ಶನಿವಾರ, ಡಿಸೆಂಬರ್ 7, 2019
16 °C

ಐದನೇ ಪಂದ್ಯದಲ್ಲಿ ಮುಗ್ಗರಿಸಿದ ಶ್ರೀಲಂಕಾ: ಜಿಂಬಾಬ್ವೆಗೆ ಐತಿಹಾಸಿಕ ಸರಣಿ

Published:
Updated:
ಐದನೇ ಪಂದ್ಯದಲ್ಲಿ ಮುಗ್ಗರಿಸಿದ ಶ್ರೀಲಂಕಾ: ಜಿಂಬಾಬ್ವೆಗೆ ಐತಿಹಾಸಿಕ ಸರಣಿ

ಹಂಬಂಟೋಟಾ: ಆರಂಭಿಕ ಆಟಗಾರ ಹ್ಯಾಮಿಲ್ಟನ್‌ ಮಸಕಜ (73; 86ಎ, 9ಬೌಂ, 1ಸಿ) ಅವರ ಅರ್ಧಶತಕ ಮತ್ತು ಸಿಕಂದರ ರಾಜ (21ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಜಿಂಬಾಬ್ವೆ ತಂಡ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಶ್ರೀಲಂಕಾ ವನ್ನು ಸೋಲಿಸಿದೆ.

ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3–2ರಲ್ಲಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಜಿಂಬಾಬ್ವೆ ತಂಡ ಸಿಂಹಳೀಯ ನಾಡಿನಲ್ಲಿ  ಮೊದಲ ಬಾರಿಗೆ ಸರಣಿ ಜಯಿಸಿದೆ.

ಮಹಿಂದ ರಾಜಪಕ್ಷ ಕ್ರೀಡಾಂಗಣ ದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡ 50 ಓವರ್‌ ಗಳಲ್ಲಿ 8 ವಿಕೆಟ್‌ಗೆ 203ರನ್‌ ಪೇರಿಸಿತು. ಸುಲಭ ಗುರಿಯನ್ನು ಗ್ರೇಮ್‌ ಕ್ರೀಮರ್‌ ಪಡೆ 71 ಎಸೆತಗಳು ಬಾಕಿ ಇರುವಂತೆ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ದಿಟ್ಟ ಆರಂಭ: ಗುರಿ ಬೆನ್ನಟ್ಟಿದ ಜಿಂಬಾಬ್ವೆ  ದಿಟ್ಟ ಆರಂಭ ಪಡೆಯಿತು. ಇನಿಂಗ್ಸ್‌ ಆರಂಭಿಸಿದ ಹ್ಯಾಮಿಲ್ಟನ್‌ ಮಸಕಜ ಮತ್ತು ಸೊಲೊಮನ್‌ ಮಿರೆ (43; 32ಎ, 5ಬೌಂ, 2ಸಿ) ಮೊದಲ ವಿಕೆಟ್‌ಗೆ 92ರನ್‌ ಕಲೆಹಾಕಿ ತಂಡದ ಗೆಲುವಿನ ಹಾದಿಯನ್ನು ಸುಗಮ ಮಾಡಿದರು.

ಅಸೆಲಾ ಗುಣರತ್ನೆ ಬೌಲ್‌ ಮಾಡಿದ 15ನೇ ಓವರ್‌ನ ಎರಡನೇ ಎಸೆತದಲ್ಲಿ ಮಿರೆ ವಿಕೆಟ್‌ ಒಪ್ಪಿಸಿದರು. ನಂತರ ಮಸಕಜ, ತರಿಸೈ ಮುಸಕಾಂಡ (37; 49ಎ, 4ಬೌಂ) ಜೊತೆ  ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 45ರನ್‌ ಸೇರಿಸಿ ತಂಡದ ಮೊತ್ತ 135ರ ಗಡಿ ದಾಟುವಂತೆ ಮಾಡಿದರು.

ದಿಢೀರ್‌ ಕುಸಿತ: 24ನೇ ಓವರ್‌ ಬೌಲ್‌ ಮಾಡಿದ ಲಸಿತ್‌ ಮಾಲಿಂಗ ಕೊನೆಯ ಎಸೆತದಲ್ಲಿ ಮಸಕಜ ವಿಕೆಟ್‌ ಉರುಳಿಸಿ ದರು. ಆ ನಂತರ ಜಿಂಬಾಬ್ವೆ ತಂಡ ಕುಸಿ ತದ ಹಾದಿ ಹಿಡಿಯಿತು. ಕ್ರೆಗ್‌ ಇರ್ವಿನ್‌ (2), ಸೀನ್‌ ವಿಲಿಯಮ್ಸ್‌ (2), ಮಾಲ್ಕಮ್‌ ವಾಲರ್‌ (1) ಮತ್ತು ಪೀಟರ್‌ ಮೂರ್‌ (1) ಅವರು ಬೇಗನೆ ವಿಕೆಟ್‌ ಒಪ್ಪಿಸಿದರು. ಸಂಕಷ್ಟದ ಪರಿಸ್ಥಿತಿ ಯಲ್ಲಿ ಸಿಕಂದರ ರಾಜ (ಔಟಾಗದೆ 27; 27ಎ, 1ಬೌಂ, 2ಸಿ) ಮತ್ತು ಗ್ರೇಮ್‌ ಕ್ರೀಮರ್‌ (ಔಟಾಗದೆ 11; 13ಎ) ದಿಟ್ಟ ಆಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಲಂಕಾ ತಂಡ ಆರಂಭಿಕ ಆಘಾತ ಅನು ಭವಿಸಿತ್ತು. ಈ ತಂಡ 120ರನ್‌ ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. ಧನುಷ್ಕಾ ಗುಣತಿಲಕ (52; 86ಎ, 5ಬೌಂ) ಮತ್ತು ಅಸೆಲಾ ಗುಣರತ್ನೆ (ಔಟಾಗದೆ 59; 81ಎ, 4ಬೌಂ) ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್‌

ಶ್ರೀಲಂಕಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 203 (ಧನುಷ್ಕಾ ಗುಣತಿಲಕ 52, ಏಂಜೆಲೊ ಮ್ಯಾಥ್ಯೂಸ್‌ 24, ಅಸೆಲಾ ಗುಣರತ್ನೆ ಔಟಾಗದೆ 59 ; ಸಿಕಂದರ ರಾಜ 21ಕ್ಕೆ3,  ಗ್ರೇಮ್‌ ಕ್ರೀಮರ್‌ 23ಕ್ಕೆ2).

ಜಿಂಬಾಬ್ವೆ: 38.1 ಓವರ್‌ಗಳಲ್ಲಿ 7 ವಿಕೆಟ್‌ಗೆ 204 ( ಮಸಕಜ 73, ಸೊಲೊಮನ್‌ ಮಿರೆ 43, ತರಿಸೈ ಮುಸಕಾಂಡ 37, ಸಿಕಂದರ ರಾಜ ಔಟಾಗದೆ 27; ಲಸಿತ್ ಮಾಲಿಂಗ 44ಕ್ಕೆ2, ಅಕಿಲಾ ಧನಂಜಯ 47ಕ್ಕೆ4).

ಫಲಿತಾಂಶ: ಜಿಂಬಾಬ್ವೆಗೆ 3 ವಿಕೆಟ್‌ಗಳ ಗೆಲುವು ಹಾಗೂ 3–2ರಲ್ಲಿ ಸರಣಿ.

ಪ್ರತಿಕ್ರಿಯಿಸಿ (+)