ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಆಟದ ಮೈದಾನಗಳ ಮೇಲೆ ಭೂಗಳ್ಳರ ಕಣ್ಣು

Last Updated 11 ಜುಲೈ 2017, 19:48 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಉದ್ಯಾನ ಮತ್ತು ಆಟದ ಮೈದಾನಗಳು ನಿರ್ವಹಣೆ ಇಲ್ಲದೆ ಒಂದೆಡೆ ಸೊರಗುತ್ತಿದ್ದರೆ, ಮತ್ತೊಂದೆಡೆ ಭೂಗಳ್ಳರಿಂದ ಅತಿಕ್ರಮಣಕ್ಕೆ ತುತ್ತಾಗಿ ‘ಆಮ್ಲಜನಕ ಉತ್ಪಾದನಾ ತಾಣ’ಗಳ ವಿಸ್ತೀರ್ಣ ಕುಗ್ಗುತ್ತಿದೆ. ‘ಉದ್ಯಾನ ನಗರಿ’ ಕಿರೀಟವೂ ದಿನೇ ದಿನೇ ಮುಕ್ಕಾಗುತ್ತಿದೆ.
ಜೆ.ಪಿ.ನಗರದ 5ನೇ ಹಂತದಲ್ಲಿರುವ ನಂಜುಂಡೇಶ್ವರ ಬಡಾವಣೆಯಲ್ಲಿ ಒತ್ತುವರಿಯಾಗಿರುವ ಎರಡು ಉದ್ಯಾನಗಳನ್ನು ಉಳಿಸಲು ಐದು ವರ್ಷಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಗಿರೀಶ್‌ ಗಂಗೊಳ್ಳಿ ಅವರು ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

‘ನಾಗರಿಕ ಬಳಕೆ ಉದ್ದೇಶಕ್ಕೆ ಮೀಸಲಿಟ್ಟ ಜಾಗಗಳು ಅನ್ಯ ಉದ್ದೇಶಕ್ಕೆ    ಹಾಗೂ ಖಾಸಗಿ ವ್ಯಕ್ತಿಗಳ ಅಗತ್ಯಕ್ಕೆ ಬಳಕೆಯಾಗುತ್ತಿವೆ.  ಸರ್ಕಾರದ ಆಸ್ತಿ ರಕ್ಷಿಸಬೇಕಾದ ಪಾಲಿಕೆ ಅಧಿಕಾರಿಗಳು, ಕೆಲವು ಕಾರ್ಪೊರೇಟರ್‌ಗಳು  ಬಿಲ್ಡರ್‌ಗಳು ಮತ್ತು ಭೂಗಳ್ಳರ ಜತೆ ಕೈಜೋಡಿಸಿರುವ ದುರಂತಕ್ಕೆ ನಗರ ಮೂಕಸಾಕ್ಷಿಯಾಗುತ್ತಿದೆ’ ಎನ್ನುತ್ತಾರೆ ಗಿರೀಶ್‌.
ಉದ್ಯಾನ ಉಳಿಸಿಕೊಳ್ಳಲು ಅವರು  ₹40 ಸಾವಿರ ಖರ್ಚು ಮಾಡಿದ್ದಾರೆ. ಬಡಾವಣೆಯ ನಿವಾಸಿಗಳು ಸುಮಾರು ₹35 ಸಾವಿರ ವಂತಿಗೆ ನೀಡುವ ಮೂಲಕ ಇವರ ಹೋರಾಟಕ್ಕೆ ಕೈಜೋಡಿಸಿದ್ದಾರೆ.

‘ನಂಜುಂಡೇಶ್ವರ ಬಡಾವಣೆಯ ಉತ್ತರ ದಿಕ್ಕಿನಲ್ಲಿದ್ದ 53 X 152 ಚದರ ಅಡಿ ವಿಸ್ತೀರ್ಣದ ಉದ್ಯಾನ 2012ರವರೆಗೂ ಒತ್ತುವರಿಯಾಗಿರಲಿಲ್ಲ. ನಿವೇಶನಗಳಿಗೆ ರಸ್ತೆ ಮಾಡಿಕೊಳ್ಳಲು ಬಿಲ್ಡರ್‌ಗಳು ಉದ್ಯಾನದ ತಂತಿ ಬೇಲಿಯನ್ನು ರಾತ್ರೋರಾತ್ರಿ  ಕಿತ್ತುಹಾಕಿಸಿದರು. ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೆ ಜಾಣಕುರುಡು ಪ್ರದರ್ಶಿಸಿದರು. ಪಾಲಿಕೆಯೇ ಬಿಲ್ಡರ್‌ಗಳಿಗೆ 4,500 ಚದರ ಅಡಿ ಜಾಗದಲ್ಲಿ ರಸ್ತೆ ಮಾಡಿ, ಜಲ್ಲಿ ಹಾಕಿಕೊಟ್ಟಿದೆ’ ಎನ್ನುತ್ತಾರೆ ಅವರು.
‘ಹೈಕೋರ್ಟ್‌ ಮೊರೆ ಹೋದಾಗಲೂ ಪಾಲಿಕೆ ಅಧಿಕಾರಿಗಳು ನಕಲಿ ದಾಖಲೆ ತೋರಿಸಿ, ಬಿಲ್ಡರ್‌ ಪರ ನಿಂತರು.  ನ್ಯಾಯಮೂರ್ತಿಗಳು ಒಮ್ಮೆ ನೀಡಿದ ಆದೇಶವನ್ನೇ ವಾಪಸ್‌ ಪಡೆಯುವಂತೆ ಪಾಲಿಕೆ ಅಧಿಕಾರಿಗಳು ನ್ಯಾಯಾಲಯದ ದಿಕ್ಕೂ ತಪ್ಪಿಸಿದರು. ಪುನಹ ಅರ್ಜಿ ಸಲ್ಲಿಸಿದ ಮೇಲೆ ಉದ್ಯಾನದ ಸರ್ವೆ ನಡೆಸುವಂತೆ ಹೈಕೋರ್ಟ್‌ ಪಾಲಿಕೆಗೆ ಆದೇಶ ನೀಡಿದೆ. ಎರಡು ವರ್ಷ ಕಳೆದರೂ ಉದ್ಯಾನದ ಸರ್ವೆ ಮಾಡಿಸಿಲ್ಲ. ಆಯುಕ್ತರಿಗೆ ನಾಲ್ಕು ಬಾರಿ ಪತ್ರ ಬರೆದು ಕೋರ್ಟ್‌ ಆದೇಶದ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ದೂರುತ್ತಾರೆ ಅವರು.
‘ಇದೇ ಬಡಾವಣೆಯ ದಕ್ಷಿಣ ದಿಕ್ಕಿನಲ್ಲಿ 20,750 ಚದರ ಅಡಿ ವಿಸ್ತೀರ್ಣದ ಮತ್ತೊಂದು ಉದ್ಯಾನ ಇದೆ.  ಸಿ.ಎ. ನಿವೇಶನದಲ್ಲಿರುವ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕ್ಲಬ್‌  ಉದ್ಯಾನದ 6,000 ಚದರ ಅಡಿ  ಜಾಗವನ್ನು ವಾಹನ ಪಾರ್ಕಿಂಗ್‌ಗೆ ಅತಿಕ್ರಮಿಸಿಕೊಂಡಿದೆ’ ಎಂದು ಬಡಾವಣೆ ನಿವಾಸಿಗಳು ದೂರುತ್ತಾರೆ.

‘ಬಿಬಿಎಂಪಿ ಕೇಂದ್ರ ಕಚೇರಿಯಿಂದ 200 ಮೀಟರ್‌ ಅಂತರದಲ್ಲಿರುವ ಬನ್ನಪ್ಪ ಉದ್ಯಾನದ ಅರ್ಧ ಜಾಗವನ್ನು ಹಲಸೂರುಗೇಟ್‌ ಠಾಣೆ ಪೊಲೀಸರು ವಾಹನ ಪಾರ್ಕಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ. ವಾಯುವಿಹಾರ ಮತ್ತು ಪುಟಾಣಿಗಳ ಆಟೋಟಕ್ಕೆ ಬಳಕೆ ಆಗಬೇಕಿದ್ದ ಜಾಗ ಅನ್ಯ ಉದ್ದೇಶಕ್ಕೆ ಉಪಯೋಗವಾಗುತ್ತಿದೆ’ ಎಂಬುದು ಸ್ಥಳೀಯರ ಅಸಮಾಧಾನದ ನುಡಿ.

ಬಹಳಷ್ಟು ಬಡಾವಣೆಗಳಲ್ಲಿ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಇಂದಿರಾನಗರ ಬಡಾವಣೆಯ ಉದ್ಯಾನದ ಕಾವಲು ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿದ್ದ ಕಾರ್ಮಿಕನಿಗೆ ಗುತ್ತಿಗೆದಾರರು 8 ತಿಂಗಳಿನಿಂದ ಸಂಬಳ ನೀಡಿಲ್ಲ. ಆತ ಕೆಲಸ ಬಿಟ್ಟಿದ್ದಾನೆ. ಹಾಳುಬಿದ್ದಿದ್ದ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಈಗ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘವೇ ಹೊತ್ತುಕೊಂಡಿದೆ.

ಆಟದ ಮೈದಾನ ಉಳಿಸಲು ಹೋರಾಟ

ರಾಜರಾಜೇಶ್ವರಿ ನಗರದಲ್ಲಿ ಐಡಿಯಲ್‌ ಹೋಮ್ಸ್‌ ನಿವಾಸಿಗಳು ಮಕ್ಕಳ ಆಟದ ಮೈದಾನ ಉಳಿಸಿಕೊಳ್ಳಲು ಐದಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಪಾಲಿಕೆಗೆ ಸೇರಿದ ಹಳ್ಳಕೊಳ್ಳದಿಂದ ಕೂಡಿದ್ದ 2 ಎಕರೆ ಜಾಗವನ್ನು ನಾಗರಿಕ ಬಳಕೆಗೆ ಮೀಸಲಿಡಲಾಗಿತ್ತು. ಸ್ಥಳೀಯರ ಕೋರಿಕೆಯಂತೆ ಈ ವಾರ್ಡ್‌ನ ಪಾಲಿಕೆ ಸದಸ್ಯರು  ಜಾಗವನ್ನು  ಸಮತಟ್ಟು ಮಾಡಿಸಿ, ಪುಟಾಣಿಗಳಿಗೆ ಆಟವಾಡಲು ಅನುಕೂಲ ಮಾಡಿಕೊಟ್ಟಿದ್ದರು.
ಆದರೆ, ಮಕ್ಕಳು ಆಡುವ ಜಾಗವನ್ನು  ಕಂಪೆನಿಯೊಂದಕ್ಕೆ ಸಾಮಗ್ರಿ ದಾಸ್ತಾನು ಮಾಡಿಕೊಳ್ಳಲು ಮತ್ತು ಮಳೆನೀರು ಚರಂಡಿಯ ತ್ಯಾಜ್ಯವನ್ನು ರಾಶಿ ಹಾಕಲು ಬಿಬಿಎಂಪಿ ಬಿಟ್ಟುಕೊಟ್ಟಿದೆ ಎನ್ನುವುದು ನಿವಾಸಿಗಳ ಆರೋಪ.
‘ಮಕ್ಕಳ ಆಟದ ಮೈದಾನ ಸಮತಟ್ಟು ಮಾಡಿ, ಸುತ್ತಲೂ ಬೇಲಿ ನಿರ್ಮಿಸಿಕೊಡಲು ಪಾಲಿಕೆಗೆ ಮೂರು ವರ್ಷಗಳಿಂದ ಪತ್ರ ಬರೆಯುತ್ತಲೇ ಇದ್ದೇವೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಐಡಿಯಲ್‌ ಹೋಮ್ಸ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ವಾಣಿ ವೈದ್ಯನಾಥ್‌.

ಸರ್ವೆಗೆ ಮೋಜಣಿದಾರರೇ ಇಲ್ಲ
ಸುಮಾರು 814 ಚದರ ಕಿಲೋ ಮೀಟರ್ ವ್ಯಾಪ್ತಿ ಹಬ್ಬಿರುವ ನಗರದಲ್ಲಿ ಪಾಲಿಕೆಗೆ ಸೇರಿದ 2,000ಕ್ಕೂ ಹೆಚ್ಚು ಉದ್ಯಾನ, ಆಟದ ಮೈದಾನ ಹಾಗೂ ಬಯಲು ಜಾಗಗಳು ಇವೆ. ಆದರೆ, ಒತ್ತುವರಿಯಾಗಿರುವ ಜಾಗ ಅಳತೆ ಮಾಡಿ ಸಂರಕ್ಷಿಸಲು ಬಿಬಿಎಂಪಿಯಲ್ಲಿರುವುದು ಇಬ್ಬರು ಮೋಜಣಿದಾರರು (ಸರ್ವೆಯರ್‌ಗಳು) ಮಾತ್ರ!
‘ಎರಡು ವರ್ಷಗಳಿಂದ ಇಬ್ಬರೇ ಸರ್ವೆಯರ್‌ಗಳನ್ನಿಟ್ಟುಕೊಂಡು ಪಾಲಿಕೆಯ ಆಸ್ತಿ ಸರ್ವೆ ಮಾಡಬೇಕಾಗಿದೆ. ಹೆಚ್ಚುವರಿಯಾಗಿ 10 ಸರ್ವೆಯರ್‌ಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು.

ಉದ್ಯಾನ, ಆಟದ ಮೈದಾನ ಹಾಗೂ ಸಿ.ಎ ನಿವೇಶನಗಳನ್ನು ರಕ್ಷಿಸಲು ಗಂಭೀರ ಪ್ರಯತ್ನ ಮಾಡುತ್ತಿದ್ದೇವೆ. ಉದ್ಯಾನಗಳ ರಕ್ಷಣೆಗೆ ಶೀಘ್ರವೇ ಅಧಿಸೂಚನೆ ಹೊರಡಿಸುತ್ತೇವೆ
ಎನ್‌.ಮಂಜುನಾಥ್‌ ಪ್ರಸಾದ್‌
ಬಿಬಿಎಂಪಿ ಆಯುಕ್ತ

ಅಧಿಸೂಚನೆ ಹೊರಡಿಸಲು ಬಾಕಿ ಇರುವ, ಒತ್ತುವರಿಯಾಗಿರುವ ಉದ್ಯಾನ, ಆಟದ ಮೈದಾನಗಳನ್ನು ಸರ್ವೆ ಮಾಡಿಸಲು ಸರ್ವೆಯರ್‌ಗಳ ಕೊರತೆ ಇದೆ

ಎಸ್‌.ಜಿ.ರವೀಂದ್ರ,
ಪಾಲಿಕೆ ವಿಶೇಷ ಆಯುಕ್ತ

ಅಂಕಿ–ಅಂಶ

1,904
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನ, ಆಟದ ಮೈದಾನ, ಬಯಲು ಜಾಗಗಳ ಒಟ್ಟು ಸಂಖ್ಯೆ

1,688
ಅಧಿಸೂಚಿತ ಉದ್ಯಾನ, ಆಟದ ಮೈದಾನ, ಬಯಲು ಜಾಗಗಳು

256
ಆಟದ ಮೈದಾನಗಳು

216
ಅಧಿಸೂಚನೆ ಹೊರಡಿಸಬೇಕಿರುವ ಉದ್ಯಾನ, ಆಟದ ಮೈದಾನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT