ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿಂದಯ್ಯ ಜೆಡಿಎಸ್‌ ಸೇರ್ಪಡೆ: ಅಚ್ಚರಿ ನಡೆ

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಪ್ರೊ. ಎಚ್‌.ಗೋವಿಂದಯ್ಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಜೆಡಿಎಸ್ ಸೇರಿರುವುದು ಜಿಲ್ಲೆಯಲ್ಲಿ ಹಲವು ವ್ಯಾಖ್ಯಾನಗಳಿಗೆ ಗ್ರಾಸ ಒದಗಿಸಿದೆ.
ಮೈಸೂರು ವಿ.ವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ.ಗೋವಿಂದಯ್ಯ 1999ರಲ್ಲಿ ಜೆಡಿಎಸ್‌ನಿಂದ ಚಾಮರಾಜನಗರ (ಮೀಸಲು) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2007ರಲ್ಲಿ ಸಿದ್ದರಾಮಯ್ಯ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದಾಗ ಗೋವಿಂದಯ್ಯ ಸಹ ಹಿಂಬಾಲಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರೂ ಆಗಿದ್ದರು.
ಪಿರಿಯಾಪಟ್ಟಣ ತಾಲ್ಲೂಕಿನ ಮಿಳಿಂದ ವಿದ್ಯಾಸಂಸ್ಥೆಯ ಆಸ್ತಿ ವಿವಾದ ಈಚೆಗೆ ದೊಡ್ಡ ಸುದ್ದಿಯಾಗಿತ್ತು. ಈ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಗೋವಿಂದಯ್ಯ. ಸರ್ಕಾರಿ ಜಾಗದ ಅತಿಕ್ರಮಣ ಆರೋಪ ಈ ಶಾಲೆ ಮೇಲಿದೆ. ಅಲ್ಲದೆ, ಈ ಹಿಂದೆ ಇವರ ಪತ್ನಿ ಗೋಪಮ್ಮ ಅವರು ಉದ್ಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪ ಎದುರಿಸಿದ್ದರು.

‘ಸಾಕಷ್ಟು ವಿಚಾರಗಳಲ್ಲಿ ಹಾಗೂ ಸಮಸ್ಯೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ನೆರವಿಗೆ ಬರುತ್ತಿಲ್ಲ’ ಎಂಬ ಅಸಮಾಧಾನವನ್ನು ಗೋವಿಂದಯ್ಯ ಈಚೆಗೆ ತಮ್ಮ ಆಪ್ತರಲ್ಲಿ ತೋಡಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮಾದಿಗ ಸಮಾಜಕ್ಕೆ ಸೇರಿದ ಅವರು  ತಿ.ನರಸೀಪುರ ತಾಲ್ಲೂಕಿನ ಸಿದ್ದನಹುಂಡಿ ಗ್ರಾಮದವರು. ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಸಂಸ್ಥಾಪಕರಲ್ಲಿ ಒಬ್ಬರು.

ದೇವೇಗೌಡ ಸಂಬಂಧಿ: ಮೈಸೂರು ವಿ.ವಿ ಕುಲಪತಿಯಾಗಿದ್ದ ರಂಗಪ್ಪ ಜನವರಿಯಲ್ಲಿ ನಿವೃತ್ತರಾದರು. ಅದಕ್ಕೂ ಮೊದಲು ಕರ್ನಾಟಕ ರಾಜ್ಯ ಮುಕ್ತ ವಿ.ವಿ (ಕೆಎಸ್‌ಒಯು) ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಕೆಎಸ್‌ಒಯುನಲ್ಲಿ ನಡೆದಿದೆ ಎನ್ನಲಾದ ವಿವಿಧ ಅಕ್ರಮಗಳಲ್ಲಿಯೂ ಅವರ ಹೆಸರು ಕೇಳಿಬಂದಿದೆ. ನ್ಯಾಯಮೂರ್ತಿ ಕೆ.ಭಕ್ತವತ್ಸಲ ನೇತೃತ್ವದ ಏಕಸದಸ್ಯ ಸತ್ಯಶೋಧನಾ ಸಮಿತಿ ಈಗಾಗಲೇ ತನಿಖೆ ನಡೆಸಿ ರಾಜ್ಯಪಾಲರಿಗೆ ವರದಿ ನೀಡಿದೆ.

ರಂಗಪ್ಪ ಅವರು ಎಚ್‌.ಡಿ.ದೇವೇಗೌಡರ ಸಂಬಂಧಿ. ಗೌಡರ ಮೊಮ್ಮಗಳನ್ನು ರಂಗಪ್ಪ ಅವರ ಪುತ್ರ ಶ್ರೇಯಸ್‌ ವಿವಾಹವಾಗಿದ್ದಾರೆ. ಹೀಗಾಗಿ, ಅವರು ಜೆಡಿಎಸ್‌ ಸೇರುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತಿತ್ತು. ಮೈಸೂರಿನಲ್ಲಿ ನಡೆದ ಸಮಾವೇಶದಲ್ಲಿ ರಂಗಪ್ಪ ಜೆಡಿಎಸ್ ಸೇರಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಗರದ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT