ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ನೇತೃತ್ವದಲ್ಲಿ ಶಾಂತಿ ಸಭೆ: ಎಚ್‌ಡಿಕೆ

Last Updated 11 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಂತಿ ಪುನರ್‌ ಸ್ಥಾಪಿಸಲು ದೇವೇಗೌಡರ ನೇತೃತ್ವದಲ್ಲಿ ಶೀಘ್ರವೇ ಶಾಂತಿ ಸಭೆ ನಡೆಸಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಶಾಂತಿ ಸಭೆಗೆ ವಿವಿಧ ಧರ್ಮಗಳ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರನ್ನು ಆಹ್ವಾನಿಸಲಾಗುವುದು. ಅವರು ಬರಲಿ, ಬಿಡಲಿ ನಾಲ್ಕೈದು ದಿನಗಳ ಒಳಗೆ ಮಂಗಳೂರಿನಿಂದ ಕಲ್ಲಡ್ಕದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.

‘ಬಂಟ್ವಾಳದ ಗಲಭೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರಣ. ಪಕ್ಷವನ್ನು ಬಲಿಷ್ಠಗೊಳಿಸಲು ಈ ಎರಡೂ ಪಕ್ಷಗಳು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಅಮಾಯಕ ಕುಟುಂಬಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಉದ್ರೇಕದ ಹೇಳಿಕೆ ನೀಡುವ ಬದಲು ಸೌಹಾರ್ದ ಕಾಪಾಡುವ ಕೆಲಸವನ್ನು ಎರಡೂ ಪಕ್ಷಗಳ ನಾಯಕರುಗಳು ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳುಗಳಿಂದ ಭಯದ ವಾತವಾರಣ ಇದೆ. ಮುಖ್ಯಮಂತ್ರಿ ಸೋಮವಾರ ಪೊಲೀಸ್ ಅಧಿಕಾರಿಗಳ ಸಭೆ ಮಾಡಿದ್ದಾರೆ. ಮುಖ್ಯಮಂತ್ರಿಯವರನ್ನು  ಪ್ರತಿನಿತ್ಯ ಭೇಟಿ ಮಾಡಿ ಮಾಹಿತಿ ನೀಡಬೇಕಾದ ಗುಪ್ತಚರ ವಿಭಾಗದ ಐಜಿ ಏನು ಮಾಡ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ದಕ್ಷಿಣ ಕನ್ನಡ ಜನರು ಷಂಡರಾ ಎಂದು ಸಂಸದೆ ಶೋಭಾ ಕರಂದ್ಲಾಜೆ  ಕೇಳುತ್ತಾರೆ. ತಾಯಿ ಹೃದಯ ಇದ್ದವರು ಈ ರೀತಿ ಮಾತನಾಡುತ್ತಾರಾ. ಈ ರೀತಿ ಪ್ರಚೋದನೆ ಮಾಡೋದನ್ನ ಮೊದಲು ಬಿಡಿ’ ಎಂದು ಸಲಹೆ ನೀಡಿದರು.

ಹಳೆಯದನ್ನು ಬಿಚ್ಚಿಡಬೇಕಾಗುತ್ತದೆ: ‘ನನ್ನ ತಂಟೆಗೆ ಬಂದರೆ ಹಳೆಯದನ್ನೆಲ್ಲಾ ಬಿಚ್ಚಿಡಬೇಕಾಗುತ್ತದೆ. ಬ್ಲಾಕ್‌ಮೇಲ್ ತಂತ್ರಗಳಿಗೆ ನಾನು ಹೆದರುವುದಿಲ್ಲ’ ಎಂದು ಜೆಡಿಎಸ್‌ ಭಿನ್ನಮತೀಯ ಶಾಸಕರಿಗೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
‘ಪ್ರಜ್ವಲ್ ರೇವಣ್ಣ  ಮೇಲೆ ಭಿನ್ನಮತೀಯ ಶಾಸಕರಿಗೆ ಇದ್ದಕ್ಕಿದ್ದಂತೆ ಮಮಕಾರ ಬಂದಿದೆ. ಸೂಟ್‌ಕೇಸ್ ನನಗಿಂತ ಅವರಿಗೆ ಹೆಚ್ಚು ಗೊತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಫಾರೂಕ್‌ ಅವರಿಂದ ಸೂಟ್‌ಕೇಸ್ ಪಡೆದಿದ್ದೇನೆಂದು ಭಿನ್ನಮತೀಯ ಶಾಸಕರು ಹೇಳಿದ್ದಾರೆ. ಫಾರೂಕ್‌ ಅವರನ್ನೆ ಕೇಳಿ ಸತ್ಯ ಗೊತ್ತಾಗುತ್ತದೆ’ ಎಂದು ಪಕ್ಕದಲ್ಲಿದ್ದ ಫಾರೂಕ್‌ ಅವರನ್ನು ಕುಮಾರಸ್ವಾಮಿ ತೋರಿಸಿದರು.
‘ಫಾರೂಕ್‌ ಕಳ್ಳ ದಂಧೆ ಮಾಡುವುದಿಲ್ಲ. ಅವರ ಜತೆ ಪಿಕ್‌ ಪಾಕೆಟ್‌ ದಂಧೆ ಮಾಡುವವರೂ ಇಲ್ಲ’ ಎಂದೂ ಕೆಣಕಿದರು. ‘ಚುನಾವಣೆಗೆ ₹ 10 ಕೋಟಿ ಕೇಳಿದ್ದರು. ನಾನು ಎಲ್ಲಿಂದ ತಂದು ಕೊಡಲಿ, ನೋಟು ಪ್ರಿಂಟ್ ಮಾಡುತ್ತೇನೆಯೇ... ಹೀಗೆ ಮಾತನಾಡಿದರೆ ಎಲ್ಲವನ್ನೂ ಬಿಚ್ಚಿಡಬೇಕಾಗುತ್ತದೆ. ನನ್ನದನ್ನು ಅವರು ಬಿಚ್ಚಿಡಲಿ. ಅದನ್ನು ಎದುರಿಸುತ್ತೇನೆ’ ಎಂದು ಸವಾಲು ಹಾಕಿದರು.

‘ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡದಿರುವುದೇ ಬಂಟ್ವಾಳದಲ್ಲಿ ನಡೆದ ಘಟನೆಗೆ ಕಾರಣ. ಕೆಂಪಯ್ಯನವರಂಥ ಸಲಹೆಗಾರರನ್ನು ಇಟ್ಟುಕೊಂಡರೆ ಇಂಥ ಘಟನೆಗಳು ಆಗುತ್ತವೆ’  ಎಂದು ಕುಮಾರಸ್ವಾಮಿ ಟೀಕಿಸಿದರು.
‘ಪೊಲೀಸ್‌ ಮಹಾನಿರ್ದೇಶಕರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಸಭೆ ಮಾಡಬೇಕು. ಅದರ ಬದಲು ನಕಲಿ ದಾಖಲೆ ಕೊಟ್ಟು ಪೊಲೀಸ್ ಇಲಾಖೆ ಸೇರಿಕೊಂಡಿದ್ದ ಅಧಿಕಾರಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ಸಭೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ,   ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ರೀತಿಯನ್ನು ಕಟುವಾಗಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT