ಸೋಮವಾರ, ಡಿಸೆಂಬರ್ 16, 2019
23 °C
ತ್ಯಾಜ್ಯ ವಿಲೇವಾರಿ ಇಲ್ಲದೆ ದುರ್ನಾತ: ಆನಂದನಗರದ ಆನಂದವನ್ನು ಕಿತ್ತುಕೊಳ್ಳುತ್ತಿರುವ ಡೆಂಗಿ ; 19 ಪ್ರಕರಣ ಪತ್ತೆ

ರಸ್ತೆ ಮೇಲೆ ಹಳ್ಳವೋ.. ಹಳ್ಳದಲ್ಲಿ ರಸ್ತೆಯೋ..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಮೇಲೆ ಹಳ್ಳವೋ.. ಹಳ್ಳದಲ್ಲಿ ರಸ್ತೆಯೋ..?

ಹುಬ್ಬಳ್ಳಿ: ನಿತ್ಯ ಓಡಾಡುವ ರಸ್ತೆ ಮೇಲೆ ಬೃಹದಾಕಾರದ ಗುಂಡಿಗಳು, ಮನೆಯ ಮುಂದೆ ಬಂದು ನಿಲ್ಲುವ ತ್ಯಾಜ್ಯ ನೀರು, ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ. ಇದು ಇಲ್ಲಿನ ಆನಂದ ನಗರದ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟ.

ಇಲ್ಲಿನ ಆನಂದ ನಗರದ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ನಿಂತು ಹಳ್ಳದಂತೆ ಕಾಣುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

‘ಕೆಲಸ ಕಾರ್ಯಗಳಿಗೆ ಹೋಗುವಾಗ ಪ್ರತಿದಿನ ಹೊಲಸು ನೀರನ್ನು ದಾಟಿಕೊಂಡೇ ಹೋಗಬೇಕು. ಸ್ವಚ್ಛತೆ ಕಡೆಗೆ ಪಾಲಿಕೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಜಾವೀದ್‌ ನವಲೂರು ಅಸಮಾಧಾನ ವ್ಯಕ್ತಪಡಿಸಿದರು.

‘ತ್ಯಾಜ್ಯ ನೀರಿನಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ನಿವಾಸಿಗಳಿಗೆ ಡೆಂಗಿ ಭೀತಿ ಕಾಡುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಮಕ್ಕಳ್ನಾ ಕಟ್ಕೊಂಡ್ ಸೊಳ್ಳೆಗಳ ಜೊತಿಗಿ ಸಂಸಾರ ಮಾಡೋದು ದುಸ್ತರ ಆಗ್ಯಾದರಿ, ರಾತ್ರಿ ಸೊಳ್ಳಿ ಮಲಗಾಕ್ ಬಿಡಾಂಗಿಲ್ಲ. ಹಗಲೊತ್ತು ಹೊರಗ ಓಡಾಡಬೇಕೆಂದ್ರ ಗಟಾರ ನೀರಿನ್ಯಾಗ ಹಾಸಿ ಹೋಗಬೇಕಾಗೇದ’ ಎಂದು ಮಲ್ಲೇಶ್ವರ ಬಡಾವಣೆ ನಿವಾಸಿ ಮುಕ್ತುಮ್‌ಸಾಬ್ ಅನ್ಸಾರಿ ಹೇಳಿದರು.

ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸಂಬಂಧಿಸಿದವರು ಗಮನಿಸಬೇಕು ಎಂದು ಒತ್ತಾಯ ಮಾಡಿದರು.

ಪಾಲಿಕೆ ಆಯುಕ್ತರ ನಿರ್ಲಕ್ಷ್ಯ:  ‘ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣಕ್ಕಾಗಿ ₹ 90 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದ್ದರೂ ಮಹಾನಗರ ಪಾಲಿಕೆ ಆಯುಕ್ತರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಲ್ಲೇಶ್ವರ ಬಡಾವಣೆ, ಗೂಡಿಹಾಳ ಪ್ಲಾಟ್ ಹಾಗೂ ಹನುಮಯ್ಯ ಬಡಾವಣೆಗಳಿಗೆ ಸರಿಯಾದ ರಸ್ತೆ ಹಾಗೂ ಬೀದಿ ದೀಪಗಳಿಲ್ಲದೆ ಜನರು ಪರದಾಡುವಂತಾಗಿದೆ’ ಎಂದು ಪಾಲಿಕೆ ಸದಸ್ಯೆ ದೀಪಾ ನಾಗರಾಜ ಗೌರಿ ವಿಷಾದ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಕರೆ ಸ್ವೀಕರಿಸಲಿಲ್ಲ.

–ರೇಣುಕಾ ಬಾರಿಕಾಯಿ

***

19 ಡೆಂಗಿ ಪ್ರಕರಣ ಪತ್ತೆ : ಜನಜಾಗೃತಿ

‘ಕಳೆದ ತಿಂಗಳು ಹುಬ್ಬಳ್ಳಿ– ಧಾರವಾಡ ನಗರದಲ್ಲಿ ಇಲ್ಲಿಯವರೆಗೆ 19 ಡೆಂಗಿ ಪ್ರಕರಣಗಳು ದಾಖಲಾಗಿವೆ. ಜನ ಜಾಗೃತಿ, ಫಾಗಿಂಗ್‌ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೀರಲ್ಲಿ ಸೊಳ್ಳೆಗಳ ಲ್ವಾರಾ ಪ್ರಮಾಣ ತಗ್ಗಿಸಲು ನಿಂತ ನೀರಿಗೆ ಅಬೇಟ್ ದ್ರಾವಣ ಹಾಗೂ ನಿತ್ಯ ಬಳಕೆಯ ಟ್ಯಾಂಕರ್‌ಗಳಿಗೆ ಟೆಂಪೊಸ್ ಔಷಧಿ ಸಿಂಪಡಣೆ ಮಾಡುತ್ತಿದ್ದು, ಈ ಕುರಿತು ಇದೇ 10ರಿಂದ ಹತ್ತು ದಿನಗಳ ಸಮೀಕ್ಷೆ ಪ್ರಾರಂಭಿಸಲಾಗಿದೆ’  ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ  ’ಪ್ರಜಾವಾಣಿ’ಗೆ ತಿಳಿಸಿದರು.

***

ಬೀದಿ ದೀಪ ಇಲ್ಲದಿರುವುದರಿಂದ ರಾತ್ರಿ ಹೊರಗ ಹೋಗಾಕ್ ಭಯ ಆಗ್ತಾದರಿ, ಸಂಬಂಧಪಟ್ಟೋರು ಇತ್ತಾಗ ತಲಿ ಹಾಕೀನೂ ಮಲಗಂಗಿಲ್ರೀ

ನಿಂಗವ್ವ ಶಂಕ್ರೆಪ್ಪ ಜಿನ್ನೂರ, ಸ್ಥಳೀಯ ನಿವಾಸಿ

ಪ್ರತಿಕ್ರಿಯಿಸಿ (+)