ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಪ್ರಕರಣ: ಮಹತ್ವದ ಸುಳಿವು ಲಭ್ಯ

ಕಾನೂನು, ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಹೇಳಿಕೆ
Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಕೊಲೆ ಪ್ರಕರಣದ ಆರೋಪಿಗಳ ಕುರಿತು ತನಿಖಾ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್‌ ತಿಳಿಸಿದರು.

ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌, ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಸುಧೀರ್‌ಕುಮಾರ್ ರೆಡ್ಡಿ ಅವರೊಂದಿಗೆ ನಗರ ಪೊಲೀಸ್‌ ಕಮಿನಷರ್‌ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶರತ್‌ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈವರೆಗೆ ಯಾರನ್ನೂ ವಶಕ್ಕೆ ಪಡೆದಿಲ್ಲ. ಅಮಾಯಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಿಲ್ಲ. ಕೊಲೆಯಲ್ಲಿ ಭಾಗಿಯಾದವರನ್ನು ಶೀಘ್ರದಲ್ಲಿ ಬಂಧಿಸುತ್ತೇವೆ’ ಎಂದರು.

ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿರುವ ಎಲ್ಲ ಪ್ರಕರಣಗಳ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಂತಹ ಪ್ರಕರಣಗಳ ತನಿಖೆಯಲ್ಲಿ ಅನುಭವವಿರುವ ಅಧಿಕಾರಿಗಳನ್ನು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಕರೆಸಲಾಗಿದೆ. ಅವರು ತನಿಖಾ ತಂಡಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಹಲವು ಪ್ರಕರಣಗಳ ಆರೋಪಿಗಳನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಉಳಿದ ಪ್ರಕರಣಗಳಲ್ಲೂ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದರು.

17 ಜನರ ಬಂಧನ: ಶರತ್‌ ಶವಯಾತ್ರೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಲ್ಲು ತೂರಾಟದಲ್ಲಿ ಭಾಗಿಯಾದ ಆರೋಪದ ಮೇಲೆ ಈವರೆಗೆ 17 ಜನರನ್ನು ಬಂಧಿಸಲಾಗಿದೆ. ಯಾರೇ ಕೃತ್ಯದಲ್ಲಿ ಭಾಗಿಯಾಗಿದ್ದರೂ ಅವರನ್ನು ಬಂಧಿಸುವುದು ನಿಶ್ಚಿತ. ಅಮಾಯಕ ವ್ಯಕ್ತಿಗಳಿಗೆ ಪೊಲೀಸ್‌ ಇಲಾಖೆ ತೊಂದರೆ ನೀಡುವುದಿಲ್ಲ. ಲಭ್ಯವಾಗುವ ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ತನಿಖೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶವಯಾತ್ರೆ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಗುಪ್ತದಳದ ವೈಫಲ್ಯದಿಂದ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬ ಆರೋಪಕ್ಕೆ ಆಧಾರಗಳಿಲ್ಲ. ಅಲ್ಲಿ ಹಾಜರಿದ್ದ ವಿವಿಧ ಸಂಘಟನೆಗಳ ನಾಯಕರು ಅಹಿತಕರ ಘಟನೆ ನಡೆಯದಂತೆ ತಡೆಯಬೇಕಿತ್ತು. ಆದರೆ, ಅವರು ಆ ಕೆಲಸ ಮಾಡಲಿಲ್ಲ ಎಂದರು.

‘ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಬಂಧನಕ್ಕೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆಯೇ’ ಎಂಬ ಪ್ರಶ್ನೆಗೆ, ‘ಪೊಲೀಸರು ಕಾನೂನಿನ ಪ್ರಕಾರ ಕೆಲಸ ಮಾಡುತ್ತಾರೆ. ಯಾವುದೇ ಪ್ರಕರಣವಿದ್ದರೂ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಕಾನೂನು ಉಲ್ಲಂಘಿಸುವವರು ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವವರು ಯಾರೇ ಆಗಿದ್ದರೂ ಕ್ರಮ ನಿಶ್ಚಿತ’ ಎಂದು ಉತ್ತರಿಸಿದರು.

ಪರಿಸ್ಥಿತಿ ನಿಯಂತ್ರಣಕ್ಕೆ: ಜಿಲ್ಲೆಯಲ್ಲಿ ಸಂಪೂರ್ಣವಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶನಿವಾರದ ನಂತರ ಕೋಮುದ್ವೇಷದ ಯಾವುದೇ ಘಟನೆಗಳು ನಡೆದಿಲ್ಲ. ಅಗತ್ಯವಿದ್ದರೆ ಹೆಚ್ಚಿನ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗುವುದು. ಯಾವುದೇ ರಾಜಕೀಯ ಪಕ್ಷ, ಸಂಘಟನೆ ಅಥವಾ ವ್ಯಕ್ತಿಗಳು ಕಾನೂನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ. ಕೋಮು ದ್ವೇಷದ ಘಟನೆಗಳಿಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆ ಸನ್ನದ್ಧವಾಗಿದೆ ಎಂದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷ ಬಿತ್ತುವವರ ವಿರುದ್ಧವೂ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರದ ಗೌರವಕ್ಕೆ ಚ್ಯುತಿ ಉಂಟಾಗುವಂತೆ ವರ್ತಿಸುವವರನ್ನು ನಿಯಂತ್ರಣ ಮಾಡಲು ಅಗತ್ಯವಿರುವ ಕ್ರಮಗಳನ್ನೂ ಪೊಲೀಸರು ಕೈಗೊಳ್ಳುತ್ತಾರೆ. ಈ ಬಗ್ಗೆ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.

ಮಾಹಿತಿ ಮುಚ್ಚಿಟ್ಟ ಆರೋಪ
ಮಂಗಳೂರು:
ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಮೃತಪಟ್ಟು 20 ಗಂಟೆಗಳವರೆಗೂ ಎ.ಜೆ. ಆಸ್ಪತ್ರೆಯ ವೈದ್ಯರು ಸಾವಿನ ಮಾಹಿತಿಯನ್ನು ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಸಾವಿಗೆ ಸಂಬಂಧಿಸಿದಂತೆ ನೀಡಿರುವ ಮಾಹಿತಿಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್‌’ ಆಗುತ್ತಿದೆ.

ಶರತ್‌ ಅವರ ತಂದೆ ತನಿಯಪ್ಪ ಮಡಿವಾಳ ಅವರಿಗೆ ಎ.ಜೆ. ಆಸ್ಪತ್ರೆಯ ವೈದ್ಯರು ನೀಡಿದ್ದು ಎನ್ನಲಾದ ಒಂದು ಪುಟದ ಮರಣ ವರದಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದಾಖಲೆಯ ಪ್ರಕಾರ ಶರತ್‌ ಜುಲೈ 6 ಕಳೆದು 7 ಆರಂಭವಾಗುತ್ತಿದ್ದಂತೆ (ರಾತ್ರಿ 12.30) ಮೃತಪಟ್ಟಿದ್ದರು. ಶುಕ್ರವಾರ ರಾತ್ರಿ 8 ಗಂಟೆಯ ಬಳಿಕ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು.

‘ಪೊಲೀಸ್‌ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಆಸ್ಪತ್ರೆಯ ಆಡಳಿತ ಮಂಡಳಿ ಶರತ್‌ ಸತ್ತಿರುವ ವಿಷಯವನ್ನು ಮುಚ್ಚಿಟ್ಟಿತ್ತು. ಜುಲೈ 7ರಂದು ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಮಾವೇಶಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಸಾವಿನ ಸುದ್ದಿಯನ್ನು ಮುಚ್ಚಿಡಲಾಗಿತ್ತು. ಇದರಿಂದ ಶರತ್‌ ಅವರ ಅಂಗಾಂಗಗಳನ್ನು ದಾನ ಮಾಡುವ ಅವರ ಕುಟುಂಬದ ಆಸೆ ಈಡೇರಲಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟೀಕಿಸಿದ್ದಾರೆ.

ಹೊರ ರಾಜ್ಯದವರಿಲ್ಲ
ಶರತ್‌ ಶವಯಾತ್ರೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದವರಲ್ಲಿ ಹಲವರು ಕೇರಳ ರಾಜ್ಯದವರು ಎಂಬ ಆರೋಪವನ್ನು ಎಡಿಜಿಪಿ ಅಲೋಕ್‌ ಮೋಹನ್‌ ಅಲ್ಲಗಳೆದರು. ‘ಬಂಧಿತರೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ’ ಎಂದು ತಿಳಿಸಿದರು.

ಶರತ್‌ ಮನೆಗೆ ಸಚಿವ ರೈ ಭೇಟಿ
ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ತಾಲ್ಲೂಕಿನ ಸಜಿಪ ಗ್ರಾಮದ ಕೆಂದೂರಿನಲ್ಲಿರುವ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಮನೆಗೆ ಬುಧವಾರ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶರತ್‌ ತಂದೆ ತನಿಯಪ್ಪ ಮಡಿವಾಳ ಅವರೊಂದಿಗೆ ಚರ್ಚಿಸಿದ ಸಚಿವರು, ಕೊಲೆ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವ ಭರವಸೆ ನೀಡಿದರು. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ದೊರಕಿಸುವುದಾಗಿಯೂ ತಿಳಿಸಿದರು.

ಸಂಘರ್ಷ ತಡೆ ಕೆಲಸ ಸರ್ಕಾರದ್ದು: ಹೆಗ್ಗಡೆ

ಬಾಗಲಕೋಟೆ: ‘ರಾಜಕೀಯ ಸಂಘರ್ಷದ ಕಾರಣ ರಾಜ್ಯದ ಕರಾವಳಿ ಭಾಗ ಕೋಮು ದಳ್ಳುರಿಗೆ ಸಿಲುಕಿದೆ. ಅದನ್ನು ತಡೆಯುವ ಕೆಲಸ ಸರ್ಕಾರ ಮಾಡಬೇಕಿದೆ. ಆದರೆ ಶಾಂತಿ ನೆಲೆಸಲು ಅಗತ್ಯವಿರುವ ಚಟುವಟಿಕೆಗಳಲ್ಲಿ ನಾನೂ ಕಾರ್ಯೋನ್ಮುಖನಾಗಿದ್ದೇನೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

‘ರಾಜಕೀಯ ಸಂಘರ್ಷದಿಂದ ಉಂಟಾಗುವ ಕೋಮು ಗಲಭೆ ತಡೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಇಂತಹ ವಿಚಾರದಲ್ಲಿ ನೀಡುವ ಪ್ರತಿಕ್ರಿಯೆ ಅನಗತ್ಯ ಚರ್ಚೆಗಳಿಗೆ ದಾರಿಯಾಗುತ್ತದೆ. ಆದರೆ ಅಲ್ಲಿ ಸಾಮರಸ್ಯ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಆ ಕಾರ್ಯ ಏನು ಎಂಬುದನ್ನು ಬಹಿರಂಗಪಡಿಸುವುದಿಲ್ಲ’ ಎಂದರು.

‘ಶಾಂತಿ ಸಭೆಯಲ್ಲಿ ನಂಬಿಕೆ ಇಲ್ಲ’
ಮಂಗಳೂರು: 
‘ನಮಗೆ ಶಾಂತಿ ಸಭೆಯಲ್ಲಿ ಯಾವುದೇ ನಂಬಿಕೆ ಇಲ್ಲ. ನಗರದಲ್ಲಿ ಗುರುವಾರ (ಇದೇ 13) ಏರ್ಪಡಿಸಿರುವ ಶಾಂತಿಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಈ ಹಿಂದೆಯೂ ಶಾಂತಿ ಸಭೆ ನಡೆಸಲಾಗಿತ್ತು. ಅದರ ಪರಿಣಾಮ ಗಲಭೆ ಇನ್ನಷ್ಟು ಹೆಚ್ಚಾಗಿತ್ತು. ಇಂತಹ ಶಾಂತಿ ಸಭೆಗಳಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ನಾವು (ಬಿಜೆಪಿಯವರು) ಹೋಗುವುದಿಲ್ಲ’ ಎಂದರು.

‘ಷಂಡ ಅಂತ ಹೇಳಿಲ್ಲ’: ಸಿಎಂ ಪ್ರತಿಕ್ರಿಯೆ
ಬೆಂಗಳೂರು:
‘ನಾನು ಷಂಡ ಅಂತ ಯಾರಿಗೂ ಹೇಳಿಲ್ಲ.  ಬಿಜೆಪಿಯವರೇ ಆ  ರೀತಿ ಹೇಳಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಕೆಟ್ಟ ಪದಗಳನ್ನು ಬಳಸುವುದು ಬಿಜೆಪಿ ಸಂಸ್ಕೃತಿ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಆ ಪಕ್ಷ ಹೊರಟಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT