ಗುರುವಾರ , ಡಿಸೆಂಬರ್ 12, 2019
17 °C

ಅಮರನಾಥ ಯಾತ್ರಿಕರ ಮೇಲೆ ದಾಳಿ; ಶ್ರೀನಗರಕ್ಕೆ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರನಾಥ ಯಾತ್ರಿಕರ ಮೇಲೆ ದಾಳಿ; ಶ್ರೀನಗರಕ್ಕೆ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಭೇಟಿ

ಶ್ರೀನಗರ: ಅಮರನಾಥ ಯಾತ್ರಿಕರು ಇದ್ದ ಬಸ್‌ ಮೇಲೆ ಸೋಮವಾರ ರಾತ್ರಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲು ಮಂಗಳವಾರ ಸೇನಾ ಮುಖ್ಯಸ್ಥ ಬಿಪಿನ್ ರಾವತ್‌ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ.

ಸೇನೆಯ ಹಿರಿಯ ಅಧಿಕಾರಿಗಳು ಕಣಿವೆ ರಾಜ್ಯದಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಅದರಲ್ಲೂ ನಿನ್ನೆ ರಾತ್ರಿ ಅನಂತನಾಗ್‌ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯ ಕುರಿತು ಬಿಪಿನ್‌ ರಾವತ್‌ ಅವರಿಗೆ ಮಾಹಿತಿ ನೀಡಿದ್ದಾರೆ.

‘ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ಶ್ರೀನಗರಕ್ಕೆ ಬಂದಿದ್ದಾರೆ ಮತ್ತು ಡಿಜಿಪಿ ಅವರ ಜತೆ ಪರಿಸ್ಥಿತಿಯ ಕುರಿತು ಮಾತನಾಡಿದ್ದಾರೆ. ರಾವತ್‌ ಅವರು ಸಿಆರ್‌ಪಿಎಫ್‌ನ ಡಿಜಿ ಅವರ ಜತೆ ಸಭೆ ನಡೆಸಬಹುದು’ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಯಾತ್ರಿಕರಿದ್ದ ಬಸ್‌ನ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮಹಿಳೆಯರು ಸೇರಿದಂತೆ ಗುಜರಾತ್‌ನ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. 

ನಿನ್ನೆ ರಾತ್ರಿ 8.20ಕ್ಕೆ ಬಸ್‌ ಅನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟು ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿದ ಚಾಲಕ: ಅಮರನಾಥ ಯಾತ್ರೆಯ ನಿಯಮವನ್ನು ಬಸ್‌ ಚಾಲಕ ಉಲ್ಲಂಘಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನಿಯಮಗಳ ಪ್ರಕಾರ, ಯಾತ್ರೆಯಲ್ಲಿ ಭಾಗವಹಿಸುವ ಯಾವುದೇ ವಾಹನಗಳು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ.  ಏಳು ಗಂಟೆ ನಂತರ ಭದ್ರತೆ ವ್ಯವಸ್ಥೆ ಇರುವುದಿಲ್ಲ.

ದಾಳಿಗೆ ಖಂಡನೆ: ಭಯೋತ್ಪಾದಕರ ದಾಳಿಗೆ ಉಪ ರಾಷ್ಟ್ರಪತಿ ಅಮೀದ್‌ ಅನ್ಸಾರಿ, ಗೃಹ ಸಚಿವ ರಾಜನಾಥ ಸಿಂಗ್‌ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)