ಸೋಮವಾರ, ಡಿಸೆಂಬರ್ 9, 2019
23 °C

ಕಸ ಸಾಗಣೆ ಲಾರಿ ಚಾಲಕರಿಗಿಲ್ಲ ಆರು ತಿಂಗಳ ಸಂಬಳ

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಕಸ ಸಾಗಣೆ ಲಾರಿ ಚಾಲಕರಿಗಿಲ್ಲ ಆರು ತಿಂಗಳ ಸಂಬಳ

ಬೆಂಗಳೂರು: ನಗರದ ಕಸ ಸಾಗಣೆ ಮಾಡುವ ಕಾಂಪ್ಯಾಕ್ಟ್‌ ಲಾರಿಗಳ ಚಾಲಕರಿಗೆ  ಐದಾರು ತಿಂಗಳುಗಳಿಂದ ಸಂಬಳ ಸಿಗದೆ, ಜೀವನ ನಿರ್ವಹಣೆಗೆ ಪಡಿಪಾಟಲು ಅನುಭವಿಸುತ್ತಿದ್ದಾರೆ.

‘ಸಂಬಳ ಸಿಗದ ಕಾರಣ ಮನೆ ಬಾಡಿಗೆ, ವಿದ್ಯುತ್‌ ಬಿಲ್‌, ಮಕ್ಕಳ ಶಾಲಾ ಶುಲ್ಕ ಪಾವತಿಸಲು, ದಿನಸಿ ಪದಾರ್ಥ ಖರೀದಿಸಲು ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವ ಹೆಂಡತಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಚಾಲಕರಾದ ಕನ್ನಿಮುತ್ತು, ರಾಜೇಂದ್ರನ್‌, ಅಜಿತ್‌, ದಿಲೀಪ್‌ ಕುಮಾರ್‌,  ಆಂಜನೇಯ, ಮೈಕೆಲ್‌ ಸೇರಿದಂತೆ 15ಕ್ಕೂ ಹೆಚ್ಚು ಚಾಲಕರು ‘ಪ್ರಜಾವಾಣಿ’ ಜತೆಗೆ ಸಮಸ್ಯೆ ಹೇಳಿಕೊಂಡರು.

‘25 ಚಾಲಕರ ಪೈಕಿ ಕೆಲವರಿಗೆ ಡಿಸೆಂಬರ್‌ನಿಂದ, ಇನ್ನೂ ಕೆಲವರಿಗೆ ಜನವರಿಯಿಂದ ವೇತನ ಸಿಕ್ಕಿಲ್ಲ. ಸಂಬಳ ಕೇಳಿದರೆ ಕೆಲಸದಿಂದ ತೆಗೆದು ಹಾಕುವುದಾಗಿ  ಬೆದರಿಸುತ್ತಾರೆ’ ಎಂದು ನೊಂದ ಚಾಲಕರು ಮೇಯರ್‌ ಜಿ.ಪದ್ಮಾವತಿ  ಬಳಿ ಅಳಲು ತೋಡಿಕೊಂಡರು.

ಕಸ ಸಾಗಣೆ ಗುತ್ತಿಗೆ ಪಡೆದಿರುವ ಟಿಪಿಎಸ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಕಂಪೆನಿಯ ವ್ಯವಸ್ಥಾಪಕ ಮಹದೇವ್‌ ಅವರನ್ನು ಮೇಯರ್‌ ಕಚೇರಿಗೆ ಕರೆಸಿಕೊಂಡು, ಹತ್ತು ದಿನಗಳೊಳಗೆ ಸಂಬಳ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು. ‘ನಿಮಗೂ ನಾಲ್ಕೈದು ತಿಂಗಳು ಸಂಬಳ ತಡೆ ಹಿಡಿದರೆ ಕುಟುಂಬವನ್ನು  ಹೇಗೆ ಸಾಕುತ್ತೀರಿ’ ಎಂದು ಪ್ರಶ್ನಿಸಿದರು.ಎಲ್ಲರಿಗೂ ಸಂಬಳ ತಡೆ ಹಿಡಿದಿಲ್ಲ: ‘ರಜೆ ಪಡೆದ ಕಾರಣಕ್ಕೆ ಕೆಲ ಚಾಲಕರಿಗೆ 2016ರ ಅಕ್ಟೋಬರ್‌ ಅಥವಾ ಡಿಸೆಂಬರ್‌ ತಿಂಗಳ ಬಾಟಾ ಬಾಕಿ ಇರಬಹುದು. ತಾಂತ್ರಿಕ ಕಾರಣಕ್ಕಾಗಿ ಇಬ್ಬರು ಚಾಲಕರಿಗೆ ಮೇ ಮತ್ತು ಜೂನ್‌ ತಿಂಗಳ ಸಂಬಳ ಪಾವತಿಯಾಗಿಲ್ಲ’ ಎಂದು ಮಹದೇವ್‌ ಪ್ರತಿಕ್ರಿಯಿಸಿದರು. ‘ದಕ್ಷಿಣ ವಲಯದಲ್ಲಿ ಕಸ ಸಂಸ್ಕರಣಾ ಘಟಕದಲ್ಲಿ ಕಸ ಸುರಿಯಲು ಸ್ಥಳೀಯರು ಬಿಡುತ್ತಿಲ್ಲ.

ಹೀಗಾಗಿ ಕೆಲವು ಲಾರಿಗಳನ್ನು ಗೋದಾಮಿನಲ್ಲಿ ನಿಲ್ಲಿಸಲಾಗಿದೆ. 25 ಚಾಲಕರ ಪೈಕಿ 21 ಚಾಲಕರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಉಳಿದವರು ಬೇರೆಡೆ ಹೋಗಿದ್ದಾರೆ’ ಎಂದು  ತಿಳಿಸಿದರು.

ಕಾಂಪ್ಯಾಕ್ಟ್‌ ಲಾರಿಗಳ ಚಾಲನೆ ಮಾಡಲು 25 ಗುತ್ತಿಗೆ ಪೌರಕಾರ್ಮಿಕರನ್ನು ಕಂಪೆನಿ ನೇಮಿಸಿಕೊಂಡಿತ್ತು. ಅವರಿಗೆ ತಿಂಗಳಿಗೆ  ₹12 ಸಾವಿರ ವೇತನ ಮತ್ತು ₹6 ಸಾವಿರ ಬಾಟಾ ನೀಡುವುದಾಗಿ ತಿಳಿಸಿತ್ತು.

ಗೋದಾಮಿನಲ್ಲೇ ನಿಂತ ಲಾರಿಗಳು

ಕಸ ಸಾಗಣೆಗಾಗಿ ತಲಾ ₹32 ಲಕ್ಷ ಬೆಲೆಯ 25 ಕಾಂಪ್ಯಾಕ್ಟ್‌ ಲಾರಿಗಳನ್ನು ಬಿಬಿಎಂಪಿ ಖರೀದಿಸಿತ್ತು. ದಕ್ಷಿಣ ವಲಯದಲ್ಲಿ ಕಸ ಸಾಗಿಸಲು ಬಳಸುತ್ತಿದ್ದ 8 ಲಾರಿಗಳನ್ನು ಸುಬ್ಬರಾಯನಪಾಳ್ಯದ ಗೋದಾಮಿನಲ್ಲಿ ಮತ್ತು 6 ಲಾರಿಗಳನ್ನು ದೊಡ್ಡಬಿದರಕಲ್ಲು ಗೋದಾಮಿನಲ್ಲಿ ಒಂದು ವರ್ಷದಿಂದ ನಿಲ್ಲಿಸಲಾಗಿದೆ. ಅವುಗಳನ್ನು ಬಳಕೆ ಮಾಡದೆ ಮತ್ತು ಸರಿಯಾಗಿ ನಿರ್ವಹಣೆ ಮಾಡದೆ ತುಕ್ಕುಹಿಡಿಯಲಾರಂಭಿಸಿವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘11 ಲಾರಿಗಳ ನಿರ್ವಹಣೆಯನ್ನು ಕಂಪೆನಿ ನೋಡಿಕೊಳ್ಳದೆ ಚಾಲಕರ ಹೆಗಲಿಗೆ ವಹಿಸಿದೆ. ಪಂಕ್ಚರ್‌ ಹಾಕಿಸುವುದು, ಆಯಿಲ್‌ ಬದಲಾಯಿಸುವುದು ಸೇರಿದಂತೆ  ಲಾರಿಯ ಸಂಪೂರ್ಣ ನಿರ್ವಹಣೆ ಖರ್ಚು ಭರಿಸುವಂತೆ ಚಾಲಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಅಪಘಾತಗಳು ಸಂಭವಿಸಿದಾಗಲೂ ಚಾಲಕರ ನೆರವಿಗೆ ಬರುವುದಿಲ್ಲ’ ಎಂದು ನೊಂದ ಚಾಲಕರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪದ್ಮಾವತಿ, ‘ಸುಬ್ಬರಾಯನಪಾಳ್ಯದಲ್ಲಿ ಏಳೆಂಟು ಲಾರಿಗಳನ್ನು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಏಳೆಂಟು ಸಾವಿರ ರೂಪಾಯಿಗಳಲ್ಲಿ ಮುಗಿಯುವ ಸಣ್ಣಪುಟ್ಟ ರಿಪೇರಿ ವೆಚ್ಚ ಭರಿಸಲಾಗದೆ ಲಾರಿಗಳನ್ನು ನಿಂತಲ್ಲೇ ಬಿಟ್ಟಿದ್ದಾರೆ. ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಅವರಿಂದ ಇನ್ನೂ ಉತ್ತರ ಬಂದಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)