ, ಕವರ್‌, ಪೋಸ್ಟಲ್‌ ಆರ್ಡರ್‌, ಮನಿ ಆರ್ಡರ್‌, ಅಂಚೆ ಇಲಾಖೆಯಿಂದಲೇ ಆರಂಭಿಸಲಾಗಿರುವ ಅನೇಕ ವಿಮಾ ಸೌಲಭ್ಯಗಳು, ಉಳಿತಾಯ ಖಾತೆಗಳನ್ನು ತೆರೆಯುವುದು ಮೊದಲಾದ ಸೇವೆ ಪಡೆಯಲು ಜನ  ಬಯಸುತ್ತಾರೆ. ಅಂಚೆ ಇಲಾಖೆಯು ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದರಿಂದ ಬಹುತೇಕರು  ಇಂದಿಗೂ ಅಂಚೆ ಸೇವೆಯನ್ನೇ ಆಶ್ರಯಿಸಿದ್ದಾರೆ. ಆದರೆ, ಈ ಸೇವೆಗಾಗಿ ಜನರು ಅಲೆದಾಡಬೇಕಾಗಿದೆ.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಬಹುತೇಕ ಸರ್ಕಾರಿ ಇಲಾಖೆಗಳ ಮತ್ತು ಖಾಸಗಿ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದ ಕಚೇರಿಗಳಿವೆ. ಸರ್ಕಾರಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳು ಸಂಪರ್ಕಕ್ಕಾಗಿ ಪತ್ರಗಳನ್ನೇ ಅವಲಂಬಿಸಿವೆ. ಕಚೇರಿಯ ದಾಖಲೆಗಾಗಿಯಾದರೂ ಇಲಾಖೆಗಳ ಪತ್ರಗಳನ್ನು ಸಂಬಂಧಿಸಿದವರ ಮನೆಗಳ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ಸಮೀಪದಲ್ಲಿಯೇ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಇದೆ. ನ್ಯಾಯಾಲಯಗಳಿಂದ ಹೊರಡಿಸುವ ಆದೇಶ, ಸಮನ್ಸ್‌ ಮೊದಲಾದ ಕಾಗದಪತ್ರಗಳನ್ನು ಸಂಬಂಧಿಸಿದವರಿಗೆ ಕಳುಹಿಸಲು ಅಂಚೆ ಕಚೇರಿಯ ಸೌಲಭ್ಯ ಸಮೀಪದಲ್ಲಿ ಲಭ್ಯವಾಗುತ್ತಿಲ್ಲ.

ಹಿಂದಿನಿಂದಲೂ ಇಲ್ಲಿತ್ತು: ಬ್ರಿಟಿಷರ ಕಾಲದಿಂದಲೂ ಜಿಲ್ಲಾಧಿಕಾರಿ ಕಚೇರಿ ಆವರಣದ ಜಿಲ್ಲಾ ಖಜಾನೆಯ ಪೂರ್ವಭಾಗದಲ್ಲಿ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿತ್ತು.
ಈ ಭಾಗದ ಜನತೆಗೆ, ನ್ಯಾಯಾಲಯಗಳಿಗೆ ಸಂಬಂಧಿಸಿದ ಸಿಬ್ಬಂದಿಗೆ, ವಕೀಲರಿಗೆ, ವಿವಿಧ ಇಲಾಖೆಗಳವರಿಗೆ ಇದರಿಂದ ಹೆಚ್ಚು ಅನುಕೂಲ ಆಗಿತ್ತು. ಆದರೆ, ನಾಲ್ಕು ವರ್ಷಗಳಿಂದ ಈ ಕಚೇರಿಯನ್ನು ಭಡಕಲಗಲ್ಲಿಯ ಬನಶಂಕರಿದೇವಿ ಮಂದಿರದ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದರ ಮಾಹಿತಿ ಬಹಳಷ್ಟು ಮಂದಿಗೆ ಇಲ್ಲ. ಇದರಿಂದಾಗಿ, ಅಂಚೆ ಕಚೇರಿಗಾಗಿ ಅಲೆದಾಡುವುದು ಕಂಡುಬರುತ್ತಿದೆ.

‘ಅಂಚೆ ಕಚೇರಿಯನ್ನು ದೂರಕ್ಕೆ ಸ್ಥಳಾಂತರಿಸಿದ್ದರಿಂದ ಜನರಿಗೆ ಅನಾನುಕೂಲವಾಗಿದೆ. ಕಚೇರಿಯು ನಿರುಪಯುಕ್ತವಾದಂತಾಗಿದೆ. ಮಾಹಿತಿ ಕೊರತೆಯಿಂದ ಹೆಚ್ಚಿನ ಜನ ಆ   ಕಚೇರಿ ಅವಲಂಬಿಸಿಲ್ಲ’ ಎಂದು ವಕೀಲ ಅಣ್ಣಾಸಾಹೇಬ ಘೋರ್ಪಡೆ  ದೂರಿದರು.

ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ‘ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಅಂಚೆ ಕಚೇರಿ ಶಾಖೆ ಆರಂಭಿಸಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ಅಂಚೆ ಕಚೇರಿ ಇದ್ದ ಜಾಗ ಈಗ ಖಾಲಿ ಇದೆ. ಭಾನುವಾರ ಹಾಗೂ ರಜಾದಿನ ಹೊರತುಪಡಿಸಿ ಇಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್‌ ತಾಣವಾಗಿ ಇದು ಬಳಕೆಯಾಗುತ್ತಿದೆ. ಇಲ್ಲಿ ಅಂಚೆ ಕಚೇರಿ ಆರಂಭಿಸಿದರೆ ಅನುಕೂಲ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT