ಸೋಮವಾರ, ಡಿಸೆಂಬರ್ 16, 2019
26 °C

ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕ್ರಮ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಕ್ರಮ: ಎಚ್ಚರಿಕೆ

ಚಾಮರಾಜನಗರ: ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆ ಬಾವಿಗಳಿಂದ ಫಲಾನುಭವಿಗಳಿಗೆ ನೀರು ಪೂರೈಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾರಿ ಮತ್ತು ಪಂಗಡದ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿದ್ದರೂ ಅವುಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸದೆ ಇರುವುದರ ಕುರಿತು ಗಂಭೀರ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ 308 ಕೊಳವೆ ಬಾವಿ ಕೊರೆಯಿಸಲಾಗಿದೆ. ಆದರೆ, ಅವುಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಈ ಸಂಬಂಧ ಸೆಸ್ಕ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸೆಸ್ಕ್‌ ಅಧಿಕಾರಿಗಳು ತಮಗೆ ಪತ್ರ ಬಂದಿಲ್ಲ. ಹಣ ಕಟ್ಟಿದರೆ 3 ತಿಂಗಳಲ್ಲಿ ಸಂಪರ್ಕ ಕಲ್ಪಿಸಲಾಗುವುದು ಎಂದರು.. ಇಲಾಖೆಯಲ್ಲಿ ಹಣ ಇದೆ. ವಾರದೊಳಗೆ ಹಣ ಪಾವತಿ ಮಾಡುವುದಾಗಿ ಅಧಿಕಾರಿಗಳು ಹೇಳಿದರು.

‘ಇಲಾಖೆಗಳ ನಡುವೆ ಸಂವಹನ ಸರಿಯಾಗಿ ನಡೆದಿಲ್ಲ. ಇದು ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗಾಗಿ ಇರುವ ಯೋಜನೆ. ಸರ್ಕಾರದ ಯೋಜನೆಯನ್ನು ಅವರಿಗೆ ತಲುಪಿಸದೆ ಇದ್ದರೆ ಪ್ರಯೋಜನವೇನು? ಹೊಸ ಕಾನೂನಿನ ಬಗ್ಗೆ ನಿಮಗೆ ತಿಳಿದಿದೆಯೇ? ಅನುದಾನ ಇಲ್ಲ ಎಂದರೆ ಒಪ್ಪಬಹುದು.

ಅನುದಾನ ಇದ್ದೂ ಅದನ್ನು ಬಳಕೆಯಾಗದಿದ್ದರೆ ಕಾಯ್ದೆ ಪ್ರಕಾರ ಹೋಗಬೇಕಾಗುತ್ತದೆ. ಮೂರು ತಿಂಗಳಲ್ಲಿ ಪರಿಶೀಲನೆಗೆ ಬರುತ್ತೇವೆ. ಕೆಲಸ ಆಗಿಲ್ಲ ಎಂದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ ಎಚ್ಚರಿಕೆ ನೀಡಿದರು.

ಕುಡಿಯುವ ನೀರು: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೆಲವು ಗ್ರಾಮಗಳಿಗೆ ಕಚ್ಚಾ ನೀರು ಪೂರೈಕೆಯಾಗುತ್ತಿದೆ. ಪಂಪ್‌ಸೆಟ್‌ಗಳಿಗೆ ವೋಲ್ಟೇಜ್‌ ಸಾಲುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಉಳಿದಂತೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಘಟಕ ಈ ತಿಂಗಳ ಅಂತ್ಯದಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಎಂಜಿನಿಯರ್‌ ಮಾಹಿತಿ ನೀಡಿದರು.

ರೈತರಿಗೆ ಪರಿಹಾರ– ಕ್ರಮ: ಫಸಲ್‌ ಬಿಮಾ ಯೋಜನೆಯಡಿ ಬಿಡುಗಡೆಯಾದ ವಿಮಾ ಹಣ ರೈತರ ಖಾತೆಗೆ ಜಮಾ ಆಗದೆ ಇರುವುದು ಮತ್ತು ಹೊಸದಾಗಿ ಬೆಳೆ ವಿಮೆ ನೋಂದಣಿಯಲ್ಲಿನ ಸಮಸ್ಯೆ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸಮಸ್ಯೆ ಬಗೆಹರಿಸದ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಜಿಲ್ಲೆಯ ವಿವಿಧೆಡೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದೆ. ಅವರನ್ನು ಯಾವ ರೀತಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಲು ಡಿಡಿಪಿಐ ಮಂಜುಳಾ ಅವರಿಗೆ ಸೂಚನೆ ನೀಡಲಾಯಿತು.

ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು, ತಮ್ಮ ಕ್ಷೇತ್ರದಲ್ಲಿನ ಪದವೀಧರರನ್ನು ಅಂಕದ ಆಧಾರದಲ್ಲಿ ಆಯ್ಕೆ ಮಾಡುತ್ತಾರೆ ಎಂದು ಮಂಜುಳಾ ವಿವರಿಸಿದರು. ಕೆಲವೆಡೆ ನಿಯಮಾವಳಿಯ ಉಲ್ಲಂಘನೆ ಆಗಿದೆ. ತಮಗೆ ಬೇಕಾದವ ರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ದೂರುಗಳು ಬಂದಿವೆ. ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ಬಿಇಒಗಳ ಮೂಲಕ ವರದಿ ಪಡೆಯಲು ನಿರ್ದೇಶಿಸಲಾಯಿತು.

‘ಶಿಕ್ಷಣ, ನರೇಗಾ, ಆರೋಗ್ಯ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಗುಂಡ್ಲುಪೇಟೆ ತೀರಾ ಹಿಂದುಳಿದಿದೆ. ನೀವೇನು ಮಾಡುತ್ತಿದ್ದೀರಿ? ನಾನು ಫೋನ್ ಮಾಡಿದರೂ ರಿಸೀವ್ ಮಾಡುವುದಿಲ್ಲ. ಇನ್ನು ಸಾಮಾನ್ಯ ಜನರಿಗೆ ಸಿಗುತ್ತೀರಾ?’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಅವರು ಇಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

1,100 ಜ್ವರ ಪ್ರಕರಣ: ಒಂದು ವಾರದಲ್ಲಿ ಜಿಲ್ಲೆಯಲ್ಲಿ ಸುಮಾರು 1,100 ಜ್ವರದ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 98 ಡೆಂಗಿ ಪ್ರಕರಣಗಳಾಗಿವೆ. ಪ್ಲೇಟ್‌ಲೆಟ್ಸ್‌ಅನ್ನು ಮೈಸೂರಿನಿಂದ ತರಿಸಿ ಇಟ್ಟುಕೊಂಡರೆ ಎರಡು ದಿನದೊಳಗೆ ಬಳಸಬೇಕು. ಹೀಗಾಗಿ ಅಗತ್ಯ ಬಿದ್ದಾಗ ಪ್ಲೇಟ್‌ಲೆಟ್ಸ್‌ ತರಿಸಿಕೊಳ್ಳಲೆಂದೇ ಒಂದು ಆ್ಯಂಬುಲೆನ್ಸ್‌ಅನ್ನು ಕಾಯ್ದಿರಿಸಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ರಘುರಾಂ ಸರ್ವೇಗಾರ್ ತಿಳಿಸಿದರು.

ಸಭೆಗೆ ವೈದ್ಯಕೀಯ ಕಾಲೇಜಿನ ಡೀನ್‌ ಚಂದ್ರಶೇಖರ್ ಅವರು ಹಾಜರಾಗದೆ ಇರುವುದನ್ನು ಅಧ್ಯಕ್ಷ ರಾಮಚಂದ್ರ ಪ್ರಸ್ತಾಪಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ

ಗುಂಡ್ಲುಪೇಟೆ, ಕೊಳ್ಳೇಗಾಲ ಇ.ಒ ಅಮಾನತಿಗೆ ಪತ್ರ

ಚಾಮರಾಜನಗರ:ಸರ್ಕಾರದ ಯೋಜನೆಗಳನ್ನು ಸಮರ್ಪಕ ಜಾರಿಗೆ ವಿಫಲವಾಗುತ್ತಿರುವ ಗುಂಡ್ಲುಪೇಟೆ, ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಮಾನತು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಜಿಲ್ಲಾ ಪಂಚಾಯಿತಿ ಸಿಇಒ ಕೆ. ಹರೀಶ್‌ ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ‘ಆಡಳಿತ ವ್ಯವಸ್ಥೆ ಬದಲಿಸಬೇಕು ಎನ್ನುವುದು ಅಧಿಕಾರಿಗಳ ಮನಸಿನಲ್ಲಿ ಬರಬೇಕು. ನಿಮಗೆ ಆಡಳಿತ ನಡೆಸಲು ಬಾರದಿರುವುದೇ ಸಮಸ್ಯೆ. ಅಗತ್ಯ ಬದಲಾವಣೆ ಮಾಡಲು ಅಧಿಕಾರ ನೀಡಿದ್ದೇವೆ.

ಸಾಕಷ್ಟು ಅವಕಾಶ ನೀಡಿಯಾಗಿದೆ. ನಿಮ್ಮ ಕಾರ್ಯವೈಖರಿ ವಿರುದ್ಧ ದೂರುಗಳು ಬಂದಿವೆ’ ಎಂದು ಕೊಳ್ಳೇಗಾಲ ಇ.ಒ ದರ್ಶನ್‌ ಮತ್ತು ಗುಂಡ್ಲುಪೇಟೆಯ ಇ.ಒ ಪುಷ್ಪಾ ಎಂ. ಕಮ್ಮಾರ್‌ ವಿರುದ್ಧ ಹರಿಹಾಯ್ದರು.

ನರೇಗಾದಲ್ಲಿ ಹಿಂದೆ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಜಾರಿಯಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎಂದು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.

* * 

ಜಿಲ್ಲಾ ಸರ್ಜನ್‌ ಅವರೇ ಜಿಲ್ಲಾ ಆಸ್ಪತ್ರೆ  ಡೀನ್ ಅವರನ್ನು ನಮ್ಮ ಜನಪ್ರತಿನಿಧಿಗಳೇ ನೋಡಿಲ್ಲ. ಒಮ್ಮೆ ಅವರನ್ನು ಕರೆದುಕೊಂಡು ಬನ್ನಿ

ಹರೀಶ್‌ ಕುಮಾರ್‌

ಸಿಇಒ, ಜಿಲ್ಲಾ  ಪಂಚಾಯಿತಿ

ಪ್ರತಿಕ್ರಿಯಿಸಿ (+)