ಶನಿವಾರ, ಡಿಸೆಂಬರ್ 14, 2019
22 °C
ಸಂಗತ

‘ಬೀಫ್ ಫೆಸ್ಟ್’ ಒಂದು ಸಂದೇಶ

ಡಾ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

‘ಬೀಫ್ ಫೆಸ್ಟ್’ ಒಂದು ಸಂದೇಶ

ಇತ್ತೀಚೆಗೆ ಪ್ರಚಲಿತಕ್ಕೆ ಬಂದಿರುವ ಪದ ‘ಬೀಫ್ ಫೆಸ್ಟ್’. ಈ ಎರಡು  ಪದಗಳ ಬಳಕೆಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮವಿದ್ದು, ಬಹಳ ಮುಖ್ಯವಾದ ಸಂದೇಶವನ್ನು ದೇಶಭಕ್ತಿಯ ಅಮಲಿನಲ್ಲಿರುವ ಕೆಲವರಿಗೆ ರವಾನೆ ಮಾಡುವ ಉದ್ದೇಶ ಅಡಗಿರುವುದು ತೋರುತ್ತದೆ.

ಗೋಮಾಂಸ ಭಕ್ಷಣೆಗಾಗಿಯೇ ವಿಶೇಷಸಂದರ್ಭ ಸೃಷ್ಟಿಸುವುದು ಮೇಲ್ನೋಟಕ್ಕೆ ಸಂಭ್ರಮದಂತೆ ತೋರಿದರೂ, ಸ್ವಲ್ಪ ತೀಕ್ಷ್ಣವಾಗಿ ನೋಡಿದರೆ ಅದು ಇಂದಿನ ಜನಾಂಗದ ಹೊಸ ರೀತಿಯ ದಂಗೆ ಎಂಬುದು ಸ್ಪಷ್ಟವಾಗುತ್ತದೆ. ಬೀಫ್ ಫೆಸ್ಟ್ ಆಚರಿಸುವ ಜನ ಹೇಳಲು ಹೊರಟಿರುವುದು ಗೋಮಾಂಸ ತಮ್ಮ ಪ್ರೀತಿಯ ಖಾದ್ಯ, ಅದಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದಲ್ಲ. ಬದಲಾಗಿ ‘ಸ್ವತಂತ್ರ ದೇಶದ ನಾಗರಿಕರಾದ ನಮ್ಮ ಆಹಾರ ಪದ್ಧತಿಗೆ ನಿಯಂತ್ರಣ ಅಥವಾ ನಿಷೇಧ ಹೇರದಿರಿ’ ಎಂದು. ದೇಶಭಕ್ತಿಯನ್ನು ಗೋರಕ್ಷಣೆಗೆ ಗಂಟು ಹಾಕಿರುವ ಜನರ ವಿರುದ್ಧ ದನಿ ಎತ್ತುವ ಒಂದು ಪರಿ ಈ ಬೀಫ್ ಫೆಸ್ಟ್.

ಈ ಹಿನ್ನೆಲೆಯಲ್ಲಿ ಭಾರತದ ಸದ್ಯದ ಪರಿಸ್ಥಿತಿಯನ್ನೊಮ್ಮೆ ವಿಶ್ಲೇಷಿಸಲು ಹೊರಟರೆ ನಿಷೇಧಗಳ ಸರ್ಕಾರದ ಕಪಿಮುಷ್ಟಿಯಲ್ಲಿರುವ ನಾವು, ವ್ಲಾದಿಮಿರ್ ನಬಾಕೋವ್ ಅವರ ಸಣ್ಣ ಕಥೆ ‘ಕ್ಲೌಡ್ ಕಾಸಲ್ ಲೇಕ್’ನಲ್ಲಿ ಕಂಡು ಬರುವ ಪಾತ್ರಗಳ ಮರು ರೂಪಾಂತರ ಎಂಬಂತೆ ತೋರುತ್ತದೆ. ನಬಾಕೋವ್ ಅವರ ಪಾತ್ರಧಾರಿಗಳು ಯಾವುದೇ ಸ್ವಾತಂತ್ರ್ಯವಿಲ್ಲದೆ ಒಬ್ಬ ಮೇಲ್ವಿಚಾರಕನ ಅಡಿಯಲ್ಲಿ, ಸರ್ಕಾರದ ಪ್ರಾಯೋಜನೆಯಲ್ಲಿ ಒಂದು ಪ್ರವಾಸ ಕೈಗೊಳ್ಳುತ್ತಾರೆ. ನಬಾಕೋವ್ ಅವರು ಪ್ರವಾಸಿಗರು ಮತ್ತು ಮೇಲ್ವಿಚಾರಕ ಇಬ್ಬರನ್ನೂ ಮಗ್ಗುಲಲ್ಲಿಟ್ಟು ಸರ್ಕಾರದ ನಿರಂಕುಶ ಆಡಳಿತವನ್ನು ಖಂಡಿಸುತ್ತಾರೆ. ಸರ್ಕಾರದಿಂದ ನೇಮಕಗೊಂಡ ಮೇಲ್ವಿಚಾರಕನು ಸರ್ಕಾರದ ನಿಲುವುಗಳಿಗೆ ಬದ್ಧನಾಗಿ ನಿಷ್ಠೆಯಿಂದ ತನ್ನ  ಕೆಲಸವನ್ನು ಯಾಂತ್ರಿಕವಾಗಿ ಮಾಡುತ್ತಾನೆ. ಅವನು ಮೊದಲೇ ಪರ್ಯಾಲೋಚಿಸಿದಂತೆ ಪ್ರವಾಸಿಗರು ಅವನು ಹೇಳಿದ್ದನ್ನು ತಿನ್ನಬೇಕು, ಅವನ ತೀರ್ಮಾನದಂತೆ ಸಂಗೀತ ಕೇಳಬೇಕು ಮತ್ತು ಅವನ ಆಯ್ಕೆಯ ಆಟ ಆಡಬೇಕು. ಇದನ್ನು ವಿರೋಧಿಸುವ ಕಥಾನಾಯಕನು ಕೊನೆಗೆ ಎಲ್ಲರಿಂದ ಹಲ್ಲೆಗೀಡಾಗುತ್ತಾನೆ.

ನಬಾಕೋವ್ ಅವರ ಕಥೆಯಲ್ಲಿ ಕಂಡುಬರುವಂತೆ ಯುರೋಪಿನಲ್ಲಿದ್ದ ನಿರಂಕುಶಾಧಿಕಾರದ ಪದ್ಧತಿ ಈಗ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ವಲಯಗಳಲ್ಲಿ ಜಾಗ ಪಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಆಹಾರ ಪದ್ಧತಿಯಿಂದ ಮದುವೆಯ ಆಯ್ಕೆಯ ತನಕ ನಾವೂ ಒಂದು ರೀತಿಯಲ್ಲಿ ನಿರಂಕುಶ ಸರ್ಕಾರದ ಅನೈತಿಕ ಪೊಲೀಸ್‌ಗಿರಿಯ ಹಿಡಿತದಲ್ಲಿದ್ದೇವೆ. ನೋವುಂಟು ಮಾಡುವ ಮತ್ತೊಂದು ಸಂಗತಿಯೆಂದರೆ ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಕವಿತೆ ಓದುವ ನಾವು ಹಿಂದೂ– ಮುಸಲ್ಮಾನರ ನಡುವೆ ಮದುವೆಯ ಮಾತುಕತೆಯಾದರೆ ಎರಡು ಕೋಮುಗಳ ಏಕತೆಯ ಸಂಕೇತ ಎನ್ನುವುದಿಲ್ಲ. ಬದಲಾಗಿ ಎರಡು ಕೋಮುಗಳಿಗೂ ದ್ರೋಹವುಂಟಾಗುತ್ತದೆ ಎಂದು ಪ್ರೇಮಿಗಳನ್ನು ದಂಡಿಸಿದ ಪ್ರಕರಣ ಇತ್ತೀಚೆಗಷ್ಟೇ ಮಂಡ್ಯದಲ್ಲಿ ನಡೆಯಿತು. ಐಎಎಸ್‌ ಟಾಪರ್‌ ಟೀನಾ ದಾಬಿ ಅವರು ಅತರ್ ಖಾನ್ ಎಂಬ ಐಎಎಸ್‌ ಸಾಧಕನನ್ನು ಮದುವೆ ಆಗಕೂಡದು ಎಂದು ಹಿಂದೂ ಮಹಾಸಭಾ ಆಗ್ರಹಪಡಿಸುತ್ತಿರುವುದು ಅನೈತಿಕ ಪೊಲೀಸ್‌ಗಿರಿಯ ವ್ಯಾಘ್ರ ಮುಖವಷ್ಟೇ ಸರಿ.

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮುಸಲ್ಮಾನರ ವಿಚಾರವಾಗಿ ಮಾತನಾಡುತ್ತಾ ಹೇಳುತ್ತಾರೆ, ‘ಸತ್ತ ದನದ ಬಾಡನ್ನು ಹೊಲೆಯರು ತಿಂದರೆ, ದನವನ್ನು ಕೊಂದು ಸಾಬರು ತಿನ್ನುತ್ತಾರೆ’ ಎಂದು. ಇಲ್ಲಿ ಸತ್ತ ಮೇಲೆ ಅಥವಾ ಬದುಕಿರುವ ದನವನ್ನು ಕೊಂದು ತಿನ್ನುವುದು ಎಂಬ ವಿಚಾರದ ಚರ್ಚೆ ಮುಖ್ಯ ಅಲ್ಲ. ಎರಡೂ ಕೋಮುಗಳು ಗೋಮಾಂಸ ಭಕ್ಷಣೆಯಲ್ಲಿ ತೊಡಗಿರುವುದು ಮುಖ್ಯ. ಎಸ್.ಎಲ್. ಭೈರಪ್ಪನವರು ತಮ್ಮ ‘ಪರ್ವ’ ಕಾದಂಬರಿಯಲ್ಲಿ ಯಾವುದೇ ಕೋಮು ಭೇದವಿಲ್ಲದೆ ಯಥೇಚ್ಛವಾಗಿ ನಡೆಯುತ್ತಿದ್ದ ಗೋಮಾಂಸ ಭಕ್ಷಣೆಯ ವಿಚಾರವಾಗಿ ಪದೇ ಪದೇ ಉಲ್ಲೇಖಿಸುತ್ತಾರೆ. ಜೊತೆಗೆ ಆ ಕಾಲದ ಅತಿಥಿ ಸತ್ಕಾರದಲ್ಲಿ ಗೋಮಾಂಸಕ್ಕೆ ಆದ್ಯತೆಯಿತ್ತು ಎಂದೂ ಹೇಳುತ್ತಾರೆ.

ಹೀಗಿರುವಾಗ ಜನರ ಆಹಾರ ಪದ್ಧತಿ ಮೇಲೆ ನಿಷೇಧ ಹೇರಿ ಅದಕ್ಕೆ ದೇಶಭಕ್ತಿಯ ಬಣ್ಣ ನೀಡಿರುವುದನ್ನು ನೋಡಿದರೆ ಹಿಟ್ಲರ್‌ನ ಗೆಸ್ಟಾಪೋಗಳು ಫೀನಿಕ್ಸ್‌ನಂತೆ ಮರುಜೀವ ಪಡೆದು ಈಗ ನಮ್ಮನ್ನು ಕಾಡುತ್ತಿರುವಂತೆ ಭಾಸವಾಗುತ್ತಿದೆ.

ಹಿಂದೂ ಧರ್ಮದ ಮೂಲ ಬೇರುಗಳೇನೇ ಇರಲಿ, ಕೇಸರೀಕರಣಗೊಂಡಿರುವ ಹಿಂದುತ್ವದ ಅಲೆ ಏಳುವುದು ಬೇರೆ ಕೋಮುಗಳ ವಿರುದ್ಧ ದ್ವೇಷದ ದಳ್ಳುರಿಯ ಒಡಲಿನಿಂದ. ಈ ದ್ವೇಷಕ್ಕೆ ಇರುವ ಏಕೈಕ ವ್ಯಾಖ್ಯಾನ: ‘ಗೋವು ನಮಗೆ ದೈವಕ್ಕೆ ಸಮಾನ, ಅದರ ಭಕ್ಷಣೆ ಹಿಂದೂ ವಿರೋಧವಿದ್ದಂತೆ, ಹಾಗಾಗಿ ಹಿಂದೂ ವಿರೋಧಿಗಳು, ಹಿಂದುಸ್ತಾನದ ವಿರೋಧಿಗಳು’. ಒಟ್ಟಿನಲ್ಲಿ  ದೇಶಭಕ್ತಿಯನ್ನು ಆಹಾರ  ಪದ್ಧತಿಯಲ್ಲಿ ಕಾಣುತ್ತಿರುವುದು ಸೋಜಿಗವೆನಿಸುತ್ತದೆ.

ದಿನಪತ್ರಿಕೆಗಳಲ್ಲಿ ಭಯೋತ್ಪಾದನೆ ಹಾಗೂ ಬಲಾತ್ಕಾರದ ಪ್ರಕರಣಗಳು ಸರ್ವೇ ಸಾಮಾನ್ಯವಾಗಿ ಪ್ರತಿನಿತ್ಯ ತಪ್ಪದೆ ಬಿತ್ತರಗೊಳ್ಳುತ್ತಿರುತ್ತವೆ. ಈಗ ಹೊಸ ಜೋಡಣೆಯೆಂದರೆ ಬೀಫ್ ಫೆಸ್ಟ್ಸ್ ಮತ್ತು ಅದರ ವಿರುದ್ಧ ದನಿಯೆತ್ತುವ ಮೂಲಕ ಹಿಂದುತ್ವದ ಪ್ರತಿಪಾದನೆ. ಇತ್ತೀಚೆಗಷ್ಟೇ ವರದಿಯಾಗಿರುವಂತೆ ಉಸ್ಮಾನಿಯಾ ವಿಶ್ವವಿದ್ಯಾಲಯ, ಕಾಕತೀಯ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಗಳು ದೆಹಲಿಯ ಕೆಂಪುಕೋಟೆ ಮುಂದೆ ತ್ರಿವರ್ಣದ ಸಾಕ್ಷಿಯಾಗಿ ಗೋಮಾಂಸವನ್ನು ತಿಂದು ದೇಶಭಕ್ತಿಗೂ ಆಹಾರ ಪದ್ಧತಿಗೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸುವ ಒಂದು ಒಕ್ಕೊರಲಿನ ಪ್ರಯತ್ನವನ್ನು ಮಾಡಿದರು.

ಆಹಾರ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸುವುದು ಒಂದು ಸಾಂಸ್ಕೃತಿಕ ದಾಳಿ ಮತ್ತು ಫ್ಯಾಸಿಸ್ಟ್ ಮನೋಭಾವ ಎಂದು ಅಭಿಪ್ರಾಯಪಟ್ಟ ಆ ಹುಡುಗರು, ಗೋಮಾಂಸದ ಮೇಲೆ ನಿಷೇಧ ಹಾಕುವುದು ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರನ್ನು ಮತ್ತಷ್ಟು ಅಂಚಿನಲ್ಲಿರಿಸಿದಂತೆ ಎಂದು ಸಮಾಜವನ್ನು ಎಚ್ಚರಿಸುತ್ತಾರೆ.

ಸಂವಿಧಾನ ಕೊಟ್ಟ ಸ್ವಾತಂತ್ರ್ಯವನ್ನು ಅನುಭವಿಸಲು ಮತ್ತು ನಮಗೆ ನಮ್ಮ ಅಭಿವ್ಯಕ್ತಿ ಹಕ್ಕನ್ನು ಕಾಪಾಡಿಕೊಳ್ಳಲು ಸಾಧ್ಯವೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಸಂಗ ಇಂದು ಒದಗಿಬಂದಿದೆ.

ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯದ ನಿರ್ಮಾಣಕ್ಕಾಗಿ ಅತ್ಯಂತ ಪುರಾತನವಾದ ಬಾಬ್ರಿ ಮಸೀದಿಯನ್ನು ಹಿಂದೂ ಕರಸೇವಕರು ಕೆಡವಿ ಹಾಕಿದ್ದು ಹಿಂದೂ– ಮುಸ್ಲಿಮರ ನಡುವಿನ ಕಂದಕವನ್ನು ಮತ್ತಷ್ಟು  ದೊಡ್ಡದಾಗಿಸಿತು. ಈಗ ಗೋರಕ್ಷಣೆಯ ನಡೆ ಕೋಮು ದಳ್ಳುರಿಯನ್ನು ತೀವ್ರಗೊಳಿಸುವ ಸಾಧ್ಯತೆ ಗೋಚರಿಸುತ್ತಿದೆ. ಅಲ್ಲಲ್ಲಿ ನಡೆಯುತ್ತಿರುವ ಬೀಫ್ ಫೆಸ್ಟ್‌ಗಳನ್ನು ದೇಶದ್ರೋಹದ ಆಚರಣೆ ಎಂದು ಭಾವಿಸಬಾರದು. ಸ್ವತಂತ್ರ ದೇಶದ ನಾಗರಿಕರಿಗೆ ಇರಬೇಕಾದ  ಮುಕ್ತ ಅವಕಾಶದ ಬೇಡಿಕೆ ಅದರಲ್ಲಿ ಅಡಗಿದೆ ಎಂದು ಗ್ರಹಿಸಬೇಕು.

ಗೋರಕ್ಷಣೆ ಹಿಂದುತ್ವದ ಸಂಕೇತ ಮತ್ತು ಗೋಭಕ್ಷಣೆ ದೇಶದ್ರೋಹದ ಸಂಕೇತ ಎಂದಾದರೆ ಶತಮಾನಗಳಿಂದ ಅದನ್ನು ಆಹಾರವಾಗಿ ಕಂಡುಕೊಂಡು ಬಂದಿರುವ ದಲಿತರು ಮತ್ತು ಆದಿವಾಸಿಗಳು ಜಾತಿಯ ದೆಸೆಯಿಂದ ತುಳಿತಕ್ಕೊಳಗಾಗಿದ್ದಲ್ಲದೆ ಈಗ ದೇಶದ್ರೋಹಿಗಳು ಎಂಬ ಹಣೆಪಟ್ಟಿಗೂ ಸಿದ್ಧರಾಗಬೇಕಾಗುತ್ತದೆ.   ಈಗಾಗಲೇ  ಹಿಂದೂ ಧರ್ಮದ ಜಾತಿ ಪದ್ಧತಿಯಿಂದ ನೊಂದಿರುವ ಅನೇಕ ದಲಿತರು ಈಗ ಸಾಂಸ್ಕೃತಿಕ ದಾಳಿಯಿಂದ ಮತ್ತು ಅನೈತಿಕ ಪೊಲೀಸ್‌ಗಿರಿಯಿಂದ    ನಲುಗುವ ದಿನಗಳು ಬರುತ್ತಿವೆ.

ಲೇಖಕ: ಮುಖ್ಯಸ್ಥ, ಇಂಗ್ಲಿಷ್‌ ವಿಭಾಗ, ತುಮಕೂರು ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)