ಬುಧವಾರ, ಡಿಸೆಂಬರ್ 11, 2019
25 °C
‘ಬೆಳ್ಳಿ ಹೆಜ್ಜೆ’ಯಲ್ಲಿ ಮನದಾಳದ ಮಾತು ಬಿಚ್ಚಿಟ್ಟ ನಿರ್ದೇಶಕ

ಇಂಗ್ಲಿಷ್‌ ಗೆಲ್ಲಲಾಗಲಿಲ್ಲ; ಸಿನಿಮಾ ಗೆದ್ದೆ: ಪಿ.ಶೇಷಾದ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷ್‌ ಗೆಲ್ಲಲಾಗಲಿಲ್ಲ; ಸಿನಿಮಾ ಗೆದ್ದೆ:  ಪಿ.ಶೇಷಾದ್ರಿ

ಬೆಂಗಳೂರು: ‘ಶಾಲೆಯಲ್ಲಿ ಓದುವಾಗ ನನ್ನಿಂದ ಇಂಗ್ಲಿಷ್‌ ಗೆಲ್ಲಲಾಗಲಿಲ್ಲ, ಆದರೆ, ಚಿತ್ರರಂಗದಲ್ಲಿ ಸಿನಿಮಾ ಗೆದ್ದೆ’ 

–ಇದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಅವರ ಅನಿಸಿಕೆ. ರಾಜ್ಯ ಚಲನಚಿತ್ರ ಅಕಾಡೆಮಿ ಸೋಮವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಸಂವಾದದಲ್ಲಿ ಅವರು ಮಾತನಾಡಿದರು.

‘ನಾನು ಕಪ್ಪಗಿದ್ದೆ. ತೆಳ್ಳಗಿದ್ದೆ. ಇದು ಸಾಕಷ್ಟು ಸಲ ಮುಜುಗರ ಉಂಟು ಮಾಡುತ್ತಿತ್ತು. ಇಂಗ್ಲಿಷ್‌ ಗೊತ್ತಿಲ್ಲದಿರುವುದು ಇನ್ನಷ್ಟು ಕಾಡುತ್ತಿತ್ತು. ಇದು ಕೀಳರಿಮೆ ಬೆಳೆಸಿತ್ತು. 7ನೇ ತರಗತಿ ಮುಗಿಸಿ, ತಂದೆ ಜತೆಗೆ ಹಠ ಹಿಡಿದು 8ನೇ ತರಗತಿಗೆ ಇಂಗ್ಲಿಷ್‌ ಶಾಲೆ ಸೇರಿದೆ. ಅದೂ ಇಂಗ್ಲಿಷ್‌ ಓದುವ ಆಸೆಯಿಂದಲ್ಲ. ಶೂ ಮತ್ತು ಟೈ ಕೊಡಿಸುತ್ತಾರೆಂದು. ಇಂಗ್ಲಿಷ್‌ ಶಿಕ್ಷಣ ದಕ್ಕಲಿಲ್ಲ. ಶಿಕ್ಷಕರ ಮಗನಾದರೂ ಎಲ್ಲರ ಬಾಲ್ಯದಂತೆ ಹರಿದ ಚಪ್ಪಲಿ, ಹರಿದ ಚಡ್ಡಿಯಲ್ಲೇ  ಶಾಲಾ ಶಿಕ್ಷಣ ಮುಗಿಯಿತು’ ಎಂದು ಬಾಲ್ಯದ ನೆನಪು ಬಿಚ್ಚಿಟ್ಟರು.

‘ವಾಚಕರವಾಣಿಗೆ ಬರೆದ ‘ನಮ್ಮೂರಿನಲ್ಲಿ ನಾಯಿ ಕಾಟ ಹೆಚ್ಚಿದೆ’ ಮತ್ತು ‘ನಮ್ಮೂರಿನಲ್ಲಿ ಕಳ್ಳರು ಹೆಚ್ಚಾಗಿದ್ದಾರೆ’ ಎಂಬ ಪತ್ರಗಳು ನಮ್ಮೂರಿಗೇ ನನ್ನನ್ನು ದೊಡ್ಡ ಸಾಹಿತಿ ಮಾಡಿದ್ದವು. ವಾಚಕರವಾಣಿಗೆ ಬರೆಯುತ್ತಲೇ ಬರವಣಿಗೆ ಗಟ್ಟಿಗೊಳಿಸಿಕೊಂಡೆ’ ಎಂದರು.

‘ಹುಟ್ಟೂರು ದಂಡಿನಶಿವರದ ಶಾಲೆಯಲ್ಲಿ ಓದುವಾಗ ಅಮ್ಮಸಂದ್ರದ ಸಿಮೆಂಟ್‌ ಕಾರ್ಖಾನೆಗೆ ಬಿರ್ಲಾ ಅವರು ವಿಮಾನದಲ್ಲಿ ಬರುವ ಸುದ್ದಿ ಗೊತ್ತಾಗಿ, ವಿಮಾನ ನೋಡಲು ಹಾತೊರೆಯುತ್ತಿದ್ದೆವು.  ವಿಮಾನವನ್ನು ಹತ್ತಿರದಿಂದ ನೋಡಲು 12 ಕಿ.ಮೀ. ದೂರ ಓಡಿದ್ದೆವು. ಜನರ ಗುಂಪು ದಾಟಿ ವಿಮಾನದ ಹತ್ತಿರ ಹೋಗುವಷ್ಟರಲ್ಲಿ ಅದು ಹಾರಿ ಹೋಗಿತ್ತು.  ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ವಿಮಾನದಲ್ಲೇ ಹೋಗುವ ಅವಕಾಶ ಬಂದಿದ್ದು ಬದುಕಿನ ಕಾಕತಾಳೀಯ ಎನಿಸಿತು. ಹಾಗಾಗಿಯೇ ನನ್ನ ಸಿನಿಮಾಗಳಲ್ಲಿ ವಿಮಾನವನ್ನು ವಿಸ್ಮಯದಂತೆ ಬಳಸುತ್ತೇನೆ’ ಎಂದರು.

‘ಸುದ್ದಿಸಂಗಾತಿ’  ಪತ್ರಿಕೆಗೆ ಚಿತ್ರಕಲಾವಿದನಾಗಿ ಕೆಲಸಕ್ಕೆ ಸೇರಿದ್ದೆ. ಪುಟ ವಿನ್ಯಾಸದ ಕೆಲಸ ಆಕಸ್ಮಿಕವಾಗಿ ಸಿಕ್ಕಿತು. ಸಿನಿಮಾ ಪುಟ ರೂಪಿಸುವುದು, ಚಿತ್ರರಂಗದ ಕಲಾವಿದರ ಸಂದರ್ಶನ, ಚಿತ್ರ ವಿಮರ್ಶೆ ನಡೆಸುತ್ತಿದ್ದೆ. ತಿಂಗಳಿಗೆ ₹700 ಸಂಬಳ ಸಿಗುತ್ತಿತ್ತು. ಅದು ಕೂಡ ಒಂದೇ ಕಂತಿನಲ್ಲಿ ಸಿಗುತ್ತಿರಲಿಲ್ಲ.  ಪತ್ರಿಕೆ ನಷ್ಟದಿಂದ ಬಾಗಿಲು ಮುಚ್ಚಿದಾಗ ಅಕ್ಷರಶಃ ಬೀದಿಗೆ ಬಿದ್ದ ಅನುಭವವಾಯಿತು. ಸಿನಿಮಾ ರಂಗದ ನಂಟು ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಅವಕಾಶ ಕಲ್ಪಿಸಿತು.  ಸಿನಿಮಾದಲ್ಲಿ ಪಡೆದ ಮೊದಲ ದೊಡ್ಡ ಸಂಭಾವನೆ ಎಂದರೆ ಜಯಮಾಲಾ ಅವರು ನೀಡಿದ ₹1,1,111 ಮೊತ್ತ’ ಎಂದು ನೆನಪಿಸಿಕೊಂಡರು.

**

ಬೆಂಗಳೂರಿನಲ್ಲಿ 1992ರಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವವು ಸಿನಿಮಾ ಬಗೆಗಿನ ನನ್ನ ದೃಷ್ಟಿಕೋನ ಬದಲಿಸಿತು. ಸಿನಿಮಾ ಪ್ರಪಂಚ ಬೇರೆಯೇ ಇದೆ ಎನ್ನುವುದನ್ನು ತೋರಿಸಿತು.

-ಪಿ.ಶೇಷಾದ್ರಿ, ಚಿತ್ರನಿರ್ದೇಶಕ

ಪ್ರತಿಕ್ರಿಯಿಸಿ (+)