ಶನಿವಾರ, ಡಿಸೆಂಬರ್ 14, 2019
21 °C

ಒತ್ತಡದ ಗಂಟು; ನಿವಾರಣೆಯ ದಾರಿಯೂ ನಮ್ಮಲ್ಲಿಯೇ ಉಂಟು!

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಒತ್ತಡದ ಗಂಟು; ನಿವಾರಣೆಯ ದಾರಿಯೂ ನಮ್ಮಲ್ಲಿಯೇ ಉಂಟು!

ಒತ್ತಡ ಯಾಕೆ ಉಂಟಾಗುತ್ತದೆ? ಮನಸಲ್ಲಿ ನೀವೊಂದು ನಿರೀಕ್ಷೆ ಇಟ್ಟುಕೊಂಡಿರುತ್ತೀರಾ. ಗಂಡ ಬರುತ್ತಾನೆ, ಅವನನ್ನು ಖುಷಿಪಡಿಸಬೇಕು ಎಂದು ಹೆಂಡತಿ ಎರಡು–ಮೂರು ಗಂಟೆ ಕಷ್ಟಪಟ್ಟು ಅವನಿಗಿಷ್ಟ ಆಗುವ ಅಡುಗೆ ಮಾಡಿ ಕಾಯುತ್ತಿರುತ್ತಾಳೆ. ಅವನು ಬಂದವನೇ ’ನನ್ನ ಫ್ರೆಂಡ್ಸ್‌ ಜತೆ ಊಟ ಮಾಡಿಬಿಟ್ಟೆ. ನಂಗೆ ಊಟ ಬೇಡ’ ಎಂದು ಹೇಳಿ ಹೋಗಿ ಮಲಗಿಬಿಡ್ತಾನೆ. ಆಗ ಹೆಂಡತಿಗೆ ತಲೆ ತಿರುಗಿ ಗಿರ್‌ ಅಂತ ಕೋಪ ಬಂದುಬಿಡುತ್ತದೆ.

ಯಾಕೆ ಹೀಗಾಗುತ್ತದೆ ಅಂದರೆ ಯಾವುದೇ ವಿಷಯದ ಬಗ್ಗೆ ನಮ್ಮ ಮನಸ್ಸಿನಲ್ಲಿ ಒಂದು ಚಿತ್ರಣ ಇರುತ್ತದೆ. ಯಾವುದೋ ಸಿನಿಮಾ ಮಾಡ್ತಾ ಈ ಸಿನಿಮಾ ಸೂಪರ್‌ ಹಿಟ್‌ ಆಗಿಬಿಡತ್ತದೆ. ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡುತ್ತದೆ ಅಂತ ಕಲ್ಪನೆ ಇಟ್ಟುಕೊಂಡು ಬಿಟ್ಟಿರುತ್ತೀರಾ. ಆ ಸಿನಿಮಾ ಟಪ್‌ ಅಂತ ಫ್ಲಾಪ್‌ ಆಗಿಬಿಡುತ್ತದೆ. ಆಗ ಒತ್ತಡ ಶುರುವಾಗುತ್ತದೆ.

ವಿಷಯ ಯಾವುದಾದರೂ ಆಗಿರಬಹುದು. ನಮ್ಮ ತಲೆಯಲ್ಲಿರುವಂಥ ಕಲ್ಪನೆ ಮತ್ತು ವಾಸ್ತವ ಇವೆರಡಕ್ಕೂ ಹೊಂದಾಣಿಕೆ ಆಗದೇ ಇದ್ದಾಗ ಒತ್ತಡ ಶುರುವಾಗುತ್ತದೆ. ಇದನ್ನು ಎರಡು ರೀತಿಯಲ್ಲಿ ನಿವಾರಿಸಿಕೊಳ್ಳಬಹುದು.

ಮೊದಲನೆಯದು ನಮ್ಮ ಮನಸ್ಸಿನಲ್ಲಿನ ಚಿತ್ರಣವನ್ನೇ ವಾಸ್ತವಕ್ಕೆ ತುಂಬ ಹತ್ತಿರವಾಗಿ ಕಟ್ಟಿಕೊಳ್ಳುವುದು. ಆಗ ನಮ್ಮ ನಿರೀಕ್ಷೆಗಳು ಹುಸಿಯಾಗುವ ಪ್ರಮೇಯವೇ ಬರುವುದಿಲ್ಲ. ಎರಡನೆಯದು ನಮ್ಮ ಮನಸ್ಸಿನ ಕಟ್ಟಿಕೊಂಡ ನಿರೀಕ್ಷೆಗಳು ಹುಸಿಯಾದಾಗ ವಾಸ್ತವವನ್ನು ಒಪ್ಪಿಕೊಳ್ಳುವ ದೃಢ ಮನಸ್ಥಿತಿ ಬೆಳೆಸಿಕೊಳ್ಳುವುದು.

ಬಹುತೇಕ ಸಮಯಗಳಲ್ಲಿ ನಿಮ್ಮ ‘ಒತ್ತಡ’ಕ್ಕೆ ಕಾರಣವೂ ನೀವೇ ಆಗಿರುತ್ತೀರಿ.

ನಮಗೆಲ್ಲ ತುಂಬ ಖಚಿತವಾಗಿ ಗೊತ್ತು. ಏನು ಮಾಡಿದರೆ ಒತ್ತಡ ಉಂಟಾಗುತ್ತದೆ; ಏನು ಮಾಡಿದರೆ ಅದನ್ನು ನಿವಾರಿಸಿಕೊಳ್ಳಬಹುದು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಅದನ್ನು ಮಾಡುವುದಿಲ್ಲ. ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಬೇಕು, ಸಿಗರೇಟು ಸೇದಬಾರದು, ಅತಿಯಾಗಿ ಕುಡಿಯಬಾರದು. ಈ ಎಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಸಿಗರೇಟು ಪ್ಯಾಕೇಟ್‌ ಮೇಲೆಯೇ ಬರೆದಿರುತ್ತದೆ; ಸೇದಬೇಡ್ರೋ ಕ್ಯಾನ್ಸರ್‌ ಬರತ್ತೆ ಅಂತ. ಆದ್ರೂ ಸೇದ್ತೀವಿ. ಆದ್ರೂ ಕುಡಿತೀವಿ. ಹಾಗೆಯೇ ಏನು ಮಾಡಿದರೆ ಒತ್ತಡ ನಿವಾರಿಸಿಕೊಳ್ಳಬಹುದು ಎಂಬುದೂ ನಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಅದನ್ನು ಮಾಡುವುದಿಲ್ಲ.

ಪ್ರತಿ ಮನುಷ್ಯನಲ್ಲಿಯೂ ಒಂದು ಅಂತರಂಗದ ಧ್ವನಿ ಇರುತ್ತದೆ. ಅದು ತುಂಬ ಸ್ಪಷ್ಟವಾಗಿ ಯಾವುದು ನಮಗೆ ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಹೇಳುತ್ತಿರುತ್ತದೆ. ತಾತ್ಸಾರ ಮಾಡಿದ್ರೆ ನಿನ್ನ ಶ್ರೀಮತಿಗೆ ಕೋಪ ಬರತ್ತೆ, ದಯವಿಟ್ಟು ಬೇರೆ ಹುಡುಗಿಯರ ಜತೆ ಫೋನಲ್ಲಿ ಮಾತಾಡಬೇಡ, ವಾಟ್ಸ್‌ಆ್ಯಪ್‌ ಮಾಡಬೇಡ  ಎಲ್ಲ ಹೇಳುತ್ತಿರುತ್ತದೆ. ನಾವು ಆ ಧ್ವನಿಯನ್ನು ಕೇರ್‌ ಮಾಡದೇ ಅದನ್ನೇ ಮಾಡುತ್ತಿರುತ್ತೇವೆ. ಯಾವುದೋ ಹೇಳಿಕೆ ಕೊಟ್ಟರೆ ತೊಂದರೆ ಆಗುತ್ತದೆ ಅಂತ ಗೊತ್ತಿದ್ದೂ ಅದನ್ನೇ ಹೇಳುತ್ತಿರುತ್ತೇವೆ. ನಮಗೇ ಗೊತ್ತು ಇವೆಲ್ಲ ದಡ್ಡತನ ಅಂತ. ನಮ್ಮ ಮೂರ್ಖದಿನದಿಂದಲೇ ಒತ್ತಡ ಹುಟ್ಟುವುದು.

ಇನ್ನು ನನ್ನ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ ನನ್ನ ಬದುಕಿನಲ್ಲಿ ಒತ್ತಡ ಎನ್ನುವುದೇ ಇಲ್ಲ. ನನ್ನ ಸ್ವಭಾವವೇ ಹಾಗೆ. ನಾನು ದಿನಕ್ಕೆ ಹದಿನಾರದಿಂದ ಹದಿನೆಂಟು ಗಂಟೆ ಕೆಲಸ ಮಾಡುತ್ತೇನೆ. ಬೆಳಿಗ್ಗೆ 6.15ಕ್ಕೆ ಎದ್ದುಬಿಡುತ್ತೇನೆ. ರಾತ್ರಿ ಮಲುಗುವವರೆಗೂ ಪ್ರತಿಕ್ಷಣ ನಾನು ಕೆಲಸ ಮಾಡುತ್ತಿರಲು ಇಷ್ಟಪಡುತ್ತೇನೆ. ರಾತ್ರಿ 9.30ವರೆಗೆ ನನ್ನ ಮಾತಾಡಿಸಿದರೂ ಬೆಳಿಗ್ಗೆಯಷ್ಟೇ ಉತ್ಸಾಹದಿಂದ ಮಾತನಾಡುತ್ತೇನೆ. ಆ ಕ್ಷಣಕ್ಕೆ ಏನು ಅಗತ್ಯವೋ ಅದರಲ್ಲಿಯೇ ಪೂರ್ಣವಾಗಿ ತೊಡಗಿಸಿಕೊಂಡುಬಿಟ್ಟರೆ ಅಲ್ಲೇ ಒತ್ತಡ ಕಡಿಮೆಯಾಗುತ್ತದೆ.

ಯಾವುದೇ ಕೆಲಸವನ್ನೂ ನಾನು ಕೊಂಚ ಮುಂಚಿತವಾಗಿ ಯೋಜಿಸಿಕೊಳ್ಳುತ್ತೇನೆ. ಬೆಳಿಗ್ಗೆ 9ಗಂಟೆಗೆ ಯಾವುದೋ ಸ್ಥಳದಲ್ಲಿ ಹಾಜರಿರಬೇಕು ಎಂದರೆ ಅದನ್ನು ಎಂಟೂವರೆಗೆ ಎದ್ದುಕೊಂಡು ನಿರ್ಧರಿಸುವುದು ಅಲ್ಲವೇ ಅಲ್ಲ. ಎಂಟೂವರೆಗೆ ಬಸ್‌ ಹಿಡಿಯಬೇಕು, ಎಂಟೂ ಕಾಲಕ್ಕೆ ಸ್ನಾನಮಾಡಬೇಕು, ಎಂಟುಗಂಟೆಗೆ ತಿಂಡಿ ತಿನ್ನಬೇಕು. ಏಳೂವರೆಗೆ ಎದ್ದೇಳಬೇಕು ಎಂದು ರಿವರ್ಸ್‌ ಆಗಿ ಲೆಕ್ಕ ಹಾಕಬೇಕು. ಡೆಡ್‌ಲೈನ್‌ ಟೈಮ್‌ನಿಂದ ತಿರುಗಿ ಲೆಕ್ಕಾಚಾರ ಹಾಕುವುದು ಸೂಕ್ತ. ಒಂದು ಸಿನಿಮಾನ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಬೇಕು ಅಂತಾದರೆ ಆ ತಿಂಗಳಿಂದ ವಾಪಸ್‌ ಲೆಕ್ಕಾಚಾರ ಹಾಕಿ ಜೂನ್‌ದಿಂದ ಸಿನಿಮಾ ಕೆಲಸ ಶುರುವಾಗಬೇಕು ಎಂದು ನಿರ್ಧರಿಸಿಕೊಳ್ಳಬೇಕು. ಬದಲಿಗೆ ಜುಲೈದಲ್ಲಿ ಶುರುವಾಗಿ ನವೆಂಬರ್‌ನಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಾಗುವುದಿಲ್ಲ. ಆಗ ಒತ್ತಡ ಹೆಚ್ಚುತ್ತದೆ.

ಈ ಒತ್ತಡ ಮನುಷ್ಯನ ಚೈತನ್ಯವನ್ನು ಹೇಗೆ ಹೀರಿಕೊಳ್ಳುತ್ತದೆಂದರೆ ನಮ್ಮ ಶಕ್ತಿಯನ್ನೇ ಕುಗ್ಗಿಸಿಬಿಡುತ್ತದೆ. ಎಷ್ಟು ಕಡಿಮೆ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತೇವೆಯೋ ಅಷ್ಟು ಕೆಲಸದ ಗುಣಮಟ್ಟ, ನಮ್ಮ ನೆಮ್ಮದಿ, ಆರೋಗ್ಯ ಇಮ್ಮಡಿಯಾಗುತ್ತಾ ಹೋಗುತ್ತದೆ. ಒತ್ತಡ ಎನ್ನುವುದು ನಿಮ್ಮ ಕೆಲಸಕ್ಕೆ ಸಂಬಂಧಪಟ್ಟ ವಿಷಯವೇ ಅಲ್ಲ. ಅದು ನಮ್ಮ ಮನಸ್ಸಿಗೆ ಸಂಬಂಧಪಟ್ಟ ವಿಷಯ. ಮನುಷ್ಯನೊಳಗಿನ ಯಂತ್ರವನ್ನು ಸರಿಯಾಗಿ ಇಟ್ಟುಕೊಂಡರೆ ಎಲ್ಲವೂ ಸುಂದರವೇ ಆಗುತ್ತದೆ. ಅದು ಹೊರಗಿನ ವಾತಾವರಣಕ್ಕೆ ಸಂಬಂಧಪಟ್ಟಿದ್ದಲ್ಲವೇ ಅಲ್ಲ.

ಈ ಅಂಶಗಳನ್ನು ಅರ್ಥ ಮಾಡಿಕೊಂಡುಬಿಟ್ಟರೆ ಬಹುತೇಕ ಒತ್ತಡ ಕಡಿಮೆಯಾಗಿಬಿಡುತ್ತದೆ.

(ಒತ್ತಡ ನಿರ್ವಹಣೆಯ ಬಗೆಗೆ ರಮೇಶ್‌ ಅರವಿಂದ್‌ ಅವರ ರೂಪಿಸಿರುವ ವಿಡಿಯೊ ನೋಡಲು ಅವರ ಫೇಸ್‌ಬುಕ್‌ ಪುಟಕ್ಕೆ ಭೇಟಿ ನೀಡಬಹುದು. ಕೊಂಡಿ: goo.gl/qB8UtL ಇಲ್ಲಿದೆ).

ಪ್ರತಿಕ್ರಿಯಿಸಿ (+)