ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಣದ ಕೈಗಳಿಗೆ ಆಡಳಿತಾರೂಢರ ಸಹಕಾರ’

Last Updated 12 ಜುಲೈ 2017, 9:01 IST
ಅಕ್ಷರ ಗಾತ್ರ

ಬಂಟ್ವಾಳ: ಶ್ರಮಜೀವಿಯಾಗಿ ಎಲ್ಲರೊಂದಿಗೆ ಬೆರೆತು ಮನೆಗೆ ಆಧಾರಸ್ಥಂಭ ದಂತಿದ್ದ ಅರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಇವರ ಹತ್ಯೆ ತೀವ್ರ ಖಂಡನೀಯ. ಈ ಕೃತ್ಯದ ಹಿಂದೆ ಕಾಣದ ಕೈ ಕೆಲಸ ಮಾಡಲು ರಾಜ್ಯದಲ್ಲಿರುವ ಆಡಳಿತಾರೂಢರು ನೀಡುತ್ತಿರುವ ಪರೋಕ್ಷ ಸಹಕಾರವೇ ಕಾರಣ ಎಂದು ಕೇಂದ್ರ ಸಾಂಖ್ಯಿಕ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದರು.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಸಜಿಪಮುನ್ನೂರು ಕಂದೂರು ಮನೆಗೆ ಮಂಗಳವಾರ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಅಹಿತ ಕರ ಘಟನೆ ನಡೆಸುವ ಮೂಲಕ ತುಷ್ಟೀ ಕರಣದ ಜತೆಗೆ ಕೇವಲ ರಾಜಕೀಯಕ್ಕಾಗಿ ಮಾನವೀಯತೆ ಮರೆಯುತ್ತಿದ್ದಾರೆ.

ಶರತ್‌ನಂತಹ ನೂರಾರು ಮಂದಿ ಹುಟ್ಟಿ ಬಂದು ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸುವರು ಎಂದು ಅವರು ಎಚ್ಚರಿಸಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಯಾರು ತುಪ್ಪ ಸುರಿಯುತ್ತಿದ್ದಾರೆ ಎಂಬುದು ಶೀಘ್ರವೇ ಬಹಿರಂಗವಾಗಲಿದೆ’ ಎಂದರು. ಇದೇ ವೇಳೆ ವೈಯುಕ್ತಿಕ ನೆಲೆಯಲ್ಲಿ ₹ 50 ಸಾವಿರ ಪರಿಹಾರಧನವನ್ನು ಮೃತರ ತಂದೆ ತನಿಯಪ್ಪ ಮಡಿವಾಳ ಅವರಿಗೆ ಹಸ್ತಾಂತರಿಸಿದರು.

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ , ಮಾಜಿ ಶಾಸಕರಾದ ಎನ್.ಯೋಗೀಶ್ ಭಟ್, ಎ.ರುಕ್ಮಯ ಪೂಜಾರಿ, ಕೆ.ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡ ಉಳಿಪಾ ಡಿಗುತ್ತು ರಾಜೇಶ್ ನಾಯ್ಕ್, ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ಜಿ.ಆನಂದ, ಆಶೋಕ ರೈ ಕೋಡಿಂ ಬಾಡಿ, ಉದಯಕುಮಾರ್ ಶೆಟ್ಟಿ ಉಡುಪಿ, ಎ.ಗೋವಿಂದ ಪ್ರಭು, ಬಿ. ದಿನೇಶ ಭಂಡಾರಿ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಅಬ್ದುಲ್ ರಜಾಕ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ರಾಜಾರಾಮ್ ನಾಯಕ್, ಟಿ.ರಂಜನ್ ಗೌಡ ಮತ್ತಿತರರು ಇದ್ದರು.

‘ಕೀಳು ಮಟ್ಟದ ರಾಜಕೀಯ ಸಲ್ಲದು’
ಬಂಟ್ವಾಳ: ಕೀಳುಮಟ್ಟದ ರಾಜಕೀಯ ನಾನೆಂದೂ ಮಾಡಲಾರೆ. ನಮ್ಮದೇನಿದ್ದರೂ ಫಾಸಿಟಿವ್ ಪಾಲಿಟಿಕ್ಸ್. ಕೇವಲ ಅಭಿವೃದ್ಧಿ ಪರ ಚಿಂತನೆ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಹೇಳಿದರು.

ತುರ್ತು ಪರಿಸ್ಥಿತಿ ಕಾಲದಲ್ಲಿ ತಾನು ವಿದ್ಯಾರ್ಥಿಯಾಗಿದ್ದು, ಅಂದು ಕೂಡ ಇಂತಹ ದುಃಸ್ಥಿತಿ ಇರಲಿಲ್ಲ. ಶರತ್ ಹತ್ಯೆ ಆರೋಪಿಗಳನ್ನು ಬಂಧಿಸುವ ಬದಲಾಗಿ, ಬಿಜೆಪಿ ಮತ್ತು ಸಂಘ ಪರಿವಾರ ಮುಖಂಡರನ್ನು ಬಂಧಿಸಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಉತ್ಸಾಹ ತೋರುತ್ತಿದೆ ಎಂದು ಅವರು ಟೀಕಿಸಿದರು.

ಸಹೋದರಿ ಅಳಲು...
ಪ್ರತಿದಿನ ಬೆಳಿಗ್ಗೆ ಶರತ್ ಬೇಗನೆ ಎದ್ದು ಹಟ್ಟಿಯಲ್ಲಿ ಹಾಲು ಕರೆದು ಬಳಿಕ ನಮ್ಮನ್ನೆಲ್ಲಾ ಎಬ್ಬಿಸುತ್ತಿದ್ದ. ಅಮ್ಮನಿಗೆ ಹಾಲು ಕರೆಯಲು ಆಗುವುದಿಲ್ಲ ಎಂದರೂ ಹಸುವನ್ನು  ಮಾರಲು ಆತ ಬಿಟ್ಟಿಲ್ಲ.  ಪ್ರತಿದಿನ ಬೆಳಿಗ್ಗೆ ಆತನ ನೆನಪಾಗುತ್ತಿದೆ ಎಂದು ಇಬ್ಬರು ಸಹೋದರಿಯರು ಸಚಿವರೊಂದಿಗೆ ಅಳಲು ತೋಡಿಕೊಂಡರು.

ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಆತನ ಹತ್ಯೆಯಿಂದ ಯಾರಿಗೇನು ಲಾಭ? ಎಷ್ಟು ಹಣ ಕೊಟ್ಟರೂ ಆತನನ್ನು ನಮಗೆ ಮರಳಿ ಪಡೆಯಲು ಸಾಧ್ಯವೇ? ಬಿ.ಸಿ.ರೋಡ್‌ನಲ್ಲಿ  ರಕ್ತ ಸಿಕ್ತಗೊಂಡಿದ್ದ ಉದಯ ಲಾಂಡ್ರಿಯೊಳಗೆ ಸ್ವಚ್ಛಗೊಳಿಸಿ ಬಂದಿರುವುದಾಗಿ ಅವರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT